ಸಂಸತ್ತಿನ ಚಳಿಗಾಲದ ಅಧಿವೇಶನ ಯಶಸ್ವಿಯಾಗಿ ಪೂರ್ಣಗೊಂಡಿದೆ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

| Updated By: ಸಾಧು ಶ್ರೀನಾಥ್​

Updated on: Dec 23, 2022 | 5:15 PM

Winter session of Parliament: ಡಿ 29 ರವರೆಗೆ 17 ಸಭೆಗಳನ್ನು ನಡೆಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಅಧಿವೇಶನ ಅಗತ್ಯ ಸರ್ಕಾರಿ ವ್ಯವಹಾರಗಳನ್ನು ಪೂರ್ಣಗೊಳಿಸಿದ ಕಾರಣ ಮತ್ತು ಶಿಫಾರಸುಗಳ ಮೇರೆಗೆ ಮೊಟಕುಗೊಳಿಸಲಾಗಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದರು.

ಸಂಸತ್ತಿನ ಚಳಿಗಾಲದ ಅಧಿವೇಶನ ಯಶಸ್ವಿಯಾಗಿ ಪೂರ್ಣಗೊಂಡಿದೆ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಸಂಸತ್ತಿನ ಚಳಿಗಾಲದ ಅಧಿವೇಶನ ತನ್ನ ಉದ್ದೇಶವನ್ನ ಪೂರ್ಣಗೊಳಿಸಿದೆ : ಪ್ರಲ್ಹಾದ್ ಜೋಶಿ
Follow us on

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನವನ್ನ (Winter session of Parliament) ಇಂದು ಶುಕ್ರವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಈ ಅಧಿವೇಶನದಲ್ಲಿ 13 ದಿನಗಳ ಕಾಲ ಕಲಾಪಗಳು ನಡೆದಿದೆ. ಅಧಿವೇಶನದ ಉದ್ದೇಶ ಪೂರ್ಣಗೊಂಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಅಧಿವೇಶನ ಮುಂದೂಡಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು, ಡಿಸೆಂಬರ್ 7 ರಿಂದ ಆರಂಭವಾಗಿದ್ದ ಚಳಿಗಾಲದ ಅಧಿವೇಶನದಲ್ಲಿ 13 ದಿನಗಳು ಲೋಕಸಭೆ ಹಾಗೂ ರಾಜ್ಯಸಭೆ ಕಲಾಪ ನಡೆದವು. ಈ ಅವಧಿಯಲ್ಲಿ ಸಂಸತ್ತಿನ ಉಭಯ ಸದನಗಳಿಂದ ಒಂಬತ್ತು ಮಸೂದೆಗಳು (Bills) ಅಂಗೀಕರಿಸಲ್ಪಟ್ಟಿದ್ದು, ಅಷ್ಟೇ ಅಲ್ಲದೇ ಒಂಬತ್ತು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ ಎಂದರು.

ಲೋಕಸಭೆಯಲ್ಲಿ 7 ಮಸೂದೆಗಳು ಮತ್ತು ರಾಜ್ಯಸಭೆಯಲ್ಲಿ 9 ಮಸೂದೆಗಳು ಅಂಗೀಕರಿಸಲ್ಪಟ್ಟಿವೆ. ಡಿಸೆಂಬರ್ 7ರ ಬುಧವಾರ ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 23, 2022 ರ ಶುಕ್ರವಾರದಂದು ಮುಂದೂಡಲಾಗಿದೆ. 17 ದಿನಗಳ ಅವಧಿಯಲ್ಲಿ 13 ಸಭೆಗಳನ್ನು ನಡೆಸಲಾಗಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.

ಡಿಸೆಂಬರ್ 29 ರವರೆಗೆ 17 ಸಭೆಗಳನ್ನು ನಡೆಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಅಧಿವೇಶನ ಅಗತ್ಯ ಸರ್ಕಾರಿ ವ್ಯವಹಾರಗಳನ್ನು ಪೂರ್ಣಗೊಳಿಸಿದ ಕಾರಣ ಮತ್ತು ಶಿಫಾರಸುಗಳ ಮೇರೆಗೆ ಮೊಟಕುಗೊಳಿಸಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದರು.

ಸಂಸತ್ತಿನ ಉಭಯ ಸದನಗಳ ವ್ಯವಹಾರಗಳ ಸಲಹಾ ಸಮಿತಿ (BAC) ಕ್ರಿಸ್‌ಮಸ್ ಮತ್ತು ವರ್ಷಾಂತ್ಯದ ಆಚರಣೆಗಳ ಹಿನ್ನೆಲೆಯಲ್ಲಿ ಅಧಿವೇಶನ ಮೊಟಕುಗೊಳಿಸುವ ಚರ್ಚಿಸಿತ್ತು. ಸಂಸತ್ತಿನ ಸದಸ್ಯರ ಬೇಡಿಕೆ ಮತ್ತು ಭಾವನೆಗಳನ್ನು ಅರಿತುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಲ್ಹಾದ ಜೋಶಿ ಹೇಳಿದರು.

ಲೋಕಸಭೆ ಶೇ 97%ರಷ್ಟು ಪ್ರತಿಶತ ತನ್ನ ಕಾರ್ಯಕ್ರಮವನ್ನ ಪೂರ್ಣಗೊಳಿಸಿದ್ದು, ರಾಜ್ಯಸಭೆಯಲ್ಲಿ ನೂರಕ್ಕೆ ನೂರರಷ್ಟು ಕಾರ್ಯಕಲಾಪಗಳು ಸಂಪೂರ್ಣಗೊಂಡಿವೆ. ಇದಕ್ಕಾಗಿ ಅಧಿವೇಶದಲ್ಲಿ ಭಾಗಿಯಾಗಿ ಸಹಕರಿಸಿದ ಉಭಯ ಸದನಗಳ ಎಲ್ಲಾ ಸದಸ್ಯರಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿಯವರು ಇದೇ ವೇಳೆ ಧನ್ಯವಾದ ತಿಳಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