ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಯು ಮತ್ತು ಆರ್ಜೆಡಿಗಳು ಹಲವು ಸ್ಥಾನಗಳನ್ನು ಗೆದ್ದಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ 243 ಸ್ಥಾನಗಳಲ್ಲಿ ನಿಜಕ್ಕೂ ತನ್ನ ಪ್ರಭಾವ ಉಳಿಸಿಕೊಂಡು ಗೆಲುವು ಸಾಧಿಸಿದ್ದು ಒಬ್ಬ ಅಸಾದುದ್ದೀನ್ ಓವೈಸಿ ಮಾತ್ರ. ಅವರ ಪಕ್ಷ ಸೀಮಾಂಚಲ ಪ್ರದೇಶದ 5 ಸ್ಥಾನಗಳಲ್ಲಿ ಭರ್ಜರಿಯಾಗಿ ಜಯಗಳಿಸಿದೆ.
ಗ್ರಾಂಡ್ ಡೆಮೊಕ್ರಟಿಕ್ ಸೆಕ್ಯುಲರ್ ಫ್ರಂಟ್:
ವಿರೋಧ ಪಕ್ಷಗಳ ಟೀಕೆಗೆ ಕ್ಯಾರೇ ಕೊಡಲಿಲ್ಲ:
ಮತ ವಿಭಜಕ ಎಂದು ದೂರಿದ್ದ ಕಾಂಗ್ರೆಸ್ ಮತ್ತು ಜೆಡಿಯು ಪಕ್ಷಗಳ ಟೀಕೆಯನ್ನು ಓವೈಸಿ ಗಣನೆಗೆ ತೆಗೆದುಕೊಳ್ಳಲಿಲ್ಲ. ಇದುವರೆಗೆ ಆಡಳಿತ ನಡೆಸಿರುವ ಪಕ್ಷಗಳು ಸೀಮಾಂಚಲ ಪ್ರಾಂತ್ಯದ ಕಡೆಗಣನೆ ಮಾಡಿರುವುದಾಗಿ ಹೇಳುತ್ತಲೇ ಈ ಪ್ರಾಂತ್ಯದ ಉದ್ಧಾರಕ್ಕಾಗಿ ತಮ್ಮ ಪಕ್ಷ ಶ್ರಮಿಸುವುದಾಗಿ ಘೋಷಿಸಿದ್ದರು. ಸರ್ಕಾರ ರಚಿಸಲು ಸ್ಥಾನಗಳು ಅಗತ್ಯ ಬಿದ್ದಲ್ಲಿ ಯಾರಿಗೆ ಬೆಂಬಲ ನೀಡುವುದಾಗಿ ಅವರು ತಿಳಿಸಿಲ್ಲ. ಆದರೆ ಜೆಡಿಯು ಮತ್ತು ಆರ್ಜೆಡಿ ಪಕ್ಷಗಳ ಪ್ರಬಲ ಮತಬ್ಯಾಂಕನ್ನು ಓವೈಸಿ ಸೆಳೆದಿರುವುದು ಖಚಿತ ಎಂಬುದು ಸ್ಪಷ್ಟವಾಗಿದೆ. ನಿಧಾನವಾಗಿ ತಮ್ಮ ಪಕ್ಷದ ಬೇರುಗಳನ್ನು ವಿವಿಧ ರಾಜ್ಯಗಳಲ್ಲಿ ನೆಲೆಯೂರಿಸಲು ಅವರು ಸಫಲರಾಗುತ್ತಿದ್ದಾರೆ. ಪಕ್ಷದ ಭವಿಷ್ಯದ ದೃಷ್ಟಿಯಿಂದ ಇದು ಮಹತ್ವದ ಬೆಳವಣಿಗೆ.
