Cough Syrups: ಕೆಮ್ಮಿನ ಸಿರಪ್ನಿಂದ ಸಾವು; ಭಾರತದ 7, ಇಂಡೋನೇಷ್ಯಾದ 13 ಔಷಧಗಳತ್ತ ಡಬ್ಲ್ಯೂಎಚ್ಒ ಬೊಟ್ಟು
WHO Flags 7 Indian Made Cough Syrups: ಜಾಗತಿಕವಾಗಿ ಕೆಮ್ಮಿನ ಸಿರಪ್ ಕುಡಿದು ಜನರು ಸಾವನ್ನಪ್ಪಿದ ಘಟನೆಗಳ ತನಿಖೆ ನಡೆಸಿದ ಡಬ್ಲ್ಯೂಎಚ್ಒ ಇದೀಗ ಭಾರತದ 7 ಮತ್ತು ಇಂಡೋನೇಷ್ಯಾದ 13 ಸಿರಪ್ಗಳನ್ನು ಹೆಸರಿಸಿದೆ.
ನವದೆಹಲಿ: ವಿಶ್ವಾದ್ಯಂತ 200ಕ್ಕೂ ಹೆಚ್ಚು ಮಂದಿಗೆ ಕಾರಣ ಎನ್ನಲಾದ ಕಳಪೆ ದರ್ಜೆಯ ಕೆಮ್ಮಿನ ಸಿರಪ್ಗಳು (Cough Syrup) 20 ಕಂಪನಿಗಳಿಂದ ಪೂರೈಕೆ ಆಗಿರುವುದು ವಿಶ್ವ ಆರೋಗ್ಯ ಸಂಸ್ಥೆ (World Health Organisation) ನಡೆಸಿದ ತನಿಖೆ ಪತ್ತೆ ಮಾಡಿದೆ. 20 ಔಷಧಗಳಿಂದ ಈ ಸಾವಾಗಿದ್ದು ಇದರಲ್ಲಿ ಏಳು ಔಷಧಗಳು ಭಾರತೀಯ ಕಂಪನಿಗಳಿಂದ ತಯಾರಿಸಲಾಗಿದೆ. ಇನ್ನುಳಿದ 13 ಸಿರಪ್ಗಳು ಇಂಡೋನೇಷ್ಯಾದಿಂದ ಸರಬರಾಜು ಆಗಿವೆ ಎಂದು ಡಬ್ಲ್ಯೂಎಚ್ಒ ಅಧಿಕಾರಿಗಳು ಹೇಳಿದ್ದಾರೆ ಎನ್ಡಿಟಿವಿ ವರದಿ ಮಾಡಿದೆ.
ಹಲವು ಆಫ್ರಿಕನ್ ದೇಶಗಳಲ್ಲಿ ಕೆಮ್ಮಿನ ಸಿರಪ್ ಕುಡಿದು ಜನರ ಸಾವನ್ನಪ್ಪಿದ ಘಟನೆಗಳು ವರದಿಯಾಗಿದ್ದವು. ಈ ಸಿರಪ್ಗಳು ಭಾರತದಲ್ಲಿ ತಯಾರಾಗಿದ್ದವು ಎಂದೂ ಆರೋಪಿಸಲಾಗಿತ್ತು. ಡಬ್ಲ್ಯೂಎಚ್ಒನ ತಂಡವೊಂದು ಈ ಘಟನೆಯ ತನಿಖೆ ನಡೆಸಿದೆ. ಡೈಎತಿಲಿನ್ ಮತ್ತು ಎತಿಲಿನ್ ಗ್ಲೈಕೋಲ್ ಅಂಶಗಳು ಈ ಸಿರಪ್ನಲ್ಲಿ ಅಧಿಕವಾಗಿದ್ದರಿಂದ ಅದನ್ನು ಕುಡಿದ ಜನರಿಗೆ ಸಾವಾಗಿದೆ ಎಂಬ ಸಂಗತಿಯನ್ನು ಡಬ್ಲ್ಯುಎಚ್ಒ ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: Nandan Nilekani: ತಾನು ಓದಿದ ಶಿಕ್ಷಣ ಸಂಸ್ಥೆಗೆ 400 ಕೋಟಿ ರೂ ದೇಣಿಗೆ ಕೊಟ್ಟ ನಂದನ್ ನಿಲೇಕಣಿ
