ಆಂಧ್ರಪ್ರದೇಶ-ತೆಲಂಗಾಣ ಕೃಷ್ಣಾ ನದಿ ನೀರು ಹಂಚಿಕೆ ವಿವಾದ; ನಾನಂತೂ ವಿಚಾರಣೆ ಮಾಡುವುದೇ ಇಲ್ಲ ಎಂದ ಸುಪ್ರೀಂಕೋರ್ಟ್​ ಸಿಜೆಐ

| Updated By: Lakshmi Hegde

Updated on: Aug 02, 2021 | 3:41 PM

ಕೃಷ್ಣಾ ಮತ್ತು ಗೋದಾವರಿ ನದಿಗಳು ಆಂಧ್ರ ಹಾಗೂ ತೆಲಂಗಾಣ ಮೂಲಕ ಹರಿಯುತ್ತವೆ. ಆಂಧ್ರಪ್ರದೇಶ ವಿಭಜನೆ ಆದಾಗಿನಿಂದಲೂ ಈ ನದಿಗಳ ನೀರು ಹಂಚಿಕೆ ವಿಚಾರದಲ್ಲಿ ಪದೇಪದೆ ಘರ್ಷಣೆ ಆಗುತ್ತಲೇ ಇದೆ.

ಆಂಧ್ರಪ್ರದೇಶ-ತೆಲಂಗಾಣ ಕೃಷ್ಣಾ ನದಿ ನೀರು ಹಂಚಿಕೆ ವಿವಾದ; ನಾನಂತೂ ವಿಚಾರಣೆ ಮಾಡುವುದೇ ಇಲ್ಲ ಎಂದ ಸುಪ್ರೀಂಕೋರ್ಟ್​ ಸಿಜೆಐ
ನ್ಯಾಯಮೂರ್ತಿ ರಮಣ
Follow us on

ಕೃಷ್ಣಾ ನದಿ ನೀರು ಹಂಚಿಕೆ (Krishna River Dispute Case) ಸಂಬಂಧಪಟ್ಟು ಆಂಧ್ರಪ್ರದೇಶ (Andhra Pradesh) ಮತ್ತು ತೆಲಂಗಾಣ(Telangana ದ ನಡುವೆ ಎದ್ದಿರುವ ವಿವಾದದ ವಿಚಾರಣೆಯನ್ನು ನಾನು ಮಾಡುವುದಿಲ್ಲವೆಂದು ಸುಪ್ರೀಂಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ (NV Ramana) ಇಂದು ಹೇಳಿದ್ದಾರೆ. ನಾನು ಎರಡೂ ರಾಜ್ಯಗಳಿಗೆ ಸೇರಿದ್ದೇನೆ. ಹಾಗಾಗಿ ಕಾನೂನು ಬದ್ಧವಾಗಿ ನಾನು ಈ ವಿಚಾರಣೆ ಕೈಗೆತ್ತಿಕೊಳ್ಳುವುದಿಲ್ಲ. ಮಧ್ಯಸ್ಥಿಕೆ ಮೂಲಕ ಎರಡೂ ರಾಜ್ಯಗಳು ಪ್ರಸ್ತುತ ವಿಚಾರವನ್ನು ಬಗೆಹರಿಸಿಕೊಳ್ಳಲು ಸಾಧ್ಯವಾದರೆ, ಅದನ್ನೇ ಮಾಡಿ. ನಾವು ಅದಕ್ಕೆ ಸಹಕಾರ ನೀಡುತ್ತೇವೆ. ಹಾಗೊಮ್ಮೆ ವಿಚಾರಣೆ ನಡೆಸಲೇಬೇಕು ಎಂದರೆ ಪ್ರಕರಣವನ್ನು ಸುಪ್ರೀಂಕೋರ್ಟ್​ನ ಮತ್ತೊಂದು ಪೀಠಕ್ಕೆ ನಾನು ವರ್ಗಾಯಿಸುತ್ತೇನೆ ಎಂದಿದ್ದಾರೆ.

