ಹಾಸ್ಯ ಪಟು ಜಾಸೆಲಿನ್ ಚಿಯಾ ಅವರ ಎಂಎಚ್ 370 ಹಾಸ್ಯ: ಇಂಟರ್‌ಪೋಲ್ ಸಹಾಯ ಕೋರಿದ ಮಲೇಷ್ಯಾ ಪೊಲೀಸ್

| Updated By: ಗಂಗಾಧರ​ ಬ. ಸಾಬೋಜಿ

Updated on: Jun 14, 2023 | 2:57 PM

ಸಿಂಗಾಪುರ ಮೂಲದ ಸ್ಟ್ಯಾಂಡಪ್ ಕಾಮಿಡಿಯನ್ ಜಾಸೆಲಿನ್ ಚಿಯಾ ಅವರ ಕಳೆದು ಹೋದ ವಿಮಾನದ ಕುರಿತಾದ ಹಾಸ್ಯದ ಕುರಿತ ಪ್ರತಿರೋಧ ತಣ್ಣಗಾಗುವ ಯಾವ ಲಕ್ಷಣಗಳೂ ಕಂಡುಬರುತ್ತಿಲ್ಲ. ಮಲೇಷ್ಯಾ ಪೊಲೀಸ್ ಇಲಾಖೆ ಆಕೆಯನ್ನು ಹುಡುಕಲು ಇಂಟರ್‌ಪೋಲ್ ಸಹಾಯ ಕೋರಿದೆ.

ಹಾಸ್ಯ ಪಟು ಜಾಸೆಲಿನ್ ಚಿಯಾ ಅವರ ಎಂಎಚ್ 370 ಹಾಸ್ಯ: ಇಂಟರ್‌ಪೋಲ್ ಸಹಾಯ ಕೋರಿದ ಮಲೇಷ್ಯಾ ಪೊಲೀಸ್
ಸ್ಟ್ಯಾಂಡಪ್ ಕಾಮಿಡಿಯನ್ ಜಾಸೆಲಿನ್ ಚಿಯಾ
Follow us on

ಸಿಂಗಾಪುರ ಮೂಲದ ಸ್ಟ್ಯಾಂಡಪ್ ಕಾಮಿಡಿಯನ್ ಜಾಸೆಲಿನ್ ಚಿಯಾ (Jocelyn Chia) ಅವರ ಕಳೆದು ಹೋದ ವಿಮಾನದ ಕುರಿತಾದ ಹಾಸ್ಯದ ಕುರಿತ ಪ್ರತಿರೋಧ ತಣ್ಣಗಾಗುವ ಯಾವ ಲಕ್ಷಣಗಳೂ ಕಂಡುಬರುತ್ತಿಲ್ಲ. ಮಲೇಷ್ಯಾ (Malaysia) ಪೊಲೀಸ್ ಇಲಾಖೆ ಆಕೆಯನ್ನು ಹುಡುಕಲು ಇಂಟರ್‌ಪೋಲ್ ಸಹಾಯ ಕೋರಿದೆ. ಮಲೇಷ್ಯಾದ ಸಾಮಾಜಿಕ ಜಾಲತಾಣಗಳ ಬಳಕೆದಾರರು ಚಿಯಾಗಾಗಿನ ಹುಡುಕಾಟ ಎಲ್ಲೆ ಮೀರಿ ಹೋಗಿದೆ. ಪೊಲೀಸರು ತಮ್ಮ ಸಮಯ ವ್ಯರ್ಥ ಮಾಡುತ್ತಿದ್ದರೆ, ರಾಜಕಾರಣಿಗಳು ಈ ವಿವಾದವನ್ನು ತಮ್ಮ ಸ್ವಂತ ಲಾಭಕ್ಕಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಮಲೇಷ್ಯಾ ಪೊಲೀಸ್ ಇಲಾಖೆ ಮಂಗಳವಾರ ತನ್ನ ಹೇಳಿಕೆಯಲ್ಲಿ ಜಾಸೆಲಿನ್ ಚಿಯಾ ಅವರನ್ನು ಹುಡುಕಲು ಇಂಟರ್‌ಪೋಲ್ ಸಹಾಯ ಕೇಳಿರುವುದಾಗಿ ತಿಳಿಸಿದೆ. ಆಕೆ ಕಳೆದುಹೋದ ಮಲೇಷ್ಯನ್ ಏರ್‌ಲೈನ್ಸ್ ವಿಮಾನ ಎಂಎಚ್ 370 ಕುರಿತಾಗಿ ಮಾಡಿದ ಹಾಸ್ಯದಿಂದಾಗಿ ಭುಗಿಲೆದ್ದ ವಿರೋಧದಿಂದ ತಾನು ಈ ಕ್ರಮ ಕೈಗೊಂಡಿರುವುದಾಗಿ ಇಲಾಖೆ ತಿಳಿಸಿದೆ.

