ದೆಹಲಿ ಜನವರಿ 25: ಮಧ್ಯಪ್ರದೇಶದ (Madhya pradesh) ಮಹಿಳೆಯೊಬ್ಬರು ವಿವಾಹವಾದ ಐದು ತಿಂಗಳ ನಂತರ ಪತಿಯಿಂದ ವಿಚ್ಛೇದನ (Divorce) ಕೋರಿದ್ದಾರೆ. ಈ ವಿಚ್ಛೇದನಕ್ಕೆ ಕಾರಣ ಆಕೆಯ ಪತಿ ಹನಿಮೂನ್‌ಗಾಗಿ ಅಯೋಧ್ಯೆಗೆ (Ayodhya)ಕರೆದೊಯ್ದಿದ್ದು. ಮಹಿಳೆಯ ಪ್ರಕಾರ ಆಕೆಯ ಪತಿ ಹನಿಮೂನ್ಗೆ ಗೋವಾ(Goa) ಹೋಗುವುದಾಗಿ ಭರವಸೆ ನೀಡಿದ್ದರು. ಆದರೆ ಆ ಪ್ಲಾನ್ ಬದಲಿಸಿ ಆಕೆಯನ್ನ ಅಯೋಧ್ಯೆ, ವಾರಣಾಸಿಗೆ ಕರೆದೊಯ್ದಿದ್ದಾರೆ.
ಫ್ರೀ ಪ್ರೆಸ್ ಜರ್ನಲ್‌ನ ವರದಿಯ ಪ್ರಕಾರ, ದಂಪತಿ ತಮ್ಮ ಪ್ರವಾಸದಿಂದ ಹಿಂದಿರುಗಿದ 10 ದಿನಗಳ ನಂತರ, ಜನವರಿ 19 ರಂದು ಭೋಪಾಲ್ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತನ್ನ ಪತಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಉತ್ತಮ ಸಂಬಳ ಪಡೆಯುತ್ತಿದ್ದಾರೆ ಎಂದು ಮಹಿಳೆ ವಿಚ್ಛೇದನ ಅರ್ಜಿಯಲ್ಲಿ ತಿಳಿಸಿದ್ದಾರೆ. ಆಕೆಯೂ ದುಡಿಯುವ ಮಹಿಳೆ, ಚೆನ್ನಾಗಿ ಸಂಪಾದಿಸುತ್ತಾಳೆ. ಹೀಗಿರುವಾಗ ಹನಿಮೂನ್ಗೆ ವಿದೇಶಕ್ಕೆ ಹೋಗುವುದು ಅವರಿಗೆ ದೊಡ್ಡ ವಿಷಯವಾಗಿರಲಿಲ್ಲ.
ಯಾವುದೇ ಹಣಕಾಸಿನ ತೊಂದರೆ ಇಲ್ಲದಿದ್ದರೂ, ಮಹಿಳೆಯ ಪತಿ ಅವಳನ್ನು ವಿದೇಶಕ್ಕೆ ಕರೆದೊಯ್ಯಲು ನಿರಾಕರಿಸಿದ್ದು, ಭಾರತದಲ್ಲಿಯೇ ಒಂದು ಸ್ಥಳಕ್ಕೆ ಭೇಟಿ ನೀಡುವಂತೆ ಒತ್ತಾಯಿಸುತ್ತಿದ್ದ. ತಮ್ಮ ಹೆತ್ತವರನ್ನು ನೋಡಿಕೊಳ್ಳಬೇಕು ಎಂದು ಆತ ಹೇಳಿದ್ದ. ನಂತರ ಈ ದಂಪತಿ ತಮ್ಮ ಹನಿಮೂನ್‌ಗಾಗಿ ಗೋವಾ ಅಥವಾ ದಕ್ಷಿಣ ಭಾರತಕ್ಕೆ ಭೇಟಿ ನೀಡುವ ವಿಷಯದಲ್ಲಿ ಒಮ್ಮತದ ನಿರ್ಧಾರ ಕೈಗೊಂಡಿದ್ದರು.
ಆದಾಗ್ಯೂ, ಆತ ತನ್ನ ಹೆಂಡತಿಗೆ ಹೇಳದೆಯೇ ಅಯೋಧ್ಯೆ ಮತ್ತು ವಾರಣಾಸಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದು ಬದಲಾದ ಪ್ರಯಾಣದ ಯೋಜನೆಗಳ ಬಗ್ಗೆ ಪತ್ನಿಗೆ ಒಂದು ದಿನದ ಮುಂಚೆ ತಿಳಿಸಿದ್ದರು. ರಾಮಮಂದಿರ ಪ್ರತಿಷ್ಠಾಪನೆ ಸಮಾರಂಭದ ಮೊದಲು ತಮ್ಮ ತಾಯಿ ನಗರಕ್ಕೆ ಭೇಟಿ ನೀಡಲು ಬಯಸಿದ್ದರಿಂದ ನಾವು ಅಯೋಧ್ಯೆಗೆ ಹೋಗುತ್ತಿದ್ದೇವೆ ಎಂದು ಹೇಳಿ ಇವರು ಪ್ರವಾಸ ಹೊರಟಿದ್ದರು.
ಆ ಸಮಯದಲ್ಲಿ ಪತ್ನಿ ಪ್ರವಾಸಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ ಮತ್ತು ಯಾವುದೇ ತಕರಾರು ಮಾಡದೆ ಗಂಡನ ಜತೆ ಹೊರಟಿದ್ದರು. ಆದರೆ, ಯಾತ್ರಾ ಸ್ಥಳಗಳಿಂದ ಹಿಂತಿರುಗಿದ ಕೂಡಲೇ ಆಕೆ ತನ್ನ ಪತಿಯಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ರಾಮನ ವಿಗ್ರಹ ಅರ್ಪಿಸಿ ಅಯೋಧ್ಯೆಯಿಂದ ಬೆಂಗಳೂರಿಗೆ ಬಂದ ಅರುಣ್ ಯೋಗಿರಾಜ್ಗೆ ಭವ್ಯ ಸ್ವಾಗತ
ತನ್ನ ಪತಿ ತನ್ನ ಕುಟುಂಬ ಸದಸ್ಯರಿಗೆ ತನಗಿಂತ ಹೆಚ್ಚು ಕಾಳಜಿ ತೋರುತ್ತಿದ್ದಾರೆ ಎಂದು ಆಕೆ ಹೇಳಿಕೆಯಲ್ಲಿ ಹೇಳಿಕೊಂಡಿದ್ದಾಳೆ. ಇದೇ ವೇಳೆ ಪತ್ನಿ ಸುಮ್ಮನೆ ಗಲಾಟೆ ಮಾಡುತ್ತಿದ್ದಾಳೆ ಎಂದು ಪತಿ ದೂರಿದ್ದಾರೆ. ಸದ್ಯ ದಂಪತಿಗೆ ಭೋಪಾಲ್ ಕೌಟುಂಬಿಕ ನ್ಯಾಯಾಲಯದಲ್ಲಿ ಕೌನ್ಸೆಲಿಂಗ್ ನಡೆಯುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