ದೆಹಲಿ: ಕೆಲ ದಿನಗಳ ಬಿಡುವಿನ ಬಳಿಕ ದೆಹಲಿ (Delhi Weather) ಮತ್ತು ಇತರ ರಾಜ್ಯಗಳಲ್ಲಿ ಮತ್ತು ಶೀತ ಮಾರುತಗಳು (Cold Waves) ಬೀಸುತ್ತಿವೆ. ಮುಂದಿನ ದಿನಗಳಲ್ಲಿ ತಾಪಮಾನ 3 ಡಿಗ್ರಿ ಸೆಲ್ಸಿಯಸ್ಗೆ ಕುಸಿಯಬಹುದು ಎಂದು ಹವಾಮಾನ ಇಲಾಖೆಯು (Weather Department) ಮುನ್ಸೂಚನೆ ನೀಡಿದೆ. ಸಫ್ದಾರ್ಜಂಗ್ ಹವಾಮಾನ ಕೇಂದ್ರದಲ್ಲಿ ಇಂದು ಮುಂಜಾನೆ ಉಷ್ಣಾಂಶವು 5.6 ಡಿಗ್ರಿಗೆ ಕುಸಿದಿತ್ತು. ಪಾಲಮ್ ಪ್ರದೇಶದಲ್ಲಿ ಗೋಚರಿಸುವ ಅಂತರವು ಕೇವಲ 200 ಮೀಟರ್ಗೆ ಕುಸಿದಿತ್ತು. ಗೋಚರಿಸುವ ಅಂತರವು ತೀವ್ರಗತಿಯಲ್ಲಿ ಕುಸಿದಿದ್ದ ಹಿನ್ನೆಲೆಯಲ್ಲಿ ನಸುಕಿನಲ್ಲಿ ರಾಷ್ಟ್ರ ರಾಜಧಾನಿಯಿಂದ ಟೇಕ್ಆಫ್ ಆಗಬೇಕಿದ್ದ ಹಲವು ವಿಮಾನಗಳು ತಡವಾಗಿ ಹಾರಿದವು ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್ಐ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಪಂಜಾಬ್, ಹರಿಯಾಣ, ಚಂಡೀಗಡ, ಉತ್ತರ ಮತ್ತು ರಾಜಸ್ಥಾನದ ಹಲವು ಭಾಗಗಳಲ್ಲಿ ಚಳಿಗಾಳಿ ಮುಂದುವರಿದಿದೆ. ಹವಾಮಾನ ವೈಪರಿತ್ಯದಿಂದಾಗಿ ಕನಿಷ್ಠ 20 ರೈಲುಗಳು ತಡವಾಗಿ ಸಂಚರಿಸುತ್ತಿವೆ. ಇಂದಿನಿಂದ (ಜ 15) ರಾಷ್ಟ್ರ ರಾಜಧಾನಿಯಲ್ಲಿ ಉಷ್ಣಾಂಶ ತೀವ್ರಗತಿಯಲ್ಲಿ ಕುಸಿಯಬಹುದು ಎಂದು ಹವಾಮಾನ ಇಲಾಖೆಯು ಈ ಮೊದಲು ಮುನ್ಸೂಚನೆ ನೀಡಿತ್ತು.
