AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಕೆಲಸಕ್ಕಿದ್ದವನು ಮಂಡ್ಯದಲ್ಲಿ ಶವವಾಗಿ ಪತ್ತೆ, ಊರಿಗೆ ಬರ್ತೀನಿ ಅಂದಿದ್ದವನ ಮೃತದೇಹ ಸಿಕ್ತು ನದಿಯಲ್ಲಿ

ಆತ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಬೆಂಗಳೂರು ಸೇರಿಕೊಂಡಿದ್ದ ತಾನಾಯ್ತು ತನ್ನ ಕೆಲಸವಾಯ್ತು ಅಂತಾ ಬದುಕ್ತಿದ್ದ. ರಾತ್ರಿ ಬೆಂಗಳೂರಿನಲ್ಲಿದ್ದುಕೊಂಡು ತನ್ನ ಸಂಬಂಧಿಕರ ಜೊತೆ ಫೋನ್ನಲ್ಲಿ ಮಾತನಾಡಿದ್ದ ಆತ ಬೆಳಗಾಗೋದ್ರೊಳಗೆ ಮಂಡ್ಯದಲ್ಲಿನ ನದಿಯಲ್ಲಿ ಹೆಣವಾಗಿ ಸಿಕ್ಕಿದ್ದ. ಆತನನ್ನು ಹತ್ಯೆ ಮಾಡಿದ್ದಾರೆ ಅಂತಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಲ್ಲಿ ಕೆಲಸಕ್ಕಿದ್ದವನು ಮಂಡ್ಯದಲ್ಲಿ ಶವವಾಗಿ ಪತ್ತೆ, ಊರಿಗೆ ಬರ್ತೀನಿ ಅಂದಿದ್ದವನ ಮೃತದೇಹ ಸಿಕ್ತು ನದಿಯಲ್ಲಿ
ಬೆಂಗಳೂರಲ್ಲಿ ಕೆಲಸಕ್ಕಿದ್ದವನು ಮಂಡ್ಯದಲ್ಲಿ ಶವವಾಗಿ ಪತ್ತೆ, ಊರಿಗೆ ಬರ್ತೀನಿ ಅಂದಿದ್ದವನ ಮೃತದೇಹ ಸಿಕ್ತು ನದಿಯಲ್ಲಿ
TV9 Web
| Updated By: ಆಯೇಷಾ ಬಾನು|

Updated on: Aug 02, 2021 | 3:29 PM

Share

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಅಮೃತೇಶ್ವರ ಹಳ್ಳಿ ಗ್ರಾಮದ 27 ವರ್ಷದ ಸುರೇಶ್ ಎಂಬಾತ ಬೆಂಗಳೂರಲ್ಲಿ ಕೆಲಸ ಮಾಡಿಕೊಂಡಿದ್ದ. ಮೊನ್ನೆಯಷ್ಟೇ ತಂದೆಗೆ ಫೋನ್ ಮಾಡಿ ನಾಡಿದ್ದು ಊರಿಗೆ ಬರ್ತೀನಿ ಅಂತಾ ಬೇರೆ ಹೇಳಿದ್ದ. ಆದ್ರೆ ಮಗ ಬೆಂಗಳೂರಿನಿಂದ ಮನೆಗೆ ಬರ್ತಾನೆ ಅಂತಾ ಕಾದು ಕೂತಿದ್ದ ಮನೆಯವ್ರಿಗೆ ಶಾಕಿಂಗ್ ನ್ಯೂಸ್ ತಂದಿತ್ತು ವಾಟ್ಸಾಪ್ನಲ್ಲಿ ಬಂದಿದ್ದ ಅದೊಂದು ಫೋಟೋ.

ಅತ್ತ ಮಗನಿಗಾಗಿ ತಂದೆ ಹಾಗೂ ಕುಟುಂಬ ಸದಸ್ಯರು ಕಾದುಕೂತಿದ್ರೆ ಇತ್ತ ಸುರೇಶ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದ ಶಿಂಷಾ ನದಿಯಲ್ಲಿ ಸುರೇಶ್ ಮೃತದೇಹ ಪತ್ತೆಯಾಗಿತ್ತು. ಮೊದಲು ಮೃತದೇಹ ಯಾರದ್ದೆಂದು ಸ್ಥಳೀಯರಿಗೆ ಗೊತ್ತಾಗಿರಲಿಲ್ಲ. ಹೀಗಾಗಿ ವಾಟ್ಸಾಪ್ ಮೂಲಕ ಮೃತದೇಹದ ಫೋಟೋ ವೈರಲ್ ಮಾಡಿದಾಗ ಕುಟುಂಬಸ್ಥರು ಸುರೇಶ್ ಗುರುತು ಪತ್ತೆ ಹಚ್ಚಿದ್ದರು. ಫೋಟೋ ನೋಡಿದ ಮಳವಳ್ಳಿ ತಾಲೂಕಿನ ಅಮೃತೇಶ್ವರ ಹಳ್ಳಿ ಗ್ರಾಮದವರು ಸ್ಥಳಕ್ಕೆ ಅಲ್ಲಿಗೆ ಓಡೋಡಿ ಬಂದಿದ್ದರು. ಹೀಗೆ ಬಂದವ್ರೇ, ಮೃತದೇಹದ ಕುತ್ತಿಗೆ, ಕಣ್ಣಿನ ಭಾಗದಲ್ಲಿರೋ ಗಾಯದ ಗುರುತು ನೋಡಿ ಇದು ಸಹಜ ಸಾವಲ್ಲ, ಹತ್ಯೆ ಅಂತಾ ಹೇಳಿದ್ದಾರೆ.

