ನವದೆಹಲಿ: ಉತ್ತರ ಪ್ರದೇಶ (Uttar Pradesh) ಮತ್ತು ಉತ್ತರಾಖಂಡದಲ್ಲಿ (Uttarakhand) ಇಂದು (ಸೆಪ್ಟೆಂಬರ್ 17) ಅತ್ಯಂತ ಭಾರೀ ಪ್ರಮಾಣದಲ್ಲಿ ಮಳೆಯಾಗುವ (Rainfall) ಮುನ್ಸೂಚನೆ ನೀಡಲಾಗಿದೆ. ಮುಂದಿನ 5 ದಿನಗಳ ಕಾಲ ಈಶಾನ್ಯ ಭಾರತದಲ್ಲಿ ಮಳೆಯ ಅಬ್ಬರ ಕೊಂಚ ಕಡಿಮೆಯಾಗಲಿದೆ. ಲಕ್ನೋದಲ್ಲಿ ಮಳೆಯಿಂದಾಗಿ 9 ಜನರು ಮೃತಪಟ್ಟಿದ್ದಾರೆ, ಹಲವು ಮನೆಗಳು ಧ್ವಂಸವಾಗಿವೆ. ಇಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೆಹಲಿ:
ದೆಹಲಿಯಲ್ಲಿ ಇಂದು ಹಗಲಿನಲ್ಲಿ ಮೋಡ ಕವಿದ ವಾತಾವರಣ ಮತ್ತು ಲಘು ಮಳೆಯಾಗುವ ಮುನ್ಸೂಚನೆ ಇದೆ. ಗರಿಷ್ಠ ತಾಪಮಾನವು ಸುಮಾರು 32 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ ಎಂದು ಐಎಂಡಿ ಹೇಳಿದೆ.
ರಾಜಸ್ಥಾನ:
ಶುಕ್ರವಾರದಿಂದಲೇ ಪೂರ್ವ ರಾಜಸ್ಥಾನದ ಬಹುತೇಕ ಭಾಗಗಳಲ್ಲಿ ಮಳೆಯ ಚಟುವಟಿಕೆ ಕಡಿಮೆಯಾಗಿದ್ದು, ಮುಂದಿನ ಮೂರರಿಂದ 4 ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಪಶ್ಚಿಮ ರಾಜಸ್ಥಾನದ ಬಹುತೇಕ ಭಾಗಗಳಲ್ಲಿ ಇಂದಿನಿಂದ ಶುಷ್ಕ ಹವಾಮಾನದ ಸಾಧ್ಯತೆಯಿದೆ. ರಾಜಸ್ಥಾನದಲ್ಲಿ ಈ ಬಾರಿ ಮಾನ್ಸೂನ್ ಉತ್ತಮವಾಗಿದೆ. ಹೆಚ್ಚಿನ ಪ್ರದೇಶಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ದಾಖಲಾಗಿದೆ.
ಇದನ್ನೂ ಓದಿ: ಮುಂಬೈನಲ್ಲಿ ಭಾರೀ ಮಳೆ: ಮಹಾರಾಷ್ಟ್ರದ ರಾಯಘಡ, ರತ್ನಗಿರಿ, ಸತಾರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಮಹಾರಾಷ್ಟ್ರ:
ಕಳೆದ 24 ಗಂಟೆಗಳಲ್ಲಿ, ಮಹಾರಾಷ್ಟ್ರದಲ್ಲಿ ಕ್ರಮವಾಗಿ 37.71 ಮಿಮೀ, 43.38 ಮಿಮೀ ಮತ್ತು 36.88 ಮಿಮೀ ಸರಾಸರಿ ಮಳೆ ದಾಖಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಒಡಿಶಾ:
ಭಾನುವಾರ ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಉಂಟಾಗಲಿದೆ. ಪುರಿ, ಕಲಹಂಡಿ, ಕಂಧಮಾಲ್, ಬೋಲಂಗೀರ್, ಗಜಪತಿ, ಗಂಜಾಂ ಮತ್ತು ಜಗತ್‌ಸಿಂಗ್‌ಪುರ ಜಿಲ್ಲೆಗಳಲ್ಲಿ ಭಾನುವಾರ 7ರಿಂದ 10 ಮಿಮೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಖುರ್ದಾ, ಕಟಕ್ ಮತ್ತು ಪುರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆ ಬೀಳುವ ಸಾಧ್ಯತೆ ಇದೆ.