ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ 146ಕ್ಕೆ ಏರಿಕೆಯಾಗಿದೆ. ಕೋಳಿಕ್ಕೋಡ್ನಲ್ಲಿ 9 ಬಾರಿ ಭೂಕುಸಿತ ಸಂಭವಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ನೆರವು ನೀಡುವುದಾಗಿ ಘೋಷಿಸಿದ್ದಾರೆ. ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ನೂರಾರು ಮಂದಿ ಇನ್ನೂ ಅವಶೇಷಗಳಡಿ ಸಿಲುಕಿರುವುದರಿಂದ, ಸಾವುನೋವುಗಳ ಭೀತಿಯನ್ನು ಹುಟ್ಟುಹಾಕಿದೆ, ಸೇನೆ ಮತ್ತು ಎನ್‌ಡಿಆರ್‌ಎಫ್ ಸೇರಿದಂತೆ ರಕ್ಷಣಾ ಏಜೆನ್ಸಿಗಳು ರಕ್ಷಣಾ ಕಾರ್ಯಾಚರಣೆಯನ್ನು ಪುನರಾರಂಭಿಸಿವೆ. ಭೂಕುಸಿತದಿಂದ ಹಲವು ಮನೆಗಳು, ಮರಗಳು, ಹಸು, ನಾಯಿಗಳು, ಜನರು ಸೇರಿದಂತೆ ಎಲ್ಲವೂ ಕೊಚ್ಚಿಕೊಂಡು ಹೋಗಿವೆ. ವಯನಾಡ್ ಮತ್ತು ಕೇರಳದ ಎಲ್ಲಾ ಉತ್ತರ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.
24 ಗಂಟೆಗಳಲ್ಲಿ 20 ಸೆಂ.ಮೀ ಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯೊಂದಿಗೆ ಈ ಪ್ರದೇಶಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ಈವರೆಗೆ 48 ಮಂದಿಯ ಮೃತದೇಹಗಳನ್ನು ಗುರುತಿಸಲಾಗಿದೆ. ಪತ್ತೆಯಾದ 96 ಮೃತದೇಹಗಳ ಮರಣೋತ್ತರ ಪರೀಕ್ಷೆ ಕೂಡ ಪೂರ್ಣಗೊಂಡಿದೆ. ಈ ಪೈಕಿ 32 ಮೃತದೇಹಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಮೆಪ್ಪಾಡಿ ಸಾಮಾಜಿಕ ಆರೋಗ್ಯ ಕೇಂದ್ರದಲ್ಲಿ ಸದ್ಯ 78 ಮೃತದೇಹಗಳಿವೆ. ನಿಲಂಬೂರ್ ಜಿಲ್ಲಾಸ್ಪತ್ರೆಯಲ್ಲಿ 32 ಮೃತ ದೇಹಗಳನ್ನು ಇಡಲಾಗಿದೆ ಎಂದು ವರದಿಯಾಗಿದೆ.
ಮತ್ತಷ್ಟು ಓದಿ: ವಯನಾಡಿನಲ್ಲಿ ಗುಡ್ಡ ಕುಸಿತ ದುರಂತಕ್ಕೆ ಮುನ್ನ ಬದಲಾಗಿತ್ತು ನದಿ ನೀರಿನ ಬಣ್ಣ; ಇದಾಗಿತ್ತೇ ಅಪಾಯದ ಸೂಚನೆ?
ರಾಜ್ಯಾದ್ಯಂತ 118 ಶಿಬಿರಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು 5,531 ಮಂದಿ ಶಿಬಿರಗಳಲ್ಲಿದ್ದಾರೆ. ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್, ಪೊಲೀಸ್ ಮುಂತಾದ ವಿವಿಧ ಪಡೆಗಳು ಸಂಘಟಿತರಾಗಿ ಕಾರ್ಯನಿರ್ವಹಿಸುತ್ತಿವೆ. ಸೇನೆ ಮತ್ತು ನೌಕಾಪಡೆಯ ವಿವಿಧ ತುಕಡಿಗಳು ರಕ್ಷಣಾ ಕಾರ್ಯಾಚರಣೆಗೆ ಧಾವಿಸಿವೆ.
ಕೋಳಿಕ್ಕೋಡ್‌ನ ವನಿಮೆಲ್ ಪಂಚಾಯತ್‌ನಲ್ಲಿ ಸತತ 9 ಬಾರಿ ಭೂಕುಸಿತ ಸಂಭವಿಸಿದೆ. ಘಟನೆಯು ನಸುಕಿನಲ್ಲಿ ನಡೆಯುತ್ತದೆ. ಇಲ್ಲಿ 12 ಮನೆಗಳು ಕೊಚ್ಚಿ ಹೋಗಿವೆ ಎಂದು ವರದಿಯಾಗಿದೆ. ಭೂಕುಸಿತದಲ್ಲಿ ಒಬ್ಬರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಎರಡು ಸೇತುವೆಗಳಿಗೆ ಹಾನಿಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