Delta Plus Variant: ಡೆಲ್ಟಾ ಪ್ಲಸ್ ಕೊರೊನಾ ವೈರಸ್ ಎಂದರೇನು? ರೂಪಾಂತರಿ ವೈರಾಣು ಎಷ್ಟು ಅಪಾಯಕಾರಿ, ಇದರಿಂದ ರಕ್ಷಣೆ ಹೇಗೆ?

| Updated By: Digi Tech Desk

Updated on: Jun 22, 2021 | 2:26 PM

Delta Plus Variant: ಹೊಸದಾಗಿ ಕಂಡುಬಂದ ವೈರಸ್ ಪ್ರಬೇಧವನ್ನು ಡೆಲ್ಟಾ ಪ್ಲಸ್ ಅಥವಾ AY.1 ರೂಪಾಂತರಿ ಎಂದು ಕರೆಯುತ್ತಾರೆ. ಡೆಲ್ಟಾ ಪ್ರಬೇಧದ ವೈರಸ್​ನಿಮದ ಉಂಟಾದ ಡೆಲ್ಟಾ ಪ್ಲಸ್ ಎಂಬ ವೈರಸ್ ಬಗ್ಗೆ ತಜ್ಞರು ಹೆಚ್ಚು ಅಧ್ಯಯನಗಳನ್ನು ನಡೆಸುತ್ತಿದ್ದಾರೆ.

Delta Plus Variant: ಡೆಲ್ಟಾ ಪ್ಲಸ್ ಕೊರೊನಾ ವೈರಸ್ ಎಂದರೇನು? ರೂಪಾಂತರಿ ವೈರಾಣು ಎಷ್ಟು ಅಪಾಯಕಾರಿ, ಇದರಿಂದ ರಕ್ಷಣೆ ಹೇಗೆ?
ಸಾಂಕೇತಿಕ ಚಿತ್ರ
Follow us on

ಕೊರೊನಾ ಎರಡನೇ ಅಲೆ ಕ್ರಮೇಣ ಕಡಿಮೆಯಾಗುತ್ತಿದೆ. ಹಾಗೆಂದು ಯಾರೂ ಅಜಾಗರೂಕತೆ ತೋರುವಂತಿಲ್ಲ. ಮಾಸ್ಕ್, ಸಾಮಾಜಿಕ ಅಂತರ ಮೊದಲಾದ ಕೊರೊನಾ ಮಾರ್ಗಸೂಚಿಗಳನ್ನು ಕೈಬಿಡುವಂತಿಲ್ಲ. ಏಕೆಂದರೆ, ಕೊರೊನಾ ಮೂರನೇ ಅಲೆ ಶೀಘ್ರದಲ್ಲೇ ಎದುರಾಗಬಹುದು ಎಂಬ ಬಗ್ಗೆ ಅಂದಾಜಿಸಲಾಗಿದೆ. ಮುಂದಿನ 6ರಿಂದ 8 ವಾರಗಳಲ್ಲಿ ಕೊರೊನಾ ಮೂರನೇ ಅಲೆ ಪ್ರಾರಂಭವಾಗಬಹುದು ಎಂದು ಹಲವು ವರದಿಗಳು ಹರಿದಾಡಿವೆ. ಅದರಂತೆ, ಕೊವಿಡ್-19 ವೈರಾಣುವಿನ ಹೊಸ ರೂಪಾಂತರಿ ಇತ್ತೀಚೆಗೆ ಬಹಳ ಚರ್ಚೆಗೆ ಕಾರಣವಾಗುತ್ತಿದೆ. ಭಾರತದಲ್ಲಿ ಕಂಡುಬಂದ ಡೆಲ್ಟಾ ವೈರಸ್ ನಂತರ ಈಗ ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣು ಚರ್ಚೆಯ ಹೊಸ ವಿಷಯವಾಗಿದೆ.

ಹೊಸದಾಗಿ ಕಂಡುಬಂದ ವೈರಸ್ ಪ್ರಬೇಧವನ್ನು ಡೆಲ್ಟಾ ಪ್ಲಸ್ ಅಥವಾ AY.1 ರೂಪಾಂತರಿ ಎಂದು ಕರೆಯುತ್ತಾರೆ. ಡೆಲ್ಟಾ ಪ್ರಬೇಧದ ವೈರಸ್​ನಿಮದ ಉಂಟಾದ ಡೆಲ್ಟಾ ಪ್ಲಸ್ ಎಂಬ ವೈರಸ್ ಬಗ್ಗೆ ತಜ್ಞರು ಹೆಚ್ಚು ಅಧ್ಯಯನಗಳನ್ನು ನಡೆಸುತ್ತಿದ್ದಾರೆ. ಡೆಲ್ಟಾ ಪ್ಲಸ್ ವೈರಾಣು, ಡೆಲ್ಟಾ ಪ್ರಬೇಧಕ್ಕೆ ಬಹಳ ಹತ್ತಿರವಾಗಿದೆ ಎಂದು ಕೇಂದ್ರ ಸರ್ಕಾರ ಕೂಡ ಒಪ್ಪಿಕೊಂಡಿದೆ. ಡೆಲ್ಟಾ ವೈರಾಣುವಿನಿಂದ ಡೆಲ್ಟಾ ಪ್ಲಸ್ ರೂಪಾಂತರ ಹೊಂದಿದೆ ಎಂದು ಆರೋಗ್ಯ ಸಚಿವಾಲಯ ಕೂಡ ಒಪ್ಪಿಕೊಂಡಿದೆ.

