Covid Antibody Cocktail: ಕೊರೊನಾ ಚಿಕಿತ್ಸೆಗೆ ಹೊಸ ಔಷಧಿ, ಗುರುಗ್ರಾಮದಲ್ಲಿ ಮೇ 26ರಿಂದ ಆ್ಯಂಟಿಬಾಡಿ ಕಾಕ್​ಟೇಲ್ ಚಿಕಿತ್ಸೆ ಆರಂಭ

ಈಗ ಕೊರೊನಾ ರೋಗಿಗಳ ಚಿಕಿತ್ಸೆಗೆ ಹೊಸ ಔಷಧಿಗಳು ಭಾರತಕ್ಕೆ ಬಂದಿವೆ. ಕೊರೊನಾ ವೈರಸ್ ವಿರುದ್ಧ ಬಂದಿರುವ ಹೊಸ ಡ್ರಗ್ಸ್ ಯಾವುದು? ಅದು ಹೇಗೆ ಕೊರೊನಾ ರೋಗಿಗಳ ಚಿಕಿತ್ಸೆಗೆ ನೆರವಾಗುತ್ತೆ ಎನ್ನುವ ವಿವರಗಳು ಇಲ್ಲಿವೆ.

Covid Antibody Cocktail: ಕೊರೊನಾ ಚಿಕಿತ್ಸೆಗೆ ಹೊಸ ಔಷಧಿ, ಗುರುಗ್ರಾಮದಲ್ಲಿ ಮೇ 26ರಿಂದ ಆ್ಯಂಟಿಬಾಡಿ ಕಾಕ್​ಟೇಲ್ ಚಿಕಿತ್ಸೆ ಆರಂಭ
ಕೊರೊನಾಗೆ ಕಾಕ್​ಟೇಲ್ ಔಷಧಿ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:May 25, 2021 | 6:38 PM

ಕೊರೊನಾ ವೈರಸ್ ವಿರುದ್ಧ ನಿರ್ದಿಷ್ಟ ಮತ್ತು ನಿಖರವಾದ ಔಷಧಿ ಎನ್ನುವುದು ಭಾರತ ಹಾಗೂ ಜಗತ್ತಿನಲ್ಲಿ ಇದುವರೆಗೂ ಇಲ್ಲ. ರೆಮ್​ಡಿಸಿವಿರ್, ಪ್ಮಾಸ್ಮಾ ಥೆರಪಿ, ಐವೆರ್ ಮೆಕ್ಟಿನ್ ಸೇರಿದಂತೆ ಕೆಲ ಡ್ರಗ್ಸ್, ಥೆರಪಿಗಳನ್ನು ರೋಗಿಗಳಿಗೆ ನೀಡಿ ಈಗಾಗಲೇ ನಿಲ್ಲಿಸಲಾಗಿದೆ. ಈಗ ಕೊರೊನಾ ರೋಗಿಗಳ ಚಿಕಿತ್ಸೆಗೆ ಹೊಸ ಔಷಧಿಗಳು ಭಾರತಕ್ಕೆ ಬಂದಿವೆ. ಇದು ಅಂತಿಂಥ ಔಷಧಿಗಳಲ್ಲ. ಆಮೆರಿಕಾದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್​ಗೆ ಕೊರೊನಾ ಬಂದಿದ್ದಾಗ ನೀಡಿದ್ದ ಔಷಧಗಳು. ಕೊರೊನಾ ವೈರಸ್ ವಿರುದ್ಧ ಬಂದಿರುವ ಹೊಸ ಡ್ರಗ್ಸ್ ಯಾವುದು? ಅದು ಹೇಗೆ ಕೊರೊನಾ ರೋಗಿಗಳ ಚಿಕಿತ್ಸೆಗೆ ನೆರವಾಗುತ್ತೆ ಎನ್ನುವ ವಿವರಗಳು ಇಲ್ಲಿವೆ.

