Wrestlers Protest: ಬ್ರಿಜ್ ಭೂಷಣ್ ಸಿಂಗ್ ಸವಾಲು ಸ್ವೀಕರಿಸಿದ್ದೇವೆ, ನಾರ್ಕೋ ಟೆಸ್ಟ್​​ಗೆ ಸಿದ್ಧ; ಆದರೆ ಷರತ್ತು ಇದೆ ಎಂದ ಕುಸ್ತಿಪಟುಗಳು

|

Updated on: May 22, 2023 | 1:46 PM

ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ, ನಿನ್ನೆ ಬ್ರಿಜ್ ಭೂಷಣ್ ನಾರ್ಕೋ ಪರೀಕ್ಷೆಯ ಕುರಿತು ಹೇಳಿಕೆ ನೀಡಿದ್ದು, "ಆದರೆ ಅದು ಸುಪ್ರೀಂ ಕೋರ್ಟ್ ಮೂಲಕ ಆಗಬೇಕು, ಇಡೀ ದೇಶವು ಅದನ್ನು ಲೈವ್ ಆಗಿ ನೋಡಬೇಕು" ಎಂದು ಹೇಳಿದ್ದಾರೆ

Wrestlers Protest: ಬ್ರಿಜ್ ಭೂಷಣ್ ಸಿಂಗ್ ಸವಾಲು ಸ್ವೀಕರಿಸಿದ್ದೇವೆ, ನಾರ್ಕೋ ಟೆಸ್ಟ್​​ಗೆ ಸಿದ್ಧ; ಆದರೆ ಷರತ್ತು ಇದೆ ಎಂದ ಕುಸ್ತಿಪಟುಗಳು
ವಿನೇಶ್ ಫೋಗಟ್
Follow us on

ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಪಾಲಿಗ್ರಾಫ್ ಪರೀಕ್ಷೆಗೆ ಒಳಗಾಗಲು ಸಿದ್ಧ ಎಂದು ಭಾರತದ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ (Brij Bhushan Singh) ಹೇಳಿದ ಮರುದಿನ, ಕುಸ್ತಿಪಟುಗಳು ತಾವು ನಾರ್ಕೋ ಟೆಸ್ಟ್ ಎದುರಿಸಲು ಸಿದ್ಧರಿದ್ದೇವೆ ಎಂದಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೂರು ನೀಡಿರುವ ಬಜರಂಗ್ ಪುನಿಯಾ (Bajrang Punia), ವಿನೇಶ್ ಫೋಗಟ್ (Vinesh Phogat) ಮತ್ತು ಎಲ್ಲಾ ಏಳು ಹುಡುಗಿಯರು ಕೂಡ ನಾರ್ಕೋ ಪರೀಕ್ಷೆಗೆ ಸಿದ್ಧರಾಗಿದ್ದಾರೆ ಎಂದು ಪ್ರತಿಭಟನಾ ನಿರತ ಕುಸ್ತಿಪಟುಗಳು ಸೋಮವಾರ ಹೇಳಿದ್ದಾರೆ. ಆದರೆ ಒಂದು ಷರತ್ತು ಇದೆ. ಅದೇನೆಂದರೆ ಇಡೀ ದೇಶ ಪರೀಕ್ಷೆಗಳನ್ನು ನೇರಪ್ರಸಾರ ವೀಕ್ಷಿಸಬೇಕು. ಅದನ್ನು ಸುಪ್ರೀಂಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ, ನಿನ್ನೆ ಬ್ರಿಜ್ ಭೂಷಣ್ ನಾರ್ಕೋ ಪರೀಕ್ಷೆಯ ಕುರಿತು ಹೇಳಿಕೆ ನೀಡಿದ್ದು, “ಆದರೆ ಅದು ಸುಪ್ರೀಂ ಕೋರ್ಟ್ ಮೂಲಕ ಆಗಬೇಕು, ಇಡೀ ದೇಶವು ಅದನ್ನು ಲೈವ್ ಆಗಿ ನೋಡಬೇಕು” ಎಂದು ಹೇಳಿದ್ದಾರೆ. ಎಲ್ಲಾ ಏಳು ಹುಡುಗಿಯರು ಪಾಲಿಗ್ರಾಫ್ ಪರೀಕ್ಷೆಗೆ ಒಳಗಾಗಲು ಸಿದ್ಧರಾಗಿದ್ದಾರೆ. ನಾವೂ ಸಿದ್ಧರಿದ್ದೇವೆ ಎಂದು ಪುನಿಯಾ ಹೇಳಿದರು.

ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳನ್ನು ಪರಿಹರಿಸಲು ನಾರ್ಕೋ-ಅನಾಲಿಸಿಸ್ ಅಥವಾ ಪಾಲಿಗ್ರಾಫ್ ಪರೀಕ್ಷೆಗೆ ಒಳಗಾಗಲು ಸಿದ್ಧ ಎಂದು ಭಾನುವಾರ ಹೇಳಿದ್ದು, ಒಂದು ಷರತ್ತನ್ನು ಕೂಡಾ ಮುಂದಿಟ್ಟಿದ್ದರು.