ಡೆಲ್ಟಾ ಪ್ಲಸ್ ರೂಪಾಂತರಿ ಎಂದರೇನು?
ಭಾರತದಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಡೆಲ್ಟಾ ಪ್ರಬೇಧದ ಕೊರೊನಾ ವೈರಸ್ ಕಂಡುಬಂದಿತ್ತು. ಈ ಸ್ವರೂಪದ ಕೊವಿಡ್ ವೈರಸ್​ನಿಂದಾಗಿ ಹಲವು ಜನರು ಸಂಕಷ್ಟಕ್ಕೆ ಸಿಲುಕಿದರು. ವಿಜ್ಞಾನಿಗಳ ಪ್ರಕಾರ, ಡೆಲ್ಟಾದಿಂದ ರೂಪಾಂತರಿ ಹೊಂದಿದ ವೈರಾಣುವೇ ಡೆಲ್ಟಾ ಪ್ಲಸ್ ಆಗಿದೆ. ಸ್ವರೂಪ ಬದಲಿಸಿದೆ. ಈ ವೈರಾಣುವಿನ ಮೇಲೆ ಕೇಂದ್ರ ಸರ್ಕಾರದ ತಂಡವೂ ಕಣ್ಣಿರಿಸಿದೆ.

ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ತಜ್ಞರು ಹೇಳುವ ಪ್ರಕಾರ, ಹೊಸ ಪ್ರಭೇದದ ವೈರಾಣುವಿನ ಬಗ್ಗೆ ಭಾರತದಲ್ಲಿ ಇನ್ನೂ ಕೂಡ ತನಿಖೆ ನಡೆಯುತ್ತಿದೆ. ವೈರಾಣು ರೂಪಾಂತರ ಹೊಂದುವುದು ಒಂದು ಜೈವಿಕ ಕ್ರಮ. ಅದನ್ನು ತಡೆಗಟ್ಟಲು ನಾವು ಕ್ರಮ ಕೈಗೊಳ್ಳಬೇಕು. ಎಲ್ಲಾ ಮುಂಜಾಗ್ರತೆಗಳನ್ನು ಪಾಲಿಸಬೇಕು. ಹರಡುವಿಕೆ ತಡೆಗಟ್ಟಬೇಕು ಎಂದು ಸರ್ಕಾರ ಹೇಳುತ್ತಾ ಬಂದಿದೆ.

ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣು ಹೇಗೆ ಸೃಷ್ಟಿಯಾದದ್ದು?
ಡೆಲ್ಟಾ ವೈರಾಣು ಅಥವಾ B.1.617.2 ಸ್ವರೂಪದ ಕೊರೊನಾ ವೈರಸ್ ಡೆಲ್ಟಾ ಪ್ಲಸ್ ಆಗಿ ರೂಪಾಂತರ ಹೊಂದಿದೆ. ಈ ರೂಪಾಂತರವನ್ನು K417N ಎಂದು ಕರೆದಿದ್ದಾರೆ. ಈ ಹೊಸ ಸ್ವರೂಪದ ವೈರಾಣುವಿನ ಸ್ಪೈಕ್ ಪ್ರೊಟೀನ್​ನಲ್ಲಿ ಕೆಲವು ಬದಲಾವಣೆಗಳು ಆಗಿದೆ.

ವೈರಾಣುಗಳು ಯಾಕೆ ರೂಪಾಂತರ ಹೊಂದುತ್ತವೆ?
ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ದೆಹಲಿ, ಇಲ್ಲಿನ ಹಿರಿ ವೈದ್ಯ ಡಾ. ಎ.ಕೆ. ವರ್ಶ್ನೆ ಹೇಳುವ ಪ್ರಕಾರ, ಯಾವುದೇ ವೈರಸ್ ಇದ್ದರೂ ಅವುಗಳು ತಮ್ಮ ಸ್ವರೂಪವನ್ನು ಬದಲಿಸುತ್ತಿರುತ್ತವೆ. ಯಾವಾಗ ಅದು ತನ್ನ ಸ್ವರೂಪ ಬದಲಿಸುತ್ತದೋ ಆಗ ನಾವು ಅದನ್ನು ಬೇರೆ ಹೆಸರಿನಿಂದ ಕರೆಯುತ್ತೇವೆ. ಇದೊಂದು ರೀತಿ ಯುದ್ಧ ನಡೆದಂತೆ. ನಾವು ಒಂದನ್ನು ಹೋಗಲಾಡಿಸಲು ಮುಂದಾದಾಗ ಅದು ಸ್ವರೂಪ ಬದಲಿಸಿ ಮತ್ತೊಂದು ರೀತಿ ಕಂಡುಬರುತ್ತದೆ.

