ಗಿರಿದಿಹ್ ಜುಲೈ 28: ಜಾರ್ಖಂಡ್‌ನ (Jharkhand) ಗಿರಿದಿಹ್ (Giridih)ಜಿಲ್ಲೆಯಲ್ಲಿ 26 ವರ್ಷದ ಮಹಿಳೆಗೆ ಥಳಿಸಿ ಅರೆಬೆತ್ತಲೆ ಸ್ಥಿತಿಯಲ್ಲಿ ಮರಕ್ಕೆ ಕಟ್ಟಿಹಾಕಿದ ಪ್ರಕರಣ ವರದಿ ಆಗಿದೆ. ಗುರುವಾರ ಬೆಳಗ್ಗೆ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ರಾಜ್ಯ ರಾಜಧಾನಿ ರಾಂಚಿಯಿಂದ 170 ಕಿಮೀ ದೂರದಲ್ಲಿರುವ ಸರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಮಹಿಳೆಯು ಒಬ್ಬ ವ್ಯಕ್ತಿ ಜತೆ ಅಕ್ರಮ ಸಂಬಂಧವನ್ನು ಹೊಂದಿದ್ದಳು ಎಂದು ಪ್ರಾಥಮಿಕ ತನಿಖೆ ಸೂಚಿಸುತ್ತದೆ. ಆ ವ್ಯಕ್ತಿ ಇತರ ಮೂವರು ಕುಟುಂಬ ಸದಸ್ಯರೊಂದಿಗೆ ಬುಧವಾರ ರಾತ್ರಿ ಈ ಕೃತ್ಯವೆಸಗಿದ್ದಾನೆ. ನಾಲ್ವರನ್ನೂ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಬಾಗೋದರ್ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ನೌಶಾದ್ ಆಲಂ ಅವರು ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮಣಿಪುರ: ಮಹಿಳೆಯರ ಬೆತ್ತಲೆ ಮೆರವಣಿಗೆಯ ವೈರಲ್ ವಿಡಿಯೊ ಪ್ರಕರಣದ ತನಿಖೆ ಸಿಬಿಐಗೆ ವಹಿಸಿದ ಕೇಂದ್ರ ಸರ್ಕಾರ
ಮನೆಯಿಂದ ಹೊರಗೆ ಬರುವಂತೆ ತನಗೆ ಕರೆ ಬಂದಿತ್ತು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಆಕೆ ಹೊರಗೆ ಬರುವಷ್ಟರಲ್ಲಿ ಮೋಟಾರ್ ಸೈಕಲ್ ನಲ್ಲಿ ಬಂದ ಇಬ್ಬರು ಯುವಕರು ಅಲ್ಲಿದ್ದರು. ಆಕೆಯನ್ನು ಬಲವಂತವಾಗಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ಥಳಿಸಿ, ಬಟ್ಟೆ ಹರಿದು ಮರಕ್ಕೆ ಕಟ್ಟಿ ಹಾಕಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