ಪ್ರಶಾಂತ್ ಕಿಶೋರ್ ಭೇಟಿಯ ನಂತರ ಪ್ರತಿಪಕ್ಷ ನಾಯಕರ ಸಭೆ ಕರೆದ ಶರದ್​ ಪವಾರ್: ರಾಷ್ಟ್ರ ರಾಜಕಾರಣದಲ್ಲಿ ಸಂಚಲನ

ಶರದ್​ ಪವಾರ್​ 2ನೇ ಬಾರಿಗೆ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಅವರನ್ನು ಭೇಟಿಯಾದ ನಂತರ ಈ ಬೆಳವಣಿಗೆ ನಡೆದಿದೆ. ಎನ್​ಸಿಪಿ ನಾಯಕ ಶರದ್​ ಪವಾರ್ ತಮ್ಮ ದೆಹಲಿ ನಿವಾಸದಲ್ಲಿ ಪ್ರಶಾಂತ್ ಕಿಶೋರ್ ಅವರನ್ನು ಭೇಟಿಯಾಗಿ ಸುಮಾರು 2 ತಾಸು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು.

ಪ್ರಶಾಂತ್ ಕಿಶೋರ್ ಭೇಟಿಯ ನಂತರ ಪ್ರತಿಪಕ್ಷ ನಾಯಕರ ಸಭೆ ಕರೆದ ಶರದ್​ ಪವಾರ್: ರಾಷ್ಟ್ರ ರಾಜಕಾರಣದಲ್ಲಿ ಸಂಚಲನ
ಶರದ್​ ಪವಾರ್​
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 21, 2021 | 10:49 PM

ಬೆಂಗಳೂರು: ಎನ್​ಸಿಪಿ ನಾಯಕ ಶರದ್​ ಪವಾರ್ ಮಂಗಳವಾರ ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತ್ತು ಪ್ರಭಾವಿ ನಾಯಕರ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ದೇಶದ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರದ ನವಾಬ್ ಮಲಿಕ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಈ ತಿಂಗಳಲ್ಲಿ ಶರದ್​ ಪವಾರ್​ 2ನೇ ಬಾರಿಗೆ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಅವರನ್ನು ಭೇಟಿಯಾದ ನಂತರ ಈ ಬೆಳವಣಿಗೆ ನಡೆದಿದೆ. ಎನ್​ಸಿಪಿ ನಾಯಕ ಶರದ್​ ಪವಾರ್ ತಮ್ಮ ದೆಹಲಿ ನಿವಾಸದಲ್ಲಿ ಪ್ರಶಾಂತ್ ಕಿಶೋರ್ ಅವರನ್ನು ಭೇಟಿಯಾಗಿ ಸುಮಾರು 2 ತಾಸು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ಬಿಜೆಪಿ ವಿರುದ್ಧ ತೃತೀಯ ರಂಗ ಕಟ್ಟುವ ಸಾಧ್ಯತೆಗಳ ಬಗ್ಗೆ ಈ ಭೇಟಿಯ ನಂತರ ಮತ್ತೆ ಚರ್ಚೆಗಳು ಗರಿಗೆದರಿವೆ.

ದೆಹಲಿಯ ತಮ್ಮ ನಿವಾಸದಲ್ಲಿ ನಾಳೆ, ಅಂದರೆ ಜೂನ್ 22ರ ಮಂಗಳವಾರ ಬೆಳಿಗ್ಗೆ 11.30ಕ್ಕೆ ಎನ್​ಸಿಪಿ ನಾಯಕ ಶರದ್​ ಪವಾರ್ ಸಭೆಯೊಂದನ್ನು ಕರೆದಿದ್ದಾರೆ ಎಂದು ಮಲಿಕ್ ಟ್ವೀಟ್ ಮಾಡಿದ್ದರು. ನಂತರ ಈ ಸಭೆಯನ್ನು ಸಂಜೆ 4ಕ್ಕೆ ಮುಂದೂಡಲಾಗಿದೆ ಎಂದು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಲಾಯಿತು.

ಸಭೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲಾ, ಟಿಎಂಸಿ ನಾಯಕ ಯಶವಂತ ಸಿನ್ಹಾ, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್ ಮತ್ತು ಸಿಪಿಐನ ಡಿ.ರಾಜಾ ಮತ್ತು ಸಂಜಯ್ ಝಾ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಮಲಿಕ್ ಹೇಳಿದ್ದಾರೆ.

ರಾಜಕಾರಿಣಿಗಳ ಜೊತೆಗೆ ವಿವಿಧ ಕ್ಷೇತ್ರಗಳ ಪ್ರಭಾವಿ ನಾಯಕರನ್ನೂ ಸಭೆಗೆ ಆಹ್ವಾನಿಸಲಾಗಿದೆ. ಹಿರಿಯ ವಕೀಲರಾದ ಕೆ.ಟಿ.ಎಸ್.ತುಳಸಿ, ಕೊಲಿನ್ ಗಾನ್ಸಾಲ್ವೆಸ್, ಮಾಜಿ ಚುನಾವಣಾ ಆಯುಕ್ತ ಎಸ್.ವೈ.ಖುರೇಶಿ, ಮಾಜಿ ರಾಜತಂತ್ರಜ್ಞ ಕೆ.ಸಿ.ಸಿಂಗ್, ಗೀತರಚನೆಕಾರ ಜಾವೇದ್ ಅಖ್ತರ್, ಫಿಲಂ ಮೇಕರ್​ ಪ್ರೀತೀಶ್ ನಂದಿ, ಪತ್ರಕರ್ತರಾದ ಕರಣ್ ಥಾಪರ್ ಮತ್ತು ಆಶುತೋಷ್ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಬಿಜೆಪಿಯ ಮಾಜಿ ನಾಯಕ ಯಶವಂತ ಸಿನ್ಹಾ ಸಹ ಶರದ್​ ಪವಾರ್ ಸಭೆ ಕರೆದಿರುವ ಬಗ್ಗೆ ಟ್ವೀಟ್ ಮಾಡಿದ್ದರು.

ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್ ಅವರೊಂದಿಗಿನ ಸಭೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಲಿಕ್, ವಿರೋಧ ಪಕ್ಷಗಳ ಎಲ್ಲ ನಾಯಕರನ್ನೂ ಒಗ್ಗೂಡಿಸಲು ಶರದ್​ ಪವಾರ್ ಪ್ರಯತ್ನಿಸುತ್ತಿದ್ದಾರೆ. ಈ ಸಾಧ್ಯತೆಗಳ ಬಗ್ಗೆ ಅವರಿಬ್ಬರೂ ಚರ್ಚಿಸಿರಬಹುದು. ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯೂ ದೆಹಲಿಯಲ್ಲಿ ನಾಳೆ (ಜೂನ್ 22) ನಡೆಯಲಿದೆ ಎಂದು ಅವರು ತಿಳಿಸಿದರು.

ಭೇಟಿಯ ಕುರಿತು ಈ ಮೊದಲು ಪ್ರತಿಕ್ರಿಯಿಸಿದ್ದ ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್, ‘ಇದೊಂದು ಸೌಹಾರ್ದ ಭೇಟಿ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದವರನ್ನು ಭೇಟಿಯಾಗಿ ಧನ್ಯವಾದ ಹೇಳಿದೆ’ ಎಂದು ಹೇಳಿದ್ದರು.

(Sharad Pawar to host Opposition leaders Meet Curiosity in National Politics)

ಇದನ್ನೂ ಓದಿ: Prashant Kishor ಶರದ್ ಪವಾರ್ ಭೇಟಿಯಾದ ಪ್ರಶಾಂತ್ ಕಿಶೋರ್; ರಾಜಕೀಯ ವಲಯದಲ್ಲಿ ಭಾರೀ ಊಹಾಪೋಹ ಸೃಷ್ಟಿ

ಇದನ್ನೂ ಓದಿ: ಪ್ರಶಾಂತ್ ಕಿಶೋರ್ ಜೊತೆ ಎರಡನೇ ಸಭೆ ನಡೆಸಿದ ನಂತರ ವಿರೋಧ ಪಕ್ಷದ ನಾಯಕರೊಂದಿಗೆ ಮಂಗಳವಾರ ಚರ್ಚೆ; ಮಿಷನ್ 2024ರ ತಯಾರಿಯೇ?