
ನವದೆಹಲಿ, ಅಕ್ಟೋಬರ್ 17: ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ವತಿಯಿಂದ ಇಂದು (ಅಕ್ಟೋಬರ್ 16) ಸಂಜೆ ಪಾಲಿಕಾ ಬಜಾರ್ ಬಳಿ ಆಯೋಜಿಸಲಾಗಿದ್ದ ‘ಲೆಹ್ರಾ ದೋ ತಿರಂಗ’ ಪ್ರತಿಭಟನಾ ರ್ಯಾಲಿ ವೇಳೆ ಪೊಲೀಸರ ಮೇಲೆ ನಡೆದಿದೆ ಎನ್ನಲಾದ ಹಲ್ಲೆಯ ದೃಶ್ಯಗಳಿರುವ ವಿಡಿಯೋವನ್ನು ದೆಹಲಿ ಪೊಲೀಸರು ಇಂದು ಬಿಡುಗಡೆ ಮಾಡಿದ್ದಾರೆ. ದೆಹಲಿಯ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 6ರ ಬಳಿ ಯೂಟ್ಯೂಬರ್ ಸೋಗಿನಲ್ಲಿ ಬಂದಿದ್ದ ಮಹಿಳೆಯೊಬ್ಬಳು ಸಿಆರ್ಪಿಎಫ್ ಕಾನ್ಸ್ಟೆಬಲ್ ಗೆ ಕಪಾಳಮೋಕ್ಷ ಮಾಡಿದ್ದಾಳೆ.
ಪ್ರತಿಭಟನೆಯ ಮರೆಯಲ್ಲಿ ಹಲವು ಪೊಲೀಸ್ ಸಿಬ್ಬಂದಿ ಹಾಗೂ ಅರೆಸೇನಾ ಪಡೆಗಳನ್ನು ಗುರಿಯಾಗಿಸಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿವಿಧ ಕ್ಯಾಮೆರಾಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಈ ಹಲ್ಲೆಯಲ್ಲಿ ಭಾಗಿಯಾಗಿರುವ ಪ್ರತಿಭಟನಾಕಾರರು ಮತ್ತು ಯೂಟ್ಯೂಬರ್ಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ‘ಸಿಜೆಪಿ ಪ್ರತಿಭಟನೆಯ ಹಿಂದೆ ಎಲಾನ್ ಮಸ್ಕ್ ಕೈವಾಡ’; ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಗಂಭೀರ ಆರೋಪ
ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶೋಕ್ ರಾಂಕಾ ಅವರ ಅಕ್ರಮ ಬಂಧನ ಖಂಡಿಸಿ, ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ನೇತೃತ್ವದಲ್ಲಿ ಅಕ್ಟೋಬರ್ 16ರಂದು ಸಂಜೆ 5 ಗಂಟೆಗೆ ಕನ್ನಾಟ್ ಪ್ಲೇಸ್ನಲ್ಲಿ ‘ಲೆಹ್ರಾ ದೋ ತಿರಂಗ’ ರ್ಯಾಲಿಗೆ ಕರೆ ನೀಡಲಾಗಿತ್ತು. ಪ್ರತಿಭಟನಾ ಸ್ಥಳವಾಗಿ ರದ್ದುಪಡಿಸಲಾಗಿದ್ದ ಜಂತರ್ ಮಂತರ್ ಪ್ರದೇಶಕ್ಕೆ ಅತಿಕ್ರಮ ಪ್ರವೇಶಕ್ಕೆ ಯತ್ನಿಸಿದ ಆರೋಪದ ಮೇಲೆ ಸೌರವ್ ದಾಸ್ ಮತ್ತು ರಾಂಕಾ ಅವರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ದೆಹಲಿಯಲ್ಲಿ ಬಿಗುವಿನ ವಾತಾವರಣ: ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಬಂಧನ, ಐಸಾ ಮುಖ್ಯಸ್ಥೆ ನೇಹಾ ಬೋರಾ ಬಿಡುಗಡೆ!
ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ:
ವಿವಾದಾತ್ಮಕ ಎಸ್ಐಆರ್ ಪ್ರಕ್ರಿಯೆಯನ್ನು ಹಿಂಪಡೆಯುವಂತೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಮತ್ತು ಇಂಡಿಯ ಒಕ್ಕೂಟವು ಪ್ರತಿಭಟನೆಗಳನ್ನು ನಡೆಸುತ್ತಿವೆ. ಕನ್ನಾಟ್ ಪ್ಲೇಸ್ನಲ್ಲಿ ನಿಗದಿಯಾಗಿದ್ದ ರ್ಯಾಲಿಗೂ ಮುನ್ನವೇ ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಹಾಗೂ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ ಮುಖ್ಯಸ್ಥೆ ನೇಹಾ ಬೋರಾ ಅವರನ್ನು ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