ಕೊರೊನಾ ವೈರಸ್ ಕಳೆದ ಒಂದೂವರೆ ವರ್ಷದಿಂದ ಇಡೀ ವಿಶ್ವವನ್ನೇ ಹಿಂಡಿ ಹಿಪ್ಪೆ ಮಾಡ್ತಿದೆ. ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಕೊರೊನಾ ವೈರಸ್ ವಿರುದ್ಧ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇದುವರೆಗೂ ಕೊರೊನಾ ವೈರಸ್ ತಗುಲಿದ ರೋಗಿಗಳಿಗೆ ರೋಗ ಲಕ್ಷಣಗಳನ್ನು ಆಧರಿಸಿ ಹಲವು ಔಷಧಗಳನ್ನು ನೀಡಲಾಗುತ್ತಿತ್ತು. ಈಗ ಕೊರೊನಾ ವೈರಸ್ ತಗುಲಿದ ರೋಗಿಗಳ ಚಿಕಿತ್ಸೆಗಾಗಿ ಹೊಸ ಡ್ರಗ್ಸ್ ಭಾರತಕ್ಕೆ ಬಂದಿದೆ. ಇದು ಸಾಮಾನ್ಯ ಡ್ರಗ್ಸ್ ಅಲ್ಲ.

ಆಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕಳೆದ ವರ್ಷ ಕೊರೊನಾ ಪಾಸಿಟಿವ್ ಬಂದಿತ್ತು. ಆಗ ಡೋನಾಲ್ಡ್ ಟ್ರಂಪ್ ಆಸ್ಪತ್ರೆಗೆ ದಾಖಲಾದಾಗ ಅವರಿಗೆ ಇದೇ ಡ್ರಗ್ಸ್ ನೀಡಲಾಗಿತ್ತು. ಈ ಡ್ರಗ್ಸ್​ನ ಪರಿಣಾಮವೋ ಏನೋ ಡೋನಾಲ್ಡ್ ಟ್ರಂಪ್ ಮೂರ್ನಾಲ್ಕು ದಿನಗಳಲ್ಲೇ ಕೊರೊನಾ ನೆಗೆಟಿವ್ ಆಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದರು. ಈಗ ಅದೇ ಡ್ರಗ್ಸ್ ನಮ್ಮ ಭಾರತಕ್ಕೆ ಬಂದಿದೆ. ಅದು ಯಾವ ಡ್ರಗ್ಸ್ ಎಂಬ ಕುತೂಹಲ ನಿಮ್ಮಲ್ಲಿ ಮೂಡಿರಬಹುದು. ಅದುವೇ ಸ್ವಿಟ್ಜರ್​ಲೆಂಡ್ ದೇಶದ ರೋಚೆ ಕಂಪನಿ ಅಭಿವೃದ್ದಿಪಡಿಸಿರುವ ಆ್ಯಂಟಿಬಾಡಿ ಕಾಕ್​ಟೇಲ್ ಡ್ರಗ್ಸ್, ಕಸಿರಿವಿಮಬ್ ಮತ್ತು ಇಂಡಿವಿಮಬ್ ಎಂಬ ಎರಡು ಡ್ರಗ್ಸ್​ಗಳ ಮಿಶ್ರಣದಿಂದ ಆ್ಯಂಟಿಬಾಡಿ ಕಾಕ್​ಟೇಲ್ ಡ್ರಗ್ಸ್ ಅನ್ನು ತಯಾರಿಸಲಾಗಿದೆ.

