ಸಂಸತ್​ನ ಚಳಿಗಾಲದ ಅಧಿವೇಶನ ಮುಕ್ತಾಯ: ಅಧಿವೇಶನ ಯಶಸ್ವಿ ಎಂದ ಸರ್ಕಾರ,ಚರ್ಚೆಗಳಿಲ್ಲದೆ ಮಸೂದೆ ಅಂಗೀಕರಿಸಲಾಗಿದೆ ಎಂದ ವಿಪಕ್ಷ

| Updated By: ರಶ್ಮಿ ಕಲ್ಲಕಟ್ಟ

Updated on: Dec 22, 2021 | 8:37 PM

Winter Session of Parliament ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿರೋಧ ಪಕ್ಷದ ನಾಯಕರು ಅಮಾನತುಗೊಂಡ ಸಂಸದರೊಂದಿಗೆ ಭಾರತದ ಸಂವಿಧಾನದ ಪೀಠಿಕೆ ಓದಿ ಸಂಸತ್ ಭವನದ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ರಾಷ್ಟ್ರಗೀತೆಯನ್ನು ಪಠಿಸಿ ಸಂಸದರ ಅಮಾನತು ವಿರುದ್ಧ ಪ್ರತಿಭಟಿಸಿದರು.

ಸಂಸತ್​ನ ಚಳಿಗಾಲದ ಅಧಿವೇಶನ ಮುಕ್ತಾಯ: ಅಧಿವೇಶನ ಯಶಸ್ವಿ ಎಂದ ಸರ್ಕಾರ,ಚರ್ಚೆಗಳಿಲ್ಲದೆ ಮಸೂದೆ ಅಂಗೀಕರಿಸಲಾಗಿದೆ ಎಂದ ವಿಪಕ್ಷ
ಸಂಸತ್ ಭವನದ ಮುಂದೆ ವಿಪಕ್ಷ ನಾಯಕರು
Follow us on

