
ಕೋಲ್ಕತ್ತಾ, ಮೇ 14: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (TMC) ಅಧಿನಾಯಕಿ ಮಮತಾ ಬ್ಯಾನರ್ಜಿ (Mamata Banerjee) ಅವರು ಇಂದು ಗುರುವಾರ ವಕೀಲರ ಕಪ್ಪು ಕೋಟ್ ಧರಿಸಿ ಮೊದಲ ಬಾರಿಗೆ ಕಲ್ಕತ್ತಾ ಹೈಕೋರ್ಟ್‌ಗೆ ಹಾಜರಾಗಿ ಎಲ್ಲರ ಗಮನ ಸೆಳೆದರು. ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೋತ್ತರ ಹಿಂಸಾಚಾರದ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ಪರವಾಗಿ ವಾದ ಮಂಡಿಸಲು ಅವರು ಖುದ್ದಾಗಿ ನ್ಯಾಯಾಲಯಕ್ಕೆ ಆಗಮಿಸಿದ್ದರು. ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಿದ ಮಮತಾ ಬ್ಯಾನರ್ಜಿ, “ನಾನು ಇಲ್ಲಿ ವಕೀಲೆಯಾಗಿ ಈ ಪ್ರಕರಣದಲ್ಲಿ ಹೋರಾಡುತ್ತಿದ್ದೇನೆ. ಹೈಕೋರ್ಟ್‌ನಲ್ಲಿ ಇದು ನನ್ನ ಮೊದಲ ಹಾಜರಾತಿಯಾಗಿದ್ದು, ಗೌರವಾನ್ವಿತ ನ್ಯಾಯಾಧೀಶರಿಗೆ ನನ್ನ ನಮನಗಳು” ಎಂದು ಮಾತು ಆರಂಭಿಸಿದರು. ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಟಿಎಂಸಿ ಕಾರ್ಯಕರ್ತರ ಮೇಲೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಅವರು ಆರೋಪಿಸಿ, ತಮ್ಮ ವಾದ ಮಂಡಿಸಿದರು.
“ಪಶ್ಚಿಮ ಬಂಗಾಳವು ಬುಲ್ಡೋಜರ್ ರಾಜ್ಯವಲ್ಲ. ಇಲ್ಲಿ ಕಾನೂನಿನ ಆಡಳಿತವಿದೆ. ಮನೆ ಮತ್ತು ಅಂಗಡಿಗಳನ್ನು ಧ್ವಂಸಗೊಳಿಸುತ್ತಿರುವುದು ಖಂಡನೀಯ. ಹಿಂಸಾಚಾರದಲ್ಲಿ ಮಕ್ಕಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನೂ ಬಿಡುತ್ತಿಲ್ಲ. ಕೊಲೆಯಾದ 10 ಜನರ ಪಟ್ಟಿಯನ್ನು ನಾನು ನೀಡುತ್ತಿದ್ದೇನೆ, ಇದರಲ್ಲಿ ಆರು ಮಂದಿ ಹಿಂದೂಗಳಾಗಿದ್ದಾರೆ” ಎಂದು ಮಾಜಿ ಸಿಎಂ ಆದ ಅವರು ನ್ಯಾಯಪೀಠಕ್ಕೆ ತಿಳಿಸಿದರು.
ಇದನ್ನೂ ಓದಿ: ತೈವಾನ್ ವಿಚಾರದಲ್ಲಿ ತಪ್ಪು ಮಾಡಿದರೆ ಅಮೆರಿಕ-ಚೀನಾ ಮಧ್ಯೆ ನೇರ ಸಂಘರ್ಷವಾದೀತು: ಷಿ ಜಿನ್ಪಿಂಗ್ ಎಚ್ಚರಿಕೆ
ಪೊಲೀಸರ ವಿರುದ್ಧ ಕಿಡಿ: ಹಿಂಸಾಚಾರ ನಡೆಯುತ್ತಿದ್ದರೂ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ ಅವರು, “ಪೊಲೀಸರು ಮಲಗಿದ್ದಾರೆಯೇ? ಅಪರಾಧ ನಡೆದ ಮೇಲೆ ತನಿಖೆ ಮಾಡುವುದು ಅವರ ಕರ್ತವ್ಯವಲ್ಲವೇ?” ಎಂದು ಪ್ರಶ್ನಿಸಿದರು.
92 ವರ್ಷದ ವಿಧವೆ ಸೇರಿದಂತೆ ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಮನೆಯಿಂದ ಹೊರಹಾಕಲಾಗಿದೆ ಎಂದು ದೂರಿದ ಮಮತಾ, ಬಂಗಾಳದ ಜನರಿಗೆ ತಕ್ಷಣದ ರಕ್ಷಣೆ ನೀಡುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಜಯ್ ಪಾಲ್ ಮತ್ತು ನ್ಯಾಯಮೂರ್ತಿ ಪಾರ್ಥಸಾರಥಿ ಸೇನ್ ಅವರಿದ್ದ ಪೀಠಕ್ಕೆ ಮನವಿ ಮಾಡಿದರು.
2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲನ್ನನುಭವಿಸಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಂಸಾಚಾರ ವರದಿಯಾಗಿದೆ. ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರ ಪುತ್ರ ಶೀರ್ಷಣ್ಯ ಬ್ಯಾನರ್ಜಿ ಅವರು ಈ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ತಮ್ಮ ಪಕ್ಷದ ಕಾರ್ಯಕರ್ತರ ಪರವಾಗಿ ಧ್ವನಿ ಎತ್ತಲು ಮಮತಾ ಬ್ಯಾನರ್ಜಿ ಅವರೇ ನೇರವಾಗಿ ನ್ಯಾಯಾಲಯಕ್ಕೆ ಇಳಿದಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ಆದಾಯ 11 ಕೋಟಿ, ಖರ್ಚು 60 ಕೋಟಿ ರೂ; ರಾಹುಲ್ ಗಾಂಧಿ ವಿದೇಶೀ ಪ್ರವಾಸಗಳಿಗೆ ಫಂಡಿಂಗ್ ಯಾರದು? ಬಿಜೆಪಿ ಪ್ರಶ್ನೆ
“ಮಮತಾ ಬ್ಯಾನರ್ಜಿ ಅವರು ಬಂಗಾಳದ ಜನರನ್ನು ಸಂಕಷ್ಟದ ಸಮಯದಲ್ಲಿ ಎಂದಿಗೂ ಕೈಬಿಡುವುದಿಲ್ಲ ಎಂಬುದನ್ನು ಇಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ” ಎಂದು ತೃಣಮೂಲ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದೆ.
ಕೋಲ್ಕತಾದಲ್ಲಿ ಜನಿಸಿದ ಮಮತಾ ಬ್ಯಾನರ್ಜಿ ಅವರು ಬಹುಪದವಿಗಳನ್ನು ಗಳಿಸಿದ್ದಾರೆ. ಬಿಎ, ಎಂಎ, ಬಿಎಡ್, ಎಲ್ಎಲ್ಬಿ ಓದಿದ್ದಾರೆ. ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಕೋಲ್ಕತಾದ ಜೋಗೇಶ್ ಚಂದ್ರ ಚೌಧುರಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಕಲ್ಕತ್ತಾ ಯೂನಿವರ್ಸಿಟಿಯಲ್ಲಿ ಇಸ್ಲಾಮಿಕ್ ಇತಿಹಾಸದ ಮೇಲೆ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