Delhi Chalo: ಭಾರತೀಯ ಕಿಸಾನ್ ಯೂನಿಯನ್​ನ ಖಾತೆಗೆ ವಿದೇಶದಿಂದ ಹಣ ವರ್ಗಾವಣೆ; ದಾಖಲೆ ಸಲ್ಲಿಸಲು ಸೂಚನೆ

| Updated By: Lakshmi Hegde

Updated on: Dec 21, 2020 | 1:09 PM

ದೆಹಲಿ ಚಲೋ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಭಾರತೀಯ ಕಿಸಾನ್ ಯೂನಿಯನ್​ನ (ಏಕ್ತಾ ಉಗ್ರಹಣ್)  ಬ್ಯಾಂಕ್ ಖಾತೆಗೆ ವಿದೇಶದಿಂದ ಕಳೆದ ಎರಡು ತಿಂಗಳಲ್ಲಿ‌ 8ರಿಂದ 9 ಲಕ್ಷ ಹಣ ವರ್ಗಾವಣೆಯಾಗಿದೆ. ಕೇಂದ್ರ ಹಣಕಾಸು ಇಲಾಖೆಯ ತನಿಖಾ ವಿಭಾಗ ಭಾರತೀಯ ಕಿಸಾನ್ ಯೂನಿಯನ್​ನ ನೋಂದಣಿ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದೆ ಎಂಬ ಮಾಹಿತಿ ತಿಳಿದುಬಂದಿದೆ.

Delhi Chalo: ಭಾರತೀಯ ಕಿಸಾನ್ ಯೂನಿಯನ್​ನ ಖಾತೆಗೆ ವಿದೇಶದಿಂದ ಹಣ ವರ್ಗಾವಣೆ; ದಾಖಲೆ ಸಲ್ಲಿಸಲು ಸೂಚನೆ
ರೈತ ಪ್ರತಿಭಟನೆ
Follow us on

ಅಮೃತಸರ: ದೆಹಲಿ ಚಲೋ ಹೋರಾಟದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಭಾರತೀಯ ಕಿಸಾನ್ ಯೂನಿಯನ್​ನ (ಏಕ್ತಾ ಉಗ್ರಹಣ್)  ಬ್ಯಾಂಕ್ ಖಾತೆಗೆ ವಿದೇಶದಿಂದ ಕಳೆದ ಎರಡು ತಿಂಗಳಲ್ಲಿ‌ 8ರಿಂದ 9 ಲಕ್ಷ ಹಣ ವರ್ಗಾವಣೆಯಾಗಿದೆ. ಹೀಗಾಗಿ, ಮೋಗಾ ಜಿಲ್ಲೆಯ ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕಿನ ಶಾಖೆಗೆ ಬಿಕೆಎಸ್​ನ ಮುಖಂಡ ಸುಖ್ ದೇವ್ ಸಿಂಗ್ ರನ್ನು ಕರೆದು ವಿಚಾರಣೆ ನಡೆಸಲಾಗಿದೆ.ಅಲ್ಲದೇ, ಕೇಂದ್ರ ಹಣಕಾಸು ಇಲಾಖೆಯ ತನಿಖಾ ವಿಭಾಗ ಭಾರತೀಯ ಕಿಸಾನ್ ಯೂನಿಯನ್​ನ ನೋಂದಣಿ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದೆ ಎಂಬ ಮಾಹಿತಿ ತಿಳಿದುಬಂದಿದೆ.

ವಿದೇಶಗಳಲ್ಲಿರುವ ಪಂಜಾಬಿಗರು ಸಾಮಾಜಿಕ ಕೆಲಸಗಳಿಗಾಗಿ ನಮ್ಮ ಸಂಘಟನೆಗಾಗಿ ಹಣ ವರ್ಗಾಯಿಸುತ್ತಾರೆ. ತಾಯ್ನಾಡಿನಲ್ಲಿ ಅಗತ್ಯವುಳ್ಳವರ ಸೇವೆಗಾಗಿ ಆರ್ಥಿಕ ನೆರವು ನೀಡುತ್ತಾರೆ. ಅದನ್ನು ಸಂಶಯಾಸ್ಪದವಾಗಿ  ನೋಡುವ ಅಗತ್ಯವಿಲ್ಲ. ಬ್ಯಾಂಕ್ ನಿಂದ ಲಿಖಿತ ರೂಪದ ಪತ್ರ ಬಂದ ನಂತರ ಈ ಕುರಿತು ಪ್ರತಿಕ್ರಿಯಿಸುವುದಾಗಿ ಸುಖ್ ದೇವ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ತನಿಖೆ ಶುರುವಾಗುವ ಸಾಧ್ಯತೆ
ಭಾರತೀಯ ಕಿಸಾನ್ ಯೂನಿಯನ್​ ಪಂಜಾಬಿನ ಅತ್ಯಂತ  ಪ್ರಮುಖ ಹಾಗೂ ದೊಡ್ಡ ರೈತ ಸಂಘಟನೆಯಾಗಿದೆ. ಕೇಂದ್ರದ ಮೂರು ಕೃಷಿಕಾಯ್ದೆಗಳ ವಿರುದ್ಧ ಹೋರಾಟಕ್ಕೆ ರೈತರನ್ನು ಸಂಘಟಿಸಿ,  ಬೃಹತ್ ಪ್ರಮಾಣದಲ್ಲಿ ದೆಹಲಿ ಚಲೋ ಆಯೋಜಿಸುವಲ್ಲಿ ಈ ಸಂಘಟನೆಯ ಪಾತ್ರ ದೊಡ್ಡದು. ಹೀಗಾಗಿ, ಬಿಕೆಎಸ್​ನ ಆರ್ಥಿಕ ಮೂಲದ ಕುರಿತು ತನಿಖೆ ನಡೆಸುವ ಸಂಭಾವ್ಯತೆಗಳು ದಟ್ಟವಾಗಿವೆ.

ದೆಹಲಿ ಚಲೋಗೆ ಬೆಂಬಲ ನೀಡಿದ ಪಂಜಾಬ್ APMC ದಲ್ಲಾಳಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ದೆಹಲಿ ಚಲೋವಿನ ಆರ್ಥಿಕ ಮೂಲಗಳ ಬಗ್ಗೆಯೂ ವದಂತಿಗಳು ಹರಿದಾಡುತ್ತಿದ್ದವು. ಹೀಗಾಗಿ ಹಣಕಾಸು ಇಲಾಖೆಯ ತನಿಖಾ ವಿಭಾಗ ಭಾರತೀಯ ಕಿಸಾನ್ ಯೂನಿಯನ್​ಗೆ ವರ್ಗಾವಣೆಯಾದ ಹಣದ ಬೆನ್ನುಬೀಳುವ ಸಾಧ್ಯತೆಗಳಿವೆ. ವಿದೇಶಿ ಮೂಲದ ಸರ್ಕಾರೇತರ ಸಂಸ್ಥೆಗಳು ಭಾರತೀಯರ ಖಾತೆಗಳಿಗೆ ಹಣ ವರ್ಗಾಯಿಸುವುದರ ಮೇಲೆ ಕೇಂದ್ರ ಸರ್ಕಾರ ಹದ್ದಿನ ಕಣ್ಣಿಟ್ಟಿದೆ. ಅಲ್ಲದೇ, ಎನ್​ಜಿ‌ಒಗಳ ಅನಿರ್ಬಂಧಿತ  ಹಣಕಾಸಿನ ವ್ಯವಹಾರಕ್ಕೂ ಕಡಿವಾಣ ಹಾಕಿದೆ.