ಬಿಜೆಪಿ ನಾಯಕರ ವಿರುದ್ಧ ಸುಳ್ಳು ವರದಿ: ದಿ ವೈರ್ ವಿರುದ್ಧ ಅಮಿತ್ ಮಾಳವೀಯ ಕ್ರಿಮಿನಲ್ ಮೊಕದ್ದಮೆ

ಬಿಜೆಪಿ ನಾಯಕರ ವಿರುದ್ಧ ಸುಳ್ಳು ವರದಿಗಳನ್ನು ಪ್ರಕಟಿಸಿ ತೇಜೋವಧೆ ಮಾಡಿದ್ದಕ್ಕಾಗಿ ‘ದಿ ವೈರ್’ ತಾಣದ ವಿರುದ್ಧ ಕ್ರಿಮಿನಲ್ ಹಾಗೂ ಸಿವಿಲ್ ಮೊಕದ್ದಮೆ ಹೂಡುವುದಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಅಮಿತ್ ಮಾಳವೀಯ ತಿಳಿಸಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ಸುಳ್ಳು ವರದಿ: ದಿ ವೈರ್ ವಿರುದ್ಧ ಅಮಿತ್ ಮಾಳವೀಯ ಕ್ರಿಮಿನಲ್ ಮೊಕದ್ದಮೆ
ಅಮಿತ್ ಮಾಳವೀಯImage Credit source: PTI
Follow us
TV9 Web
| Updated By: Ganapathi Sharma

Updated on: Oct 29, 2022 | 11:03 AM

ನವದೆಹಲಿ: ಬಿಜೆಪಿ (BJP) ನಾಯಕರ ವಿರುದ್ಧ ಸುಳ್ಳು ವರದಿಗಳನ್ನು ಪ್ರಕಟಿಸಿ ತೇಜೋವಧೆ ಮಾಡಿದ್ದಕ್ಕಾಗಿ ‘ದಿ ವೈರ್’ ತಾಣದ ವಿರುದ್ಧ ಕ್ರಿಮಿನಲ್ ಹಾಗೂ ಸಿವಿಲ್ ಮೊಕದ್ದಮೆ ಹೂಡುವುದಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಅಮಿತ್ ಮಾಳವೀಯ (Amit Malviya) ತಿಳಿಸಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ವಕೀಲರ ಬಳಿ ಸಲಹೆ ಕೇಳಿ, ಚರ್ಚಿಸಿದ ಬಳಿಕ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ.

ಏನು ವರದಿ ಮಾಡಿತ್ತು ವೈರ್?

ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂಗಳಲ್ಲಿ ಪ್ರಕಟವಾಗುವ ಬಿಜೆಪಿ ವಿರುದ್ಧದ ಸಂದೇಶಗಳನ್ನು ಡಿಲೀಟ್ ಮಾಡುವುದಕ್ಕಾಗಿ ಅಮಿತ್ ಮಾಳವೀಯ ಅವರಿಗೆ ಮೆಟಾ ಕಂಪನಿ ಉಭಯ ಸಾಮಾಜಿಕ ಜಾಲತಾಣಗಳ ಆ್ಯಕ್ಸೆಸ್ ನೀಡಿದೆ ಎಂದು ‘ವೈರ್’ ವರದಿ ಮಾಡಿತ್ತು. ಈ ವರದಿಯನ್ನು ಪುಷ್ಟೀಕರಿಸುವುದಕ್ಕಾಗಿ ನಕಲಿ ಇ-ಮೇಲ್​ಗಳನ್ನು ಬಳಸಿ ಸಾಕ್ಷಿ ಸೃಷ್ಟಿಸಲಾಗಿತ್ತು. ಇದು ಸುಳ್ಳೆಂಬುದು ಬಹಿರಂಗವಾದ ಬಳಿಕ ‘ವೈರ್’ ಆ ವರದಿಯನ್ನು ಹಿಂಪಡೆದಿತ್ತು ಎಂದು ಮೂಲಗಳು ಹೇಳಿವೆ.

