Lok Sabha Session: ನೀವು ಪ್ರಧಾನಿ ಮೋದಿ ಮುಂದೆ ತಲೆಬಾಗಿದ್ದೀರಿ ಎಂದ ರಾಹುಲ್; ಸ್ಪೀಕರ್ ಓಂ ಬಿರ್ಲಾ ಪ್ರತಿಕ್ರಿಯೆ ಹೀಗಿತ್ತು

|

Updated on: Jul 01, 2024 | 6:45 PM

ಸ್ಪೀಕರ್ ಸರ್, ಇಬ್ಬರು ಜನರು ಕುರ್ಚಿಯಲ್ಲಿ ಕುಳಿತಿದ್ದಾರೆ. ಒಬ್ಬರು ಲೋಕಸಭೆಯ ಸ್ಪೀಕರ್ ಮತ್ತೊಬ್ಬರು ಓಂ ಬಿರ್ಲಾ. ನಾನು ನಿಮ್ಮ ಕೈ ಕುಲುಕಿದಾಗ, ನೀವು ನೇರವಾಗಿ ನಿಂತು ನನ್ನ ಕೈ ಕುಲುಕಿದ್ದೀರಿ. ಮೋದಿಜಿ ನಿಮ್ಮ ಕೈ ಕುಲುಕಿದಾಗ, ನೀವು ತಲೆಬಾಗಿದ್ದೀರಿ ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಹೇಳಿದ್ದು ಅದಕ್ಕೆ ಓಂ ಬಿರ್ಲಾ ಕೊಟ್ಟ ಉತ್ತರ ಹೀಗಿತ್ತು

Lok Sabha Session: ನೀವು ಪ್ರಧಾನಿ ಮೋದಿ ಮುಂದೆ ತಲೆಬಾಗಿದ್ದೀರಿ ಎಂದ ರಾಹುಲ್; ಸ್ಪೀಕರ್ ಓಂ ಬಿರ್ಲಾ ಪ್ರತಿಕ್ರಿಯೆ ಹೀಗಿತ್ತು
ಓಂ ಬಿರ್ಲಾ- ರಾಹುಲ್ ಗಾಂಧಿ
Follow us on

ದೆಹಲಿ ಜುಲೈ 01: ಇಂದು (ಸೋಮವಾರ) ಲೋಕಸಭಾ (Lok sabha) ಅಧಿವೇಶನದಲ್ಲಿ  ಸ್ಪೀಕರ್ ನಿಷ್ಪಕ್ಷವಾಗಿ ಇರಬೇಕು ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಸ್ಪೀಕರ್ ಸರ್, ನೀವು ನಿಮ್ಮ ಸ್ಥಾನವನ್ನು ಅಲಂಕರಿಸಿದಾಗ, ನಾನು ನಿಮ್ಮೊಂದಿಗೆ ನಿಮ್ಮ ಕುರ್ಚಿ ಬಳಿ ಬಂದಿದ್ದೆ. ಲೋಕಸಭೆಯ ಅಂತಿಮ ತೀರ್ಪುಗಾರರು ನೀವೇ. ನೀವು ಏನು ಹೇಳುತ್ತೀರೋ ಅದು ಭಾರತೀಯ ಪ್ರಜಾಪ್ರಭುತ್ವವನ್ನು ಮೂಲಭೂತವಾಗಿ ವ್ಯಾಖ್ಯಾನಿಸುತ್ತದೆ. ಸ್ಪೀಕರ್ ಸರ್, ಇಬ್ಬರು ಜನರು ಕುರ್ಚಿಯಲ್ಲಿ ಕುಳಿತಿದ್ದಾರೆ. ಒಬ್ಬರು ಲೋಕಸಭೆಯ ಸ್ಪೀಕರ್ ಮತ್ತೊಬ್ಬರು ಓಂ ಬಿರ್ಲಾ (Om Birla). ನಾನು ನಿಮ್ಮ ಕೈ ಕುಲುಕಿದಾಗ, ನೀವು ನೇರವಾಗಿ ನಿಂತು ನನ್ನ ಕೈ ಕುಲುಕಿದ್ದೀರಿ. ಮೋದಿಜಿ ನಿಮ್ಮ ಕೈ ಕುಲುಕಿದಾಗ, ನೀವು ತಲೆಬಾಗಿದ್ದೀರಿ ಎಂದು ರಾಹುಲ್ ಹೇಳಿದ್ದಾರೆ.

