Sankranti: ಸಂಕ್ರಾಂತಿ ಸಂಭ್ರಮ; ಬೆಂಗಳೂರು ಕೆಆರ್ ಮಾರ್ಕೆಟ್​ನಲ್ಲಿ ಜನಜಂಗುಳಿ, ಶ್ರೀರಂಗಪಟ್ಟಣ ಶಿವಲಿಂಗಕ್ಕೆ ಸೂರ್ಯರಶ್ಮಿಯ ಸ್ಪರ್ಶ

ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಜನರು ಭರ್ಜರಿ ವ್ಯಾಪಾರ ನಡೆಸಿದರು. ನಗರದ ವಿವಿಧೆಡೆ ರಸ್ತೆ ಬದಿಗಳಲ್ಲಿ ಕಬ್ಬನ್ನು ಪೇರಿಸಿಟ್ಟು ಮಾರಾಟ ಮಾಡಲಾಗುತ್ತಿದೆ.

Sankranti: ಸಂಕ್ರಾಂತಿ ಸಂಭ್ರಮ; ಬೆಂಗಳೂರು ಕೆಆರ್ ಮಾರ್ಕೆಟ್​ನಲ್ಲಿ ಜನಜಂಗುಳಿ, ಶ್ರೀರಂಗಪಟ್ಟಣ ಶಿವಲಿಂಗಕ್ಕೆ ಸೂರ್ಯರಶ್ಮಿಯ ಸ್ಪರ್ಶ
ಬೆಂಗಳೂರಿನ K.R​.ಮಾರ್ಕೆಟ್​​ನಲ್ಲಿ ಜನವೋ ಜನ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 15, 2023 | 8:39 AM

ಬೆಂಗಳೂರು: ನಾಡಿನೆಲ್ಲೆಡೆ ಇಂದು ಮಕರ ಸಂಕ್ರಾಂತಿ (Sankranti) ಹಬ್ಬದ ಸಂಭ್ರಮ ಸಡಗರ. 2023ರ ಕ್ಯಾಲೆಂಡರ್​ನ ಮೊದಲ ಹಬ್ಬವಾದ ಸಂಕ್ರಾಂತಿಯು ಜನರಲ್ಲಿ ಸಂಭ್ರಮ ತಂದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಕೆ.ಆರ್.ಮಾರುಕಟ್ಟೆಯಲ್ಲಿ (KR Market) ಹಬ್ಬದ ದಿನವಾದ ಭಾನುವಾರವೂ (ಜ 15) ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಹೂವು, ಹಣ್ಣು, ಕಬ್ಬು ಸೇರಿದಂತೆ ಅಗತ್ಯ ಸಾಮಗ್ರಿಗಳ ಖರೀದಿಗೆಂದು ಜನರು ಮುಗಿಬಿದ್ದಿದ್ದರು. ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಜನರು ಭರ್ಜರಿ ವ್ಯಾಪಾರ ನಡೆಸಿದರು. ನಗರದ ವಿವಿಧೆಡೆ ರಸ್ತೆ ಬದಿಗಳಲ್ಲಿ ಕಬ್ಬನ್ನು ಪೇರಿಸಿಟ್ಟು ಮಾರಾಟ ಮಾಡಲಾಗುತ್ತಿದೆ. ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಾರುಕಟ್ಟೆಗೆ ಧಾವಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಯಿತು.

ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ

ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾಗಿರುವ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಲ್ಲಿರುವ ಕಾಶಿ ಚಂದ್ರಮೌಳೇಶ್ವರ ದೇಗುಲದ ಶಿವಲಿಂಗಕ್ಕೆ ಬೆಳಿಗ್ಗೆ 7.13ಕ್ಕೆ ಶುಭ ಮಕರ ಲಗ್ನದಲ್ಲಿ ಸೂರ್ಯರಶ್ಮಿ ಸ್ಪರ್ಶಿಸಿತು. ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಈ ವಿಸ್ಮಯ ನಡೆಯಲಿದೆ. ಸೂರ್ಯ ರಶ್ಮಿ ಸ್ಪರ್ಶದ ಬಳಿಕ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.

ಇಂದು ಸಂಜೆ ಗವಿ ಗಂಗಾಧರೇಶ್ವರ ದೇಗುಲದಲ್ಲಿ ಚಮತ್ಕಾರ

ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಗುಹಾಂತರ ದೇಗುಲದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಅದ್ಬುತ ಚಮತ್ಕಾರ ನಡೆಯಲಿದೆ. ಸಂಕ್ರಾಂತಿಯಂದು ನಡೆಯುವ ಕೌತುಕ ಕಣ್ತುಂಬಿಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಸೂರ್ಯ ಪಥ ಬದಲಿಸುವ ದಿನದಂದು ಪ್ರತಿವರ್ಷ ಗವಿಗಂಗಾಧರೇಶ್ವರ ದೇಗುಲದ ಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶಿಸಲಿದೆ. ಈ ಬಾರಿ ಸಂಜೆ 5.20 ರಿಂದ 5.28ರ ಸಮಯದಲ್ಲಿ ಸೂರ್ಯ ಶ್ಮಿಯು ಶಿವನಿಗೆ ನಮಿಸಲಿದೆ. ಕೊವಿಡ್​ಗೆ ಮುನ್ನ ಪ್ರತಿವರ್ಷ ನೂರಾರು ಮಂದಿ ಸೂರ್ಯರಶ್ಮಿ ಸ್ಪರ್ಶದ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು.

ಆದರೆ ಇಂದು ಸೂರ್ಯರಶ್ಮಿ ಸ್ಪರ್ಶಿಸುವ ಸಂದರ್ಭದಲ್ಲಿ ಯಾರಿಗೂ ಪ್ರವೇಶವಿಲ್ಲ ಎಂದು ದೇಗುಲ ಆಡಳಿತ ಸಮಿತಿ ಘೋಷಿಸಿದೆ. ದೇಗುಲದ ಆಡಳಿತ ಮಂಡಳಿಯಿಂದ ಹೊರಭಾಗದಲ್ಲಿ ಬೃಹತ್ ಎಲ್ಇಡಿ ಸ್ಕ್ರೀನ್ ಅಳವಡಿಸಲಾಗಿದ್ದು, ಭಕ್ತರು ಅದರಲ್ಲಿಯೇ ಸೂರ್ಯನು ಶಿವನನ್ನು ನಮಿಸುವ ದೃಶ್ಯವನ್ನು ಕಾಣ್ತುಂಬಿಕೊಳ್ಳಬಹುದು. ಸಂಕ್ರಾಂತಿ ಪ್ರಯುಕ್ತ ದೇವರಿಗೆ ವಿಶೇಷವಾಗಿ ಬೆಳಿಗ್ಗೆಯಿಂದ ಕ್ಷೀರಾಭಿಷೇಕ ನಡೆಯಲಿದೆ. ಸಂಜೆ ಸೂರ್ಯರಶ್ಮಿ ಸ್ಪರ್ಶಿಸಿದ ನಂತರ ಶಿವನಿಗೆ ಅಭಿಷೇಕ ಮಾಡಿ ಅಲಂಕಾರ ಮಾಡಲಾಗುವುದು. ಸಂಜೆ 6 ಗಂಟೆಯ ನಂತರ ದೇವರ ದರ್ಶನಕ್ಕೆ ಭಕ್ತರಿಗೆ ಅನುವು ಮಾಡಿಕೊಡಲಾಗುವುದು ಎಂದು ದೇಗುಲ ಆಡತಳಿತ ಮಂಡಳಿಯು ಸ್ಪಷ್ಟಪಡಿಸಿದೆ.