ಆ್ಯಂಟಿಬಾಡಿ ಕಾಕ್​ಟೇಲ್ ವೈದ್ಯಕೀಯ ಪ್ರಯೋಗಕ್ಕೆ ಅವಕಾಶ ಕೇಳಿದ ಜೈಡಸ್​ ಕ್ಯಾಡಿಲಾ; ಕೊರೊನಾ ಮಣಿಸಲು ಮತ್ತೊಂದು ಅಸ್ತ್ರ ಸಿಗುವ ನಿರೀಕ್ಷೆ

|

Updated on: May 27, 2021 | 1:22 PM

ಜೈಡಸ್ ಕ್ಯಾಡಿಲಾ ಆ್ಯಂಟಿಬಾಡಿ ಕಾಕ್​ಟೇಲ್ ನೀಡುವ ಮೂಲಕ ಶ್ವಾಸಕೋಶದಲ್ಲಿ ಉಂಟಾಗಬಹುದಾದ ಹಾನಿಯನ್ನು ತಡೆಗಟ್ಟಲು ಸಾಧ್ಯವಿದೆ ಎನ್ನಲಾಗುತ್ತಿದ್ದು, ಪ್ರಾಣಿಗಳ ಮೇಲೆ ನಡೆಸಲಾದ ಪ್ರಯೋಗದಲ್ಲಿ ಸಂಶೋಧನಾಕಾರರು ಈ ಅಂಶವನ್ನು ಕಂಡುಕೊಂಡಿದ್ದಾರೆ. ಇದು ಎರಡು ಮೋನೋಕ್ಲೋನಲ್ ಪ್ರತಿಕಾಯಗಳ ಸಮ್ಮಿಶ್ರಣವಾಗಿದ್ದು ದೇಹದಲ್ಲಿನ ಪ್ರತಿಕಾಯಗಳನ್ನು ಸದೃಢಗೊಳಿಸಲು ಸದರಿ ಚಿಕಿತ್ಸೆ ಸಹಕಾರಿಯಾಗಲಿದೆ ಎಂದು ತಜ್ಞರು ವಿವರಿಸಿದ್ದಾರೆ.

ಆ್ಯಂಟಿಬಾಡಿ ಕಾಕ್​ಟೇಲ್ ವೈದ್ಯಕೀಯ ಪ್ರಯೋಗಕ್ಕೆ ಅವಕಾಶ ಕೇಳಿದ ಜೈಡಸ್​ ಕ್ಯಾಡಿಲಾ; ಕೊರೊನಾ ಮಣಿಸಲು ಮತ್ತೊಂದು ಅಸ್ತ್ರ ಸಿಗುವ ನಿರೀಕ್ಷೆ
ಜೈಡಸ್​ ಕ್ಯಾಡಿಲಾ
Follow us on

ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಉಲ್ಬಣಿಸಿದ ನಂತರ ವೈದ್ಯಕೀಯ ವ್ಯವಸ್ಥೆಯ ಕೊರತೆ ಜತೆಗೆ ಲಸಿಕೆ ಅಭಾವವೂ ತಲೆದೋರಿ ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ. ಲಸಿಕೆ ಕೊರತೆ ನೀಗಿಸಲು ಸರ್ಕಾರ ಹಾಗೂ ಲಸಿಕೆ ಉತ್ಪಾದಕರು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಈ ವರ್ಷದ ಅಂತ್ಯದೊಳಗೆ ದೇಶದ ಎಲ್ಲಾ ನಾಗರೀಕರಿಗೆ ಲಸಿಕೆ ಕೊಡಿಸಬೇಕೆಂದು ಉದ್ದೇಶಿಸಿರುವ ಭಾರತ ಸರ್ಕಾರ ಈಗಾಗಲೇ ಮಾರುಕಟ್ಟೆಯಲ್ಲಿರುವ ಲಸಿಕೆಗಳ ಹೊರತಾಗಿ ಬೇರೆ ಬೇರೆ ಲಸಿಕೆಗಳಿಗೂ ಅನುಮತಿ ನೀಡುವ ಮೂಲಕ ಲಸಿಕೆ ವಿತರಣೆಯನ್ನು ಸುಗಮವಾಗಿಸುವ ಯತ್ನದಲ್ಲಿದೆ. ಇದೀಗ ಭಾರತದ ಜೈಡಸ್ ಕ್ಯಾಡಿಲಾ ಸಂಸ್ಥೆ ಕೊರೊನಾ ಸೋಂಕಿತರನ್ನು ಆರಂಭಿಕ ಹಂತದಲ್ಲೇ ಗುಣಪಡಿಸಲು ತಾನು ಅಭಿವೃದ್ಧಿಪಡಿಸಿದ ಆ್ಯಂಟಿಬಾಡಿ ಕಾಕ್​ಟೇಲ್​ನ ವೈದ್ಯಕೀಯ ಪರೀಕ್ಷೆಗೆ ಅನುಮತಿ ಕೇಳಿದ್ದು, ಲಸಿಕೆ ಅಭಾವದ ಸಂದರ್ಭದಲ್ಲಿ ಹೊಸ ಭರವಸೆಯೊಂದು ಕಣ್ತೆರೆಯುವ ಹಂತಕ್ಕೆ ಬಂದಂತಾಗಿದೆ.

ಜೈಡಸ್ ಕ್ಯಾಡಿಲಾ ಆ್ಯಂಟಿಬಾಡಿ ಕಾಕ್​ಟೇಲ್ ನೀಡುವ ಮೂಲಕ ಶ್ವಾಸಕೋಶದಲ್ಲಿ ಉಂಟಾಗಬಹುದಾದ ಹಾನಿಯನ್ನು ತಡೆಗಟ್ಟಲು ಸಾಧ್ಯವಿದೆ ಎನ್ನಲಾಗುತ್ತಿದ್ದು, ಪ್ರಾಣಿಗಳ ಮೇಲೆ ನಡೆಸಲಾದ ಪ್ರಯೋಗದಲ್ಲಿ ಸಂಶೋಧನಾಕಾರರು ಈ ಅಂಶವನ್ನು ಕಂಡುಕೊಂಡಿದ್ದಾರೆ. ಇದು ಎರಡು ಮೋನೋಕ್ಲೋನಲ್ ಪ್ರತಿಕಾಯಗಳ ಸಮ್ಮಿಶ್ರಣವಾಗಿದ್ದು ದೇಹದಲ್ಲಿನ ಪ್ರತಿಕಾಯಗಳನ್ನು ಸದೃಢಗೊಳಿಸಲು ಸದರಿ ಚಿಕಿತ್ಸೆ ಸಹಕಾರಿಯಾಗಲಿದೆ ಎಂದು ತಜ್ಞರು ವಿವರಿಸಿದ್ದಾರೆ.

ಎರಡನೇ ಅಲೆಯಿಂದ ಪರಿಸ್ಥಿತಿ ಹದಗೆಟ್ಟು, ಮೂರನೇ ಅಲೆಯತ್ತ ಭಯ ಮಿಶ್ರಿತ ನೋಟ ಬೀರುತ್ತಿರುವ ಈ ಹೊತ್ತಿನಲ್ಲಿ ಹೊಸ ಪ್ರಯೋಗಗಳು ಅತ್ಯಂತ ಅವಶ್ಯಕವಾಗಿದ್ದು, ಕೊರೊನಾ ವಿರುದ್ಧ ಯಾವುದು ಹೆಚ್ಚು ಪರಿಣಾಮಕಾರಿಯಾಗಿ ಹೋರಾಡಲಿದೆ ಹಾಗೂ ಆರೋಗ್ಯವನ್ನು ಸುರಕ್ಷಿತವಾಗಿಡಲಿವೆ ಎಂಬುದನ್ನು ನಾವು ಕಂಡುಕೊಳ್ಳಬೇಕು. ಹೀಗಾಗಿ ಮಾನವನ ಮೇಲೆ ವಿವಿಧ ಹಂತದ ವೈದ್ಯಕೀಯ ಪ್ರಯೋಗವನ್ನು ನಡೆಸಲು ಜೈಡಸ್ ಕ್ಯಾಡಿಲಾ ಅನುಮತಿ ಕೋರುತ್ತಿದೆ. ಈ ಪ್ರಯೋಗದಲ್ಲಿ ನಾವು ಯಶಸ್ಸು ಕಾಣುವ ನಿರೀಕ್ಷೆಯೂ ಅಧಿಕವಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಶರ್ವಿಲ್ ಪಾಟೀಲ್ ಹೇಳಿದ್ದಾರೆ.