ಎರಡು ಔಷಧಿಗಳ ಮಿಶ್ರಣದ ಡ್ರಗ್ಸ್ ಆಗಿರುವುದರಿಂದ ಇದು ಕಾಕ್​ಟೇಲ್ ಡ್ರಗ್ಸ್. ಇದು ಮನುಷ್ಯರ ದೇಹಗಲ್ಲಿ ಸ್ಪೈಕಡ್ ಪ್ರೋಟೀನ್ ಬೆಳವಣಿಗೆಯನ್ನು ತಡೆಯುತ್ತೆ. ಜೊತೆಗೆ ದೇಹದಲ್ಲಿ ಕೊರೊನಾ ವೈರಸ್ ವಿರುದ್ಧ ಪ್ರತಿಕಾಯಗಳ ಬೆಳವಣಿಗೆಗೆ ಸಹಾಯ ಮಾಡುತ್ತೆ. ಹೀಗಾಗಿ ಈ ಡ್ರಗ್ಸ್ ಜಗತ್ತಿನ ವಿವಿಧ ದೇಶಗಳಲ್ಲಿ ಬೇಡಿಕೆ ಇದೆ. ಈಗ ಇದೇ ಡ್ರಗ್ಸ್ ಭಾರತದ ಮಾರುಕಟ್ಟೆಗೂ ಬಂದಿದೆ. ಸಿಪ್ಲಾ ಕಂಪನಿಯು ಭಾರತದಲ್ಲಿ ಇದನ್ನು ಮಾರ್ಕೆಟಿಂಗ್ ಮಾಡುತ್ತಿದೆ. ಭಾರತದಲ್ಲಿ ಈ ಡ್ರಗ್ಸ್ ಅನ್ನು ತುರ್ತು ಸಂದರ್ಭಗಳಲ್ಲಿ ಕೊರೊನಾ ರೋಗಿಗಳಿಗೆ ನೀಡಲು ಸಿಡಿಎಸ್‌ಸಿಒ ಒಪ್ಪಿಗೆ ನೀಡಿದೆ. ನಾಳೆಯಿಂದ (ಮೇ 26ರ ಬುಧವಾರದಿಂದ) ಹರಿಯಾಣದ ಗುರುಗ್ರಾಮದಲ್ಲಿರುವ ಮೇದಾಂತ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಆ್ಯಂಟಿಬಾಡಿ ಕಾಕ್​ಟೇಲ್ ಡ್ರಗ್ಸ್ ನೀಡಲಾಗುತ್ತೆ. ಆಮೆರಿಕಾ ಹಾಗೂ ಯೂರೋಪಿಯನ್ ರಾಷ್ಟ್ರಗಳು ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಈ ಡ್ರಗ್ಸ್ ಅನ್ನು ತುರ್ತು ಸಂದರ್ಭದಲ್ಲಿ ಬಳಸಲು ಒಪ್ಪಿಗೆ ನೀಡಲಾಗಿದೆ.

ಕಸಿರಿವಿಮಬ್ ಮತ್ತು ಇಂಡಿವಿಮಬ್ ಎಂಬ ಎರಡು ಔಷಧಗಳ ಮಿಶ್ರಣದ ಕಾಕ್​ಟೇಲ್ ಇದು

ಕೊರೊನಾದ ಸಾವನ್ನು ಶೇ 80ರಷ್ಟು ಕಡಿಮೆ ಮಾಡುತ್ತೆ! ಮೇದಾಂತ ಆಸ್ಪತ್ರೆಯ ಮುಖ್ಯಸ್ಥ ಹಾಗೂ ದೇಶದ ಖ್ಯಾತ ಹೃದ್ರೋಗ ತಜ್ಞರಾಗಿರುವ ಡಾಕ್ಟರ್ ನರೇಶ್ ಟ್ರೆಹಾನ್ ಆ್ಯಂಟಿಬಾಡಿ ಕಾಕ್​ಟೇಲ್ ಔಷಧಿಯನ್ನು ಸಮರ್ಥಿಸಿಕೊಳ್ಳುತ್ತಾರೆ. ಈ ಔಷಧಿಯು ಆಸ್ಪತ್ರೆಗೆ ದಾಖಲಾಗುವ ಸಂದರ್ಭವನ್ನು ಶೇ 70ರಷ್ಟು ಕಡಿಮೆ ಮಾಡುತ್ತೆ. 40 ಕೆಜಿಗಿಂತಲೂ ಹೆಚ್ಚಿನ ತೂಕ ಇರುವ ಮಕ್ಕಳಿಗೂ ಈ ಔಷಧಿ ನೀಡಬಹುದು. ಕೊರೊನಾ ಪಾಸಿಟಿವ್ ಬಂದ 48ರಿಂದ 72 ಗಂಟೆಯೊಳಗೆ ಔಷಧಿಯನ್ನು ರೋಗಿಗಳಿಗೆ ನೀಡಬೇಕು. ಅದಕ್ಕಿಂತ ಮುಂಚಿತವಾಗಿ ನೀಡಬಾರದು. ಕೊರೊನಾ ವೈರಸ್ ವಿರುದ್ಧ ಇದು ಶೇ 70ರಷ್ಟು ಪರಿಣಾಮಕಾರಿ. ಈ ಡ್ರಗ್ಸ್ ಪಡೆದ ಶೇ 70ರಷ್ಟು ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಅಗತ್ಯ ಬೀಳಲ್ಲ. ಜೊತೆಗೆ ಸಾವಿನ ಪ್ರಮಾಣವನ್ನು ಈ ಡ್ರಗ್ಸ್ ಕಡಿಮೆ ಮಾಡುತ್ತೆ. ಕೊರೊನಾದಿಂದಾಗಿ ರೋಗಿಗಳು ಗಂಭೀರ ಸ್ಥಿತಿ ತಲುಪುವುದನ್ನು ತಡೆಯುತ್ತೆ. ಆಸ್ಪತ್ರೆಯಲ್ಲಿರುವ ಅವಧಿಯನ್ನೂ ಮೂರ್ನಾಲ್ಕು ದಿನಗಳಷ್ಟು ಕಡಿಮೆ ಮಾಡುತ್ತೆ ಎಂದು ಡಾಕ್ಟರ್ ನರೇಶ್ ಟ್ರೆಹಾನ್ ಹೇಳಿದ್ದಾರೆ.

