ಮಹಾರಾಷ್ಟ್ರದ ಬ್ಯಾಂಕ್ ಖಾತೆಯೊಂದರಲ್ಲಿ ಲೂಟಿ ಮಾಡಲು ಬಂದು  ಮಹಿಳಾ ಉದ್ಯೋಗಿಯನ್ನು ಹತ್ಯೆಗೈದ ಮಾಜಿ ಮ್ಯಾನೇಜರ್​​

| Updated By: ರಶ್ಮಿ ಕಲ್ಲಕಟ್ಟ

Updated on: Jul 30, 2021 | 4:53 PM

ಈ ಪ್ರಕರಣದಲ್ಲಿ ಬಂಧಿತರಾದ ಇಬ್ಬರು ಆರೋಪಿಗಳಲ್ಲಿ ಒಬ್ಬರಾದ ಅನಿಲ್ ದುಬೆ ಈ ಘಟನೆ ನಡೆದ ಬ್ಯಾಂಕಿನ ಅದೇ ಶಾಖೆಯ ಮಾಜಿ ವ್ಯವಸ್ಥಾಪಕರಾಗಿದ್ದಾರೆ ಎಂದು ವಿರಾರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸುರೇಶ್ ವರದೆ ತಿಳಿಸಿದ್ದಾರೆ.

ಮಹಾರಾಷ್ಟ್ರದ ಬ್ಯಾಂಕ್ ಖಾತೆಯೊಂದರಲ್ಲಿ ಲೂಟಿ ಮಾಡಲು ಬಂದು  ಮಹಿಳಾ ಉದ್ಯೋಗಿಯನ್ನು ಹತ್ಯೆಗೈದ ಮಾಜಿ ಮ್ಯಾನೇಜರ್​​
ಪ್ರಾತಿನಿಧಿಕ ಚಿತ್ರ
Follow us on

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿರಾರ್‌ನಲ್ಲಿರುವ ಖಾಸಗಿ ಬ್ಯಾಂಕಿನ ಮಹಿಳಾ ಉದ್ಯೋಗಿಯೊಬ್ಬರನ್ನು ಇರಿದು ಕೊಲೆ ಮಾಡಿರುವ ಘಟನೆ ವರದಿ ಆಗಿದೆ. ಅದೇ ಶಾಖೆಯ ಮಾಜಿ ಮ್ಯಾನೇಜರ್ ಸೇರಿದಂತೆ ಇಬ್ಬರು ವ್ಯಕ್ತಿಗಳು ನಡೆಸಿದ ದಾಳಿಯಲ್ಲಿ ಓರ್ವ ಮಹಿಳಾ ಸಹೋದ್ಯೋಗಿ ಹತ್ಯೆಯಾಗಿದ್ದು ಇನ್ನೊಬ್ಬರು  ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಐಸಿಐಸಿಐ ಬ್ಯಾಂಕಿನ ವಿರಾರ್ ಪೂರ್ವ ಶಾಖೆಯಲ್ಲಿ ಗುರುವಾರ ರಾತ್ರಿ 8.30 ರ ಸುಮಾರಿಗೆ ಈ ಘಟನೆ ನಡೆದಿದೆ. ಆ ಸಮಯದಲ್ಲಿ ಇಬ್ಬರು ಮಾತ್ರ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅವರು ಹೇಳಿದರು.

ಈ ಪ್ರಕರಣದಲ್ಲಿ ಬಂಧಿತರಾದ ಇಬ್ಬರು ಆರೋಪಿಗಳಲ್ಲಿ ಒಬ್ಬರಾದ ಅನಿಲ್ ದುಬೆ ಈ ಘಟನೆ ನಡೆದ ಬ್ಯಾಂಕಿನ ಅದೇ ಶಾಖೆಯ ಮಾಜಿ ವ್ಯವಸ್ಥಾಪಕರಾಗಿದ್ದಾರೆ ಎಂದು ವಿರಾರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸುರೇಶ್ ವರದೆ ತಿಳಿಸಿದ್ದಾರೆ.

