West Bengal Elections 2021| ಬಿಜೆಪಿ ಜನರ ಧ್ವನಿ ಹತ್ತಿಕ್ಕುತ್ತಿದೆ; ಟಿಎಂಸಿಗೆ ಸೇರ್ಪಡೆಗೊಂಡ ಬಿಜೆಪಿ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಆರೋಪ

|

Updated on: Mar 13, 2021 | 1:45 PM

ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಬಿಜೆಪಿ ಸಹಮತದಲ್ಲಿ ನಂಬಿಕೆ ಹೊಂದಿತ್ತು. ಆದರೆ ಈಗ ಬಿಜೆಪಿ ಜನರ ಧ್ವನಿ‌ ಹತ್ತಿಕ್ಕುತ್ತಿದೆ.‌ ಇದೇ ಕಾರಣಕ್ಕೆ ಅಕಾಲಿದಳ ಮತ್ತು ಬಿಜೆಡಿ ಪಕ್ಷಗಳು ಬಿಜೆಪಿಯ ಮೈತ್ರಿ ತೊರೆದಿವೆ. ಈಗ ಬಿಜೆಪಿ ಜೊತೆಗೆ ಯಾವ ಪಕ್ಷಗಳು ತಾನೇ ಇವೆ? ಎಂದು ಯಶ್ವಂತ್ ಸಿನ್ಹಾ ಕಿಡಿಕಾರಿದ್ದಾರೆ.

West Bengal Elections 2021| ಬಿಜೆಪಿ ಜನರ ಧ್ವನಿ ಹತ್ತಿಕ್ಕುತ್ತಿದೆ; ಟಿಎಂಸಿಗೆ ಸೇರ್ಪಡೆಗೊಂಡ ಬಿಜೆಪಿ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಆರೋಪ
ಟಿಎಂಸಿ ಸೇರ್ಪಡೆಯಾದ ಬಿಜೆಪಿ ಮಾಜಿ ನಾಯಕ
Follow us on

ಕೋಲ್ಕತ್ತಾ: ಬಂಗಾಳದ ರಾಜಕೀಯ ವಿಧಾನಸಭಾ ಚುನಾವಣೆಯ ನೆಪದಲ್ಲಿ ಕುತೂಹಲಕಾರಿ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಬಿಜೆಪಿ ಮತ್ತು ಟಿಎಂಸಿ ನಡುವೆ ಪಕ್ಷಾಂತರ ಪರ್ವವೇ ನಡೆಯುತ್ತಿದೆ. ಇದೀಗ ಮಾಜಿ ಕೇಂದ್ರ ಸಚಿವ, ಮಾಜಿ ಬಿಜೆಪಿ ನಾಯಕ ಯಶ್ವಂತ್ ಸಿನ್ಹಾ ಟಿಎಂಸಿ ಸೇರ್ಪಡೆಗೊಂಡಿದ್ದಾರೆ.  ಟಿಎಂಸಿ ಸೇರಿದ ನಂತರ ಪ್ರತಿಕ್ರಿಯಿಸಿದ ಅವರು, ‘ದೇಶದಲ್ಲಿ ಹಿಂದೆಂದೂ ಕಂಡಿರದ ಪರಿಸ್ಥಿತಿ ಇದೆ. ಪ್ರಜಾಪ್ರಭುತ್ವದ ಶಕ್ತಿಯನ್ನು ಜಾಗೃತವಾಗಿ ಇಡುವ ಸಂಸ್ಥೆಗಳು ದುರ್ಬಲವಾಗಿವೆ. ಮುಖ್ಯವಾಗಿ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯೂ ದುರ್ಬಲವಾಗಿದೆ’ ಎಂದು ಪರೋಕ್ಷವಾಗಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರವನ್ನು ಟೀಕಿಸಿದ್ದಾರೆ.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ನಂತರ ಬಿಜೆಪಿ ಪಕ್ಷದಲ್ಲಿ ಯಶ್ವಂತ್ ಸಿನ್ಹಾ ಮೂಲೆಗುಂಪಾಗಿದ್ದರು. 83 ವರ್ಷದ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಿಜೆಪಿಯಲ್ಲಿ ಮೂಲೆಗುಂಪಾಗಿದ್ದಕ್ಕಾಗಿ ಅಸಮಧಾನ ಹೊಂದಿದ್ದ ಅವರು 2018ರಲ್ಲಿ ಬಿಜೆಪಿ ತೊರೆದಿದ್ದರು. ಅಲ್ಲದೇ, ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ಆಡಳಿತವನ್ನು ಹೋಲಿಸಿ ಈಗಿನ ಸರ್ಕಾರವನ್ನು ಟೀಕಿಸುತ್ತಿದ್ದರು.

ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಬಿಜೆಪಿ ಸಹಮತದಲ್ಲಿ ನಂಬಿಕೆ ಹೊಂದಿತ್ತು. ಆದರೆ ಈಗ ಬಿಜೆಪಿ ಜನರ ಧ್ವನಿ‌ ಹತ್ತಿಕ್ಕುತ್ತಿದೆ.‌ ಇದೇ ಕಾರಣಕ್ಕೆ ಅಕಾಲಿದಳ ಮತ್ತು ಬಿಜೆಡಿ ಪಕ್ಷಗಳು ಬಿಜೆಪಿಯ ಮೈತ್ರಿ ತೊರೆದಿವೆ. ಈಗ ಬಿಜೆಪಿ ಜೊತೆಗೆ ಯಾವ ಪಕ್ಷಗಳು ತಾನೇ ಇವೆ? ಎಂದು ಅವರು ಕಿಡಿಕಾರಿದ್ದಾರೆ.

ಟಿಎಂಸಿ ಸೇರ್ಪಡೆಗೂ ಮುನ್ನ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಯಶ್ವಂತ್ ಸಿನ್ಹಾ ಭೇಟಿಯಾಗಿ ಸಮಾಲೋಚನೆ ನಡೆಎಇದ್ದಾರೆ,. ಅವರು ಟಿಎಂಸಿ ಸೇರುವ ಕಾರ್ಯಕ್ರಮದಲ್ಲಿ ಟಿಎಂಸಿ ನಾಯಕರಾದ ಡೆರೆಕ್ ಓಬ್ರಿಯಾನ್, ಸುದಿಪ್ ಬಂಡೋಪಾಧ್ಯಾಯ, ಸುಬ್ರತಾ ಮುಖರ್ಜಿ ಉಪಸ್ಥಿತರಿದ್ದರು.

ಚುನಾವಣೆ ಯಾವಾಗ?
ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 294 ಸೀಟುಗಳಿರುವ ವಿಧಾನಸಭೆಗೆ ಮಾರ್ಚ್ 27ರಿಂದ ಏಪ್ರಿಲ್29ರವರೆಗೆ ಚುನಾವಣೆ ನಡೆಯಲಿದ್ದು ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಈ ಬಾರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ನಡುವೆ ಸ್ಪರ್ಧೆ ನಡೆಯಲಿದೆ. ಈ ಚುನಾವಣೆಯಲ್ಲಿ 200ಕ್ಕಿಂತಲೂ ಹೆಚ್ಚು ಸೀಟು ಗೆಲ್ಲಲು ಬಿಜೆಪಿ ಹವಣಿಸುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಟಿಎಂಸಿಯಿಂದ ಹಲವಾರು ಸದಸ್ಯರು ಬಿಜೆಪಿಗೆ ಸೇರಿರುವುದರಿಂದ ಮತ್ತು ಟಿಎಂಸಿ ನಾಯಕರ ಮೇಲೆ ಭ್ರಷ್ಟಾಚಾರ ಆರೋಪಗಳಿರುವುದರಿಂದ ಈ ಚುನಾವಣೆ ಟಿಎಂಸಿ ಪಾಲಿಗೆ ನಿರ್ಣಾಯಕವಾಗಲಿದೆ. ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಪೈಪೋಟಿ ನಡೆಸುತ್ತಿದ್ದವು. ಆದರೆ ಈ ಬಾರಿ ಬಿಜೆಪಿ ಮತ್ತು ಟಿಎಂಸಿ ನಡುವಿನ ಸ್ಪರ್ಧೆ ಎಂದೇ ಪಶ್ಚಿಮ ಬಂಗಾಳ ಚುನಾವಣೆಯನ್ನು ಬಿಂಬಿಸಲಾಗುತ್ತದೆ.

ಈಗಾಗಲೇ ಚುನಾವಣಾ ಪ್ರಚಾರಗಳು ಭರದಿಂದ ನಡೆಯುತ್ತಿದ್ದು ಬಿಜೆಪಿ ಮತ್ತು ಟಿಎಂಸಿ ನಾಯಕರು ಪರಸ್ಪರ ಟೀಕೆ-ವಾಗ್ವಾದಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಗೋಲ್ ಕೀಪರ್ ಆಗಲಿದ್ದು, ಬೇರೆ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಒಂದೇ ಒಂದು ಗೋಲು ಬಾರಿಸಲು ಬಿಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅದೇ ವೇಳೆ ಮೆರವಣಿಗೆ, ರೋಡ್ ಶೋಗಳನ್ನು ನಡೆಸುತ್ತಾ ಅಬ್ಬರದ ಪ್ರಚಾರ ನಡೆಸುತ್ತಿರುವ ಬಿಜೆಪಿ, ಪಶ್ಚಿಮ ಬಂಗಾಳವನ್ನು ಸೋನರ್ ಬಾಂಗ್ಲಾ ಮಾಡುವುದಾದಿ ಭರವಸೆ ನೀಡಿದೆ. ಮಮತಾ ಬ್ಯಾನರ್ಜಿ ಅವರ ಅಧಿಕಾರವಧಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳನ್ನು ಎತ್ತಿ ತೋರಿಸಿ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಘೋಷಣೆಗಳ ಪ್ರವಾಹ: ಬಿಜೆಪಿಗೆ ಬೇಕಾಯ್ತು ಇಟಲಿ ಮೂಲದ ಹಾಡಿನ ಸಹಾಯ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿಯ ಮೊಣಕಾಲು, ಬಲ ಭುಜ ಮತ್ತು ಕುತ್ತಿಗೆಗೆ ಗಾಯಗಳಾಗಿವೆ: ವೈದ್ಯರ ಹೇಳಿಕೆ

Published On - 1:40 pm, Sat, 13 March 21