ಸೌಮ್ಯ ಹಾಗೂ ಸಾಧಾರಣ ಸೋಂಕಿನ ಮಟ್ಟದಲ್ಲಿರುವ ರೋಗಿಗಳಿಗೆ ಈ ಆ್ಯಂಟಿಬಾಡಿ ಔಷಧಿಗಳ ಚಿಕಿತ್ಸೆ ನೀಡಬಹುದು. ಈ ಆ್ಯಂಟಿಬಾಡಿ ಕಾಕ್​ಟೇಲ್ ತಯಾರಿಸಲು ತಲಾ 600 ಎಂಜಿ ಕಸಿರಿವಿಮಬ್ ಮತ್ತು ಇಂಡಿವಿಮಬ್ ಮಿಶ್ರಣ ಬಳಸಲಾಗಿದೆ. ಆಮೆರಿಕಾದ ಹೂಸ್ಟನ್ ಮೆಥೋಡಿಸ್ಟ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳ ಮೇಲೆ ಆ್ಯಂಟಿಬಾಡಿ ಡ್ರಗ್ ಪ್ರಯೋಗ ಮಾಡಲಾಗಿದೆ. ರೋಗಿಗಳು ಆಸ್ಪತ್ರೆಗೆ ದಾಖಲಾಗುವುದನ್ನು ಈ ಔಷಧಿಗಳು ತಡೆದಿವೆ. ಜೊತೆಗೆ ಕೊರೊನಾ ರೋಗಿಗಳಲ್ಲಿ ಶೇ 80ರಷ್ಟು ಸಾವನ್ನೂ ಕಡಿಮೆ ಮಾಡಿದೆ.

ಮನುಷ್ಯರ ಜೀವಕೋಶಗಳಿಗೆ ಕೊರೊನಾ ವೈರಸ್ ಪ್ರವೇಶ ಮಾಡದಂತೆ ಈ ಔಷಧ ತಡೆಯುತ್ತೆ. ಡಿಎನ್‌ಎ ತಂತ್ರಜ್ಞಾನ ಬಳಸಿ ತಯಾರಿಸಿರುವ ಕಸಿರಿವಿಮಬ್ ಮತ್ತು ಇಂಡಿವಿಮಬ್ ಇಮ್ಯೂನೋಗ್ಲೋಬಿನ್ ಮಾನೋಕ್ಲೋನಲ್ ಆ್ಯಂಟಿಬಾಡಿ ಆಗಿವೆ. ಮಾನೋಕ್ಲೋನಲ್ ಆ್ಯಂಟಿಬಾಡಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ವೈರಸ್ ವಿರುದ್ಧ ಹೋರಾಟ ಸಾಧ್ಯವಾಗುತ್ತದೆ. ಇಂಜೆಕ್ಷನ್ ರೂಪದಲ್ಲಿ ಮನುಷ್ಯರಿಗೆ ಆ್ಯಂಟಿಬಾಡಿ ಕಾಕ್​ಟೇಲ್ ನೀಡಲಾಗುತ್ತೆ. ಹೊಟ್ಟೆ, ಸೊಂಟ ಸೇರಿದಂತೆ ನಾಲ್ಕು ಕಡೆ ಈ ಇಂಜೆಕ್ಷನ್ ನೀಡಲಾಗುತ್ತೆ. ಯಾರಿಗಾದರೂ ಕೊರೊನಾ ಪಾಸಿಟಿವ್ ಬಂದರೆ, ಈ ಡ್ರಗ್ಸ್ ನೀಡುವ ಆಸ್ಪತ್ರೆಗಳಿಗೆ ಹೋಗಬಹುದು. ಅಲ್ಲಿ ಕಸಿರಿವಿಮಬ್ ಮತ್ತು ಇಂಡಿವಿಮಬ್ ಔಷಧಗಳನ್ನು ಮಿಶ್ರಣ ಮಾಡಲಾಗುತ್ತೆ. ಇದಕ್ಕೆ 30 ನಿಮಿಷ ಕಾಲಾವಕಾಶ ಬೇಕು. ಬಳಿಕ ಕೊರೊನಾ ರೋಗಿಗಳಿಗೆ ಆ್ಯಂಟಿಬಾಡಿ ಕಾಕ್ ಟೈಲ್ ನೀಡಲಾಗುತ್ತೆ. ಬಳಿಕ ಅಡ್ಡಪರಿಣಾಮಗಳ ಸಾಧ್ಯತೆಗಳನ್ನು ಒಂದು ಗಂಟೆ ಕಾಲ ವೈದ್ಯರು ಗಮನಿಸುತ್ತಾರೆ.