“ಆರೋಪಿಗಳು ಬ್ಯಾಂಕ್‌ಗೆ ಪ್ರವೇಶಿಸಿ ಅದರ ಸಹಾಯಕ ವ್ಯವಸ್ಥಾಪಕರಾಗಿರುವ ಯೋಗಿತಾ ವರ್ತಕ್ ಮತ್ತು ಕ್ಯಾಷಿಯರ್ ಶ್ರದ್ಧಾ ದೇವ್ರುಖ್ಕರ್ ಅವರಿಗೆ ಬೆದರಿಕೆ ಹಾಕಿದ್ದಾರೆ ” ಎಂದು ಅವರು ಹೇಳಿದರು.

ನಗದು ಮತ್ತು ಆಭರಣಗಳನ್ನು ಹಸ್ತಾಂತರಿಸುವಂತೆ ಆರೋಪಿಗಳು ಕೇಳಿದರು ಮತ್ತು ಇಬ್ಬರು ಮಹಿಳೆಯರು ಅಲಾರಂ ಒತ್ತಿ ದರೋಡೆಕೋರರನ್ನು ತಡೆಯಲು ಪ್ರಯತ್ನಿಸಿದಾಗ ಅವರು ಪರಾರಿಯಾಗಲು ಯತ್ನಿಸಿದರು. ಅದೇ ಹೊತ್ತಲ್ಲಿ ಆರೋಪಿಗಳು ವರ್ತಕ್ ಮತ್ತು ದೇವ್ರುಖ್ಕರ್ ಅವರನ್ನು ಇರಿದರು ಎಂದು ಅವರು ಹೇಳಿದರು.

ಜನರು ಅನಿಲ್ ದುಬೆಯನ್ನು ಅಟ್ಟಿಸಿ ಹಿಡಿದಿದ್ದು, ಆತನ ಸಹಚರ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಸುರೇಶ್ ವರದೆ ಹೇಳಿದ್ದಾರೆ. ಜನರು ವರ್ತಕ್ ಬ್ಯಾಂಕಿನೊಳಗಿನ ರಕ್ತದ ಮಡುವಲ್ಲಿ ಬಿದ್ದಿರುವುದನ್ನು ನೋಡಿ ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

“ಅನಿಲ್ ದುಬೆ ಬ್ಯಾಂಕಿನ ಅದೇ ಶಾಖೆಯ ಮಾಜಿ ವ್ಯವಸ್ಥಾಪಕರಾಗಿದ್ದಾರೆ. ಅವರು ₹ 1 ಕೋಟಿ ಸಾಲವನ್ನು ಪಡೆದಿದ್ದರು ಮತ್ತು ಮೊತ್ತವನ್ನು ಮರುಪಾವತಿಸಲು, ಅವರು ಈ ಬ್ಯಾಂಕ್ ಅನ್ನು ಲೂಟಿ ಮಾಡಲು ಸಂಚು ರೂಪಿಸಿದ್ದರು. ಪ್ರಸ್ತುತ ಅವರು ಜಿಲ್ಲೆಯ ನೈಗಾಂವ್‌ನಲ್ಲಿ ಇನ್ನೊಂದು ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ, “ಸುರೇಶ್ ವರದೆ ಹೇಳಿದರು.

ದೇವ್ರುಖ್ಕರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ವರ್ತಕ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ವಿರಾರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302 (ಕೊಲೆ), 307 (ಕೊಲೆ ಯತ್ನ) ಮತ್ತು 397 (ದರೋಡೆ, ಅಥವಾ ದೌರ್ಜನ್ಯ, ಸಾವಿಗೆ ಅಥವಾ ತೀವ್ರ ನೋವಿಗೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.  ಅನಿಲ್ ದುಬೆ ಅವರ ಸಹಚರರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಇದನ್ನೂ ಓದಿ:  ಪೆಗಾಸಸ್‌ ಬಳಸಿ ಇಬ್ಬರು ಪತ್ರಕರ್ತರ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ: ಫ್ರಾನ್ಸ್‌ನ ಸೈಬರ್‌ ಸೆಕ್ಯುರಿಟಿ ಏಜೆನ್ಸಿ

ಇದನ್ನೂ ಓದಿ:  Pegasus Row: ಪೆಗಾಸಸ್ ಬೇಹುಗಾರಿಕೆ ವಿವಾದ; ಮುಂದಿನ ವಾರ ಸುಪ್ರೀಂಕೋರ್ಟ್​ನಿಂದ ವಿಚಾರಣೆ