ದೆಹಲಿ: ಮುಂಗಾರು ಅಧಿವೇಶನದಲ್ಲಿ ಅಶಿಸ್ತಿನ ವರ್ತನೆಗಾಗಿ 12 ರಾಜ್ಯಸಭಾ ಸಂಸದರನ್ನು( Rajya Sabha MPs) ಅಮಾನತುಗೊಳಿಸುವುದರೊಂದಿಗೆ ನವೆಂಬರ್ 29 ರಂದು ಪ್ರಾರಂಭವಾದ ಸಂಸತ್​​ನ ಚಳಿಗಾಲದ ಅಧಿವೇಶನವು (Winter Session of Parliament) ಬುಧವಾರದಂದು ನಿಗದಿತ ಸಮಯಕ್ಕಿಂತ ಒಂದು ದಿನ ಮುಂಚಿತವಾಗಿ ಉಭಯ ಸದನಗಳಲ್ಲಿ 11 ಮಸೂದೆಗಳನ್ನು ಅಂಗೀಕರಿಸುವ ಮೂಲಕ ಮುಕ್ತಾಯಗೊಂಡಿತು.  ಲೋಕಸಭೆಯಲ್ಲಿ (lok sabha) ಶೇ 82 ಪ್ರತಿಶತ ಮತ್ತು ರಾಜ್ಯಸಭೆಯಲ್ಲಿ 48 ಪ್ರತಿಶತ ಉತ್ಪಾದಕತೆಯೊಂದಿಗೆ ಸರ್ಕಾರವು ಇದನ್ನು ಯಶಸ್ವಿಯಾಗಿದೆ ಎಂದು ಹೇಳಿದೆ. ವಿಪಕ್ಷಗಳ ಗದ್ದಲದ ನಡುವೆಯೂ ಪೂರ್ವ ಸೂಚನೆ, ಚರ್ಚೆಗಳಿಲ್ಲದೆ ಮತ್ತು ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ಆರೋಪಿಸಿವೆ.  ಅಧಿವೇಶನವು 24 ದಿನಗಳಲ್ಲಿ 18 ಕಲಾಪಗಳನ್ನು ಹೊಂದಿತ್ತು ಎಂದು ಉಭಯ ಸದನಗಳನ್ನು ಮುಂದೂಡಿದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಅಧಿವೇಶನದಲ್ಲಿ,13 ಮಸೂದೆಗಳನ್ನು (ಲೋಕಸಭೆಯಲ್ಲಿ 12 ಮತ್ತು ರಾಜ್ಯಸಭೆಯಲ್ಲಿ ಒಂದು) ಮಂಡಿಸಲಾಯಿತು. ಸಂಸತ್ ನ ಉಭಯ ಸದನಗಳಲ್ಲಿ ಹನ್ನೊಂದು ಮಸೂದೆಗಳನ್ನು ಅಂಗೀಕರಿಸಲಾಯಿತು, ಇದು ವರ್ಷಕ್ಕೆ ಅನುದಾನಕ್ಕಾಗಿ ಪೂರಕ ಬೇಡಿಕೆಗಳಿಗೆ ಸಂಬಂಧಿಸಿದ ಒಂದು ವಿನಿಯೋಗ ಮಸೂದೆಯನ್ನು ಒಳಗೊಂಡಿದೆ. ಈ ಮಸೂದೆಗಳಲ್ಲಿ ಕೃಷಿ ಕಾನೂನು ರದ್ದತಿ ಮಸೂದೆ, 2021, ಅಣೆಕಟ್ಟು ಸುರಕ್ಷತಾ ಮಸೂದೆ, ಸಂತಾನೋತ್ಪತ್ತಿ  ನೆರವು ತಂತ್ರಜ್ಞಾನ (ನಿಯಂತ್ರಣ) ಮಸೂದೆ, ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶರ (ಸೇವೆಯ ವೇತನಗಳು ಮತ್ತು ಷರತ್ತುಗಳು) ತಿದ್ದುಪಡಿ ಮಸೂದೆ, ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಮಸೂದೆ, ಕೇಂದ್ರ ಜಾಗೃತ ಆಯೋಗ (ತಿದ್ದುಪಡಿ) ಮಸೂದೆ ಮತ್ತು ಚುನಾವಣಾ ಕಾನೂನುಗಳು (ತಿದ್ದುಪಡಿ) ಮಸೂದೆ ಅಂಗೀಕಾರವಾಗಿದೆ.

ಜೈವಿಕ ವೈವಿಧ್ಯ (ತಿದ್ದುಪಡಿ) ಮಸೂದೆಯನ್ನು ಹೆಚ್ಚಿನ ಪರಿಶೀಲನೆಗಾಗಿ ಉಭಯ ಸದನಗಳ ಜಂಟಿ ಸಮಿತಿಗೆ ಉಲ್ಲೇಖಿಸಲಾಗಿದೆ. ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಮಸೂದೆ, ವನ್ಯಜೀವಿ (ರಕ್ಷಣೆ) ತಿದ್ದುಪಡಿ ಮಸೂದೆ, ಚಾರ್ಟರ್ಡ್ ಅಕೌಂಟೆಂಟ್‌ಗಳು, ವೆಚ್ಚ ಮತ್ತು ಕೆಲಸದ ಲೆಕ್ಕಪರಿಶೋಧಕರು ಮತ್ತು ಕಂಪನಿ ಕಾರ್ಯದರ್ಶಿಗಳು ( ತಿದ್ದುಪಡಿ) ಮಸೂದೆ, ಬಾಲ್ಯವಿವಾಹ ನಿಷೇಧ (ತಿದ್ದುಪಡಿ) ಮಸೂದೆ ಮತ್ತು ಮಧ್ಯಸ್ಥಿಕೆ ಮಸೂದೆಯನ್ನು ವಿವರವಾದ ಚರ್ಚೆಗಾಗಿ ಸ್ಥಾಯಿ ಸಮಿತಿಗಳಿಗೆ ಕಳುಹಿಸಲಾಗಿದೆ.

