ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ತುಂಬಿ ಹರಿಯುತ್ತಿವೆ ಸಪ್ತ ನದಿಗಳು: ಬೆಳಗಾವಿ ಪ್ರವಾಹಕ್ಕೆ ಜನ ತತ್ತರ

ಬೆಳಗಾವಿ ಜಿಲ್ಲೆಯಲ್ಲಿ 19 ಸಂಪರ್ಕ ಸೇತುವೆಗಳು ಮುಚ್ಚಿಹೋಗಿವೆ. ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಬೆಳಗಾವಿ ಜಿಲ್ಲೆಯ ರಾಮದುರ್ಗಕ್ಕೂ ನೀರು ಎಂಟ್ರಿಯಾಗಿದೆ.

ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ತುಂಬಿ ಹರಿಯುತ್ತಿವೆ ಸಪ್ತ ನದಿಗಳು: ಬೆಳಗಾವಿ ಪ್ರವಾಹಕ್ಕೆ ಜನ ತತ್ತರ
ಬೆಳಗಾವಿ ಮಳೆ
Follow us
| Updated By: ಆಯೇಷಾ ಬಾನು

Updated on:Sep 13, 2022 | 10:46 AM

ಬೆಳಗಾವಿ: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ (Karnataka Rains) ಭಾರಿ ಮಳೆಯಾಗುತ್ತಿದೆ. ಅಲ್ಲದೆ ಬೆಳಗಾವಿಯಲ್ಲೂ(Belagavi Rain) ನಿರಂತರ ಮಳೆಯಾಗುತ್ತಿದ್ದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ, ಏಳು ನದಿಗಳು ಉಕ್ಕಿ ಹರಿಯುತ್ತಿವೆ. ಘಟಪ್ರಭಾ ನದಿ ನೀರು ಗೋಕಾಕ್ ನಗರಕ್ಕೆ ನುಗ್ಗಿದ್ದು, ಉಪ್ಪಾರ ಓಣಿಯ ಕೆಲ ಮನೆಗಳು ಮುಳುಗಿವೆ. ಬೆಳಗಾವಿ ಜಿಲ್ಲೆಯಲ್ಲಿ 19 ಸಂಪರ್ಕ ಸೇತುವೆಗಳು ಮುಚ್ಚಿಹೋಗಿವೆ. ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಬೆಳಗಾವಿ ಜಿಲ್ಲೆಯ ರಾಮದುರ್ಗಕ್ಕೂ ನೀರು ಎಂಟ್ರಿಯಾಗಿದೆ. ಪಟ್ಟಣದ ಹೊರವಲಯದ ಥೇರ್ ಬಜಾರ್‌‌ಗೆ ನೀರು ನುಗ್ಗಿ ಥೇರ್ ಬಜಾರ್ ಬಳಿ 4ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ನದಿ ತೀರದ ಬಡಾವಣೆಗಳನ್ನ ಸ್ಥಳಾಂತರಿಸುವಂತೆ ಒತ್ತಾಯಿಸಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಘಟಪ್ರಭಾ, ಮಲಪ್ರಭಾ, ವೇದಗಂಗಾ, ದೂದಗಂಗಾ, ಹಿರಣ್ಯಕೇಶಿ,‌ ಮಾರ್ಕಂಡೇಯ, ಕೃಷ್ಣಾ ನದಿ ಸೇರಿದಂತೆ ಸಪ್ತ ನದಿಗಳು ಹರಿಯುತ್ತವೆ. ಆದ್ರೆ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಸಪ್ತ ನದಿಗಳ ಪ್ರತಾಪ ಹೆಚ್ಚಾಗಿ ಬೆಳಗಾವಿ ಜಲಸಂಕಷ್ಟದಲ್ಲಿ ಮುಳುಗಿದೆ. ಹಿಡಕಲ್ ಜಲಾಶಯದಿಂದ 27ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ಘಟಪ್ರಭಾ ನದಿಗೆ 52ಸಾವಿರ ಕ್ಯೂಸೆಕ್ ಹೊರ ಹರಿವು. ನವಿಲು ತೀರ್ಥ ಜಲಾಶಯದಿಂದ 12,500 ಕ್ಯೂಸೆಕ್ ನೀರು‌ ಮಲಪ್ರಭಾ ನದಿಗೆ ಬಿಡುಗಡೆ ಮಾಡಲಾಗಿದೆ. ಘಟಪ್ರಭಾ ನದಿ‌ ಪಾತ್ರದ ನಲವತ್ತು ಗ್ರಾಮಗಳಿಗೆ ಜಲಕಂಟಕ ಶುರುವಾಗಿದೆ. ಹಾಗೂ ಮಲಪ್ರಭಾ ನದಿ ಪಾತ್ರದ ಇಪ್ಪತ್ತಕ್ಕೂ ಅಧಿಕ ಗ್ರಾಮಕ್ಕೆ ಪ್ರವಾಹದ ಭೀತಿ ಎದುರಾಗಿದೆ.

