ಭಾರತದ ಮುಂಚೂಣಿ ಔಷಧ ಕಂಪನಿಗಳಲ್ಲಿ ಒಂದಾದ ಅಹ್ಮದಾಬಾದ್ ಮೂಲದ ಝೈಡಸ್ ಲೈಫ್ಸೈನ್ಸ್ ಲಿಮಿಟೆಡ್ ( ಈ ಹಿಂದೆ ಕ್ಯಾಡಿಲಾ ಹೆಲ್ತ್ಕೇರ್ ಲಿಮಿಟೆಡ್ ಎಂದು ಕರೆಯಲ್ಪಡುತ್ತಿದ್ದ) ಸೋಮವಾರ ಒಂದು ವಿಶೇಷ ವಿಷಯವನ್ನು ಘೋಷಣೆ ಮಾಡಿದೆ. ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕಾಣಿಸಿಕೊಳ್ಳುವ ರಕ್ತಹೀನತೆಗೆ ಮೌಖಿಕ ಚಿಕಿತ್ಸೆ ನೀಡುವ ತನ್ನ Oxemia TM (Desidustat) (ಆಕ್ಸೆಮಿಯಾ ಟಿಎಂ (ಡೆಸಿಡುಸ್ಟಾಟ್) ಎಂಬ ಹೊಸ ಔಷಧಿಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದೆ.
ಆಕ್ಸೆಮಿಯಾ ಟಿಎಂ ಎಂಬುದು ಒಂದು ಸಣ್ಣ ಅಣುವಿನಂತೆ ಹೈಪೋಕ್ಸಿಯಾ ಪ್ರಚೋದಕ ಅಂಶವಾಗಿದ್ದು, ಬಾಯಿಯ ಮೂಲಕ ನೀಡಲಾಗುವ ಔಷಧ. ಪ್ರೋಲೈಲ್ ಹೈಡ್ರಾಕ್ಸಿಲೇಸ್ (HIF-PH) ಪ್ರತಿರೋಧಕವಾಗಿದೆ. ದೀರ್ಘಕಾಲದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಲ್ಲಿ ಕಾಣಿಸಿಕೊಳ್ಳುವ ರಕ್ತ ಹೀನತೆ ತಡೆಯಲು ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುವ ಎರಿಥ್ರೋಪೊಯೆಟಿನ್ ಉತ್ತೇಜನಾ ಏಜೆಂಟ್ಗಳಿಗೆ (ESAs) ಪರ್ಯಾಯವಾಗಿ ಈ ಆಕ್ಸೆಮಿಯಾ ಟಿಎಂ (ಡೆಸಿಡುಸ್ಟಾಟ್) ಗಳನ್ನು ನೀಡಬಹುದಾಗಿದೆ. ಇದು ಮೊದಲ ಮೌಖಿಕ ಚಿಕಿತ್ಸಾ ವಿಧಾನವಾಗಿದೆ.
ಸಿಕೆಡಿ (chronic kidney diseases) ಎಂಬುದು ಒಂದು ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ. ಈ ರೋಗ ಕ್ರಮೇಣವಾಗಿ ಮೂತ್ರಪಿಂಡದ ಕಾರ್ಯವನ್ನು ಕುಂಠಿತಗೊಳಿಸುತ್ತದೆ. ಈ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ರಕ್ತಹೀನತೆ, ಅಧಿಕ ರಕ್ತದೊತ್ತಡ, ಹೈದಯ ವೈಫಲ್ಯ, ಪಾರ್ಶ್ವವಾಯು, ಮಧುಮೇಹಕ್ಕೂ ಕಾರಣವಾಗುತ್ತದೆ. ಸರಿಯಾಗಿ ಚಿಕಿತ್ಸೆ ಬೀಳದ ಈ ರೋಗದ ಅಂತಿಮ ಹಂತ ಕಿಡ್ನಿ ವೈಫಲ್ಯ. ಹೀಗಾಗಿ ಈ ಸಿಕೆಡಿ ಎಂಬ ರೋಗದಿಂದ ಬಳಲುತ್ತಿರುವ ರೋಗಗಳು ನಿತ್ಯವೂ ಅನೇಕ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ವಿವಿಧ ಔಷಧಗಳನ್ನು ತೆಗೆದುಕೊಳ್ಳುವುದರಿಂದ ಆ ಔಷಧಗಳು ಒಂದಕ್ಕೊಂದು ಹೊಂದದೆ ಕಷ್ಟವಾಗುವ ಸಾಧ್ಯತೆಯೂ ಇರುತ್ತದೆ. ಭಾರತದಲ್ಲಿ ಸುಮಾರು 115.1 ಮಿಲಿಯನ್ ಜನರು, ಚೀನಾದಲ್ಲಿ 132 ಮಿಲಿಯನ್, ಯುಎಸ್ನಲ್ಲಿ 38 ಮಿಲಿಯನ್, ಜಪಾನ್ನಲ್ಲಿ 21 ಮಿಲಿಯನ್ ಮತ್ತು ಪಶ್ಚಿಮ ಯುರೋಪ್ನಲ್ಲಿ ಅಂದಾಜು 41 ಮಿಲಿಯನ್ ಜನರು ಈ ಸಿಕೆಡಿ ರೋಗದಿಂದ ಬಳಲುತ್ತಿದ್ದಾರೆ ಎಂದು ಝೈಡಸ್ ವರದಿ ಮಾಡಿದೆ. 2040ರ ಹೊತ್ತಿಗೆ ಇದು ಜಾಗತಿಕವಾಗಿ ಒಂದು ಸಾಮಾನ್ಯ ಕಾಯಿಲೆಯಾಗಿ ಪರಿಣಮಿಸಬಹುದು. ಇದರಿಂದಾಗಿ ಅನೇಕರು ಸಣ್ಣ ವಯಸ್ಸಿನಲ್ಲಿಯೇ ಸಾವನ್ನಪ್ಪಬಹುದು ಎಂದೂ ಅಂದಾಜಿಸಲಾಗಿದೆ.
ಇದೀಗ ಸಿಕೆಡಿ ರೋಗಿಗಳಿಗೆ ಸಹಾಯವಾಗುವ Oxemia TM (Desidustat) ಹೊರತಂದಿರುವ ಝೈಡಸ್ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ಇದು ರೋಗಿಗಳ ಜೀವನವನ್ನ ಬದಲಿಸುವ ಆವಿಷ್ಕಾರ ಎನ್ನಬಹುದು. ಇದೀಗ ಲಭ್ಯ ಇರುವ ಚುಚ್ಚುಮದ್ದುಗಳಿಗೆ ಪರ್ಯಾಯವಾಗಿ ಬಾಯಿಯ ಮೂಲಕ ನೀಡಬಹುದಾದ ಈ ಔಷಧ ಇನ್ನಷ್ಟು ಸುರಕ್ಷಿತ. ಇದು ಹೆಪ್ಸಿಡಿನ್, ಉರಿಯೂತಗಳನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಕಬ್ಬಿಣದ ಅಂಶಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: crime news: ಸೇತುವೆ ಮೇಲೆ ಕಾರ್ ಮತ್ತು ಬೈಕ್ ನಡುವೆ ಅಪಘಾತ; ನದಿಗೆ ಹಾರಿ ಬಿದ್ದ ಬೈಕ್ ಸವಾರರು
Published On - 10:00 am, Tue, 8 March 22