ನವದೆಹಲಿ, ಫೆ.27: ಟಿವಿ9 ನೆಟ್ವರ್ಕ್ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT) ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿಜೆಪಿ ಚಾಣಕ್ಯ ಎಂದೇ ಖ್ಯಾತರಾಗಿರುವ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು ಐಎನ್ಡಿಐಎ (INDIA) ಕುರಿತು ಮಾತನಾಡಿದರು. ಕೌಟುಂಬಿಕ ಆಧಾರಿತ ಮೈತ್ರಿಗಳು ಎಂದಿಗೂ ಉಳಿಯುವುದಿಲ್ಲ ಎಂದು ಹೇಳುವ ಮೂಲಕ ಗಾಂಧಿ ಕುಟುಂಬವನ್ನು ಟೀಕಿಸಿದರು. ಅಲ್ಲದೆ, ತಮ್ಮ ಸ್ವಂತ ಮಗ, ಮಗಳು ಮತ್ತು ಅಳಿಯನನ್ನೇ ಸಿಎಂ-ಪಿಎಂ ಮಾಡಲು ಹೊರಟಿರುವ ಅಧಿಕಾರ ದಾಹದ ಕುಟುಂಬ ಪಕ್ಷಗಳ ಮೈತ್ರಿಯೇ ಐಎನ್ಡಿಐ ಮೈತ್ರಿ ಎಂದು ಹೇಳಿದರು.
ಐಎನ್ಡಿಐ ಮೈತ್ರಿಯಲ್ಲಿರುವ ಯಾವ ಪಕ್ಷಗಳಿಗೂ ಭಾರತದ ಬಗ್ಗೆ ಚಿಂತೆಯಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾ ಗಾಂಧಿ ಅವರಿಗೆ ರಾಹುಲ್ ಗಾಂಧಿಯ ರಾಜಕೀಯ ಜೀವನದ ಬಗ್ಗೆ ಚಿಂತೆಯಾದರೆ, ಉದ್ಧವ್ ಠಾಕ್ರೆ ಕೂಡ ತಮ್ಮ ಮಗ ಮಹಾರಾಷ್ಟ್ರದ ಸಿಎಂ ಆಗಬೇಕೆಂದು ಬಯಸುತ್ತಿದ್ದಾರೆ. ಮಗನನ್ನು ಸಿಎಂ ಪಟ್ಟಕ್ಕೇರಿಸುವುದು ಕೂಡ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಉದ್ದೇಶವಾಗಿದೆ. ಮಮತಾ ಬ್ಯಾನರ್ಜಿ ತನ್ನ ಸೋದರಳಿಯನನ್ನು ಅಧಿಕಾರದಲ್ಲಿ ಇರುವುದನ್ನು ನೋಡಬೇಕೆಂದು ಬಯಸುತ್ತಾರೆ ಮತ್ತು ಲಾಲು ಯಾದವ್ ಕೂಡ ಮಗನಿಗಾಗಿ ಮೈತ್ರಿಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮೈತ್ರಿ ಎಲ್ಲಿ ಉಳಿಯುತ್ತದೆ ಎಂದು ಅಮಿತ್ ಶಾ ಪ್ರಶ್ನಿಸಿದರು.
ಇದನ್ನೂ ಓದಿ: WITT 2024: ದೇಶದ ಪ್ರಗತಿಗೆ ಮುಂಬರುವ ಮೂರನೇ ಅವಧಿ ನಿರ್ಣಾಯಕ: ಪ್ರಧಾನಿ ಮೋದಿ
ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯ ಪ್ರಶ್ನೆಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಮಿತ್ ಶಾ, ಇದರಲ್ಲಿ ವಿರೋಧ ಪಕ್ಷದ ಪಾತ್ರವಿಲ್ಲ. ಬದಲಾಗಿ, ಕಾಂಗ್ರೆಸ್ ತನ್ನೊಳಗೆ ಒಡೆದಿದೆ. ಕಾಂಗ್ರೆಸ್ ಪಕ್ಷದ ಅಸ್ಥಿರತೆಯೇ ಪ್ರತಿ ಬಾರಿ ಇಂತಹ ಪರಿಸ್ಥಿತಿಗೆ ಕಾರಣವಾಗುತ್ತದೆ. ಕಾಂಗ್ರೆಸ್ ಪಕ್ಷ ಮತ್ತು ಐಎನ್ಡಿಐ ಮೈತ್ರಿಕೂಟ ಎರಡರಲ್ಲೂ ಒಡಕು ಇದೆ. ಅಂತಹ ಪರಿಸ್ಥಿತಿಯಲ್ಲಿ, ಅವರ ನಡುವೆ ಸ್ಥಿರತೆ ಹೇಗೆ ಇರುತ್ತದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದು, ಇದರಿಂದ ವಿವಿಧ ರಾಜ್ಯಗಳಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಹಿಮಾಚಲದಲ್ಲಿ ಬಿಜೆಪಿ ಅಥವಾ ಪ್ರತಿಪಕ್ಷಗಳು ಯಾವುದೇ ತಂತ್ರವನ್ನು ಮಾಡಿಲ್ಲ. ಶಾಸಕರ ಅಪಹರಣವಾಗಲೀ ಅಥವಾ ಇನ್ನಾವುದೇ ಪಿತೂರಿಯಾಗಲೀ ಅಲ್ಲಿ ನಡೆಯುತ್ತಿಲ್ಲ ಎಂದು ಹೇಳಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಶಾ, ಕಾಂಗ್ರೆಸ್ನವರು ಯಾವ ರೀತಿಯ ರಾಜಕೀಯ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