ಬೆಂಗಳೂರು: ಈಶಾನ್ಯ ಮುಂಗಾರು ಮರಳಿದ ಕಾರಣ ಕಳೆದ ಒಂದು ತಿಂಗಳಿನಿಂದ ಒಣ ಹವೆ ಮುಂದುವರಿದಿದ್ದ ದಕ್ಷಿಣ ಭಾರತದಲ್ಲಿ ಫೆಬ್ರವರಿ 17ರಿಂದ ಮಳೆ ಸಿಂಚನವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಭಾರತದ ಹವಾಮಾನ ಇಲಾಖೆ (IMD) ಪ್ರಕಾರ ಮಧ್ಯ ಭಾರತದಲ್ಲಿ ಬೀಸುವ ಗಾಳಿ ಮತ್ತು ಬಂಗಾಳ ಕೊಲ್ಲಿ ಕಡೆಯಿಂದ ಉಂಟಾಗಿರುವ ಆರ್ದ್ರತೆಯಿಂದ ಮಳೆ ಬರುವ ಸಾಧ್ಯತೆ ಇದೆ. ದಕ್ಷಿಣ ಭಾರತ ಮತ್ತು ಮಧ್ಯ ಭಾರತದಲ್ಲಿ ಮಿಂಚು ಸಹಿತ ಮಳೆಯಾಗಲಿದೆ.
ಫೆಬ್ರವರಿ 17-18ರಂದು ಉತ್ತರ ಕರ್ನಾಟಕದ ಒಳಪ್ರದೇಶಗಳಲ್ಲಿ ಆಲಿಕಲ್ಲು, ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಲಿದ್ದು ಫೆಬ್ರವರಿ 18ರಂದು ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ , ಕಲಬುರ್ಗಿ ಮತ್ತು ಕೊಪ್ಪಳದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಮುಂಬರುವ ದಿನಗಳಲ್ಲಿ ಕೇರಳ ಮತ್ತು ಸಮೀಪ ಪ್ರದೇಶಗಳಲ್ಲಿ ಮಳೆಯಾಗಲಿದೆ. ಬುಧವಾರ ಕೇರಳದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ತಿರುವನಂತಪುರಂನಲ್ಲಿರುವ ಹವಾಮಾನ ಇಲಾಖೆ ಹೇಳಿದೆ. ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿ ಹುಟ್ಟಿರುವ ಚಂಡಮಾರುತ ದಕ್ಷಿಣ ಭಾರತದತ್ತ ಬೀಸುತ್ತಿರುವ ಕಾರಣ ಆಗ್ನೇಯ ಕರಾವಳಿ ಮತ್ತು ಪೂರ್ವ ಘಟ್ಟ ಭಾಗಗಳಲ್ಲಿ ಶುಕ್ರವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
♦ There is a strong wind discontinuity in the lower levels over Central India with moisture inflow from Bay of Bengal. It is likely to move southwestward and persist upto 18th February, 2021. Under its influence:
— India Meteorological Department (@Indiametdept) February 16, 2021
ಚೆನ್ನೈಯ ಹವಾಮಾನ ಇಲಾಖೆಯ ಪ್ರಕಾರ ತಮಿಳುನಾಡಿನ ದಕ್ಷಿಣ ಕರಾವಳಿಯಲ್ಲಿ ಗುರುವಾರ, ಉತ್ತರ ಕರಾವಳಿ ಮತ್ತು ಚೆನ್ನೈನಲ್ಲಿ ಶುಕ್ರವಾರ ಮಳೆಯಾಗಲಿದೆ. ಕರ್ನಾಟಕ ಮತ್ತು ಕೇರಳದ ಜನರು ಬುಧವಾರ ಮತ್ತು ಗುರುವಾರ, ಆಂಧ್ರಪ್ರದೇಶದ ಕರಾವಳಿ ಮತ್ತು ಮತ್ತು ತಮಿಳುನಾಡಿನ ಜನರು ಶುಕ್ರವಾರ ಮತ್ತು ಶನಿವಾರ ಎಚ್ಚರದಿಂದಿರುವಂತೆ (yellow watch) ಹವಾಮಾನ ಇಲಾಖೆ ಸೂಚಿಸಿದೆ.
ಇದನ್ನೂ ಓದಿ: ನೆಲಕಚ್ಚಿದ ಬೆಳೆ: ಮಳೆರಾಯನ ಆರ್ಭಟಕ್ಕೆ ನಲುಗಿದ ಅನ್ನದಾತರು
ಆದಾಗ್ಯೂ, 2021ರ ಆರಂಭದಿಂದಲೇ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸರಾಸರಿಗಿಂತ ತುಸು ಹೆಚ್ಚೇ ಮಳೆ ಸುರಿದಿತ್ತು. ಜನವರಿ 1- ಫೆಬ್ರುವರಿ 15 ರ ಅವಧಿಯಲ್ಲಿ ಆಂಧ್ರಪ್ರದೇಶದಲ್ಲಿ ಸರಾಸರಿ 16ಮಿಮೀ ಮಳೆಯಾಗಿದೆ. ಅದೇ ವೇಳೆ ಕರ್ನಾಟಕದಲ್ಲಿ 22.4 ಮಿಮೀ, ಕೇರಳದಲ್ಲಿ 105.6 ಮಿಮೀ ಮತ್ತು ತಮಿಳುನಾಡಿನಲ್ಲಿ 138.2 ಮಿಮೀ ಮಳೆಯಾಗಿದೆ.
Published On - 3:41 pm, Tue, 16 February 21