ಒಂದೊಂದೇ ರಾಜ್ಯವಾಗಿ ವ್ಯಾಪಿಸುತ್ತಿದೆ ಒಮಿಕ್ರಾನ್​ ವೈರಾಣು; ಪಶ್ಚಿಮ ಬಂಗಾಳದಲ್ಲಿ 7ವರ್ಷದ ಬಾಲಕನಿಗೆ ಸೋಂಕು

| Updated By: Lakshmi Hegde

Updated on: Dec 15, 2021 | 4:10 PM

ಒಮಿಕ್ರಾನ್​ ಪ್ರಸರಣ ಡೆಲ್ಟಾಕ್ಕಿಂತಲೂ ವೇಗವಾಗಿದ್ದು, ಈಗಿರುವ ಕೊವಿಡ್​ 19 ಲಸಿಕೆಗಳ ದಕ್ಷತೆಯನ್ನು ಕುಗ್ಗಿಸಲಿದೆ ಎಂದು ಆರೋಗ್ಯ ತಜ್ಞರು, ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಒಂದೊಂದೇ ರಾಜ್ಯವಾಗಿ ವ್ಯಾಪಿಸುತ್ತಿದೆ ಒಮಿಕ್ರಾನ್​ ವೈರಾಣು; ಪಶ್ಚಿಮ ಬಂಗಾಳದಲ್ಲಿ 7ವರ್ಷದ ಬಾಲಕನಿಗೆ ಸೋಂಕು
ಒಮಿಕ್ರಾನ್​ ಮಾದರಿ ಸಂಗ್ರಹದ ಸಾಂಕೇತಿಕ ಚಿತ್ರ (ಕೃಪೆ-ಪಿಟಿಐ)
Follow us on

ಪಶ್ಚಿಮ ಬಂಗಾಳದಲ್ಲಿ ಮೊದಲ ಒಮಿಕ್ರಾನ್​ ವೈರಸ್ (Omicron Variant) ಪ್ರಕರಣ ಪತ್ತೆಯಾಗಿದ್ದು, 7ವರ್ಷದ ಬಾಲಕನಲ್ಲಿ ಸೋಂಕು ದೃಢಪಟ್ಟಿದೆ. ಈ ಬಾಲಕ ಇತ್ತೀಚೆಗಷ್ಟೇ ಅಬು ದಭಿಯಿಂದ ಬಂದವನಾಗಿದ್ದು, ಮೂಲತಃ ಪಶ್ಚಿಮಬಂಗಾಳ (West Bengal)ದ ಮುರ್ಷಿದಾಬಾದ್​ನವನಾಗಿದ್ದಾನೆ. ಡಿ.10ರಂದು ಹೈದರಾಬಾದ್​ ಏರ್​ಪೋರ್ಟ್ (Hyderabad Airport)​ಗೆ ಬಂದು ಇಳಿದಿದ್ದ. ಅಲ್ಲಿಂದ ಮುರ್ಷಿದಾಬಾದ್​ಗೆ ಬಂದಿದ್ದಾನೆ.   ಆರ್​ಟಿ-ಪಿಸಿಆರ್ ಟೆಸ್ಟ್ ಮಾಡಿಸಿದಾಗ ಕೊವಿಡ್ 19 ಪಾಸಿಟಿವ್ ಬಂದಿತ್ತು. ನಂತರ ಮಾದರಿಯನ್ನು ಜಿನೋಮ್​ ಸಿಕ್ವೆನ್ಸಿಂಗ್​ಗೆ ಕಳಿಸಿದಾಗ ಒಮಿಕ್ರಾನ್​ ಇರುವುದು ದೃಢಪಟ್ಟಿದೆ. ಸದ್ಯ ಮುರ್ಷಿದಾಬಾದ್​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಾಲಕನ ಪಾಲಕರಿಗೆ ಕೊವಿಡ್ 19 ವರದಿ ನೆಗೆಟಿವ್​ ಬಂದಿದೆ ಎಂದು ಹೇಳಲಾಗಿದೆ.

