AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆದಾಯ 11 ಕೋಟಿ, ಖರ್ಚು 60 ಕೋಟಿ ರೂ; ರಾಹುಲ್ ಗಾಂಧಿ ವಿದೇಶೀ ಪ್ರವಾಸಗಳಿಗೆ ಫಂಡಿಂಗ್ ಯಾರದು? ಬಿಜೆಪಿ ಪ್ರಶ್ನೆ

Rahul Gandhi Foreign Trips: ಬಿಜೆಪಿ ಸಂಸದ ಸಂಬಿತ್ ಪಾತ್ರ ಅವರು ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸಗಳ ವೆಚ್ಚ ಮತ್ತು ಘೋಷಿತ ಆದಾಯದ ನಡುವೆ ಭಾರಿ ವ್ಯತ್ಯಾಸವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 2004-2026ರ ಅವಧಿಯಲ್ಲಿ 54 ವಿದೇಶಿ ಪ್ರವಾಸಗಳಿಗೆ ಸುಮಾರು ₹60 ಕೋಟಿ ವೆಚ್ಚವಾಗಿದ್ದು, ಅವರ ಘೋಷಿತ ಆದಾಯ ಕೇವಲ ₹11 ಕೋಟಿ ಎಂದು ಬಿಜೆಪಿ ವಕ್ತಾರರು ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. FCRA ನಿಯಮ ಉಲ್ಲಂಘನೆ ಮತ್ತು ಅಘೋಷಿತ ಪ್ರವಾಸಗಳ ಬಗ್ಗೆಯೂ ಪ್ರಶ್ನಿಸಿದ್ದಾರೆ.

ಆದಾಯ 11 ಕೋಟಿ, ಖರ್ಚು 60 ಕೋಟಿ ರೂ; ರಾಹುಲ್ ಗಾಂಧಿ ವಿದೇಶೀ ಪ್ರವಾಸಗಳಿಗೆ ಫಂಡಿಂಗ್ ಯಾರದು? ಬಿಜೆಪಿ ಪ್ರಶ್ನೆ
ರಾಹುಲ್ ಗಾಂಧಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 14, 2026 | 1:02 PM

Share

ನವದೆಹಲಿ, ಮೇ 14: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸಗಳ (Rahul Gandhi’s foreign trips) ವೆಚ್ಚ ಮತ್ತು ಅವರ ಘೋಷಿತ ಆದಾಯದ ನಡುವೆ ಭಾರಿ ವ್ಯತ್ಯಾಸವಿದೆ ಎಂದು ಬಿಜೆಪಿ ಸಂಸದ ಸಂಬಿತ್ ಪಾತ್ರ (Sambit Patra) ಗಂಭೀರ ಆರೋಪ ಮಾಡಿದ್ದಾರೆ. 2004 ರಿಂದ 2026 ರ ಅವಧಿಯಲ್ಲಿ ರಾಹುಲ್ ಗಾಂಧಿ ಕೈಗೊಂಡಿರುವ 54 ವೈಯಕ್ತಿಕ ವಿದೇಶಿ ಪ್ರವಾಸಗಳಿಗಾಗಿ ಸುಮಾರು 60 ಕೋಟಿ ರೂ ವೆಚ್ಚವಾಗಿದೆ, ಆದರೆ ಅವರ ಘೋಷಿತ ಆದಾಯ ಕೇವಲ 11 ಕೋಟಿ ರೂ ಎಂದು ಬಿಜೆಪಿ ವಕ್ತಾರರೂ ಆದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.

ಆದಾಯ 11 ಕೋಟಿ, ವೆಚ್ಚ 60 ಕೋಟಿ ರೂ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಬಿತ್ ಪಾತ್ರ, “2013-14 ರಿಂದ 2022-23 ರವರೆಗಿನ ಫಾರ್ಮ್ 26 ಅಫಿಡವಿಟ್ ಪ್ರಕಾರ ರಾಹುಲ್ ಅವರ 10 ವರ್ಷಗಳ ಒಟ್ಟು ಆದಾಯ 11 ಕೋಟಿ ರೂ. ಆಗಿದೆ. ಆದರೆ ಅವರ ವಿದೇಶಿ ಪ್ರವಾಸಗಳ ಮಾದರಿಯನ್ನು ಗಮನಿಸಿದರೆ, ಭದ್ರತೆ, ಪಂಚತಾರಾ ಹೋಟೆಲ್ ವಾಸ್ತವ್ಯ ಮತ್ತು ವಿಮಾನ ಪ್ರಯಾಣ ಸೇರಿ ಅಂದಾಜು 60 ಕೋಟಿ ರೂ. ಖರ್ಚಾಗಿದೆ. ಈ ಹಣ ಎಲ್ಲಿಂದ ಬಂತು?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಆಮದು ಮಾಡಿಕೊಳ್ಳದೆ ಚಿನ್ನದ ಬೇಡಿಕೆ ಈಡೇರಿಸುವ ಉಪಾಯಗಳನ್ನು ಮುಂದಿಟ್ಟ ಆಭರಣ ಉದ್ಯಮಿಗಳು

ಸಂಬಿತ್ ಪಾತ್ರ ನೀಡಿರುವ ಮಾಹಿತಿ ಪ್ರಕಾರ, ರಾಹುಲ್ ಗಾಂಧಿ ಅವರು ಈ 22 ವರ್ಷದ ಅವಧಿಯಲ್ಲಿ ಇಟಲಿ, ಲಂಡನ್, ನ್ಯೂಯಾರ್ಕ್, ಬರ್ಲಿನ್, ವಿಯೆಟ್ನಾಂ, ದುಬೈ ಸೇರಿದಂತೆ ಹಲವು ದೇಶಗಳಿಗೆ ಒಟ್ಟು 54 ಬಾರಿ ಭೇಟಿ. ಅಂದಾಜು 60 ಕೋಟಿ ರೂ ವ್ಯಯಿಸಿದ್ದಾರೆ. 2015ರ ಆಗ್ನೇಯ ಏಷ್ಯಾ ಪ್ರವಾಸವೊಂದಕ್ಕೇ ಅಂದಾಜು 4.5 ಕೋಟಿ ರೂ. ಖರ್ಚಾಗಿದೆ. ಆದರೆ ಆ ವರ್ಷ ಅವರ ಆದಾಯ ಕೇವಲ 86.55 ಲಕ್ಷ ರೂ. ಮಾತ್ರ ಇತ್ತು ಎಂದು ಆರೋಪಿಸಿದ್ದಾರೆ ಬಿಜೆಪಿ ನಾಯಕ.

ಎಫ್​ಸಿಆರ್​ಎ ನಿಯಮಗಳ ಉಲ್ಲಂಘನೆ

ವಿದೇಶಿ ಆತಿಥ್ಯ ಸ್ವೀಕರಿಸುವ ಮೊದಲು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಸೆಕ್ಷನ್ 6ರ ಅಡಿ ಕೇಂದ್ರ ಗೃಹ ಸಚಿವಾಲಯದಿಂದ ಅನುಮತಿ ಪಡೆಯುವುದು ಕಡ್ಡಾಯ. ರಾಹುಲ್ ಗಾಂಧಿ ಅಂತಹ ಯಾವುದೇ ಅನುಮತಿ ಪಡೆದಿಲ್ಲ ಎಂದು ಬಿಜೆಪಿ ಸಂಸದರು ದೂರಿದ್ದಾರೆ.

ಆರು ಅಘೋಷಿತ ಪ್ರವಾಸಗಳ ಗುಟ್ಟು?

ಸೆಪ್ಟೆಂಬರ್ 2025ರ ಸಿಆರ್‌ಪಿಎಫ್ (CRPF) ಪತ್ರವನ್ನು ಉಲ್ಲೇಖಿಸಿದ ಪಾತ್ರ, ಡಿಸೆಂಬರ್ 2024 ಮತ್ತು ಸೆಪ್ಟೆಂಬರ್ 2025 ರ ನಡುವೆ ನಡೆದ ಆರು ವಿದೇಶಿ ಪ್ರವಾಸಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು. ಇತ್ತೀಚಿನ ಮೇ 2026 ರ ಓಮನ್ ಪ್ರವಾಸದ ಬಗ್ಗೆಯೂ ಯಾವುದೇ ಸಾರ್ವಜನಿಕ ವಿವರಗಳಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ಆವರ್ತನ ಠೇವಣಿ ಯೋಜನೆಯಲ್ಲಿ ತಿಂಗಳಿಗೆ 5,000 ರೂ ಹೂಡಿಕೆಯಿಂದ ಎಷ್ಟು ರಿಟರ್ನ್ಸ್?

“ಇದು ರಾಜಕೀಯ ದ್ವೇಷದ ಪ್ರಶ್ನೆಯಲ್ಲ, ಇದು ದಾಖಲೆಗಳ ಪ್ರಶ್ನೆ. ವಿದೇಶಿ ಸಂಸ್ಥೆಗಳು ಹಣ ನೀಡಿದ್ದರೆ FCRA ಅನುಮತಿ ಎಲ್ಲಿ? ವೈಯಕ್ತಿಕ ಹಣವಾಗಿದ್ದರೆ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಏಕೆ ಉಲ್ಲೇಖಿಸಿಲ್ಲ? ಅಥವಾ ಯಾರಾದರೂ ಉಡುಗೊರೆಯಾಗಿ ನೀಡಿದ್ದಾರೆಯೇ? ಹಾಗಿದ್ದರೆ ರಾಹುಲ್ ಗಾಂಧಿಯ ವಿದೇಶೀ ಪ್ರವಾಸಗಳಿಗೆ ಫಂಡಿಂಗ್ ಮಾಡುತ್ತಿರುವ ವಿದೇಶಿಗರು ಯಾರು?” ಎಂದು ಸಂಬಿತ್ ಪಾತ್ರ ಖಾರವಾಗಿ ಪ್ರಶ್ನಿಸಿದ್ದಾರೆ.

ಜನಪ್ರತಿನಿಧಿಗಳ ಕಾಯ್ದೆ ಮತ್ತು ಆದಾಯ ತೆರಿಗೆ ಕಾಯ್ದೆಯಡಿ ಪ್ರತಿಯೊಂದು ಪೈಸೆಗೂ ಲೆಕ್ಕವಿರಬೇಕು. ವಿದೇಶಿ ಪ್ರವಾಸಗಳ ಈ “ಹಣದ ದಾರಿ” (Money Trail) ಅಸ್ಪಷ್ಟವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಕುರಿತು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಪಾರದರ್ಶಕ ದಾಖಲೆಗಳನ್ನು ಪ್ರದರ್ಶಿಸಲಿ ಎಂದು ಬಿಜೆಪಿ ನಾಯಕ ಸವಾಲು ಹಾಕಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More