ಒಟ್ಟು 20 ಕೆಮ್ಮಿನ ಸಿರಪ್ಗಳನ್ನು ತನಿಖೆಯಲ್ಲಿ ಹೆಸರಿಸಲಾಗಿದೆ. 7 ಸಿರಪ್ಗಳು ಮೇಡ್ ಇನ್ ಇಂಡಿಯಾದ್ದಾದರೆ, 13 ಸಿರಪ್ಗಳು ಇಂಡೋನೇಷ್ಯಾ ಕಂಪನಿಗಳಿಂದ ತಯಾರಿಸಲಾಗಿದ್ದಾಗಿವೆ. ಭಾರತದ ಆ ಏಳು ಕಳಂಕಿತ ಸಿರಪ್ಗಳನ್ನು ತಯಾರಿಸಿದ್ದು ಹರ್ಯಾಣ ಮೂಲದ ಮೇಡನ್ ಫಾರ್ಮಾಸ್ಯೂಟಿಕಲ್ಸ್, ಮಾರಿಯಾನ್ ಬಯೋಟೆಕ್, ಕ್ಯೂಪಿ ಫಾರ್ಮಾ ಕೆಮ್ ಈ ಮೂರು ಕಂಪನಿಗಳು ಎಂದೆನ್ನಲಾಗಿದೆ.
ಇಷ್ಟಾದರೂ ಕೆಮ್ಮಿನ ಸಿರಪ್ ಕುಡಿದು ಜನರು ಸಾವನ್ನಪ್ಪುತ್ತಿರುವ ಘಟನೆಗಳು ನಿಲ್ಲುತ್ತಿಲ್ಲ. ಇತ್ತೀಚೆಗಷ್ಟೇ ಆಫ್ರಿಕಾದ ಕ್ಯಾಮರೂನ್ ದೇಶದಲ್ಲಿ ಕೆಮ್ಮಿನ ಸಿರಪ್ ಕುಡಿದು 12 ಮಕ್ಕಳು ಸಾವನ್ನಪ್ಪಿದ್ದಾರೆನ್ನಲಾಗಿದೆ. ಅಲ್ಲಿನ ಅಧಿಕಾರಿಗಳು ಈ ಸಾವಿಗೆ ಭಾರತೀಯ ಸಿರಪ್ಗಳೇ ಕಾರಣ ಎಂದು ಬೊಟ್ಟು ಮಾಡಿದ್ದಾರೆ. ಅಲ್ಲಿನ ಅಧಿಕಾರಿಗಳು ಈ ಸಿರಪ್ಗಳ ಫೋಟೋ ಬಿಡುಗಡೆ ಮಾಡಿದ್ದು, ಅದರಲ್ಲಿ ಒಂದು ಸಿರಪ್ ಅನ್ನು ಮಧ್ಯಪ್ರದೇಶದ ರೀಮ್ಯಾನ್ ಲ್ಯಾಬ್ಸ್ ಸಂಸ್ಥೆ ತಯಾರಿಸುವ ಔಷಧಕ್ಕೆ ಹೋಲುತ್ತದೆ.
ಈ ಬಗ್ಗೆ ರೀಮ್ಯಾನ್ ಸಂಸ್ಥೆಯ ನಿರ್ದೇಶಕರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಕೆಮ್ಮಿನ ಸಿರಪ್ ತಮ್ಮದಕ್ಕೆ ಹೋಲುತ್ತದೆಯಾದರೂ ಅದು ನಕಲಿಯಾಗಿದ್ದಿರಬಹುದು ಎಂದು ಶಂಕಿಸಿದ್ದಾರೆ. ತಮ್ಮ ಸಂಸ್ಥೆಯಲ್ಲಿ ಬಹಳ ಕಠಿಣವಾದ ಕ್ವಾಲಿಟಿ ಕಂಟ್ರೋಲ್ ವ್ಯವಸ್ಥೆ ಇದ್ದು ಕಳಪೆ ದರ್ಜೆಯ ಉತ್ಪನ್ನಕ್ಕೆ ಅವಕಾಶವೇ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