ಚೆನ್ನೈ: ಮಾಡಿದ ಕರ್ಮ ಅವರನ್ನು ಬಿಡುವುದಿಲ್ಲ ಎಂಬ ಮಾತಿದೆ. ತಮಿಳುನಾಡಿನಲ್ಲಿ (Tamil Nadu) ನಡೆದಿರುವ ಘಟನೆಯೊಂದು ಇದಕ್ಕೆ ತಾಜಾ ಉದಾಹರಣೆಯಂತಿದೆ. ಬಲಿ ಕೊಡಲೆಂದು ಕೋಳಿಯನ್ನು ತಂದಿದ್ದ ವ್ಯಕ್ತಿಯೊಬ್ಬರು ಆ ಕೋಳಿಯ ಬದಲು ತಾನೇ ಪ್ರಾಣ ಕಳೆದುಕೊಂಡ ವಿಚಿತ್ರವಾದ ಘಟನೆಯೊಂದು ನಡೆದಿದೆ. ಚೆನ್ನೈನ (Chennai) ಪಲ್ಲಾವರಂನಲ್ಲಿ ಬಲಿಗಾಗಿ ಖರೀದಿಸಿದ ಕೋಳಿಯನ್ನು ಹಿಡಿಯಲು ಹೋದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೊಸದಾಗಿ ನಿರ್ಮಿಸಲಾಗಿದ್ದ ಮನೆಗೆ ದುಷ್ಟರ ದೃಷ್ಟಿ ಬೀಳಬಾರದು ಎಂದು ಬಲಿಗಾಗಿ ಕೋಳಿಯನ್ನು ತರಲಾಗಿತ್ತು. ಆ ಕೋಳಿ ಆ ಮನೆಯ ಕಾರ್ಮಿಕನ ಕೈಯಿಂದ ತಪ್ಪಿಸಿಕೊಂಡು ಓಡಿಹೋಗಿತ್ತು. ಬಲಿಗೆ ತಂದಿದ್ದ ಕೋಳಿಯನ್ನು ಹಿಡಿಯಲು ಯತ್ನಿಸುತ್ತಿದ್ದಾಗ ಹೊಂಡಕ್ಕೆ ಬಿದ್ದು ಆ 70 ವರ್ಷದ ವ್ಯಕ್ತಿ ಸಾವನ್ನಪ್ಪಿರುವ ವಿಚಿತ್ರ ಘಟನೆ ನಡೆದಿದೆ.
70 ವರ್ಷದ ರಾಜೇಂದ್ರನ್ ಮನೆಯ ಯಜಮಾನನ ಆದೇಶದಂತೆ ಗುರುವಾರ ಕೋಳಿ ಬಲಿಯನ್ನು ನೀಡಬೇಕಾಗಿತ್ತು. ಹೀಗಾಗಿ, ಮುಂಜಾನೆ 4 ಗಂಟೆಗೆ ಬಲಿ ಒಡುವ ಸ್ಥಳಕ್ಕೆ, ಅಂದರೆ ಹೊಸ ಮನೆಗೆ ಕೋಳಿಯನ್ನು ತೆಗೆದುಕೊಂಡು ಹೋಗಿದ್ದರು. ಅವರು ಮನೆಯ ಮೂರನೇ ಮಹಡಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಕೋಳಿ ಅವರಿಂದ ತಪ್ಪಿಸಿಕೊಂಡಿತ್ತು. ಆ ಕೋಳಿಯನ್ನು ಹಿಡಿಯಲು ಓಡಿದ ಅವರು ಆ ಮನೆಯಲ್ಲಿ ಲಿಫ್ಟ್ ಅಳವಡಿಸಲು ಅಗೆದಿದ್ದ 20 ಅಡಿ ಆಳದ ಹೊಂಡಕ್ಕೆ ಬಿದ್ದಿದ್ದಾರೆ.
ಇದನ್ನೂ ಓದಿ: ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ: ಅನುಮಾನದ ಭೂತಕ್ಕೆ ಎರಡು ಜೀವ ಬಲಿ
ದಿನಗೂಲಿ ಕಾರ್ಮಿಕನಾಗಿದ್ದ ರಾಜೇಂದ್ರನ್ ಎಷ್ಟು ಹೊತ್ತಾದರೂ ಕೋಳಿಯನ್ನು ವಾಪಾಸ್ ತರದೇ ಇದ್ದಾಗ ಅನುಮಾನಗೊಂಡ ಮನೆ ಮಾಲೀಕ ಟಿ. ಲೋಕೇಶ್ ಎಲ್ಲ ಕಡೆ ಹುಡುಕಾಡಿದ್ದಾರೆ. ಆಗ ಲಿಫ್ಟ್ನ ಹೊಂಡದಲ್ಲಿ ರಕ್ತದ ಮಡುವಿನಲ್ಲಿ ಅವರು ಬಿದ್ದಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಇನ್ನೂ ವಿಚಿತ್ರವೆಂದರೆ ರಕ್ತದ ಬಲಿಗಾಗಿ ತಂದಿದ್ದ ಕೋಳಿ ರಾಜೇಂದ್ರನ್ ಬಳಿ ಏನೂ ಆಗಿಯೇ ಇಲ್ಲವೆನ್ನುವಂತೆ ಆರಾಮಾಗಿ ನಿಂತಿತ್ತು. ತಕ್ಷಣ ರಾಜೇಂದ್ರನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಅಷ್ಟರಲ್ಲಾಗಲೇ ಮೃತಪಟ್ಟಿದ್ದರು.
Published On - 9:30 am, Sat, 29 October 22