ಡಬ್ಲ್ಯುಎಫ್‌ಐ ಮುಖ್ಯಸ್ಥರು ಫೇಸ್‌ಬುಕ್‌ ಪೋಸ್ಟ್ ನಲ್ಲಿ ನನ್ನ ನಾರ್ಕೋ ಪರೀಕ್ಷೆ, ಪಾಲಿಗ್ರಾಫಿ ಪರೀಕ್ಷೆ ಅಥವಾ ಸುಳ್ಳು ಪತ್ತೆ ಮಾಡಲು ನಾನು ಸಿದ್ಧನಿದ್ದೇನೆ ಆದರೆ ನನ್ನ ಷರತ್ತು ಏನೆಂದರೆ ನನ್ನ ಜೊತೆಗೆ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಕೂಡ ಈ ಪರೀಕ್ಷೆಗಳಿಗೆ ಒಳಗಾಗಬೇಕು. ಇಬ್ಬರೂ ಕುಸ್ತಿಪಟುಗಳು ಸಿದ್ಧರಿದ್ದರೆ ಅವರ ಪರೀಕ್ಷೆಯನ್ನು ಮಾಡಿ, ನಂತರ ಪತ್ರಿಕಾಗೋಷ್ಠಿಯನ್ನು ಕರೆದು ಘೋಷಿಸಿ. ನಾನು ಇದಕ್ಕೆ ಸಿದ್ಧನಿದ್ದೇನೆ ಎಂದು ನಾನು ಅವರಿಗೆ ಭರವಸೆ ನೀಡುತ್ತೇನೆ ಎಂದಿದ್ದರು.

ಸಿಂಗ್ ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಜರಂಗ್ ಪುನಿಯಾ ಹೇಳಿದ್ದಾರೆ. ಅವರು ಇಲ್ಲಿಂದ 500-ಕಿಮೀ ದೂರದಲ್ಲಿ ಕುಳಿತು ಏನನ್ನೋ ಹೇಳುತ್ತಿದ್ದಾರೆ. ಪೊಲೀಸರು ನಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ. ಅವನು ತಪ್ಪಿತಸ್ಥ, ಅವನನ್ನು ಸ್ಟಾರ್ ಮಾಡಬೇಡಿ ಎಂದಿದ್ದಾರೆ.

ಅವರು ನನ್ನ ಮತ್ತು ಬಜರಂಗ್ ಅವರ ಹೆಸರನ್ನು ಹೇಳಿದ್ದಾರೆ. ನಾವು ಸಿದ್ಧರಿದ್ದೇವೆ, ಎಲ್ಲಾ ಹುಡುಗಿಯರು ಸಿದ್ಧರಾಗಿದ್ದಾರೆ. ಎಂತಹ ದುಷ್ಕೃತ್ಯ ಎಸಗಿದ್ದಾನೆ ಎಂದು ಇಡೀ ದೇಶವೇ ನೋಡಬೇಕು. ನಾರ್ಕೋ ಪರೀಕ್ಷೆಯನ್ನು ನೇರ ಪ್ರಸಾರ ಮಾಡಬೇಕು ಎಂದು ಕುಸ್ತಿಪಟು ವಿನೇಶ್ ಫೋಗಟ್ ಹೇಳಿದ್ದಾರೆ.


ಏತನ್ಮಧ್ಯೆ ಜನರ ಬೆಂಬಲವನ್ನು ಕೋರಿದ ಸಾಕ್ಷಿ ಮಲಿಕ್, ಮಂಗಳವಾರ ಇಂಡಿಯಾ ಗೇಟ್‌ನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕೇಳಿಕೊಂಡರು. ಯಾರೇ ತಡೆದರೂ ಅಲ್ಲಿ ಕ್ಯಾಂಡಲ್ ಮಾರ್ಚ್ ಮಾಡಬೇಕು. ನಾವು ಎಲ್ಲವನ್ನೂ ಶಾಂತಿಯುತವಾಗಿ ಮಾಡಿದ್ದೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: Dinesh Gope Arrested: ಜಾರ್ಖಂಡ್​ನ ಮೋಸ್ಟ್​ ವಾಂಟೆಡ್​ ನಕ್ಸಲ್ ದಿನೇಶ್​ ಗೋಪ್​ ಬಗ್ಗೆ ತಿಳಿಯಿರಿ

‘15 ರೂಪಾಯಿ ಪದಕ’ ವಿಚಾರವಾಗಿ ಸಂಸತ್ತಿನ ಮುಂದೆ ಮೇ 28 ರಂದು ಖಾಪ್ ಪಂಚಾಯತ್ ಆಯೋಜಿಸಲಾಗುವುದು ಎಂದು ಪುನಿಯಾ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಅವರು ಪದಕದ ಜೊತೆಗೆ ತ್ರಿವರ್ಣ ಧ್ವಜವನ್ನು ಅವಮಾನಿಸಿದ್ದಾರೆ ಎಂದಿದ್ದಾರೆ ಪುನಿಯಾ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