ಡಿಜಿಟಲ್ ಯುಗ ಎಂಬುದು ನಮ್ಮ ಸುತ್ತಲಿನ ಎಲ್ಲವನ್ನೂ ಬದಲಾಯಿಸುತ್ತಿದೆ. ಈ ಡಿಜಿಟಲ್ ಎಂಬುದು ರಾಜಕೀಯ, ಆರ್ಥಿಕತೆ, ಸಮಾಜವನ್ನು ಮರುವ್ಯಾಖ್ಯಾನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರಿಂದು ಸಿಡ್ನಿ ಡೈಲಾಗ್ ಉದ್ದೇಶಿಸಿ, ‘ಭಾರತದಲ್ಲಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಕ್ರಾಂತಿ’ ಎಂಬ ವಿಷಯದ ಕುರಿತು ಮಾತನಾಡಿದರು. ಒಂದು ಯುಗದಲ್ಲಿ ಒಂದೇ ಬಾರಿ ಬರುವ ಬದಲಾವಣೆಯ ಸಮಯದಲ್ಲಿ ಈಗ ನಾವಿದ್ದೇವೆ. ಈಗ ಶುರುವಾಗಿರುವ ಡಿಜಿಟಲ್ ಯುಗವೆಂಬುದು ಸಾರ್ವಭೌಮತ್ವ, ಆಡಳಿತ, ನೈತಿಕತೆ, ಕಾನೂನು, ಹಕ್ಕುಗಳು ಮತ್ತು ಭದ್ರತೆಯ ವಿಚಾರದಲ್ಲಿ ಹೊಸಹೊಸ ಮಾದರಿಯ ಪ್ರಶ್ನೆಗಳನ್ನು ಎತ್ತುತ್ತಿದೆ ಎಂದು ಹೇಳಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನ ಎಂಬುದು ಬಹುದೊಡ್ಡ ಸಾಧನವಾಗಿದೆ. ಅಂತಾರಾಷ್ಟ್ರೀಯ ಮಟ್ಟದ ವ್ಯವಸ್ಥೆಗಳಿಗೆ ಭವಿಷ್ಯದಲ್ಲಿ ರೂಪಕೊಡಲು ಅತ್ಯಂತ ಮುಖ್ಯ ಅಂಶವಾಗಿದೆ. ಟೆಕ್ನಾಲಜಿ ಮತ್ತು ಡಾಟಾ ( ತಂತ್ರಜ್ಞಾನ ಮತ್ತು ದತ್ತಾಂಶ) ಗಳು ಬರುಬರುತ್ತ ಎಲ್ಲ ಕ್ಷೇತ್ರಗಳಲ್ಲೂ ಮುಖ್ಯ ಅಸ್ತ್ರಗಳಾಗುತ್ತಿವೆ. ನಾವಿದಕ್ಕೆ ಮುಕ್ತವಾಗಿ ತೆರೆದುಕೊಳ್ಳುತ್ತಿದ್ದೇವೆ. ಪ್ರಜಾಪ್ರಭುತ್ವದ ದೊಡ್ಡ ಬಲವೆಂದರೆ ಅದು ಮುಕ್ತತೆ. ಆದರೆ ಪಟ್ಟಭದ್ರ ಹಿತಾಸಕ್ತಿಗಳು ಈ ಮುಕ್ತತೆಯನ್ನು ದುರುಪಯೋಗಪಡಿಸಿಕೊಳ್ಳಲು ಬಿಡಬಾರದು ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತ ಪ್ರಜಾಪ್ರಭುತ್ವ ಮತ್ತು ಡಿಜಿಟಲ್ ಕ್ಷೇತ್ರದ ನಾಯಕನಾಗಿ, ಈ ದೇಶದ ಭದ್ರತೆ ಮತ್ತು ಸಮೃದ್ಧಿಯ ಹಂಚಿಕೆಗಾಗಿ ಪಾಲುದಾರರೊಂದಿಗೆ ಒಟ್ಟಾಗಿ ಕೆಲಸ ಮಾಡಲು ಸದಾ ಸಿದ್ಧವಾಗಿದೆ. ನಮ್ಮ ಭಾರತದ ಡಿಜಿಟಲ್ ಕ್ರಾಂತಿಯು, ಇಲ್ಲಿನ ಪ್ರಜಾಪ್ರಭುತ್ವ, ಜನಸಂಖ್ಯಾಶಾಸ್ತ್ರ ಮತ್ತು ಆರ್ಥಿಕತೆಯ ಪ್ರಮಾಣದಲ್ಲಿ ಬೇರೂರಿದೆ. ಹಾಗೇ, ಇದು ನಮ್ಮ ಯುವಜನತೆಯ ಅನ್ವೇಷಣೆ ಮತ್ತು ಉದ್ದಿಮೆಗಳಿಂದ ಚಾಲಿತವಾಗಿದೆ ಎಂದು ಹೇಳಿದ ಪ್ರಧಾನಿ ಮೋದಿ, ನಾವು ಆಡಳಿತದಲ್ಲಿ ಅಂದರೆ ಸಬಲೀಕರಣ, ಸಂಪರ್ಕ, ಫಲಾನುಭವಿಗಳಿಗೆ ಅಗತ್ಯ ಯೋಜನೆಗಳ ನೀಡುವಿಕೆ ಮತ್ತು ಜನರ ಕಲ್ಯಾಣ ಕಾರ್ಯಕ್ರಮಗಳಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸುವ ಮೂಲಕ ಜನರ ಜೀವನವನ್ನು ಪರಿವರ್ತನೆ ಮಾಡುತ್ತಿದ್ದೇವೆ ಎಂದೂ ತಿಳಿಸಿದರು.
ಹಾಗೇ, ಭಾರತದಲ್ಲಿ ಉಂಟಾಗುತ್ತಿರುವ ಪರಿವರ್ತನೆ ಬಗ್ಗೆ ಮಾತನಾಡಿದ ಅವರು, ನಮ್ಮ ದೇಶದಲ್ಲೀಗ 5 ಬಹುಮುಖ್ಯ ಪರಿವರ್ತನೆ ಆಗುತ್ತಿದೆ. ನಾವೀಗ ಜಗತ್ತಿನಲ್ಲಿಯೇ ಅತ್ಯಂತ ವಿಶಾಲವಾದ ಸಾರ್ವಜನಿಕ ಮಾಹಿತಿ ಮೂಲಸೌಕರ್ಯ ನಿರ್ಮಾಣ ಮಾಡುತ್ತಿದ್ದೇವೆ. ಎರಡನೇದಾಗಿ 600,000 ಗ್ರಾಮಗಳನ್ನು ಸಂಪರ್ಕಿಸುವ ಹಾದಿಯಲ್ಲಿ ಕೆಲಸ ನಡೆಯುತ್ತಿದೆ. ಅದಕ್ಕೂ ಮಿಗಿಲಾಗಿ ಕೊವಿಡ್ 19 ವಿರುದ್ಧ ಹೋರಾಟದಲ್ಲಿ ತಂತ್ರಜ್ಞಾನವನ್ನು ಸಕ್ರಿಯವಾಗಿ ಬಳಸಿಕೊಂಡಿದ್ದೇವೆ. ಆರೋಗ್ಯಸೇತು, ಕೊವಿನ್ ಆ್ಯಪ್ಗಳನ್ನು ಬಳಸಿ 1.1.ಬಿಲಿಯನ್ ಡೋಸ್ ಕೊರೊನಾ ವ್ಯಾಕ್ಸಿನ್ ನೀಡಲಾಗಿದೆ ಎಂದು ತಿಳಿಸಿದರು. ಈ ಮೂಲಕ ಭಾರತದಲ್ಲಿ ತಂತ್ರಜ್ಞಾನ ಕ್ರಾಂತಿ ಹೇಗೆ ನಡೆಯುತ್ತಿದೆ ಎಂಬುದನ್ನು ವಿವರಿಸಿದರು.
ಇದನ್ನೂ ಓದಿ: OTT: ಒಟಿಟಿ ಪ್ರಿಯರಿಗೆ ಸಂತಸದ ಸುದ್ದಿ; ಈ ವಾರ ಬಿಡುಗಡೆಯಾಗಲಿವೆ ಬಹುನಿರೀಕ್ಷಿತ ಸೀರೀಸ್, ಚಿತ್ರಗಳು!
Published On - 9:25 am, Thu, 18 November 21