ಮಳೆ ಅಬ್ಬರಕ್ಕೆ ಮುಳುಗಿದ ದತ್ತ ಮಂದಿರ

ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಕಲ್ಲೋಲ-ಯಡೂರು ಸಂಪರ್ಕಿಸುವ ಸೇತುವೆ ಮುಳುಗಿದೆ. ಹಾಗೂ ಕಲ್ಲೋಳ ಗ್ರಾಮದ ನದಿ ಪಕ್ಕದ ದತ್ತ ಮಂದಿರವನ್ನು ನೀರು ಸುತ್ತುವರಿದಿದೆ. ಇನ್ನು ಹಬ್ಬಾನಟ್ಟಿ ಗ್ರಾಮದ ಮಾರುತಿ ಮಂದಿರ ಸಂಪೂರ್ಣ ಜಲಾವೃತಗೊಂಡಿದೆ. ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ದೇವಸ್ಥಾನ ಜಲಾವೃತಗೊಂಡಿದೆ.

ಗೋಕಾಕ್ ತಾಲೂಕಿನ ಮುಸಗುಪ್ಪಿ ಗ್ರಾಮಕ್ಕೆ ಘಟಪ್ರಭಾ ನದಿ ನೀರು ನುಗ್ಗಿದ್ದು ಗ್ರಾಮದ 10ಕ್ಕೂ ಹೆಚ್ಚು ಮನೆಗಳು ನೀರಿನಲ್ಲಿ ಮುಳುಗಿವೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಜಲಾವೃತಗೊಂಡಿದೆ. ಹಾಗೂ ಗ್ರಾಮದ ಲಕ್ಷ್ಮಿ ದೇವಿ ದೇವಸ್ಥಾನಕ್ಕೆ ನದಿ ನೀರು ಸುತ್ತುವರೆದಿದೆ‌. ಹೀಗಾಗಿ ಸ್ವಯಂಪ್ರೇರಿತರಾಗಿ ಮನೆಗಳನ್ನ ಖಾಲಿ ಮಾಡಿ ಜನರು ಊರು ತೊರೆಯುತ್ತಿದ್ದಾರೆ. ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಈವರೆಗೂ ಅಧಿಕಾರಿಗಳು ಭೇಟಿ ನೀಡದಿದ್ದಕ್ಕೆ ಬೆಳಗಾವಿ ಜಿಲ್ಲಾಡಳಿತ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಮಳೆ ಅವಾಂತರಕ್ಕೆ ವ್ಯಕ್ತಿ ಬಲಿ

ಬೆಳಗಾವಿ ನಗರದಲ್ಲಿ ಮಳೆ ಅವಾಂತರಕ್ಕೆ ವ್ಯಕ್ತಿ ಬಲಿಯಾಗಿದ್ದಾರೆ. ನಿರಂತರ ಮಳೆಗೆ ಮರ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೋರ್ವರಿಗೆ ಗಾಯಗಳಾಗಿವೆ. ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮ ವೃತ್ತದತ್ತ ತೆರಳುತ್ತಿದ್ದ ಬೈಕ್ ಸವಾರನ ಮೇಲೆ ಏಕಾಏಕಿ ಬೃಹದಾಕಾರದ ಮರ ಬಿದ್ದಿದೆ. ರಾಕೇಶ್ ಸುಣದಾಳ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೋರ್ವನಿಗೆ ಗಾಯಗಳಾಗಿವೆ. ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ, ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಾಗಲಕೋಟೆಯಲ್ಲೂ ಹೆಚ್ಚಿದ ಆತಂಕ

ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ‌ ಹರಿಯುತ್ತಿದೆ. ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ಹಾಗೂ ಮುಧೋಳ, ಬೀಳಗಿ ತಾಲೂಕಿನಲ್ಲಿ ಪ್ರವಾಹ ಭೀತಿ ಹೆಚ್ಚಿಗಿದೆ. ನದಿ ತೀರದ 69 ಗ್ರಾಮಗಳ ವ್ಯಾಪ್ತಿಯಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಮುಧೋಳ ತಾಲೂಕಿನ ಕೆಲ ಬ್ರಿಡ್ಜ್ ಕಂ ಬ್ಯಾರೇಜ್ ಜಲಾವೃತಗೊಂಡಿವೆ. ಮಿರ್ಜಿ, ಚನ್ನಾಳ, ಜಾಲಿಬೇರ, ಜೀರಗಾಳ, ಇಂಗಳಗಿ, ಜಂಬಗಿ ಕೆಡಿ, ಕಸಬಾ ಜಂಬಗಿಯಲ್ಲಿ ಸೇತುವೆಗಳು ಮುಳುಗಿವೆ. ಕೇವಲ ಒಂದು ತಿಂಗಳ ಅಂತರದಲ್ಲಿ ಮತ್ತೆ ಪ್ರವಾಹದ ಆತಂಕ ಎದುರಾಗಿದೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುಧೋಳ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ತಾಲೂಕು ಆಡಳಿತ ಅನೌನ್ಸ್​​​ ಮಾಡಿಸುತ್ತಿದೆ.

ಐತಿಹಾಸಿಕ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತ

ಇನ್ನು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಾಚಕನೂರಿನ ಐತಿಹಾಸಿಕ ಹೊಳೆಬಸವೇಶ್ವರ ದೇವಸ್ಥಾನಕ್ಕೆ ಜಲದಿಗ್ಬಂಧನವಾಗಿದೆ. ದೇವಸ್ಥಾನದಲ್ಲಿ 6ರಿಂದ7 ಅಡಿ ವರೆಗೆ ನೀರು ನಿಂತಿದೆ. ಹೀಗಾಗಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ದೇವಸ್ಥಾನ ಜಲಾವೃತ ಹಿನ್ನೆಲೆ ಹೊರಗಡೆ ಈಶ್ವರಲಿಂಗಕ್ಕೆ ಪೂಜಾರಿಗಳು ಪೂಜೆ ಸಲ್ಲಿಸುತ್ತಿದ್ದಾರೆ. ನದಿ ಅಕ್ಕಪಕ್ಕದ ನೂರಾರು ಎಕರೆ ಕಬ್ಬು ಬೆಳೆ ನಾಶವಾಗಿದೆ.

ಸೇತುವೆ ದಾಟುವಾಗ ಇಬ್ಬರು ನೀರುಪಾಲು

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕೊರ್ಲಕುಂಟೆ ಗ್ರಾಮದಲ್ಲಿ ಸೇತುವೆ ದಾಟುವಾಗ ಇಬ್ಬರು ನೀರುಪಾಲಾಗಿದ್ದಾರೆ. ನಿನ್ನೆ ರಾತ್ರಿ ಬೈಕಿನಲ್ಲಿ ಮೂವರು ಸೇತುವೆ ದಾಟುವಾಗ ದುರ್ಘಟನೆ ಸಂಭವಿಸಿದೆ. ಕೊರ್ಲಕುಂಟೆ ಗ್ರಾಮದ ಓಬಳೇಶ್, ಕುಮಾರ ನೀರುಪಾಲಾಗಿದ್ದು ಕೊರ್ಲಕುಂಟೆ ಗ್ರಾಮದ ಮಂಜುನಾಥ್ ಅದೃಷ್ಟವಶಾತ್ ಪಾರಾಗಿದ್ದಾರೆ.

Published On - 10:34 am, Tue, 13 September 22