Army Day: ಇಂದು ಸೇನಾ ದಿನ; ಬೆಂಗಳೂರಿನಲ್ಲಿ ವಿಶೇಷ ಪರೇಡ್ ಕಾರ್ಯಕ್ರಮ
ಅಶ್ವಾರೋಹಿ ತುಕಡಿ ಈ ಬಾರಿಯ ಪರೇಡ್ನ ವಿಶೇಷ ಆಕರ್ಷಣೆಯಾಗಿದೆ. ಐದು ರೆಜಿಮೆಂಟ್ಗಳ ಬ್ಯಾಂಡ್ ತಂಡಗಳು ಪರೇಡ್ನ ಆಕರ್ಷಣೆ ಹೆಚ್ಚಿಸಲಿವೆ.
ಬೆಂಗಳೂರು: ಭಾರತೀಯ ಸೇನೆಯ 75ನೇ ಸೇನಾ ದಿನದ (Army Day) ಪ್ರಯುಕ್ತ ಬೆಂಗಳೂರಿನಲ್ಲಿ ಭಾನುವಾರ (ಜ 15) ವಿಶೇಷ ಪರೇಡ್ ನಡೆಯಲಿದೆ. ರಾಷ್ಟ್ರ ರಾಜಧಾನಿಯ ಹೊರಗೆ ಈ ಮಹತ್ವದ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಮೊದಲು. ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ನ ಯುದ್ಧ ಸ್ಮಾರಕಕ್ಕೆ ಸೇನೆಯ ಮುಖ್ಯಸ್ಥರಾದ ಜನರಲ್ ಮನೋಜ್ ಪಾಂಡೆ (General Manoj Pande) ಗೌರವ ನಮನ ಸಲ್ಲಿಸಲಿದ್ದಾರೆ. ನಂತರ ಸೇನೆಯ 8 ಕಂಟಿಂಜೆಂಟ್ಗಳು ನಡೆಸಿಕೊಡಲಿರುವ ಪರೇಡ್ ಅನ್ನು ಅವರು ವೀಕ್ಷಿಸಲಿದ್ದಾರೆ. ಅಶ್ವಾರೋಹಿ ತುಕಡಿ ಈ ಬಾರಿಯ ಪರೇಡ್ನ ವಿಶೇಷ ಆಕರ್ಷಣೆಯಾಗಿದೆ. ಐದು ರೆಜಿಮೆಂಟ್ಗಳ ಬ್ಯಾಂಡ್ ತಂಡಗಳು ಪರೇಡ್ನ ಆಕರ್ಷಣೆ ಹೆಚ್ಚಿಸಲಿವೆ.
ವಿವಿಧ ಕಾರ್ಯಾಚರಣೆಗಳಲ್ಲಿ ಸೈನಿಕರು ತೋರಿದ ಧೈರ್ಯ ಮತ್ತು ತ್ಯಾಗವನ್ನು ಗೌರವಿಸಲಿರುವ ಜನರಲ್ ಮನೋಜ್ ಪಾಂಡೆ ಸಾಧಕ ಸೈನಿಕರಿಗೆ ಶೌರ್ಯ ಪದಕಗಳನ್ನು ನೀಡಲಿದ್ದಾರೆ. ಧ್ರುವ್ ಮತ್ತು ರುದ್ರ ಹೆಲಿಕಾಪ್ಟರ್ಗಳು ಆಕರ್ಷಕ ಕಸರತ್ತುಗಳನ್ನು ಪ್ರದರ್ಶಿಸಲಿವೆ. ಕೆ9 ವಜ್ರ ಸ್ವಯಂಚಾಲಿತ ಗನ್ಗಳು, ಪಿನಾಕ ರಾಕೆಟ್ಗಳು, ಟಿ-90 ಟ್ಯಾಂಕ್ಗಳು, ಬಿಎಂಪಿ-2 ಇನ್ಫೆಂಟ್ರಿ ಯುದ್ಧ ವಾಹನಗಳು, ತಂಗುಸ್ಕಾ ವಾಯುರಕ್ಷಣಾ ವ್ಯವಸ್ಥೆ, 155 ಎಂಎಂ ಬೋಫೋರ್ಸ್ ಗನ್, ಸ್ವಾತಿ ರಾಡಾರ್ ಸೇರಿದಂತೆ ಹಲವು ಅತ್ಯಾಧುನಿಕ ಯುದ್ಧೋಪಕರಗಳು ಪರೇಡ್ನಲ್ಲಿ ಪಾಲ್ಗೊಳ್ಳಲಿವೆ.