ಘಟಬಂಧನಕ್ಕೆ ಮಹಾ ಪೆಟ್ಟು:
ದಲಿತ ಮತ್ತು ಮುಸ್ಲಿಂ ಮತಗಳು ತಮ್ಮ ಬುಟ್ಟಿಗೆ ಅತ್ಯಂತ ಸುಲಭವಾಗಿ ಬಂದುಬೀಳುತ್ತವೆ ಎಂದುಕೊಂಡಿದ್ದ ಆರ್ಜೆಡಿ, ಕಾಂಗ್ರೆಸ್ ಬಂಧನಕ್ಕೆ ಪೆಟ್ಟು ಕೊಟ್ಟವರು ಓವೈಸಿ. ಸೀಮಾಂಚಲ ಪ್ರದೇಶದ ಕಿಶನ್ ಗಂಜ್ನಲ್ಲಿ 70 ಪ್ರತಿಶತ, ಕತಿಹಾರ್ದಲ್ಲಿ 45, ಅರಾರಿಯಾದಲ್ಲಿ 40, ಪುರ್ನಿಯಾದಲ್ಲಿ 35 ಪ್ರತಿಶತ ಈ ಮತಗಳ ಪ್ರಾಬಲ್ಯವಿದೆ. ಕಿಶನ್ ಗಂಜ್ ನಲ್ಲಂತೂ ಮತಗಳು ಮುಸ್ಲಿಂ ಸಮುದಾಯದ್ದೇ ಆಗಿವೆ. ದರ್ಬಾಂಗಾ, ಸಮಸ್ತಿಪುರ್, ಮಧುಬನಿ ವಿಧಾನಸಭಾ ಕ್ಷೇತ್ರಗಳಲ್ಲೂ ಈ ಸಮುದಾಯದ ಮತಗಳು ಕಡಿಮೆಯಿಲ್ಲ. ಈ ಎಲ್ಲ ಪ್ರಾಂತ್ಯಗಳ ಬೈಸಿ, ಅಮರ್, ಕೊಚಧಮನ್, ಬಹದರ್ಗಂಜ್, ಜೋಕಿಹಾತ್ ಕ್ಷೇತ್ರಗಳಲ್ಲಿ ಎಐಎಂಎಐ ಗೆದ್ದಿದೆ. ಅದೂ ಉತ್ತಮ ಅಂತರದೊಂದಿಗೆ. ಓವೈಸಿ ಪಕ್ಷಕ್ಕೆ ಸಂಪೂರ್ಣ ದಲಿತ-ಮುಸ್ಲಿಂ ಮತಗಳು ಬಿದ್ದಿರುವುದು ಪಕ್ಕಾ ಆಗಿದೆ.
ಓವೈಸಿ ಜೈತ್ರಯಾತ್ರೆಯ ಪಿನ್ ಟು ಪಿನ್ ಡಿಟೇಲ್ಸ್ :
ಬೈಸಿ: ಮುಸ್ಲಿಂ ಪ್ರಾಬಲ್ಯದ ಬೈಸಿಯಲ್ಲಿ ಶೇಕಡಾ 31.27 ಮತಗಳು ಓವೈಸಿ ಪಾಲಾಗಿವೆ. ನಿಕಟ ಪ್ರತಿಸ್ಪರ್ಧಿಯಾಗಿ ಬಿಜೆಪಿ ಶೇಕಡಾ 29.11 ಮತ ಗಳಿಸಿದೆ. ಇನ್ನು ಹಿಂದಿರುವ ಆರ್ಜೆಡಿಗೆ 21.4 ಮತಗಳು ಬಿದ್ದಿವೆ. ಒಂದುವೇಳೆ ಎಐಎಂಎಐ ನಿಲ್ಲದಿದ್ದರೆ ಆರ್ಜೆಡಿ ಗೆಲ್ಲಬಹುದಿತ್ತು.
ಬಹಾದೂರ್ಗಂಜ್: ಇಲ್ಲಿ ಓವೈಸಿ ಜಾಕ್ ಪಾಟ್ ಹೊಡೆದಿದ್ದಾರೆ. ವಿಕಾಸ್ಶೀಲ್ ಇನ್ಸಾನ್ ಪಾರ್ಟಿ ಪಡೆದ 23.56 ಮತ್ತು ಕಾಂಗ್ರೆಸ್ ಪಡೆದ ಶೇಕಡಾ17.51 ಮತಗಳ ಒಟ್ಟೂ ಮೊತ್ತಕ್ಕಿಂತ ಹೆಚ್ಚು ಮತಗಳನ್ನು ಓವೈಸಿ ಪಕ್ಷ ಪಡೆದಿದೆ. ಅದು ಪಡೆದ ಮತಗಳು ಶೇಕಡಾ 49.77. ಹೀಗಾಗಿ ಈ ಕ್ಷೇತ್ರದಲ್ಲಿ ಮುಂದೆ ಓವೈಸಿ ಪಾರಮ್ಯ ಗಳಿಸುವುದು ನಿಶ್ಚಿತ.