ದೇಶದಲ್ಲಿ ಈಗ ಒಮಿಕ್ರಾನ್​ ಸೋಂಕಿತರ ಸಂಖ್ಯೆ 50ರ ಗಡಿ ದಾಟಿದೆ. ನಿನ್ನೆ ಹೈದರಾಬಾದ್​ನಲ್ಲಿರುವ ಇಬ್ಬರು ವಿದೇಶಿಗರಲ್ಲಿ ಒಮಿಕ್ರಾನ್​ ಸೋಂಕು ದೃಢಪಟ್ಟಿತ್ತು. ಅದರಲ್ಲಿ ಒಬ್ಬರು 24 ವರ್ಷದ ಯುವಕರಾಗಿದ್ದು, ಕೀನ್ಯಾದವರಾಗಿದ್ದಾರೆ. ಇವರು ಡಿಸೆಂಬರ್​ 12ರಂದು ಭಾರತಕ್ಕೆ ಬಂದು, ಹೈದರಾಬಾದ್ ಏರ್​ಪೋರ್ಟ್​ನಲ್ಲಿ ಇಳಿದಿದ್ದಾರೆ. ಇನ್ನೊಬ್ಬಾತ ಸೋಮಾಲಿಯಾದ 23 ವರ್ಷದ ಯುವಕನಾಗಿದ್ದಾನೆ ಎಂದು ತೆಲಂಗಾಣ ಸಾರ್ವಜನಿಕ ಆರೋಗ್ಯಾಧಿಕಾರಿ ಜಿ.ಶ್ರೀನಿವಾಸ್ ರಾವ್​ ತಿಳಿಸಿದ್ದಾರೆ.  ಇವರಿಬ್ಬರಲ್ಲೂ ಕೂಡ ಒಮಿಕ್ರಾನ್​ನ ಯಾವುದೇ ಲಕ್ಷಣಗಳೂ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ತೆಲಂಗಾಣದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ಮೂರಕ್ಕೆ ಏರಿದೆ.  ಇದೀಗ ಪಶ್ಚಿಮ ಬಂಗಾಳದಲ್ಲಿ ಮೊದಲ ಒಮಿಕ್ರಾನ್​ ಸೋಂಕು ಪತ್ತೆಯಾಗುವ ಮೂಲಕ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ.

ಒಮಿಕ್ರಾನ್​ ಪ್ರಸರಣ ಡೆಲ್ಟಾಕ್ಕಿಂತಲೂ ವೇಗವಾಗಿದ್ದು, ಈಗಿರುವ ಕೊವಿಡ್​ 19 ಲಸಿಕೆಗಳ ದಕ್ಷತೆಯನ್ನು ಕುಗ್ಗಿಸಲಿದೆ ಎಂದು ಆರೋಗ್ಯ ತಜ್ಞರು, ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹೀಗಿರುವಾಗ ಅಮೆರಿಕದ ಔಷಧಿ ಕಂಪನಿ ಫೈಜರ್​, ತಾವು ತಯಾರಿಸಿರುವ ಕೊವಿಡ್​ 19 ಮಾತ್ರೆಗಳು ಒಮಿಕ್ರಾನ್​ ವಿರುದ್ಧ ಶೇ.89ರಷ್ಟು ಪರಿಣಾಮಕಾರಿ. ಪ್ರಾಥಮಿಕ ಹಂತದಲ್ಲಿಯೇ ಈ ಮಾತ್ರೆಗಳನ್ನು ಸೇವಿಸಿದರೆ, ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಪ್ರಮಾಣವನ್ನು ತಡೆಗಟ್ಟುತ್ತದೆ ಎಂದು ಹೇಳಿಕೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಒಮಿಕ್ರಾನ್ ಭಾರತಕ್ಕೆ ಕಾಲಿಟ್ಟು, ಈಗ ಇಲ್ಲಿ ಒಂದೊಂದೇ ರಾಜ್ಯವನ್ನಾಗಿ ವ್ಯಾಪಿಸುತ್ತಿದ್ದು, ಅದರ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳುತ್ತಿವೆ. ಈ ಮಧ್ಯೆ ಯುಕೆಯಲ್ಲಿ ಒಮಿಕ್ರಾನ್​ನಿಂದ ಮೊದಲ ಸಾವು ಆಗಿದ್ದು, ಮುಂದಿನ ತಿಂಗಳ ಹೊತ್ತಿಗೆ ವೈರಾಣು ಪ್ರಸರಣ ತೀವ್ರಗೊಳ್ಳಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬೆಳಗಾವಿ: ಮತಾಂತರಕ್ಕೊಂದು ಚೌಕಟ್ಟು ನಿಗದಿ ಮಾಡುವ ಬಗ್ಗೆ ಚರ್ಚೆ; ಸಿಎಂ ಬಸವರಾಜ ಬೊಮ್ಮಾಯಿ ಸಭೆ