ಹೊಸ ಸ್ವರೂಪದ ವೈರಾಣುವಿನಿಂದ ನಾವು ರಕ್ಷಣೆ ಪಡೆಯುವುದು ಹೇಗೆ?
ಡೆಲ್ಟಾ ವೈರಾಣುವಿನ ಬದಲಾದ ಸ್ವರೂಪವೇ ಡೆಲ್ಟಾ ಪ್ಲಸ್ ಆಗಿದೆ. ಈ ವೈರಾಣುವಿನಿಂದ ರಕ್ಷಣೆ ಪಡೆಯಲು ಕೂಡ ಹೊಸ ಕ್ರಮಗಳನ್ನು ಏನೂ ಪಾಲಿಸಬೇಕಾಗಿಲ್ಲ. ಈಗ ನಾವು ಕೈಗೊಳ್ಳುತ್ತಿರುವ ಮುಂಜಾಗ್ರತಾ ಕ್ರಮಗಳನ್ನು ಎಚ್ಚರಿಕೆಯಿಂದ, ಚಾಚೂತಪ್ಪದೇ ಪಾಲಿಸಿದರೆ ಸಾಕು. ಮಾಸ್ಕ್ ಧರಿಸಬೇಕು. ಕೈಗಳನ್ನು ಸ್ವಚ್ಛವಾಗಿಡಬೇಕು. ಸಾಮಾಜಿಕ ಅಂತರ ಪಾಲಿಸಬೇಕು. ಅನಗತ್ಯವಾಗಿ ಹೊರಗೆ ಓಡಾಟ ನಡೆಸಬಾರದು.

ಹೊಸ ಸ್ವರೂಪದ ವೈರಸ್ ವಿರುದ್ಧ ಲಸಿಕೆ ಪರಿಣಾಮಕಾರಿಯೇ?
ನಾವು ಈಗ ಪಡೆಯುತ್ತಿರುವ ಲಸಿಕೆಯು ಕೊರೊನಾ ವಿರುದ್ಧ ಪರಿಣಾಮಕಾರಿಯೇ ಆಗಿದೆ. ಹೊಸ ಸ್ವರೂಪದ ವೈರಸ್ ಮೇಲೆ ಎಷ್ಟು ಪರಿಣಾಮಕಾರಿ ಎಂದು ಖಚಿತವಾಗಿ ನಾವು ಇನ್ನಷ್ಟೇ ತಿಳಿಯಬೇಕಿದೆ. ನಮ್ಮ ದೇಹದಲ್ಲಿ ಎಷ್ಟು ರೋಗನಿರೋಧಕ ಶಕ್ತಿ ಉಳಿತಾಯವಾಗುತ್ತದೆ ಎಂಬುದೂ ಕೆಲವೊಮ್ಮೆ ಮಾನದಂಡವಾಗುತ್ತದೆ. ಹಾಗೆಂದು, ಯಾವುದೇ ವೈರಸ್ ರೂಪಾಂತರಿ ಆದರೆ ಹೆಚ್ಚು ಶಕ್ತಿ ಹೊಂದಬೇಕು ಎಂದೇನೂ ಇಲ್ಲ. ಕೆಲವೊಮ್ಮೆ ರೂಪಾಂತರಿ ವೈರಸ್ ಮೊದಲಿನ ವೈರಸ್ ಗಿಂತ ದುರ್ಬಲ ಆಗಲೂಬಹುದು. ಅಂದರೆ, ವೈರಾಣು ಶಕ್ತಿ ಕಳೆದುಕೊಳ್ಳಲೂ ಸಾಧ್ಯವಿದೆ ಎಂಬುದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ: Coronavirus Third Wave: ಸೆಪ್ಟೆಂಬರ್​-ಅಕ್ಟೋಬರ್​ ವೇಳೆಗೆ ಕೊರೊನಾ ಮೂರನೇ ಅಲೆ ಉತ್ತುಂಗಕ್ಕೆ ತಲುಪಲಿದೆ – ಐಐಟಿ ಅಧ್ಯಯನ

ಡೆಂಗ್ಯೂ, ಮಲೇರಿಯಾ ಮತ್ತು ಕೊರೊನಾ ವೈರಸ್​ ಸೋಂಕನ್ನು ತಪ್ಪಿಸುವುದು ಹೇಗೆ?

Published On - 7:00 am, Tue, 22 June 21