ಜೊಕಿಹಾತ್: ಎಐಎಂಎಐ ಗೆದ್ದಿರುವ ಇನ್ನೊಂದು ಕ್ಷೇತ್ರ ಜೊಕಿಹಾತ್.ಇಲ್ಲಿಯ ಶೇಕಡಾ 34.22 ಮತಗಳು ಓವೈಸಿ ಪಕ್ಷದ ಪಾಲಾಗಿವೆ. ಎರಡನೆ ದೊಡ್ಡ ಪಕ್ಷವಾಗಿ ರಾಷ್ಟ್ರೀಯ ಜನತಾದಳ ಮತ್ತು ಬಿಜೆಪಿಗಳು ಇದ್ದರೂ ಐದು ಪ್ರತಿಶತ ಮತಗಳಲ್ಲಿ ಎಐಎಂಎಐ ಮುಂದಿದೆ.
ಅರಾರಿಯಾ: ಇಲ್ಲೂ ಓವೈಸಿಯ ಗೆಲುವಿನ ಓಟ ಮುಂದುವರೆದಿದೆ. ಎಐಎಂಎಐ ಪಕ್ಷದ ಅಖತರುಲ್ ಇಮಾನ್ ಶೇಕಡಾ 51.17 ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಶೇಕಡಾ 17.26, ಜನತಾದಳ ಶೇಕಡಾ 22.72 ಮತಗಳಿಗಿಂತ ಇದು ತುಂಬಾ ಹೆಚ್ಚು. ಇದರಿಂದ ಈ ಕ್ಷೇತ್ರದಲ್ಲೂ ಓವೈಸಿ ಕ್ಲೀನ್ ಸ್ವೀಪ್ ಮಾಡಿಕೊಂಡಿರುವುದು ಪಕ್ಕಾ.
ಗೆಲ್ಲಲು ಕಾರಣ?
ಒವೈಸಿ ಪ್ರಚಾರದ ಸಮಾವೇಶಗಳುದ್ದಕ್ಕೂ ದಲಿತ-ಮುಸ್ಲಿಂ ಮತಗಳನ್ನೇ ನೆರವಾಗಿ ಗುರಿಯಾಗಿಸಿಕೊಂಡಿದ್ದರು. ಕಾಂಗ್ರೆಸ್, ಆರ್ಜೆಡಿಗಳಿಗಿಂತ ಹೆಚ್ಚು ಈ ಸಮುದಾಯವನ್ನು ಓವೈಸಿ ಆಕರ್ಷಿಸಿದರು. ಪ್ರಚೋದನಕಾರಿ ಭಾಷಣ ಮತ್ತು ಭರವಸೆಗಳ ಮೂಲಕ ಈ ಸಮುದಾಯ ಮತ್ತು ಕ್ಷೇತ್ರಗಳ ಅಭಿವೃದ್ಧಿ ಮಾಡುವುದಾಗಿ ಘೋಷಿಸಿದರು. ಈ ಕಾರಣದಿಂದ ಕಾಂಗ್ರೆಸ್ ಮತ್ತು ಆರ್ಜೆಡಿಗಳ ಮತಬ್ಯಾಂಕ್ ನೇರವಾಗಿ ಓವೈಸಿ ಜೇಬಿಗಿಳಿಯಿತು. ಇದುವರೆಗಿನ ಸರ್ಕಾರಗಳು ಸೀಮಾಂಚಲ ಪ್ರದೇಶವನ್ನು ತುಳಿದಿವೆ ಎಂದೂ ಅವರು ಆರೋಪ ಮಾಡಿದ್ದರು.
ಮುಂದುವರೆಯಲಿದೆ ಗೆಲುವಿನ ಓಟ?:
ಅಸಾವುದ್ದೀನ್ ಓವೈಸಿ ಈಗಾಗಲೆ 2021ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಅಲ್ಲೂ ನಿರ್ದಿಷ್ಟ ಸಮುದಾಯಗಳೇ ಓವೈಸಿ ಮತಬ್ಯಾಂಕ್ ಆಗಿರಲಿವೆ. ಹೈದರಬಾದ್ ಮೂಲದ ಪಕ್ಷವನ್ನು ಬೆಳೆಸುವ ಓವೈಸಿ ಸ್ಟ್ರಾಟರ್ಜಿ ಹೇಗೆ ಮುಂದುವರೆಯುತ್ತೆ ಎಂಬುದನ್ನು ಕಾದುನೋಡಬೇಕಿದೆ.
-ಗುರುಗಣೇಶ್ ಭಟ್ ಡಬ್ಗುಳಿ
Published On - 3:34 pm, Thu, 12 November 20