ನಾಳೆ ಮತ್ತು ನಾಡಿದ್ದು (ಜ 16-17) ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಶೀತ ಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿತ್ತು. ಅಯನಗರ್ ಮತ್ತು ರಿಡ್ಜ್ ಪ್ರದೇಶದಲ್ಲಿ ಕನಿಷ್ಠ ತಾಪಮಾನವು 3 ಡಿಗ್ರಿಗೆ ಕುಸಿಯಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ತೀವ್ರ ಚಳಿಗಾಳಿಯಿಂದ ಫ್ರೋಸ್ಟ್ಬೈಟ್ನಂಥ ಸಮಸ್ಯೆ ಕಾಣಿಸಿಕೊಳ್ಳಬಹುದು. ಹೀಗಾಗಿ ಹೊರಾಂಗಣ ಚಟುವಟಿಕೆ ಕಡಿಮೆ ಮಾಡಿ, ಮನೆಗಳಲ್ಲಿಯೇ ಉಳಿಯುವುದು ಒಳ್ಳೆಯದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಜನರನ್ನು ಎಚ್ಚರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತೀವ್ರ ಚಳಿಯ ಹಲವು ರಾತ್ರಿಗಳನ್ನು ಕಳೆದಿದ್ದ ದೆಹಲಿ ನಿವಾಸಿಗಳಿಗೆ ತಾಪಮಾನದಲ್ಲಿ ತುಸು ಹೆಚ್ಚಳ ಕಾಣಿಸಿಕೊಂಡಿದ್ದು ನೆಮ್ಮದಿ ತಂದಿತ್ತು. ಇಂದು ನಸುಕಿನಲ್ಲಿ ಏಕಾಏಕಿ ಮತ್ತೊಮ್ಮೆ ಶೀತಗಾಳಿ ಬೀಸಿದ್ದು ಜನರನ್ನು ಕಂಗಾಲಾಗಿಸಿದೆ. ಜನವರಿ 16ರಿಂದ 18ರ ಅವಧಿಯಲ್ಲಿ ಉಷ್ಣಾಂಶವು ಮೈನಸ್ 4 (-4) ಡಿಗ್ರಿಗೆ ಕುಸಿಯಬಹುದು ಎಂದು ಹವಾಮಾನ ತಜ್ಞರೊಬ್ಬರು ಎಚ್ಚರಿಸಿದ್ದಾರೆ.
Don’t know how to put this up but upcoming spell of #Coldwave in #India look really extreme during 14-19th January 2023 with peak on 16-18th, Never seen temperature ensemble going this low in a prediction model so far in my career.
Freezing -4°c to +2°c in plains, Wow! pic.twitter.com/pyavdJQy7v— Weatherman Navdeep Dahiya (@navdeepdahiya55) January 11, 2023
‘ಮುಂದಿನ ದಿನಗಳಲ್ಲಿ ದೆಹಲಿಯ ಹವಾಮಾನ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ. ಜನವರಿ 14ರಿಂದ 19ರ ವರೆಗೆ ತಂಪು ಹವೆ ಮುಂದುವರಿಯಲಿದೆ. ಜನವರಿ 18ರ ಹೊತ್ತಿಗೆ ಹವಾಮಾನವು +2ರಿಂದ -4 ಡಿಗ್ರಿವರೆಗೆ ಕುಸಿಯಬಹುದು ಎಂದು ಹವಾಮಾನ ವಿದ್ಯಮಾನಗಳನ್ನು ನಿಯಮಿತವಾಗಿ ಅಪ್ಡೇಟ್ ಮಾಡುವ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ. ಹವಾಮಾನ ವಿಶ್ಲೇಷಿಸುವ ಸಂಸ್ಥೆ ಸ್ಕೈಮೆಟ್ ಈ ಹೇಳಿಕೆಯನ್ನು ತಳ್ಳಿಹಾಕಿದೆ. ‘ದೆಹಲಿಯ ತಾಪಮಾನವು 3ರಿಂದ 4 ಡಿಗ್ರಿಗೆ ಕುಸಿಯಬಹುದು. ಆದರೆ ಶೂನ್ಯಕ್ಕಿಂತಲೂ ಕಡಿಮೆಯಾಗುವ ಸಾಧ್ಯತೆಯಿಲ್ಲ ಎಂದು’ ಎಂದು ಸ್ಕೈಮೆಟ್ ಹೇಳಿದೆ.
ಇದನ್ನೂ ಓದಿ: Karnataka Weather Today: ಇಂದಿನಿಂದ 6 ದಿನ ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಚಳಿ ಹೆಚ್ಚಳ
ಹವಾಮಾನಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:36 am, Sun, 15 January 23