ಈ ಎಲ್ಲ ಬೆಳವಣಿಗೆಗಳು ಆಗುತ್ತಿರುವಾಗಲೂ ಅಮಿತ್ ಮಾಳವೀಯ ಮೌನವಾಗಿದ್ದರು. ಗುರುವಾರ ಟ್ವೀಟ್ ಮಾಡಿದ ಅವರು, ಕಾನೂನು ಕ್ರಮದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೋಡಿಹಳ್ಳಿ ಚಂದ್ರಶೇಖರ್​ ಆಪ್ ಸೇರ್ಪಡೆ: ವ್ಯಂಗ್ಯವಾಡಿದ ಬಿಜೆಪಿ ನಾಯಕ ಅಮಿತ್ ಮಾಳವೀಯ

‘ನನ್ನ ವಕೀಲರ ಬಳಿ ಚರ್ಚಿಸಿ ಸಲಹೆ ಪಡೆದ ಬಳಿಕ ‘ದಿ ವೈರ್’ ವಿರುದ್ಧ ಕ್ರಿಮಿನಲ್ ಹಾಗೂ ಸಿವಿಲ್ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇನೆ. ಫೋರ್ಜರಿ ಮಾಡಿದ ದಾಖಲೆಗಳ ಮೂಲಕ ನನ್ನ ಘನತೆಗೆ ಹಾಗೂ ವರ್ಚಸ್ಸಿಗೆ ಧಕ್ಕೆ ಮಾಡಿರುವುದಕ್ಕೆ ಪರಿಹಾರ ಭರಿಸಿಕೊಡುವಂತೆ ನಿರ್ದೇಶಿಸಬೇಕೆಂದು ಕೋರಿ ನ್ಯಾಯಾಲಯದಲ್ಲಿ ಸಿವಿಲ್ ದಾವೆಯನ್ನೂ ಹೂಡಲಿದ್ದೇನೆ’ ಎಂದು ಅಮಿತ್ ಮಾಳವೀಯ ಗುರುವಾರ ಟ್ವೀಟ್ ಮಾಡಿದ್ದಾರೆ.

ವೈರ್ ವರದಿಗೆ ಬಿಜೆಪಿಯಿಂದ ವ್ಯಕ್ತವಾಗಿತ್ತು ತೀವ್ರ ವಿರೋಧ

ಅಮಿತ್ ಮಾಳವೀಯ ಹಾಗೂ ಪಕ್ಷದ ನಾಯಕರ ವಿರುದ್ಧ ‘ದಿ ವೈರ್’ ಪ್ರಕಟಿಸಿದ್ದ ಸುಳ್ಳು ವರದಿಗೆ ಬಿಜೆಪಿ ನಾಯಕರಿಂದ ಹಾಗೂ ಬೆಂಬಲಿಗರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರದಲ್ಲಿ, ‘ವೈರ್’ ಪ್ರಕಟಿಸಿರುವ ವರದಿ ಸುಳ್ಳು ಹಾಗೂ ನಕಲಿ ದಾಖಲೆಗಳಿಂದ ಕೂಡಿದ್ದು ಎಂಬುದು ಬಹಿರಂಗವಾಯಿತು. ಆ ಬಳಿಕ ‘ವೈರ್’ ವರದಿಗಾಗಿ ವಿಷಾದ ವ್ಯಕ್ತಪಡಿಸಿತ್ತು ಎಂದು ಮೂಲಗಳು ಹೇಳಿವೆ.

ಇದೇ ಮೊದಲಲ್ಲ

ಬಿಜೆಪಿ ನಾಯಕರ ವಿರುದ್ಧ ‘ದಿ ವೈರ್’ ಇಂಥ ವರದಿಗಳನ್ನು ಪ್ರಕಟಿಸಿರುವುದು ಇದೇ ಮೊದಲಲ್ಲ. ಈ ಹಿಂದೆ ಅಮಿತ್ ಮಾಳವೀಯ ಅವರನ್ನು ಗುರಿಯಾಗಿಸಿ ‘ಟೆಕ್ ಫಾಗ್’ ಎಂಬ ವರದಿಯನ್ನೂ ಪ್ರಕಟಿಸಿತ್ತು. ‘ಆರತಿ ಶರ್ಮಾ’ ಎಂಬ ಹೆಸರಿನಲ್ಲಿ ಮಾಡಿದ್ದ ಟ್ವೀಟ್​ಗಳ ಆಧಾರದಲ್ಲಿ ವರದಿಯನ್ನು ಪ್ರಕಟಿಸಿದ್ದ ‘ವೈರ್’, ಮಾಳವೀಯ ತೇಜೋವಧೆ ಮಾಡಿತ್ತು ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