ಈ ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಹುಲ್ ಗಾಂಧಿಯವರು ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು. ನಂತರ ರಾಹುಲ್ ಅವರಿಗೆ ನೇರವಾಗಿ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಬಿರ್ಲಾ, “ಪ್ರಧಾನಿ ನರೇಂದ್ರ ಮೋದಿ ಅವರು ಸಭಾನಾಯಕರಾಗಿದ್ದಾರೆ. ಮೇರಾ ಸಂಸ್ಕಾರ್ ಕೆಹತಾ ಹೈ ಕಿ ಜೋ ಹಮ್ಸೇ ಬಡೇ ಹೈ ಉನ್ಸೆ ಝುಕ್ ಕೇ ನಮಸ್ಕಾರ್ ಕರೋ ಮತ್ತು ಬರಾಬರ್ ವಾಲೋ ಸೇ ಸೀದೇ ಖಡೇ ಹೋಕೆ (ನನ್ನ ಸಂಸ್ಕೃತಿಯು ಹೇಳುವುದೇನೆಂದರೆ ಹಿರಿಯರ ಮುಂದೆ ತಲೆಬಾಗಬೇಕು, ಸಮಾನರೊಂದಿಗೆ ನೇರವಾಗಿ ನಿಂತು ಕೈಕುಲಕಬೇಕು)” ಎಂದು ಹೇಳಿದ್ದಾರೆ.

ಸ್ಪೀಕರ್ ಅವರ ಮಾತುಗಳಿಗೆ ಗೌರವ ಸೂಚಿಸಿದ ರಾಹುಲ್, “ನಾನು ನಿಮ್ಮ ಮಾತನ್ನು ಗೌರವಿಸುತ್ತೇನೆ, ಆದರೆ ಈ ಸದನದಲ್ಲಿ ಸ್ಪೀಕರ್‌ಗಿಂತ ಯಾರೂ ದೊಡ್ಡವರಲ್ಲ” ಎಂದಿದ್ದಾರೆ. ಸಂಸತ್ತಿನ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ, ಶಿವನ ಚಿತ್ರವನ್ನು ಹಿಡಿದುಕೊಂಡು ನನ್ನ ಸಂದೇಶವು ನಿರ್ಭಯತೆ ಮತ್ತು ಅಹಿಂಸೆಯ ಎಂದಿದ್ದಾರೆ.ಇದೇ ವೇಳೆ ರಾಹುಲ್ ಇತರ ಧರ್ಮಗಳ ಬೋಧನೆಗಳನ್ನು ಸಹ ಉಲ್ಲೇಖಿಸಿದ್ದಾರೆ.

“ಎಲ್ಲಾ ಧರ್ಮಗಳು ಮತ್ತು ನಮ್ಮ ಎಲ್ಲಾ ಮಹಾಪುರುಷರು ಅಹಿಂಸೆ ಮತ್ತು ನಿರ್ಭಯತೆಯ ಬಗ್ಗೆ ಮಾತನಾಡುತ್ತಾರೆ, ಆದರೆ ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ ಮತ್ತು ಸುಳ್ಳಿನ ಬಗ್ಗೆ ಮಾತ್ರ ಮಾತನಾಡುತ್ತಾರೆ .ಆಪ್ ಹಿಂದೂ ಹೋ ಹಿ ನಹೀ (ನೀವು ಹಿಂದೂಗಳಲ್ಲ),” ಎಂದಿದ್ದಾರೆ ರಾಹುಲ್.

ಇದನ್ನೂ ಓದಿ: Lok Sabha Session: ಮೋದಿ, ಬಿಜೆಪಿ, ಆರ್‌ಎಸ್‌ಎಸ್ ಎಂದರೆ ಹಿಂದೂ ಸಮಾಜವಲ್ಲ; ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

ಇಡೀ ಹಿಂದೂ ಸಮಾಜವನ್ನು ಹಿಂಸೆ ಮಾಡುವವರು ಎಂದು ಕರೆಯುವುದು ಗಂಭೀರ ವಿಷಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ ನಾನು ಬಿಜೆಪಿ ಬಗ್ಗೆ ಹೇಳುತ್ತಿದ್ದೆ. ಬಿಜೆಪಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅಥವಾ ಮೋದಿ ಇಡೀ ಹಿಂದೂ ಸಮಾಜವಲ್ಲ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