ತೈವಾನ್ ವಿಚಾರದಲ್ಲಿ ತಪ್ಪು ಮಾಡಿದರೆ ಅಮೆರಿಕ-ಚೀನಾ ಮಧ್ಯೆ ನೇರ ಸಂಘರ್ಷವಾದೀತು: ಷಿ ಜಿನ್‌ಪಿಂಗ್ ಎಚ್ಚರಿಕೆ
Taiwan Conflict Warning: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತೈವಾನ್ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ನೇರ ಎಚ್ಚರಿಕೆ ನೀಡಿದ್ದಾರೆ. ತೈವಾನ್ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸದಿದ್ದರೆ ಚೀನಾ-ಅಮೆರಿಕ ದ್ವಿಪಕ್ಷೀಯ ಸಂಬಂಧಗಳು "ಅತ್ಯಂತ ಅಪಾಯಕಾರಿ ಪರಿಸ್ಥಿತಿಗೆ" ಸಿಲುಕಲಿವೆ ಎಂದು ಕ್ಸಿ ಹೇಳಿದ್ದಾರೆ. ಜಾಗತಿಕವಾಗಿ ಸಹಕಾರಕ್ಕೆ ಕರೆ ನೀಡಿದ ಕ್ಸಿ, ತೈವಾನ್ ಸ್ವಾತಂತ್ರ್ಯ ಮತ್ತು ಜಲಸಂಧಿಯಲ್ಲಿ ಶಾಂತಿ ಒಟ್ಟಾಗಲು ಸಾಧ್ಯವಿಲ್ಲ ಎಂದರು. ಇದು ಅಮೆರಿಕ-ಚೀನಾ ಸಂಬಂಧದ ಸೂಕ್ಷ್ಮತೆಯನ್ನು ಬಿಂಬಿಸುತ್ತದೆ.

ಬೀಜಿಂಗ್, ಮೇ 14: ತೈವಾನ್ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸದಿದ್ದರೆ ಚೀನಾ ಮತ್ತು ಅಮೆರಿಕ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ (US-China Bilateral relation) ಬಹಳ ಅಪಾಯಕಾರಿ ಪರಿಸ್ಥಿತಿಗೆ ತಳ್ಳಲ್ಪಡಬಹುದು ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ (Xi Jinping) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ಬೀಜಿಂಗ್‌ನಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಶೃಂಗಸಭೆಯಲ್ಲಿ ಉಭಯ ನಾಯಕರ ಮಾತುಕತೆಯ ವೇಳೆ ಈ ವಿಷಯ ಮುಂಚೂಣಿಗೆ ಬಂದಿದೆ. ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ‘ಕ್ಸಿನ್ಹುವಾ’ ಪ್ರಕಾರ, ಚೀನಾ-ಅಮೆರಿಕ ಸಂಬಂಧಗಳಲ್ಲಿ ತೈವಾನ್ ಅತ್ಯಂತ ಪ್ರಮುಖ ಮತ್ತು ಸೂಕ್ಷ್ಮವಾದ ವಿಷಯವಾಗಿದೆ ಎಂಬುದನ್ನು ಜಿನ್‌ಪಿಂಗ್ ಸ್ಪಷ್ಟಪಡಿಸಿದ್ದಾರೆ.
ಅತ್ಯಂತ ಅಪಾಯಕಾರಿ ಪರಿಸ್ಥಿತಿ ಎಂದ ಚೀನೀ ಮುಖ್ಯಸ್ಥ
“ಒಂದು ವೇಳೆ ತೈವಾನ್ ವಿಷಯವನ್ನು ಸರಿಯಾಗಿ ನಿಭಾಯಿಸಿದರೆ, ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳು ಸ್ಥಿರವಾಗಿರುತ್ತವೆ. ಇಲ್ಲದಿದ್ದರೆ, ಎರಡು ದೇಶಗಳ ನಡುವೆ ಘರ್ಷಣೆಗಳು ನಡೆದು ಇಡೀ ಸಂಬಂಧವೇ ಅತ್ಯಂತ ಅಪಾಯಕಾರಿ ಪರಿಸ್ಥಿತಿಗೆ (Very Dangerous Situation) ಸಿಲುಕಲಿದೆ,” ಎಂದು ಷಿ ಜಿನ್‌ಪಿಂಗ್ ಹೇಳಿದ್ದಾರೆ. ಅಲ್ಲದೆ, ‘ತೈವಾನ್ ಸ್ವಾತಂತ್ರ್ಯ’ ಮತ್ತು ‘ತೈವಾನ್ ಜಲಸಂಧಿಯಲ್ಲಿ ಶಾಂತಿ’ ಇವೆರಡೂ “ಬೆಂಕಿ ಮತ್ತು ನೀರಿನಂತೆ” ಎಂದಿಗೂ ಒಂದಾಗಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಆದಾಯ 11 ಕೋಟಿ, ಖರ್ಚು 60 ಕೋಟಿ ರೂ; ರಾಹುಲ್ ಗಾಂಧಿ ವಿದೇಶೀ ಪ್ರವಾಸಗಳಿಗೆ ಫಂಡಿಂಗ್ ಯಾರದು? ಬಿಜೆಪಿ ಪ್ರಶ್ನೆ