ಬೆಂಗಳೂರು ಎಎಸ್ಸಿ ಸೆಂಟರ್ ಅಂಡ್ ಕಾಲೇಜ್ನಲ್ಲಿ ಜ 15ರ ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಸೇನಾದಿನದ ಪ್ರಯುಕ್ತ ರೂಪಿಸಿರುವ ವಿಶೇಷ ಲಾಂಛನವನ್ನು ಅವರು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ವೇಳೆ ಸೈನಿಕರು ಟಾರ್ನೆಡೊ ಮೋಟಾರ್ ಸೈಕಲ್ ಇತರ ಕೌಶಲಗಳನ್ನು ಪ್ರದರ್ಶಿಸಲಿದ್ದಾರೆ. ಪ್ಯಾರಾ ಮೋಟಾರ್ ಫ್ಲೈಯಿಂಗ್, ಟೆಂಟ್ ಪೆಗಿಂಗ್, ಡೇರ್ ಡೆವಿಲ್ ಜಂಪ್, ಟೇಕ್ವಾಂಡೋ ಸೇರಿದಂತೆ ಹಲವು ಸಮರ ಕಲೆಗಳನ್ನು ಸೈನಿಕರು ಪ್ರದರ್ಶಿಸಲಿದ್ದಾರೆ.
ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ
ಸೇನಾ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಸೈನಿಕರಿಗೆ, ನಿವೃತ್ತ ಸೈನಿಕರು ಮತ್ತು ಸೇನಾ ಕುಟುಂಬದವರಿಗೆ ಶುಭ ಕೋರಿದ್ದಾರೆ. ‘ಎಲ್ಲ ಭಾರತೀಯರಿಗೂ ಸೇನೆಯ ಬಗ್ಗೆ ಹೆಮ್ಮೆಯಿದೆ. ಸೇನೆಗೆ ನಾವೆಲ್ಲರೂ ಕೃತಜ್ಞರಾಗಿದ್ದೇವೆ. ನಮ್ಮ ದೇಶದ ಸುರಕ್ಷೆ ಖಾತ್ರಿಪಡಿಸುವುದಲ್ಲದೇ, ಸಂಕಷ್ಟ ಪರಿಸ್ಥಿತಿಯಲ್ಲಿ ನೆರವಿಗೆ ಧಾವಿಸುತ್ತಾರೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
On Army Day, I convey my best wishes to all army personnel, veterans and their families. Every Indian is proud of our Army and will always be grateful to our soldiers. They have always kept our nation safe and are widely admired for their service during times of crisis. pic.twitter.com/EJvbkb9bmD
— Narendra Modi (@narendramodi) January 15, 2023
ಸೇನಾ ದಿನದ ಇತಿಹಾಸ
ಏಪ್ರಿಲ್ 1, 1895 ರಂದು, ಬ್ರಿಟಿಷ್ ಆಡಳಿತದೊಳಗೆ ಬ್ರಿಟ್ ಇಂಡಿಯನ್ ಆರ್ಮಿ ಸ್ಥಾಪಿಸಲಾಯಿತು ಮತ್ತು ಇದನ್ನು ಬ್ರಿಟಿಷ್ ಇಂಡಿಯನ್ ಆರ್ಮಿ ಎಂದು ಕರೆಯಲಾಯಿತು. 1947 ರಲ್ಲಿ ಭಾರತ ಸ್ವತಂತ್ರವಾದ ನಂತರ 1949ರ ಜನವರಿ 15ರವರೆಗೆ ದೇಶ ತನ್ನ ಮೊದಲ ಭಾರತೀಯ ಮುಖ್ಯಸ್ಥರನ್ನು ಸ್ವೀಕರಿಸಿರಲಿಲ್ಲ.
ಲೆಫ್ಟಿನೆಂಟ್ ಜನರಲ್ ಕೆಎಂ ಕಾರಿಯಪ್ಪ ಅವರು ಅಂತಿಮ ಬ್ರಿಟಿಷ್ ಕಮಾಂಡರ್-ಇನ್-ಚೀಫ್ ಆಗಿದ್ದ ಜನರಲ್ ಫ್ರಾನ್ಸಿಸ್ ಬುಚರ್ ನಂತರ 1949 ರಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡರು. ಆ ದಿನವನ್ನೇ ಸೇನಾ ದಿನ ಎಂದು ಆಚರಿಸಲಾಗುತ್ತದೆ. ಇಂದು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಸೈನಿಕರಿಗೆ ಗೌರವವನ್ನು ಸಲ್ಲಿಸಲಾಗುತ್ತದೆ. ಸ್ವತಂತ್ರ ಭಾರತದ ಮೊದಲ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರು ಅಧಿಕಾರ ಸ್ವೀಕರಿಸಿದ ದಿನವಾದ ಜನವರಿ 15ರಂದು ಪ್ರತಿ ವರ್ಷ ಸೇನಾ ದಿನವನ್ನು ಆಚರಿಸಲಾಗುತ್ತಿದೆ.
ದೇಶದಲ್ಲಿ ಭಾರತೀಯ ಸೇನಾ ದಿನವನ್ನು ಹೇಗೆ ಆಚರಿಸಲಾಗುತ್ತದೆ?
ನವದೆಹಲಿಯ ಇಂಡಿಯಾ ಗೇಟ್‌ನಲ್ಲಿರುವ ‘ಅಮರ್ ಜವಾನ್ ಸ್ಮಾರಕದಲ್ಲಿ ಹುತಾತ್ಮರಾದ ಭಾರತೀಯ ಸೇನಾ ಸಿಬ್ಬಂದಿಗೆ ಗೌರವ ಸಲ್ಲಿಸಲಾಗುತ್ತದೆ. ಗೌರವದ ನಂತರ, ಮಿಲಿಟರಿ ಪ್ರದರ್ಶನಗಳೊಂದಿಗೆ ಭವ್ಯವಾದ ಮೆರವಣಿಗೆಯಲ್ಲಿ ಭಾರತೀಯ ಸೇನೆಯ ಆಧುನಿಕ ತಂತ್ರಜ್ಞಾನ ಮತ್ತು ಸಾಧನೆಗಳನ್ನು ಪ್ರದರ್ಶಿಸಲಾಗುತ್ತದೆ. ಈ ದಿನದಂದು ಸೇನಾ ಪದಕಗಳಂತಹ ಶೌರ್ಯ ಗೌರವಗಳನ್ನು ನೀಡಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಸೇನಾ ಸದಸ್ಯರು ಶೌರ್ಯ ಮತ್ತು ಹೆಚ್ಚು ಗೌರವಾನ್ವಿತ ಸೇವಾ ಪದಕಗಳನ್ನು ಪಡೆಯುತ್ತಾರೆ.
ಇದನ್ನೂ ಓದಿ: Lal Bahadur Shastri: ಸದೃಢ ಸೇನೆಗೆ ಬುನಾದಿ ಹಾಕಿದ ದಿವಂಗತ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ
ಭಾರತೀಯ ಸೇನೆಗೆ ಸಂಬಂಧಿಸಿದ ಮತ್ತಷ್ಟು ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 9:36 am, Sun, 15 January 23