ಅಂಗಿ ಎತ್ತಿ ಅಸಭ್ಯವಾಗಿ ಮೈಮುಟ್ಟಿದ್ದರು; ಅವಕಾಶ ಸಿಕ್ಕಾಗೆಲ್ಲಾ ಕಿರುಕುಳ ನೀಡುತ್ತಿದ್ದರು: ಬ್ರಿಜ್ ಭೂಷಣ್ ವಿರುದ್ದ ಮಹಿಳಾ ಕುಸ್ತಿಪಟುಗಳ ಆರೋಪ

|

Updated on: Sep 24, 2023 | 3:18 PM

Brij Bhushan's Case: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರಿಂದ ಅವಕಾಶ ಸಿಕ್ಕಾಗೆಲ್ಲ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿತ್ತು ಎಂದು ದೆಹಲಿ ಪೊಲೀಸರು ಸ್ಥಳೀಯ ಕೋರ್ಟ್ ಮುಂದೆ ಹೇಳಿಕೆ ನೀಡಿದ್ದಾರೆ. ಬ್ರಿಜ್ ಭೂಷಣ್​ಗೆ ತಾನೇನು ಮಾಡುತ್ತಿದ್ದೇನೆ ಎಂಬುದು ಗೊತ್ತಿತ್ತು. ಕುಸ್ತಿಪಟುಗಳ ಮಾನಹರಣ ಮಾಡುವುದು ಅವರ ಉದ್ದೇಶವಾಗಿತ್ತು ಎಂದು ಹೇಳಿರುವ ಸರ್ಕಾರಿ ಪರ ವಕೀಲರು, ಕುಸ್ತಿ ಒಕ್ಕೂಟದ ಅಧ್ಯಕ್ಷರ ವಿರುದ್ಧ ಮೂರು ಸಾಕ್ಷ್ಯಗಳಿರುವುದನ್ನು ತಿಳಿಸಿದ್ದಾರೆ.

ಅಂಗಿ ಎತ್ತಿ ಅಸಭ್ಯವಾಗಿ ಮೈಮುಟ್ಟಿದ್ದರು; ಅವಕಾಶ ಸಿಕ್ಕಾಗೆಲ್ಲಾ ಕಿರುಕುಳ ನೀಡುತ್ತಿದ್ದರು: ಬ್ರಿಜ್ ಭೂಷಣ್ ವಿರುದ್ದ ಮಹಿಳಾ ಕುಸ್ತಿಪಟುಗಳ ಆರೋಪ
ಬ್ರಿಜ್ ಭೂಷಣ್
Follow us on

ನವದೆಹಲಿ, ಸೆಪ್ಟೆಂಬರ್ 24: ಮಹಿಳಾ ಕುಸ್ತಿಪಟುಗಳ ಮಾನಹರಣ (Outraging Modesty) ಎಸಗಿದ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಅವಕಾಶ ಸಿಕ್ಕಾಗೆಲ್ಲಾ ಕಿರುಕುಳ ಎಸಗುತ್ತಿದ್ದರು ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Singh) ಆರು ಜನ ಮಹಿಳಾ ಕುಸ್ತಿಪಟುಗಳು ಆರೋಪಗಳನ್ನು ಮಾಡಿದ್ದು ದೆಹಲಿ ಪೊಲೀಸರು ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ದೆಹಲಿಯ ರೋಸ್ ಅವೆನ್ಯೂ ಕೋರ್ಟ್​ನಲ್ಲಿ ಇದರ ವಿಚಾರಣೆ ನಡೆಯುತ್ತಿದೆ. ಈ ವೇಳೆ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ (Additonal Public Prosecutor) ಅತುಲ್ ಶ್ರೀವಾಸ್ತವ ಅವರು ಬಿಜೆಪಿ ಸಂಸದರೂ ಆಗಿರುವ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರಬಲ ಸಾಕ್ಷ್ಯಗಳಿರುವ ಬಗ್ಗೆ ಕೋರ್ಟ್ ಗಮನಕ್ಕೆ ತಂದಿದ್ದಾರೆ.

‘ಬ್ರಿಜ್ ಭೂಷಣ್ ಅವರಿಗೆ ತಾನೇನು ಮಾಡುತ್ತಿದ್ದೇನೆ ಎಂಬುದು ಚೆನ್ನಾಗಿ ತಿಳಿದಿತ್ತು. ಕುಸ್ತಿಪಟುಗಳ ಮಾನಹರಣ ಮಾಡಬೇಕೆಂಬುದು ಅವರ ಉದ್ದೇಶವಾಗಿತ್ತು’ ಎಂದು ಹೇಳಿದ ಅತುಲ್ ಶ್ರೀವಾಸ್ತವ, ಬ್ರಿಜ್ ಭೂಷಣ್ ವಿರುದ್ಧ ಮೂರು ರೀತಿಯ ಸಾಕ್ಷ್ಯಗಳಿರುವುದನ್ನು ತಿಳಿಸಿದ್ದಾರೆ. ಚಾರ್ಜ್ ಶೀಟ್ ಸಲ್ಲಿಸಲು ಈ ಮೂರು ಸಾಕ್ಷ್ಯಾಧಾರಗಳು ಸಾಕಾಗುತ್ತವೆ. ಇವುಗಳ ಪೈಕಿ ಲಿಖಿತ ದೂರು ಒಂದು ಸಾಕ್ಷ್ಯವಾಗಿದೆ. ಸಿಆರ್​ಪಿಸಿಯ ಸೆಕ್ಷನ್ 161 ಮತ್ತು 164 ಅಡಿಯಲ್ಲಿ ದಾಖಲಿಸಿಕೊಳ್ಳಲಾಗಿರುವ ಹೇಳಿಕೆಗಳು ಇನ್ನೆರಡು ಸಾಕ್ಷ್ಯಾಧಾರಗಳಾಗಿವೆ.

