ದೇವೇಗೌಡರ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಿದ್ದೆ, ಈಗಲೂ ವಿರೋಧಿಸುತ್ತೇನೆ ಎಂದ ಉಮಾ ಭಾರತಿ; ಕಾರಣ ಏನು ಗೊತ್ತಾ?
Uma Bharti Unhappy with Women's Reservation Bill: ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಬಿಜೆಪಿ ನಾಯಕಿ ಉಮಾಭಾರತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಮತ್ತು ವಿವಿಧ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕೊಡಲು ರೂಪಿಸಲಾಗಿರುವ ಈ ಮಸೂದೆಯಲ್ಲಿ ಓಬಿಸಿ ವರ್ಗದ ಮಹಿಳೆಯರಿಗೆ ಶೇ. 27ರಷ್ಟು ಕೋಟಾ ಕಲ್ಪಿಸಲಾಗಿಲ್ಲ ಎಂದು ಉಮಾಭಾರತಿ ಆಕ್ಷೇಪಿಸಿದ್ದಾರೆ.
ಭೋಪಾಲ್, ಸೆಪ್ಟೆಂಬರ್ 24: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವೆ ಉಮಾ ಭಾರತಿ ಅವರು ಮಹಿಳಾ ಮೀಸಲಾತಿ ಮಸೂದೆ (Women’s Reservation Bill) ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಈ ಮಸೂದೆಯಲ್ಲಿ ಮಹಿಳೆಯರ ಮೀಸಲಾತಿಯಲ್ಲಿ ಶೇ. 27ರಷ್ಟು ಪ್ರಮಾಣವನ್ನು ಒಬಿಸಿ ವರ್ಗದ ಮಹಿಳೆಯರಿಗೆ ವಿಶೇಷ ಕೋಟಾ ನೀಡಲಾಗಿಲ್ಲ ಎಂದು ಉಮಾ ಭಾರತಿ (Uma Bharti) ಆಕ್ಷೇಪಿಸಿದ್ದಾರೆ. ರಾಮಜನ್ಮಭೂಮಿ ಹೋರಾಟಗಳ ಮೂಲಕ ಪ್ರಖರ ವಾಗ್ಮಿ ಎಂದು ದೇಶವ್ಯಾಪಿ ಹೆಸರು ಮಾಡಿದ್ದ ಉಮಾಭಾರತಿ ಈ ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಿರುವ ಕೆಲವೇ ಮಂದಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಆಡಳಿತ ಸರ್ಕಾರ ಮಂಡಿಸಿದ್ದ ಈ ಮಸೂದೆಗೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಅನುಮೋದನೆ ಸಿಕ್ಕಿದೆ.
ದೇವೇಗೌಡರ ಆಡಳಿತದಲ್ಲೇ ಮಂಡನೆಯಾಗಿದ್ದ ಈ ಮಸೂದೆಯನ್ನು ವಿರೋಧಿಸಿದ್ದ ಉಮಾ ಭಾರತಿ
ಮಹಿಳಾ ಮೀಸಲಾತಿ ಮಸೂದೆಯಲ್ಲಿ ಹಿಂದುಳಿದ ವರ್ಗಗಳಿಗೆ ವಿಶೇಷ ಕೋಟ ನೀಡಲಾಗಿಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಉಮಾ ಭಾರತಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, 1996ರಲ್ಲಿ ಮೊದಲ ಬಾರಿಗೆ ಈ ಮಸೂದೆ ಮಂಡನೆಯಾಗಿದ್ದ ಸಂದರ್ಭವನ್ನು ಸ್ಮರಿಸಿದ್ದಾರೆ.
ಇದನ್ನೂ ಓದಿ: ಒಂಬತ್ತು ವಂದೇಭಾರತ್ ರೈಲುಗಳಿಗೆ ಚಾಲನೆ ನೀಡಿದ ಮೋದಿ; ಬೆಂಗಳೂರು ಹೈದರಾಬಾದ್ ರೈಲು ವೇಳಾಪಟ್ಟಿ, ದರ ಇತ್ಯಾದಿ ವಿವರ
‘ದೇವೇಗೌಡ ಜೀ ಅವರು 1996ರಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದಾಗ ನಾನು ಒಬಿಸಿ ಕೋಟಾ ಸೇರಿಸುವಂತೆ ಪ್ರಸ್ತಾಪಿಸಿದ್ದೆ. ಆವತ್ತು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಒಬಿಸಿ ಕೋಟಾ ಇಲ್ಲದ ಈ ಮಸೂದೆಗೆ ಒಮ್ಮತದಿಂದ ಅನುಮೋದನೆ ನೀಡಿ ಬೆಂಬಲಿಸಿದ್ದವು’ ಎಂದು ಪತ್ರಿಕಾಗೋಷ್ಠಿಯಲ್ಲಿ ಉಮಾಭಾರತಿ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿರುವ ಉಮಾಭಾರತಿ ಅವರು ತಮ್ಮ ಅಭಿಪ್ರಾಯವನ್ನು ಸರ್ಕಾರ ಕಡೆಗಣಿಸಿದರೆ ಮಧ್ಯಪ್ರದೇಶದ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಮರಳಿ ಅಧಿಕಾರ ಸಿಗುವುದು ಕಷ್ಟ ಎಂದು ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಒಬಿಸಿ ವರ್ಗಗಳ ಪ್ರಮಾಣ ಶೇ. 50ಕ್ಕಿಂತಲೂ ತುಸು ಹೆಚ್ಚಿದೆ. ಹೀಗಾಗಿ, ಹಿಂದುಳಿದ ವರ್ಗಗಳ ಮತಗಳು ಇಲ್ಲಿ ನಿರ್ಣಾಯಕ ಎನಿಸಿವೆ. ಉಮಾಭಾರತಿ ಪ್ರಖರ ಹಿಂದುತ್ವವಾದಿಯಾದರೂ ಒಬಿಸಿ ವರ್ಗದ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಇದನ್ನೂ ಓದಿ: ಪಿಎಂ ಮನ್ ಕೀ ಬಾತ್ನಲ್ಲಿ ಹೊಯ್ಸಳರ ದೇವಸ್ಥಾನ, ಜಿ20, ಚಂದ್ರಯಾನ ಪ್ರಸ್ತಾಪಿಸಿದ ನರೇಂದ್ರ ಮೋದಿ
ಕಳೆದ ಕೆಲ ವರ್ಷಗಳಿಂದ ಬಿಜೆಪಿಯಲ್ಲಿ ನಿರ್ಲಕ್ಷಿತವಾಗಿರುವ ಉಮಾ ಭಾರತಿ ಅವರು ರಾಜಕೀಯ ನೆಲೆ ಕಂಡುಕೊಳ್ಳಲು ಈ ರೀತಿ ವಿರೋಧ ಮಾಡುತ್ತಿದ್ದಾರೆ ಎನ್ನುವ ಟೀಕೆಗಳಿವೆ. ಮಾಜಿ ಸಿಎಂ ಆಗಿರುವ ಅವರು ಈ ಮಾತುಗಳನ್ನು ಅಲ್ಲಗಳೆಯುತ್ತಾರೆ. ಮಧ್ಯಪ್ರದೇಶ ರಾಜಕೀಯದಿಂದ ಸದ್ಯಕ್ಕೆ ದೂರ ಇದ್ದೇನಾದರೂ, ಆ ರಾಜ್ಯದಲ್ಲಿ ತನಗೆ ನೆಲೆ ಇದ್ದೇ ಇದೆ ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