ಕೆನಡಾದಲ್ಲಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಹತ್ಯೆಗೆ ಕರೆ; ಗುರುದ್ವಾರದ ಪೋಸ್ಟರ್ ತೆಗೆಯಲು ಆದೇಶ
Canada Gurudwara Poster controversy: ಕೆನಡಾದ ಸರೇ ನಗರದ ಗುರುದ್ವಾರವೊಂದರಲ್ಲಿ ಅಂಟಿಸಲಾದ ಪೋಸ್ಟರ್ಗಳು ಕೆನಡಾ ಅಧಿಕಾರಿಗಳನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿವೆ. ಮೂವರು ಭಾರತೀಯ ರಾಜತಾಂತ್ರಿಕ ಅಧಿಕಾರಿಗಳನ್ನು ಕೊಲ್ಲುವಂತೆ ಈ ಪೋಸ್ಟರ್ಗಳಲ್ಲಿ ಕರೆ ನೀಡಲಾಗಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಸರೇ ನಗರದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಈ ಪೋಸ್ಟರ್ಗಳನ್ನು ತೆಗೆಯುವಂತೆ ಗುರುದ್ವಾರಕ್ಕೆ ಆದೇಶಿಸಿದ್ದಾರೆ. ಹಾಗೆಯೇ, ಧ್ವನಿವರ್ಧಕ ಬಳಸಿ ಯಾವುದೇ ಉಗ್ರತ್ವದ ಪ್ರಕಟಣೆಗಳನ್ನು ಮಾಡದಂತೆಯೂ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ಕೆನಡಾ, ಸೆಪ್ಟೆಂಬರ್ 24: ಭಾರತ ಮತ್ತು ಕೆನಡಾ ಮಧ್ಯೆ ಸಂಬಂಧಕ್ಕೆ ಹಿನ್ನಡೆ ಬರುತ್ತಿರುವ ಹೊತ್ತಿನಲ್ಲೇ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಖಲಿಸ್ತಾನೀಗಳು ಕೆನಡಾ ನೆಲದಲ್ಲಿ ಉಗ್ರ ನಿಲುವು ಮುಂದುವರಿಸಿದ್ದಾರೆ. ಕೆನಡಾದ ಸರೇ ನಗರದ ಗುರುದ್ವಾರವೊಂದರಲ್ಲಿ ಅಂಟಿಸಲಾದ ಪೋಸ್ಟರ್ಗಳು ಕೆನಡಾ ಅಧಿಕಾರಿಗಳನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿವೆ. ಮೂವರು ಭಾರತೀಯ ರಾಜತಾಂತ್ರಿಕ ಅಧಿಕಾರಿಗಳನ್ನು (Indian diplomats) ಕೊಲ್ಲುವಂತೆ ಈ ಪೋಸ್ಟರ್ಗಳಲ್ಲಿ ಕರೆ ನೀಡಲಾಗಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಸರೇ ನಗರದ (Canada Surrey city) ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಈ ಪೋಸ್ಟರ್ಗಳನ್ನು ತೆಗೆಯುವಂತೆ ಗುರುದ್ವಾರಕ್ಕೆ ಆದೇಶಿಸಿದ್ದಾರೆ. ಹಾಗೆಯೇ, ಧ್ವನಿವರ್ಧಕ ಬಳಸಿ ಯಾವುದೇ ಉಗ್ರತ್ವದ ಪ್ರಕಟಣೆಗಳನ್ನು ಮಾಡದಂತೆಯೂ ಸೂಚಿಸಿದ್ದಾರೆ ಎಂದು ನ್ಯೂಸ್18 ವಾಹಿನಿ ವರದಿ ಮಾಡಿದೆ.
ಕೆನಡಾದ ಈ ಗುರುದ್ವಾರದಲ್ಲಿ ಪೋಸ್ಟರ್ ಹಾಕಿದ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದ ವಸ್ತುವಾಗುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಈ ಕ್ರಮ ಕೈಗೊಳ್ಳದೇ ವಿಧಿ ಇರಲಿಲ್ಲ. ಕೆನಡಾದಲ್ಲಿ ಖಲಿಸ್ತಾನೀ ಚಟುವಟಿಕೆ ತೀವ್ರವಾಗಿದ್ದು, ಭಾರತೀಯ ಸಮುದಾಯಗಳ (ಹಿಂದೂ ಧರ್ಮೀಯರು) ಮೇಲೆ ಮತ್ತು ಸ್ಥಳಗಳ ಮೇಲೆ ಇತ್ತೀಚೆಗೆ ದಾಳಿ ಘಟನೆಗಳು ಹೆಚ್ಚಾಗಿವೆ. ಆದರೂ ಕೂಡ ಖಲಿಸ್ತಾನೀ ಬೆಂಬಲಿಗರನ್ನು ನಿಯಂತ್ರಿಸಲು ಕೆನಡಾ ಸರ್ಕಾರ ವಿಫಲವಾಗಿದೆ ಎಂಬ ಆರೋಪ ಇದೆ.
ಇದನ್ನೂ ಓದಿ: ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕುರಿತು ಪ್ರಧಾನಿ ಟ್ರುಡೊ ಹೇಳಿಕೆಯ ಹಿಂದೆ ಗುಪ್ತಚರ: ಅಮೆರಿಕ ರಾಯಭಾರಿ
ಇದೇ ವಿಚಾರವಾಗಿ ಕೆನಡಾ ಸರ್ಕಾರ ವಿರುದ್ಧ ಭಾರತಕ್ಕೆ ಅಸಮಾಧಾನವೂ ಇತ್ತು. ಖಲಿಸ್ತಾನೀ ಟೈಗರ್ ಫೋರ್ಸ್ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ನನ್ನು ಜೂನ್ 18ರಂದು ಸರೆಯ ಗುರುದ್ವಾರದ ಹೊರಗೆ ಹತ್ಯೆಗೈಯಲಾಗಿತ್ತು. ಹಲವು ಭಾರತ ವಿರೋಧಿ ಕೃತ್ಯಗಳಲ್ಲಿ ಬೇಕಾಗಿದ್ದ ಈತನ ತಲೆದಂಡಕ್ಕೆ 10 ಲಕ್ಷ ರೂ ಬಹುಮಾನ ಇಡಲಾಗಿತ್ತು. ಈತನ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟ್ಗಳ ಹಸ್ತ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಇತ್ತೀಚೆಗೆ ಗಂಭೀರ ಆರೋಪ ಮಾಡಿದ್ದರು. ಅಷ್ಟೇ ಅಲ್ಲ, ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಛಾಟಿಸಿದ್ದರು.
ಕೆನಡಾದ ಈ ನಿರ್ಧಾರಕ್ಕೆ ಪ್ರತಿಯಾಗಿ ಭಾರತವೂ ದೆಹಲಿಯಲ್ಲಿರುವ ಕೆನಡಾ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಛಾಟಿಸಿದೆ. ಕೆನಡಿಯನ್ನರಿಗೆ ವೀಸಾ ಸೆವೆ ರದ್ದುಗೊಳಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