ಜೈಪುರ: ರಾಜಸ್ಥಾನದ (Rajasthan) ರಾಜ್‌ಸಮಂದ್ ಜಿಲ್ಲೆಯ ನಾಥದ್ವಾರ ಪಟ್ಟಣದಲ್ಲಿ ಸ್ಥಾಪಿಸಲಾಗಿರುವ 369 ಅಡಿ ಎತ್ತರದ ಶಿವನ ಪ್ರತಿಮೆಯನ್ನು (Shiva Statue) ಇಂದು (ಶನಿವಾರ) ಲೋಕಾರ್ಪಣೆಯಾಗಿದೆ. ಉದಯಪುರದಿಂದ 45 ಕಿಮೀ ದೂರದಲ್ಲಿ ನಿರ್ಮಿಸಲಾಗಿರುವ ‘ವಿಶ್ವಾಸ್ ಸ್ವರೂಪಂ’ ಹೆಸರಿನ ಈ ಶಿವನ ಪ್ರತಿಮೆಯನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜಸ್ಥಾನ ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಅನಾವರಣಗೊಳಿಸಿದರು. ಈ ಮೂಲಕ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಾಥದ್ವಾರದಲ್ಲಿರುವ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯು ಒಳಗಿನಿಂದ ತುಂಬಾ ದೊಡ್ಡದಾಗಿದೆ. ಅದರೊಳಗೆ ಒಂದು ಸಣ್ಣ ಹಳ್ಳಿಯ ಜನರು ವಾಸಿಸಬಹುದು ಅಷ್ಟು ವಿಶಾಲವಾಗಿದೆ. ಅದರೊಳಗೆ ನಿರ್ಮಿಸಿರುವ ಸಭಾಂಗಣದಲ್ಲಿ 10 ಸಾವಿರ ಜನ ಸೇರಬಹುದು.
ತತ್ ಪದಂ ಸಂಸ್ಥಾನದಿಂದ ಈ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಈ ಸ್ಥಳದಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿ ನಡೆಯಲಿದೆ. ಈ ಶಿವನ ಪ್ರತಿಮೆಯ ಉದ್ಘಾಟನೆಯ ನಂತರ ಇಂದಿನಿಂದ (ಅಕ್ಟೋಬರ್ 29) ನವೆಂಬರ್ 6ರವರೆಗೆ 9 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮವು ಮುಂದುವರಿಯುತ್ತದೆ.
ಇದನ್ನೂ ಓದಿ: Bizarre News: ಮುಕ್ಕಣ್ಣು, ಜಡೆ ಬಾಲದೊಂದಿಗೆ ಜನಿಸಿದ ಕರು; ಶಿವನ ಅವತಾರವೆಂದು ಪೂಜಿಸುತ್ತಿರುವ ಜನರು
9 ದಿನಗಳ ಕಾರ್ಯಕ್ರಮದಲ್ಲಿ ಧರ್ಮ ಪ್ರಚಾರಕ ಮೊರಾರಿ ಬಾಪು ಕೂಡ ರಾಮ್ ಕಥಾವನ್ನು ಪಠಿಸಲಿದ್ದಾರೆ. ಬೆಟ್ಟದ ತುದಿಯಲ್ಲಿ ಸ್ಥಾಪಿಸಲಾದ ಈ ಪ್ರತಿಮೆಯನ್ನು ಧ್ಯಾನದ ಭಂಗಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಪ್ರತಿಮೆಯನ್ನು 20 ಕಿಲೋಮೀಟರ್ ದೂರದಿಂದಲೂ ನೋಡಬಹುದಾಗಿದೆ. ವಿಶೇಷ ದೀಪಗಳಿಂದ ಪ್ರಕಾಶಿಸಲ್ಪಟ್ಟಿರುವುದರಿಂದ ರಾತ್ರಿಯಲ್ಲೂ ಈ ಪ್ರತಿಮೆಯು ಸ್ಪಷ್ಟವಾಗಿ ಗೋಚರಿಸುತ್ತದೆ.
ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯ ವಿಶೇಷತೆಗಳು:
ರಾಜ್‌ಸಮಂದ್ ಜಿಲ್ಲೆಯ ನಾಥದ್ವಾರ ಪಟ್ಟಣದ ಗಣೇಶ್ ಟೆಕ್ರಿಯಲ್ಲಿ ನಿರ್ಮಿಸಲಾದ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯು ಎಷ್ಟು ದೊಡ್ಡದಾಗಿದೆ ಎಂದರೆ ಅದನ್ನು ನೋಡಲು 4 ಗಂಟೆಗಳು ಬೇಕಾಗುತ್ತದೆ. ಈ ಪ್ರತಿಮೆಯೊಳಗೆ ವಿವಿಧ ಎತ್ತರಗಳನ್ನು ತಲುಪಲು 4 ಲಿಫ್ಟ್‌ಗಳಿವೆ. ಇಲ್ಲಿಗೆ ಭೇಟಿ ನೀಡಲು ಬರುವ ಜನರಿಗೆ 20 ಅಡಿ ಎತ್ತರದಿಂದ 351 ಅಡಿವರೆಗೆ ಪ್ರಯಾಣಿಸುವಂತೆ ಮಾಡಲಾಗುವುದು. ಇದರಲ್ಲಿ ಲಿಫ್ಟ್ ಮೂಲಕ 270 ಅಡಿ ಎತ್ತರಕ್ಕೆ ಹೋದರೆ ಶಿವನ ಎಡ ಭುಜದ ಮೇಲಿರುವ ತ್ರಿಶೂಲವನ್ನು ಕಾಣಬಹುದು. ಇಲ್ಲಿಂದ ಪದಮ್ ಉಪ್ವಾನ್ ಅನ್ನು ನೋಡಬಹುದು.