ಸರ್ಕಾರವು ವಿವಿಧ ಮಸೂದೆಗಳ ಬಗ್ಗೆ ಸರಿಯಾದ ಚರ್ಚೆಗಳನ್ನು ನಡೆಸುತ್ತಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿದವು. ಸಂಸತ್ ಅಧಿವೇಶನಗಳು ಕೊನೆಗೊಳ್ಳುತ್ತವೆ, ಪ್ರತಿ ದಿನವೂ ಸರ್ಕಾರ ಸಮಯ ವ್ಯರ್ಥ ಮಾಡುತ್ತಿದೆ. ಅವರು ಈಗ ಮಧ್ಯಾಹ್ನದವರೆಗೆ ಪತ್ರಿಕಾಗೋಷ್ಠಿಗಳನ್ನು ನಡೆಸುವ ಮೂಲಕ ಪ್ರಜಾಪ್ರಭುತ್ವದ ಕೊಲೆಯನ್ನು ಸಮರ್ಥಿಸುತ್ತಾರೆ. ಪ್ರತಿಪಕ್ಷಗಳಿಗೆ ಮಾತನಾಡಲು ಕಡಿಮೆ ಅವಕಾಶ ಸಿಕ್ಕಾಗ, ನಾವು ಸರ್ಕಾರಕ್ಕೆ ನಿಯಮ ಪುಸ್ತಕದಿಂದ ಮಾಸ್ಟರ್‌ಕ್ಲಾಸ್ ನೀಡಿದ್ದೇವೆ ”ಎಂದು ಮೇಲ್ಮನೆಯಿಂದ ಅಮಾನತುಗೊಂಡಿರುವ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಮಂಗಳವಾರ ಸದನವನ್ನು ಮುಂದೂಡಿದ ನಂತರ ಟ್ವೀಟ್ ಮಾಡಿದ್ದಾರೆ.


ಏತನ್ಮಧ್ಯೆ, ಸಂಸತ್​​ನ ಕಲಾಪಕ್ಕೆ ಅಡ್ಡಿಪಡಿಸಿದವರು ವಿರೋಧ ಪಕ್ಷದ ಸಂಸದರು ಎಂದು ಸರ್ಕಾರ ಹೇಳಿದೆ. “ಬೆಲೆ ಏರಿಕೆಯ ಸಮಸ್ಯೆಯನ್ನು ಚರ್ಚಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ದುರದೃಷ್ಟವಶಾತ್, ಸಭಾಪತಿ ಮತ್ತು ಸ್ಪೀಕರ್ ಅವಕಾಶ ನೀಡಿದಾಗ ಯಾರೂ ಸಿದ್ಧರಿರಲಿಲ್ಲ. ಅವರ ಉತ್ತರಗಳೊಂದಿಗೆ ಹಣಕಾಸು ಸಚಿವರು ಹಾಜರಿದ್ದರು, ”ಜೋಶಿ ಹೇಳಿದರು.

ಪ್ರತಿಯೊಂದು ವಿಷಯದ ಬಗ್ಗೆಯೂ ಚರ್ಚೆ ನಡೆಸಲು ಸರ್ಕಾರ ಸಿದ್ಧವಿತ್ತು ಎಂದು ಜೋಶಿ ಹೇಳಿದರು. ಶೂನ್ಯ ವೇಳೆಯಲ್ಲಿ ಸದಸ್ಯರು ಎತ್ತಿರುವ ಸಮಸ್ಯೆಗಳನ್ನು ಸರ್ಕಾರ ಪರಿಶೀಲಿಸಬೇಕು ಮತ್ತು ಅವುಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಸೂಚಿಸಿದ್ದರು. ಆದರೆ ಅಡಚಣೆಗಳು ಅದಕ್ಕೆ ಅವಕಾಶ ನೀಡಲಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ,’’ ಎಂದು ಅವರು ಹೇಳಿದ್ದಾರೆ. ಮಸೂದೆಗಳನ್ನು ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಜೋಶಿ ಇದು ಆಧಾರರಹಿತ ಆರೋಪ. ಪ್ರತಿಪಕ್ಷಗಳು ಸದನ ನಡೆಸಲು ಬಿಡಬೇಕಿತ್ತು ಎಂದಿದ್ದಾರೆ.