ಆಂಧ್ರಪ್ರದೇಶದಿಂದ ತೆಲಂಗಾಣ ಬೇರ್ಪಟ್ಟ ಬಳಿಕ 2015ರಲ್ಲಿ ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧ ಎರಡೂ ರಾಜ್ಯಗಳ ಮಧ್ಯೆ ಒಪ್ಪಂದ ಏರ್ಪಟ್ಟಿದೆ. ಆದರೆ ಈ ಒಪ್ಪಂದದ ನಿಯಮಗಳನ್ನು ತೆಲಂಗಾಣ ಉಲ್ಲಂಘಿಸಿದೆ. ಅದರ ವಿದ್ಯುತ್​ ಉತ್ಪಾದನಾ ಅವಶ್ಯಕತೆಗಳಿಗಾಗಿ, ಕೃಷ್ಣಾ ನದಿ ನೀರನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ, ಮನಸಿಗೆ ಬಂದಂತೆ ಬಳಕೆ ಮಾಡಿಕೊಳ್ಳುತ್ತಿದೆ. ಇದರಿಂದ ನಮ್ಮ ನೀರಾವರಿ ಯೋಜನೆ ಮೇಲೆ ದೊಡ್ಡ ಹೊಡೆತ ಬಿದ್ದಿದೆ ಎಂದು ಆಂಧ್ರಪ್ರದೇಶ ಆರೋಪಿಸಿದೆ.

ಈ ಮಧ್ಯೆ ಎರಡೂ ರಾಜ್ಯಗಳಿಗೂ ಸಾಮಾನ್ಯವಾಗಿ ಇರುವ ಶ್ರೀಶೈಲ, ನಾಗಾರ್ಜುನ, ಸಾಗರ ಮತ್ತು ಪುಲಿಚಿಂತಲಾ ಜಲಾಶಯಗಳನ್ನು ನಿಯಂತ್ರಣಕ್ಕೆ ಪಡೆಯುವಂತೆ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ನಿರ್ದೇಶನ ನೀಡಿ ಎಂದು ಆಂಧ್ರಪ್ರದೇಶ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಇವಿಷ್ಟೂ ಜಲಾಶಯಗಳಿಂದ ತೆಲಂಗಾಣ ಅಳತೆ ಮೀರಿ ನೀರು ಸೆಳೆದುಕೊಳ್ಳುತ್ತಿದೆ ಎಂಬುದು ಆಂಧ್ರದ ಆರೋಪ.

ಕೃಷ್ಣಾ ಮತ್ತು ಗೋದಾವರಿ ನದಿಗಳು ಆಂಧ್ರ ಹಾಗೂ ತೆಲಂಗಾಣ ಮೂಲಕ ಹರಿಯುತ್ತವೆ. ಆಂಧ್ರಪ್ರದೇಶ ವಿಭಜನೆ ಆದಾಗಿನಿಂದಲೂ ಈ ನದಿಗಳ ನೀರು ಹಂಚಿಕೆ ವಿಚಾರದಲ್ಲಿ ಪದೇಪದೆ ಘರ್ಷಣೆ ಆಗುತ್ತಲೇ ಇದೆ. ಈಗ ಎರಡೂ ರಾಜ್ಯಗಳ ಗಡಿಯಲ್ಲಿರುವ ಶ್ರೀಶೈಲ ಅಣೆಕಟ್ಟಿಗೆ ಸಂಬಂಧಪಟ್ಟ ವಿಚಾರದಲ್ಲಿ ವಿವಾದ ಎದ್ದಿದೆ. ಕೃಷ್ಣಾ ನದಿಗೆ ಒಟ್ಟು ಆರು ಅಣೆಕಟ್ಟು ಕಟ್ಟಲಾಗಿದೆ. ಈ ನದಿ ನೀರು ಹಂಚಿಕೆ ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ 34:66 ಪ್ರಮಾಣದಲ್ಲಿ ಇರಬೇಕು ಎಂದು ತಾತ್ಕಾಲಿಕ ಒಪ್ಪಂದ ಹೇಳುತ್ತದೆ. ಅಂದರೆ ತೆಲಂಗಾಣಕ್ಕೆ 299 ಟಿಎಂಸಿ ನೀರು ಹಾಗೂ ಆಂಧ್ರಪ್ರದೇಶಕ್ಕೆ 512 ಟಿಎಂಸಿ ನೀರು ಸೇರಬೇಕು. ಆದರೆ ಈ ಅನುಪಾತವನ್ನು ಮೀರಿ ತೆಲಂಗಾಣ ನೀರು ಪಡೆಯುತ್ತದೆ ಎಂಬುದು ಆಂಧ್ರದ ಆರೋಪ.

ಇದನ್ನೂ ಓದಿ: ಬೆಂಗಳೂರಲ್ಲಿ ಕೆಲಸಕ್ಕಿದ್ದವನು ಮಂಡ್ಯದಲ್ಲಿ ಶವವಾಗಿ ಪತ್ತೆ, ಊರಿಗೆ ಬರ್ತೀನಿ ಅಂದಿದ್ದವನ ಮೃತದೇಹ ಸಿಕ್ತು ನದಿಯಲ್ಲಿ

Won’t Hear Krishna River Case Says Supreme Court CJI NV Ramana