ಅಮೆರಿಕಾದಲ್ಲಿ ಈಗಾಗಲೇ ಇದೇ ಮಾದರಿಯ ಆ್ಯಂಟಿಬಾಡಿ ಕಾಕ್​ಟೇಲ್ ತುರ್ತು ಪ್ರಯೋಗಕ್ಕೆ ಅನುಮತಿ ನೀಡಲಾಗಿದ್ದು, ವಿರ್ ಬಯೋಟೆಕ್ನಾಲಜಿ ಹಾಗೂ ಗ್ಲಾಕ್ಸೋಸ್ಮಿತ್​ಕ್ಲೈನ್ ಮತ್ತು ರೀಜೆನಾರನ್​ ಫಾರ್ಮಾಸ್ಯುಟಿಕಲ್ಸ್ ಹಾಗೂ ಎಲಿ ಲಿಲ್ಲಿ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಔಷಧಕ್ಕೆ ಅನುಮತಿ ಸಿಕ್ಕಿದೆ. ರೀಜೆನಾರನ್​ ಫಾರ್ಮಾಸ್ಯುಟಿಕಲ್ಸ್ ಹಾಗೂ ಎಲಿ ಲಿಲ್ಲಿ ತಯಾರಿಸಿದ ಆ್ಯಂಟಿಬಾಡಿ ಕಾಕ್​ಟೇಲ್ ತುರ್ತು ಪ್ರಯೋಗಕ್ಕೆ ಭಾರತದಲ್ಲೂ ಅನುಮತಿ ಲಭಿಸಿದ್ದು, ಔಷಧ ತಯಾರಕ ಸಂಸ್ಥೆ ಸಿಪ್ಲಾ ಅದನ್ನು ವಿತರಿಸುವ ಹೊಣೆಗಾರಿಕೆ ಹೊತ್ತಿದೆ. ಈ ವಾರದ ಆರಂಭದಲ್ಲಿ ಆ್ಯಂಟಿಬಾಡಿ ಕಾಕ್​ಟೇಲ್ ಚಿಕಿತ್ಸೆಯನ್ನೂ ಕೆಲವೆಡೆ ಆರಂಭಿಸಲಾಗಿದೆ.

ಇದನ್ನೂ ಓದಿ:
Covid Vaccine: ವರ್ಷಾಂತ್ಯದೊಳಗೆ ಭಾರತದಲ್ಲಿ ಸಿಗಲಿರುವ 8 ಕೊರೊನಾ ಲಸಿಕೆಗಳು ಯಾವುವು? 

Covid Antibody Cocktail: ಕೊರೊನಾ ಚಿಕಿತ್ಸೆಗೆ ಹೊಸ ಔಷಧಿ, ಗುರುಗ್ರಾಮದಲ್ಲಿ ಮೇ 26ರಿಂದ ಆ್ಯಂಟಿಬಾಡಿ ಕಾಕ್​ಟೇಲ್ ಚಿಕಿತ್ಸೆ ಆರಂಭ