ಸಿಂಹಗಳಿಗೆ ಅಕ್ಬರ್, ಸೀತಾ ಎಂದು ಹೆಸರಿಟ್ಟಿದ್ದೇಕೆ?; ಹೆಸರು ಬದಲಿಸಲು ಬಂಗಾಳಕ್ಕೆ ಹೈಕೋರ್ಟ್ ಸೂಚನೆ

|

Updated on: Feb 22, 2024 | 8:16 PM

ಸಿಂಹಕ್ಕೆ ಅಕ್ಬರ್ ಮತ್ತು ಸಿಂಹಿಣಿಗೆ ಸೀತಾ ಎಂದು ಹೆಸರಿಟ್ಟಿದ್ದನ್ನು ಪ್ರಶ್ನಿಸಿ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕಲ್ಕತ್ತಾ ಹೈಕೋರ್ಟ್, ಸಿಂಹ ಮತ್ತು ಸಿಂಹಿಣಿಗೆ ಮರುನಾಮಕರಣ ಮಾಡುವಂತೆ ಗುರುವಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶಿಸಿದೆ. ತ್ರಿಪುರಾದಿಂದ ಪಶ್ಚಿಮ ಬಂಗಾಳಕ್ಕೆ ಕರೆತಂದ ಸಿಂಹಿಣಿಯ ಹೆಸರನ್ನು ಬದಲಾಯಿಸುವಂತೆ ವಿಹಿಂಪ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.

ಸಿಂಹಗಳಿಗೆ ಅಕ್ಬರ್, ಸೀತಾ ಎಂದು ಹೆಸರಿಟ್ಟಿದ್ದೇಕೆ?; ಹೆಸರು ಬದಲಿಸಲು ಬಂಗಾಳಕ್ಕೆ ಹೈಕೋರ್ಟ್ ಸೂಚನೆ
ಸಿಂಹ
Follow us on

ದೆಹಲಿ ಫೆಬ್ರುವರಿ 22: ಸಿಲಿಗುರಿಯ ಬೆಂಗಾಲ್ ಸಫಾರಿ ಪಾರ್ಕ್‌ನಲ್ಲಿ (Bengal Safari Park) ಅಕ್ಬರ್ (Akbar) ಎಂಬ ಹೆಸರಿನ ಸಿಂಹ ಮತ್ತು ಸೀತಾ (Sita) ಎಂಬ ಹೆಸರಿನ ಸಿಂಹಿಣಿಯನ್ನು ಒಂದೇ ಆವರಣದಲ್ಲಿ ಇರಿಸಿದಕ್ಕೆ ವಿಶ್ವ ಹಿಂದೂ ಪರಿಷತ್ (VHP) ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಸಿಂಹಗಳ ಹೆಸರು ವಿವಾದಕ್ಕೆ ಕಾರಣವಾಗಿದ್ದು , ಅರ್ಜಿ ವಿಚಾರಣೆ ನಡೆಸಿದ ಕಲ್ಕತ್ತಾ ಹೈಕೋರ್ಟ್, ಸಿಂಹ ಮತ್ತು ಸಿಂಹಿಣಿಗೆ ಮರುನಾಮಕರಣ ಮಾಡುವಂತೆ ಗುರುವಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶಿಸಿದೆ.  ತ್ರಿಪುರಾದಿಂದ ಪಶ್ಚಿಮ ಬಂಗಾಳಕ್ಕೆ ಕರೆತಂದ ಸಿಂಹಿಣಿಯ ಹೆಸರನ್ನು ಬದಲಾಯಿಸುವಂತೆ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ ಎಂದು ಲೈವ್ ಲಾ ವರದಿ ಮಾಡಿದೆ.

ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರ ಏಕಸದಸ್ಯ ಪೀಠ, ಮೌಖಿಕ ನಿರ್ದೇಶನದಲ್ಲಿ, ವಿವಾದದಿಂದ ದೂರವಿರಲು ಮತ್ತು ಪ್ರಾಣಿಗಳ ಮರುನಾಮಕರಣವನ್ನು ಪರಿಗಣಿಸುವಂತೆ ರಾಜ್ಯವನ್ನು ಕೇಳಿದೆ. ನೀವು ಸಿಂಹಕ್ಕೆ ಹಿಂದೂ ದೇವತೆ, ಮುಸ್ಲಿಂ ಪ್ರವಾದಿ ಅಥವಾ ಕ್ರಿಶ್ಚಿಯನ್ ದೇವರು ಅಥವಾ ಸ್ವಾತಂತ್ರ್ಯ ಹೋರಾಟಗಾರ ಅಥವಾ ನೊಬೆಲ್ ಪ್ರಶಸ್ತಿ ವಿಜೇತರ ಹೆಸರನ್ನು ಇಡುತ್ತೀರಾ?  ನಮ್ಮ ದೇಶದ ಜನರು ಗೌರವಿಸುವ ಹೆಸರನ್ನಿಡುತ್ತೀರಾ?” ಎಂದು ನ್ಯಾಯಮೂರ್ತಿ ಭಟ್ಟಾಚಾರ್ಯ ಪ್ರಶ್ನಿಸಿದರು.

ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸುವ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ತ್ರಿಪುರಾದಿಂದ ತಂದ ಸಿಂಹಗಳಿಗೆ ಅಲ್ಲಿಯೇ ಹೆಸರನ್ನು ಇಡಲಾಗಿದೆ. ರಾಜ್ಯವು ಈಗಾಗಲೇ ಸಿಂಹಗಳಿಗೆ ಮರುನಾಮಕರಣ ಮಾಡಲು ಯೋಚಿಸುತ್ತಿದೆ ಎಂದು ಹೇಳಿದ್ದಾರೆ.

“ದೇವರು, ಪೌರಾಣಿಕ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಅಥವಾ ನೊಬೆಲ್ ಪ್ರಶಸ್ತಿ ವಿಜೇತ”ರ ಹೆಸರುಗಳನ್ನು ಪ್ರಾಣಿಗೆ ಇಡುವುದರ ಹಿಂದಿನ ಕಾರಣವನ್ನು ನ್ಯಾಯಾಲಯವು ಪ್ರಶ್ನಿಸಿದ್ದು ತ್ರಿಪುರ ನೀಡಿದ ಹೆಸರುಗಳನ್ನು ರಾಜ್ಯವು ಏಕೆ ಪ್ರಶ್ನಿಸಲಿಲ್ಲ ಎಂದು ಕೇಳಿದೆ.

“ನೀವು ಕಲ್ಯಾಣ ರಾಜ್ಯ, ಇದು ಜಾತ್ಯತೀತ ರಾಜ್ಯ, ಸೀತಾ ಮತ್ತು ಅಕ್ಬರ್  ಎಂದು ಸಿಂಹಕ್ಕೆ ಹೆಸರಿಟ್ಟು ಯಾಕೆ ವಿವಾದ ಮಾಡಬೇಕು? ಈ ವಿವಾದವನ್ನು ತಪ್ಪಿಸಬೇಕಾಗಿತ್ತು. ಸೀತೆ ಮಾತ್ರವಲ್ಲ, ಸಿಂಹದ ಹೆಸರನ್ನೂ ನಾನು ಬೆಂಬಲಿಸುವುದಿಲ್ಲ. ಅಕ್ಬರ್,  ಅತ್ಯಂತ ದಕ್ಷ ಮತ್ತು ಉದಾತ್ತ ಮೊಘಲ್ ಚಕ್ರವರ್ತಿಯಾಗಿದ್ದರು. ಅತ್ಯಂತ ಯಶಸ್ವಿ ಮತ್ತು ಜಾತ್ಯತೀತ ಮೊಘಲ್ ಚಕ್ರವರ್ತಿ, ಈಗಾಗಲೇ ಹೆಸರಿಟ್ಟಿದ್ದರೆ, ರಾಜ್ಯ ಪ್ರಾಧಿಕಾರವು ಅದನ್ನು ಬದಲಿಸಬೇಕು ಮತ್ತು ವಿವಾದ ತಪ್ಪಿಸಬೇಕು ಎಂದು ನ್ಯಾಯಮೂರ್ತಿ ಭಟ್ಟಾಚಾರ್ಯ ಹೇಳಿದರು.

ಇದನ್ನೂ ಓದಿ: ಅಕ್ಬರ್ ಸಿಂಹ ಜತೆ ಸಿಂಹಿಣಿ ಸೀತಾ; ನಮೀಬಿಯಾ ಚೀತಾಗೂ ಆಗಿತ್ತು ಮರುನಾಮಕರಣ; ಪ್ರಾಣಿಗಳಿಗೆ ಹೆಸರಿಡುವವರಾರು?

ವಿಚಾರಣೆ ವೇಳೆ ನ್ಯಾಯಮೂರ್ತಿ ಭಟ್ಟಾಚಾರ್ಯ ಅವರು ಎಎಜಿ ಅವರಲ್ಲಿ ನೀವು ಯಾವುದೇ ಸಾಕುಪ್ರಾಣಿಗಳನ್ನು ಹೊಂದಿದ್ದೀರಾ? ಅವುಗಳಿಗೆ ದೇಶದ ವೀರರ ಹೆಸರು ಇಟ್ಟಿದ್ದೀರಾ ಎಂದು ಕೇಳಿದ್ದಾರೆ. ವಿಶ್ವ ಹಿಂದೂ ಪರಿಷತ್ ಸಲ್ಲಿಸಿರುವ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಎಂದು ಮರು ವರ್ಗೀಕರಿಸಲು ನ್ಯಾಯಾಲಯವು ನಿರ್ದೇಶಿಸಿದ್ದು ಪಿಐಎಲ್‌ಗಳನ್ನು ಆಲಿಸುವ ಸಾಮಾನ್ಯ ಪೀಠಕ್ಕೆ ಮರುನಿರ್ದೇಶಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