ಇದು ವಿಶ್ವದ ಅತಿ ಎತ್ತರದ ಶಿವನ ವಿಗ್ರಹವಾಗಿದ್ದು, ಇದರಲ್ಲಿ ಲಿಫ್ಟ್‌ಗಳು, ಮೆಟ್ಟಿಲುಗಳು ಮತ್ತು ಭಕ್ತರಿಗಾಗಿ ಸಭಾಂಗಣವನ್ನು ನಿರ್ಮಿಸಲಾಗಿದೆ. ಒಳಗೆ ಹೋಗಲು 4 ಲಿಫ್ಟ್‌ಗಳು ಮತ್ತು 3 ಕಡೆಯಿಂದ ಮೆಟ್ಟಿಲುಗಳಿವೆ. ಇದರ ನಿರ್ಮಾಣಕ್ಕೆ 3 ಸಾವಿರ ಟನ್ ಉಕ್ಕು ಮತ್ತು ಕಬ್ಬಿಣ, 2.5 ಲಕ್ಷ ಕ್ಯೂಬಿಕ್ ಟನ್ ಕಾಂಕ್ರೀಟ್ ಮತ್ತು ಮರಳನ್ನು ಬಳಸಲಾಗಿದ್ದು, ಇದು ಪೂರ್ಣಗೊಳ್ಳಲು 10 ವರ್ಷಗಳನ್ನು ತೆಗೆದುಕೊಂಡಿತು. 2012ರ ಆಗಸ್ಟ್‌ನಲ್ಲಿ ಆಗ ಸಿಎಂ ಆಗಿದ್ದ ಅಶೋಕ್ ಗೆಹ್ಲೋಟ್ ಮತ್ತು ಮೊರಾರಿ ಬಾಪು ಅವರ ಸಮ್ಮುಖದಲ್ಲಿ ಈ ಯೋಜನೆಗೆ ಅಡಿಪಾಯ ಹಾಕಲಾಗಿತ್ತು.
ಈ ಪ್ರತಿಮೆಯ ಸುತ್ತಲಿನ ಸ್ಥಳವು ಬಂಗೀ ಜಂಪಿಂಗ್, ಜಿಪ್ ಲೈನ್ ಮತ್ತು ಗೋ-ಕಾರ್ಟ್‌ನಂತಹ ಚಟುವಟಿಕೆಗಳನ್ನು ಹೊಂದಿದೆ. ಇದು ಪ್ರವಾಸಿಗರಿಗೆ ಫುಡ್ ಕೋರ್ಟ್, ಅಡ್ವೆಂಚರ್ ಪಾರ್ಕ್ ಮತ್ತು ಜಂಗಲ್ ಕೆಫೆಯ ಸೌಲಭ್ಯವನ್ನು ಒದಗಿಸುತ್ತದೆ. ಈ ಪ್ರತಿಮೆಯ ಮೇಲೆ 270ರಿಂದ 280 ಅಡಿ ಎತ್ತರಕ್ಕೆ ಹೋಗಲು ಸಣ್ಣ ಸೇತುವೆಯನ್ನು ನಿರ್ಮಿಸಲಾಗಿದೆ. ಇದರ ವಿಶೇಷತೆ ಏನೆಂದರೆ, ಈ ಸೇತುವೆಯನ್ನು ಕಲ್ಲಿನಿಂದಾಗಲಿ, ಆರ್ಸಿಸಿಯಿಂದಾಗಲಿ ಮಾಡದೆ ಗಾಜಿನಿಂದ ನಿರ್ಮಿಸಲಾಗಿದೆ. 21 ಮೆಟ್ಟಿಲುಗಳನ್ನು ದಾಟಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಅದರಲ್ಲಿ ಒಬ್ಬ ಮನುಷ್ಯ 5ರಿಂದ 10 ಮಹಡಿಗಳನ್ನು ಏರಬಹುದು. ಗಾಜಿನಿಂದ ಮಾಡಿದ ಮೆಟ್ಟಿಲುಗಳಿಂದ ಬಗ್ಗಿದರೆ ನೆಲ ಮಹಡಿಯನ್ನು ನೋಡಬಹುದು. ಶಿವನ ಬಲ ಭುಜವು 280 ಅಡಿ ಎತ್ತರದಲ್ಲಿದೆ. ಇಲ್ಲಿಂದ ನೀವು ಶಿವನ ಸರ್ಪವನ್ನು ಸುಲಭವಾಗಿ ನೋಡಬಹುದು.
Published On - 6:47 am, Sat, 29 October 22