ಅಧಿವೇಶನದ ಕೊನೆಯ ದಿನದ ಅಪ್ಡೇಟ್


ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿರೋಧ ಪಕ್ಷದ ನಾಯಕರು ಅಮಾನತುಗೊಂಡ ಸಂಸದರೊಂದಿಗೆ ಭಾರತದ ಸಂವಿಧಾನದ ಪೀಠಿಕೆ ಓದಿ ಸಂಸತ್ ಭವನದ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ರಾಷ್ಟ್ರಗೀತೆಯನ್ನು ಪಠಿಸಿ ಸಂಸದರ ಅಮಾನತು ವಿರುದ್ಧ ಪ್ರತಿಭಟಿಸಿದರು.

ಈ ಬಾರಿಯ ಚಳಿಗಾಲದ ಅಧಿವೇಶನ 12 ಸಂಸದರ ಅಮಾನತಿನೊಂದಿಗೆ ಆರಂಭವಾಗಿದೆ. ಮುಂಗಾರು ಅಧಿವೇಶನದಲ್ಲಿ ನಡೆದ ಘಟನೆಯ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ಅವರನ್ನು ಅಮಾನತುಗೊಳಿಸಿದ ನಿರ್ಧಾರ ಸಂಪೂರ್ಣ ತಪ್ಪು. ನಿರುದ್ಯೋಗ, ಹಣದುಬ್ಬರ ಮತ್ತಿತರ ಸಮಸ್ಯೆಗಳ ಕುರಿತು ಚರ್ಚಿಸಲು ನಾವು ಬಯಸಿದ್ದೇವೆ. ಯಾವುದೇ ಚರ್ಚೆಯಿಲ್ಲದೆ ತಕ್ಷಣವೇ ಮಸೂದೆಗಳನ್ನು ಅಂಗೀಕರಿಸುವುದು ಅವರ (ಬಿಜೆಪಿ) ಉದ್ದೇಶವಾಗಿತ್ತು. ಅವರು ಬಹುಮತ ಹೊಂದಿಲ್ಲದ ಕಾರಣ, ಅವರು ಮಸೂದೆಗಳ ಮೇಲೆ ಮತ ಚಲಾಯಿಸಲು ಬಯಸಲಿಲ್ಲ. ಆದ್ದರಿಂದ ಅವರು ಕೆಲವು ವಿರೋಧ ಸದಸ್ಯರನ್ನು ಕಡಿಮೆ ಮಾಡಲು ನಿರ್ಧರಿಸಿದರು. ಅಧಿವೇಶನ ಆರಂಭವಾದ ತಕ್ಷಣ 12 ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದು  ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ನಾವು ಸದನ ನಡೆಸಲು ಬಯಸಿದ್ದೆವು, ಆದರೆ ಅವರು (ವಿರೋಧ ಪಕ್ಷ) ಇಷ್ಟು ದಿನಗಳನ್ನು ವ್ಯರ್ಥ ಮಾಡಿದರು, ಯಾವುದೇ ಚರ್ಚೆಯಿಲ್ಲದೆ ಗದ್ದಲ ಸೃಷ್ಟಿಸಿದರು.ರಾಹುಲ್ ಗಾಂಧಿ ಅರೆಕಾಲಿಕ ರಾಜಕಾರಣಿ, ಬಹುಶಃ ಅವರು ಹೊಸ ವರ್ಷವನ್ನು ಆಚರಿಸಲು ಎಲ್ಲೋ ಹೋಗುತ್ತಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್  ಜೋಶಿ  ಹೇಳಿದ್ದಾರೆ.
ಇದನ್ನೂ ಓದಿ:  ಕೈ ಬಂಧಿಯಾಗಿದೆ, ನಾನು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇನೆ ಎಂದ ಹರೀಶ್ ರಾವತ್; ಉತ್ತರಾಖಂಡ ಕಾಂಗ್ರೆಸ್​​ನಲ್ಲಿ ಎದುರಾಯಿತೇ ಸಂಕಷ್ಟ?

Published On - 8:35 pm, Wed, 22 December 21