ಮೃತ ಸುರೇಶ್ ಅಮೃತೇಶ್ವರ ಹಳ್ಳಿ ಗ್ರಾಮದ ನಾಗೇಗೌಡ ಹಾಗೂ ದುಂಡೀರಮ್ಮ ದಂಪತಿಯ ಮೂರನೇ ಮಗ. ಈತ ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿದ್ದ. ಅಲ್ಲಿನ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಹೀಗಿರುವಾಗಲೆ ಬಾರ್ನಲ್ಲೇ ಗಲಾಟೆ ನಡೆದು ಕೊಲೆ ನಡೆದಿತ್ತಂತೆ. ಆ ಕೊಲೆ ಕೇಸ್ನಲ್ಲಿ ಸುರೇಶ್ ಆರೋಪಿಯಾಗಿದ್ದ ಎನ್ನಲಾಗಿದೆ. ಇದಾದ ನಂತರ ಸುರೇಶ್ ಬಾರ್ನಲ್ಲಿ ಕೆಲಸ ಬಿಟ್ಟು ಯಶವಂತಪುರದ ಮಾರುಕಟ್ಟೆಯಲ್ಲಿ ಕೆಲಸ ಮಾಡ್ತಿದ್ದ. ಕಳೆದ ವರ್ಷ ಕೊರೊನಾ ಹೆಚ್ಚಾಗಿ ಬೆಂಗಳೂರು ಸಂಪೂರ್ಣ ಲಾಕ್ಡೌನ್ ಆದ ನಂತರ ಊರಿಗೆ ಬಂದು ಸೇರಿಕೊಂಡಿದ್ದ.

ಊರಿನಲ್ಲಿಯೇ ಇದ್ದ ಸುರೇಶ್ ಎರಡು ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಹೋಗಿ ಕೆಲಸ ಮಾಡಲಾರಂಭಿಸಿದ್ದ. ಮೊನ್ನೆಯೂ ಆತ ಕೆಲಸ ನಿರ್ವಹಿಸಿ ರಾತ್ರಿ ರೂಂಗೆ ಬಂದಿದ್ನಂತೆ. ಬೆಂಗಳೂರಿನ ನಂದಿನ ಲೇಔಟ್ನ ರೂಂನಲ್ಲಿ ಸ್ನೇಹಿತರ ಜೊತೆ ಇದ್ದಾಗ ರಾತ್ರಿ 10 ಗಂಟೆ ಸುಮಾರಿಗೆ ಸುರೇಶ್ ಮೊಬೈಲ್ಗೆ ಒಂದು ಕರೆ ಬಂದಿತ್ತಂತೆ. ಆ ಕರೆ ಬಂದ ನಂತರ ರೂಂನಿಂದ ಹೊರಗೆ ಹೋದ ಸುರೇಶ್ ತನ್ನ ಊರಿನ ಸಮೀಪದ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿನ ಶಿಂಷಾ ನದಿಯಲ್ಲಿ ಹೆಣವಾಗಿ ಪತ್ತೆಯಾಗಿದ್ದ.

ರಾತ್ರಿ ಸ್ನೇಹಿತರ ಜೊತೆ ರೂಂನಲ್ಲಿದ್ದ ಸುರೇಶ್ ತನಗೆ ಬಂದ ಫೋನ್ ಕರೆಯಿಂದಾಗಿ ರೂಂನಿಂದ ಹೊರಗೆ ಹೋಗಿದ್ದ. ಆತನ ಪೋನ್ಗೆ ಕರೆ ಮಾಡಿ ಹೊರಗೆ ಕರೆದವರೇ ಸುರೇಶ್ ನನ್ನ ಕೊಂದರಾ ಅನ್ನೋದಿನ್ನೂ ಗೊತ್ತಾಗಿಲ್ಲ. ಅನುಮಾನಾಸ್ಪದ ಸಾವು ಕೇಸ್ ದಾಖಲಿಸಿಕೊಂಡಿರೋ ಕೆ.ಎಂ. ದೊಡ್ಡಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತನಿಖೆಯ ನಂತರವಷ್ಟೇ ಸುರೇಶ್ ಸಾವಿನ ರಹಸ್ಯ ಬಯಲಾಗಲಿದೆ.

ಇದನ್ನೂ ಓದಿ: ಫೈನಾನ್ಷಿಯರ್‌ ಅಜೇಂದ್ರ ಶೆಟ್ಟಿ ಹತ್ಯೆ; ಕಚೇರಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