ಶತ್ರುಗಳಲ್ಲ, ಪಾಲುದಾರರಾಗೋಣ
ಜಾಗತಿಕವಾಗಿ ವ್ಯಾಪಾರ, ತಂತ್ರಜ್ಞಾನ ಮತ್ತು ಪ್ರಾದೇಶಿಕ ಭದ್ರತೆಯ ವಿಷಯದಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ ಟ್ರಂಪ್ ಅವರ ಎರಡು ದಿನಗಳ ಚೀನಾ ಪ್ರವಾಸ ಆರಂಭವಾಗಿದೆ. ಮಾತುಕತೆಯ ವೇಳೆ ಷಿ ಜಿನ್‌ಪಿಂಗ್, ವಿಶ್ವದ ಎರಡು ದೊಡ್ಡ ಆರ್ಥಿಕತೆಗಳು ಪರಸ್ಪರ ಸಂಘರ್ಷಕ್ಕಿಳಿಯುವ ಬದಲು ಸಹಕರಿಸಬೇಕು ಮತ್ತು “ಶತ್ರುಗಳಾಗುವ ಬದಲು ಪಾಲುದಾರರಾಗಬೇಕು” ಎಂದು ಕರೆ ನೀಡಿದರು. “ಇಡೀ ಜಗತ್ತು ನಮ್ಮ ಭೇಟಿಯನ್ನು ಗಮನಿಸುತ್ತಿದೆ. ಜಗತ್ತು ಈಗ ಹೊಸ ಕವಲುದಾರಿಯಲ್ಲಿದೆ,” ಎಂದು ಅವರು ತಿಳಿಸಿದರು.
‘ನೀವು ನನ್ನ ಸ್ನೇಹಿತ’ ಎಂದ ಟ್ರಂಪ್
ಇದಕ್ಕೂ ಮುನ್ನ ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದಿ ಪೀಪಲ್‌ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅದ್ಧೂರಿ ಕೆಂಪು ಹಾಸಿನ ಸ್ವಾಗತ ಕೋರಲಾಯಿತು. ಚೀನಾ ಅಧ್ಯಕ್ಷರನ್ನು ಶ್ಲಾಘಿಸಿದ ಟ್ರಂಪ್, ಜಿನ್‌ಪಿಂಗ್ ಅವರನ್ನು ‘ಮಹಾನ್ ನಾಯಕ’ ಮತ್ತು ‘ಆಪ್ತ ಸ್ನೇಹಿತ’ ಎಂದು ಕರೆದರು. “ನಿಮ್ಮ ಸ್ನೇಹಿತನಾಗಿರುವುದು ನನಗೆ ಸಂದ ಗೌರವ. ಅಮೆರಿಕ ಮತ್ತು ಚೀನಾ ಭವಿಷ್ಯದಲ್ಲಿ ಒಟ್ಟಿಗೆ ಅದ್ಭುತ ದಿನಗಳನ್ನು ಕಾಣಲಿವೆ ಮತ್ತು ನಮ್ಮ ಸಂಬಂಧ ಎಂದಿಗಿಂತಲೂ ಉತ್ತಮವಾಗಲಿದೆ,” ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆಮದು ಮಾಡಿಕೊಳ್ಳದೆ ಚಿನ್ನದ ಬೇಡಿಕೆ ಈಡೇರಿಸುವ ಉಪಾಯಗಳನ್ನು ಮುಂದಿಟ್ಟ ಆಭರಣ ಉದ್ಯಮಿಗಳು
ತೈವಾನ್ ಅನ್ನು ಚೀನಾ ತನ್ನದೇ ಭೂಪ್ರದೇಶ ಎಂದು ಪ್ರತಿಪಾದಿಸುತ್ತಾ ಬಂದಿದೆ. ಎರಡೂ ದೇಶಗಳ ಮಧ್ಯೆ ಸಮಾನ ಇತಿಹಾಸ, ಸಂಸ್ಕೃತಿ ಇದೆ. ಚೀನಾ ಕಮ್ಯೂನಿಸ್ಟ್ ದೇಶವಾದರೆ, ತೈವಾನ್ ಪ್ರಜಾತಂತ್ರ ಆಡಳಿತ ವ್ಯವಸ್ಥೆ ಹೊಂದಿದೆ. ತಾನು ಚೀನಾದ ಭಾಗವಲ್ಲ ಎಂಬುದು ತೈವಾನ್ನ ನಿಲುವು. ತೈವಾನ್ ಸ್ವತಂತ್ರವಾಗಿ ಉಳಿಯಲು ಅಮೆರಿಕದ ನೆರವು ನಿರಂತರವಾಗಿ ಇದೆ. ಇದು ಚೀನಾದ ಅಸಮಾಧಾನಕ್ಕೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜಿನ್‌ಪಿಂಗ್ ಅವರ ಈ ಹೇಳಿಕೆ ಜಾಗತಿಕ ರಾಜಕಾರಣದಲ್ಲಿ ಭಾರಿ ಪ್ರಾಮುಖ್ಯತೆ ಪಡೆದುಕೊಂಡಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ





