ಮೂರು ಸ್ಥಳಗಳಲ್ಲಿ ಧರಣಿನಿರತ ರೈತರ ತೆರವುಗೊಳಿಸಿದ ಯೋಗಿ ಸರ್ಕಾರ; ದೆಹಲಿ ಹಿಂಸಾಚಾರದ ಬೆನ್ನಲ್ಲೇ ಕ್ರಮ

ಧರಣಿ ನಿರತರನ್ನು ಅಲ್ಲಿಂದ ತೆರವುಗೊಳಿಸಲು ಪೊಲೀಸ್​ ಪ್ರಯೋಗ ಆಗಲಿಲ್ಲ. ಅನುಮತಿ ಹಿಂಪಡೆಯುತ್ತಿದ್ದಂತೆ ರೈತರೇ ಜಾಗ ಖಾಲಿ ಮಾಡಿ ಹೋಗಿದ್ದಾರೆ. ಆದರೆ ಇವರೊಂದಿಗೆ ಇದ್ದ ಕೆಲವರು ಗಲಾಟೆ ಶುರು ಮಾಡಲು ಪ್ರಯತ್ನ ಮಾಡಿದರು ಎಂದು ಎಡಿಎಂ ತಿಳಿಸಿದ್ದಾರೆ.

ಮೂರು ಸ್ಥಳಗಳಲ್ಲಿ ಧರಣಿನಿರತ ರೈತರ ತೆರವುಗೊಳಿಸಿದ ಯೋಗಿ ಸರ್ಕಾರ; ದೆಹಲಿ ಹಿಂಸಾಚಾರದ ಬೆನ್ನಲ್ಲೇ ಕ್ರಮ
Updated By: ಸಾಧು ಶ್ರೀನಾಥ್​

Updated on: Jan 28, 2021 | 3:42 PM

ಲಖನೌ: ದೆಹಲಿಯಲ್ಲಿ ಜನವರಿ 26ರಂದು ಹಿಂಸಾಚಾರ ನಡೆದ ಬೆನ್ನಲ್ಲೇ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್​ ಸರ್ಕಾರ ಎಚ್ಚೆತ್ತುಕೊಂಡಿದೆ. ಇಲ್ಲಿಯೂ ಅಂಥ ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು, ರಾಜ್ಯದ ಮೂರು ಸ್ಥಳಗಳಲ್ಲಿ ನಡೆಯುತ್ತಿರುವ ಕಿಸಾನ್​ ಧರಣಿಗಳನ್ನು ತೆರವುಗೊಳಿಸಿದೆ.

ಉತ್ತರ ಪ್ರದೇಶದ ಚಿಲ್ಲಾ ಗಡಿ, ನೋಯ್ಡಾದ ರಾಷ್ಟ್ರೀಯ ಪ್ರೇರಣಾ ಸ್ಥಳ ಮತ್ತು ಹಸಿರು ಉದ್ಯಾನ ಹಾಗೂ ಬಾಗ್​ಪತ್​ನ ಬರೌತ್​ನಲ್ಲಿ ರೈತರು ಧರಣಿ ನಡೆಸುತ್ತಿದ್ದರು. ದೆಹಲಿ ಕೆಂಪುಕೋಟೆ ಬಳಿ ಮಿತಿಮೀರಿದ ಹಿಂಸಾಚಾರ ನಡೆದ ಬೆನ್ನಲ್ಲೇ, ಅವರಿಗೆ ನೀಡಲಾಗಿದ್ದ ಅನುಮತಿಯನ್ನು ಯೋಗಿ ಸರ್ಕಾರ ವಾಪಸ್​ ಪಡೆದಿದೆ.

ಧರಣಿ ನಿರತರನ್ನು ಅಲ್ಲಿಂದ ತೆರವುಗೊಳಿಸಲು ಪೊಲೀಸ್​ ಪ್ರಯೋಗ ಆಗಲಿಲ್ಲ. ಅನುಮತಿ ಹಿಂಪಡೆಯುತ್ತಿದ್ದಂತೆ ರೈತರೇ ಜಾಗ ಖಾಲಿ ಮಾಡಿ ಹೋಗಿದ್ದಾರೆ. ಆದರೆ ಇವರೊಂದಿಗೆ ಇದ್ದ ಕೆಲವರು ಗಲಾಟೆ ಶುರು ಮಾಡಲು ಪ್ರಯತ್ನ ಮಾಡಿದರು. ಈಗ ಅವರೆಲ್ಲ ನಾಪತ್ತೆಯಾಗಿದ್ದು, ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.

ಪ್ರತಿಭಟನಾ ನಿರತರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ದುರಸ್ತಿ ಕಾರ್ಯ ವಿಳಂಬವಾಗುತ್ತಿದೆ ಎಂದು ಹೈವೇ ಪ್ರಾಧಿಕಾರ ಸರ್ಕಾರಕ್ಕೆ ಪತ್ರ ಬರೆದಿತ್ತು. ನಾವಿದನ್ನು ರೈತರೊಂದಿಗೆ ಚರ್ಚಿಸಿದೆವು. ಅವರೂ ಸಹ ಒಪ್ಪಿಕೊಂಡು ಶಾಂತಿಯುತವಾಗಿಯೇ ಧರಣಿ ಸ್ಥಳದಿಂದ ಎದ್ದುಹೋಗಿದ್ದಾರೆ ಎಂದು ಬಾಗ್​ಪತ್​ ಎಡಿಎಂ ತಿಳಿಸಿದ್ದಾರೆ.

ಎಫ್​ಐಆರ್​ ದಾಖಲಾದ ರೈತ ಮುಖಂಡರಿಗೆ ಲುಕ್​ ಔಟ್ ನೋಟಿಸ್ ನೀಡಲು ನಿರ್ಧಾರ​ : ಆಸ್ಪತ್ರೆಗೆ ಅಮಿತ್​ ಷಾ ಭೇಟಿ