ಆ್ಯಂಟಿಬಾಡಿ ಕಾಕ್ ಟೈಲ್ ಡ್ರಗ್ಸ್ ಬೆಲೆ ದುಬಾರಿ ಆ್ಯಂಟಿಬಾಡಿ ಕಾಕ್ ಟೈಲ್ ಡ್ರಗ್ಸ್ ಬೆಲೆ ದುಬಾರಿ. ಸಿಂಗಲ್ ಡೋಸ್​ಗೆ ₹ 59,750 ತೆರಬೇಕು. ಆದರೆ, ಕೊರೊನಾದ ಗಂಭೀರ ಸ್ಥಿತಿ, ಆಸ್ಪತ್ರೆ ವೆಚ್ಚ ಹಾಗೂ ಸಾವನ್ನು ಈ ಡ್ರಗ್ಸ್ ತಡೆಯುತ್ತೆ. ಬೆಲೆಯನ್ನು ಕಡಿಮೆ ಮಾಡಲು ಕಂಪನಿಗಳಿಗೆ ಮನವಿ ಮಾಡಿದ್ದೇವೆ ಎಂದು ಡಾಕ್ಟರ್ ನರೇಶ್ ಟ್ರೆಹಾನ್ ಹೇಳುತ್ತಾರೆ. ಈಗ ಮೊದಲ ಬ್ಯಾಚ್​ನ ಆ್ಯಂಟಿಬಾಡಿ ಕಾಕ್​ಟೇಲ್ ಅನ್ನು ಸಿಪ್ಲಾ ಕಂಪನಿಯು ಭಾರತಕ್ಕೆ ಪೂರೈಸಿದೆ. ಜೂನ್ ತಿಂಗಳಲ್ಲಿ ಎರಡನೇ ಬ್ಯಾಚ್ ಭಾರತಕ್ಕೆ ಬರಲಿದೆ. ಸುಮಾರು 2 ಲಕ್ಷ ಕೊರೊನಾ ರೋಗಿಗಳಿಗೆ ಬೇಕಾಗುವಷ್ಟು ಡ್ರಗ್ಸ್ ಅನ್ನು ಪೂರೈಸಲಾಗುತ್ತೆ. ನಂತರದ ದಿನಗಳಲ್ಲಿ ದೇಶದ ಪ್ರಮುಖ ಆಸ್ಪತ್ರೆಗಳಲ್ಲಿ ಆ್ಯಂಟಿಬಾಡಿ ಕಾಕ್​ಟೇಲ್ ಡ್ರಗ್ಸ್ ರೋಗಿಗಳಿಗೆ ಸಿಗಲಿದೆ.

(Covid Antibody Cocktail by Roche Released in India The same drug Used To Treat Donald Trump)

ಇದನ್ನೂ ಓದಿ: ಲಸಿಕೆ ಪೂರೈಕೆಯನ್ನು ಸಮಾನತೆಯ ಹಕ್ಕಿನಡಿ ಪರಿಗಣಿಸಿ: ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್ ಮಹತ್ವದ ಸೂಚನೆ

ಇದನ್ನೂ ಓದಿ: ಕೊರೊನಾ ಬರದಂತೆ ರಕ್ಷಿಸುವಲ್ಲಿ ಲಸಿಕೆ ಯಶಸ್ವಿ.. ರಾಜ್ಯದಲ್ಲಿ ಎರಡು ಡೋಸ್ ಲಸಿಕೆ ಪಡೆದವರಲ್ಲಿ ಸಾವಿನ ಸಂಖ್ಯೆ ಕಡಿಮೆ

Published On - 6:37 pm, Tue, 25 May 21