ಇದನ್ನೂ ಓದಿ: ದೇವೇಗೌಡರ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಿದ್ದೆ, ಈಗಲೂ ವಿರೋಧಿಸುತ್ತೇನೆ ಎಂದ ಉಮಾ ಭಾರತಿ; ಕಾರಣ ಏನು ಗೊತ್ತಾ?

ಶರ್ಟ್ ಎತ್ತಿ ಮೈ ಮುಟ್ಟಿದ್ರು, ಬಲವಂತವಾಗಿ ತಬ್ಬಿದ್ರು…

ಆರು ಮಹಿಳಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಮಾಡಿದ್ದಾರೆ. ತಜಕಿಸ್ತಾನದಲ್ಲಿ ನಡೆದ ಟೂರ್ನಿಯ ವೇಳೆ, ಬ್ರಿಜ್ ಭೂಷಣ್ ರೂಮಿಗೆ ಕರೆದುಕೊಂಡು ಹೋಗಿ ಅಸಭ್ಯವಾಗಿ ಆಲಿಂಗಿಸಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತವಾದಾಗ ತಾನು ತಂದೆಯ ರೀತಿಯಲ್ಲಿ ಅಪ್ಯಾಯಮಾನವಾಗಿ ತಬ್ಬಿದ್ದು ಎಂದು ಹೇಳಿ ನುಣುಚಿಕೊಳ್ಳಲು ಯತ್ನಿಸಿದ್ದಾರೆ.

ಹಾಗೆಯೇ, ಅನುಮತಿ ಇಲ್ಲದೇ ಅಂಗಿಯನ್ನು ಮೇಲೆತ್ತಿ ಅಸಹ್ಯವಾಗಿ ತನ್ನ ಹೊಟ್ಟೆ ಮುಟ್ಟಿದರೆಂದು ಕುಸ್ತಿಪಟುವೊಬ್ಬರು ಆರೋಪ ಮಾಡಿದ್ದಾರೆ.

ಭಾರತದ ಹೊರಗೆ ನಡೆದ ಘಟನೆಯ ವಿಚಾರಣೆ ದೆಹಲಿ ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ?

ಬ್ರಿಜ್ ಭೂಷಣ್ ಪರ ವಕೀಲರಾದ ರಾಜೀವ್ ಮೋಹನ್ ಅವರು ದೆಹಲಿ ಕೋರ್ಟ್​ಗೆ ಈ ಪ್ರಕರಣದ ವ್ಯಾಪ್ತಿ ಬರುವುದಿಲ್ಲ ಎಂದು ತಿಳಿಸಿದ್ದರು. ಆರೋಪ ಮಾಡಲಾಗಿರುವ ಘಟನೆಗಳು ಭಾರತದ ಹೊರಗೆ ನಡೆದಿರುವುದರಿಂದ ದೆಹಲಿ ಕೋರ್ಟ್​ನಲ್ಲಿ ವಿಚಾರಣೆ ನಡೆಸಲು ಅನುಮೋದನೆ ಪಡೆದಿರಬೇಕು ಎಂಬುದು ಬ್ರಿಜ್ ಭೂಷಣ್ ವಕೀಲರ ವಾದವಾಗಿತ್ತು.

ಇದನ್ನೂ ಓದಿ: ಅದಾನಿ ಭೇಟಿ ಮಾಡಿದ ಶರದ್ ಪವಾರ್; ರಾಹುಲ್ ಗಾಂಧಿಯವರ ಮಾತು ಯಾರೂ ಕೇಳುವುದಿಲ್ಲ ಎಂದು ಕಾಲೆಳೆದ ಬಿಜೆಪಿ

ಆದರೆ, ಈ ವಾದವನ್ನು ಸರ್ಕಾರಿ ವಕೀಲರು ತಳ್ಳಿಹಾಕಿದರು. ಎಲ್ಲಾ ಅಪರಾಧಗಳು ಭಾರತದ ಹೊರಗೆ ನಡೆದಿದ್ದರೆ ಅನುಮೋದನೆ ಪಡೆಯಬೇಕಿತ್ತು. ಆದರೆ, ಕೆಲ ಅಪರಾಧ ಕೃತ್ಯಗಳು ದೆಹಲಿಯಲ್ಲೂ ಘಟಿಸಿವೆಯಾದ್ದರಿಂದ ದೆಹಲಿ ಕೋರ್ಟ್​ನಲ್ಲಿ ವಿಚಾರಣೆಗೆ ಸ್ಯಾಂಕ್ಷನ್ ಪಡೆಯುವ ಅವಶ್ಯಕತೆ ಇಲ್ಲ ಎಂದು ಅತುಲ್ ಶ್ರೀವಾಸ್ತವ ಮನವರಿಕೆ ಮಾಡಿದರು.

ಆರು ಬಾರಿ ಸಂಸದರಾಗಿರುವ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಜೂನ್ 15ರಂದು ದೆಹಲಿ ಪೊಲೀಸರು ಐಪಿಸಿ ಸೆಕ್ಷನ್ 354, 354ಎ, 354ಡಿ ಮತ್ತು 506 ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಬ್ರಿಜ್ ಬೂಷಣ್ ಸಿಂಗ್ ಅವರಿಗೆ ಹೆಚ್ಚುವರಿ ಮುಖ್ಯ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸಪಾಲ್ ಜಮೀನು ನೀಡಿದ್ದಾರೆ. ಆದರೆ, ಕುಸ್ತಿ ಒಕ್ಕೂಟದ ಹೆಚ್ಚುವರಿ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ಅಮಾನತುಗೊಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