
ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತ ಮತ್ತು ಟರ್ಕಿಯಲ್ಲಿ DEFITELIO ಎಂಬ ಹೆಸರಿನ ನಕಲಿ ಲಿವರ್ ಔಷಧಿ ಮಾರಾಟವಾಗುತ್ತಿದೆ ಎಂದು ಎಚ್ಚರಿಕೆಯನ್ನು ನೀಡಿದೆ. ಭಾರತದಲ್ಲಿ 2023ರ ಏಪ್ರಿಲ್ನಲ್ಲಿ ಮತ್ತು ಟರ್ಕಿಯಲ್ಲಿ 2023ರ ಜುಲೈನಲ್ಲಿ ಪತ್ತೆಯಾದ ಔಷಧದ ನಕಲಿ ಬ್ಯಾಚ್ ಅನ್ನು ಉಲ್ಲೇಖಿಸಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
DEFITELIO ಅನ್ನು ವಯಸ್ಕರು, ಹದಿಹರೆಯದವರು, ಮಕ್ಕಳು ಮತ್ತು 1 ತಿಂಗಳ ನಂತರದ ಶಿಶುಗಳಿಗೆ ಹೆಮಟೊಪಯಟಿಕ್ ಸ್ಟೆಮ್-ಸೆಲ್ ಟ್ರಾನ್ಸ್‌ಪ್ಲಾಂಟೇಶನ್ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಈ ಔಷಧಿಯ ನಿಜವಾದ ತಯಾರಕರು ಈ ನಕಲಿ ಔಷಧಿಯನ್ನು ಗುರುತಿಸಿದ್ದಾರೆ. ಹಾಗೇ DEFITELIO ಭಾರತ ಮತ್ತು ಟರ್ಕಿಯಲ್ಲಿ ಮಾರ್ಕೆಟಿಂಗ್ ಅಧಿಕಾರವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಈ ನಕಲಿ ಔಷಧವನ್ನು ಗುರುತಿಸುವುದು ಹೇಗೆ ಎಂಬ ಮಾರ್ಗಸೂಚಿಯನ್ನೂ ನೀಡಲಾಗಿದೆ.
ಇದನ್ನೂ ಓದಿ: Cough Syrups: ಕೆಮ್ಮಿನ ಸಿರಪ್ನಿಂದ ಸಾವು; ಭಾರತದ 7, ಇಂಡೋನೇಷ್ಯಾದ 13 ಔಷಧಗಳತ್ತ ಡಬ್ಲ್ಯೂಎಚ್ಒ ಬೊಟ್ಟು
ಲೋಟ್ 20G20A ಲೋಗೋ ಇರುವ ನಿಜವಾದ DEFITELIO ಅನ್ನು ಜರ್ಮನ್ ಅಥವಾ ಆಸ್ಟ್ರಿಯನ್ ಪ್ಯಾಕೇಜಿಂಗ್‌ನಲ್ಲಿ ಪ್ಯಾಕ್ ಮಾಡಲಾಗುತ್ತದೆ. ಈ ಔಷಧದ ನಕಲಿ ಉತ್ಪನ್ನಗಳು ಯುಕೆ ಅಥವಾ ಐರ್ಲೆಂಡ್ ಪ್ಯಾಕೇಜಿಂಗ್‌ನಲ್ಲಿವೆ. ಇದರ ಸೀರೀಸ್ ನಂಬರ್ ಬ್ಯಾಚ್ 20G20Aನೊಂದಿಗೆ ಸಂಬಂಧ ಹೊಂದಿಲ್ಲ ಎಂದು ಈ ಔಷಧದ ಅಸಲಿ ತಯಾರಕ ಸಂಸ್ಥೆ ದೃಢಪಡಿಸಿದೆ.
ಇದೇ ಔಷಧಿಯನ್ನು ಅರ್ಜೆಂಟೀನಾ, ಆಸ್ಟ್ರೇಲಿಯಾ, ಲಾಟ್ವಿಯಾ, ಮಲೇಷಿಯಾ ಮತ್ತು ಸೌದಿ ಅರೇಬಿಯಾದಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಾಗ ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ 2020ರ ಮೇನಲ್ಲಿ ಎಚ್ಚರಿಕೆಯನ್ನು ನೀಡಿತ್ತು.
ಇದನ್ನೂ ಓದಿ: ಇರಾಕ್‌ನಲ್ಲಿ ಮಾರಾಟವಾದ ಭಾರತದ ಕಂಪನಿಯ ಕೆಮ್ಮಿನ ಸಿರಪ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಈ ನಕಲಿ ಔಷಧಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಕೆಲವು ಸಂದರ್ಭಗಳಲ್ಲಿ ಇದರಿಂದ ಜೀವಕ್ಕೂ ಅಪಾಯವಾಗಬಹುದು. WHO ಈ ನಕಲಿ ಔಷಧವನ್ನು ಬಳಸದಂತೆ ಸಲಹೆ ನೀಡಿದೆ. ಈ ಉತ್ಪನ್ನವನ್ನು ಬಳಸಿದ ಅಥವಾ ಇದನ್ನು ಉಪಯೋಗಿಸಿ ತೊಂದರೆ ಅನುಭವಿಸಿದವರು ಯಾರಾದರೂ ಇದ್ದರೆ ಅವರು ತಕ್ಷಣ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳಲು ಸೂಚಿಸಿದೆ.
Published On - 11:30 am, Tue, 5 September 23