ಸಿಂಗಾಪುರದಲ್ಲಿ ಜನಿಸಿದ ಚಿಯಾ, ಅಮೆರಿಕಾದಲ್ಲಿ ನೆಲೆಸಿದ್ದಾರೆ. ಆಕೆ ನ್ಯೂಯಾರ್ಕ್ ಕಾಮಿಡಿ ಕ್ಲಬ್‌ನಲ್ಲಿ ತನ್ನ ಸ್ಟ್ಯಾಂಡ್ ಅಪ್ ಹಾಸ್ಯ ಕಾರ್ಯಕ್ರಮದಲ್ಲಿ ಕಾಣೆಯಾದ ವಿಮಾನದ ಕುರಿತು ಹಾಸ್ಯ ಮಾಡಿದ್ದರು. ಆಕೆಯ ಮಾತುಗಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ಮಲೇಷ್ಯಾ ಮತ್ತು ಸಿಂಗಾಪುರದ ಜನರನ್ನು ಸಿಟ್ಟಿಗೆಬ್ಬಿಸಿತ್ತು.

ತನ್ನ ಹಾಸ್ಯದಲ್ಲಿ, ವೃತ್ತಿಯಿಂದ ವಕೀಲೆಯೂ ಆಗಿರುವ ಚಿಯಾ, ಮಲೇಷ್ಯನ್ನರು ಸಿಂಗಾಪುರಕ್ಕೆ ಹೋಗಲು ಸಾಧ್ಯವಿಲ್ಲ. ಯಾಕೆಂದರೆ ಅವರ ವಿಮಾನಗಳು ಹಾರಾಡುವುದಿಲ್ಲ ಎಂದಿದ್ದರು. ಬಳಿಕ ಆಕೆ ಅದಕ್ಕೆ ವಿವರಣೆ ನೀಡಿ, ತಾನು 2014ರಲ್ಲಿ ಕಣ್ಮರೆಯಾದ ಎಂಎಚ್ 370 ವಿಮಾನದ ಕುರಿತು ಮಾತನಾಡಿರುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: ರಾಷ್ಟ್ರೀಯ ಭದ್ರತೆಯೆಡೆಗೆ ದಕ್ಷಿಣ ಕೊರಿಯಾದ ಬದ್ಧತೆ: ಸೆಲೆಬ್ರಿಟಿಗಳಿಗೂ ಹೊರತಲ್ಲದ ಕಡ್ಡಾಯ ಸೇನಾ ಸೇವೆ

ಈ ಮಾತನ್ನು ಕೇಳಿ, ಅಲ್ಲಿ ಸೇರಿದ್ದ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದಕ್ಕೆ ಪ್ರತಿಕ್ರಿಯಿಸುತ್ತಾ ಮಾತು ಮುಂದುವರಿಸಿದ ಚಿಯಾ, “ಯಾಕೆ? ಮಲೇಷ್ಯನ್ ಏರ್‌ಲೈನ್ಸ್ ಸಂಸ್ಥೆಯ ವಿಮಾನ ಕಳೆದುಹೋಗಿರುವುದು ಹಾಸ್ಯವಲ್ಲವಲ್ಲ? ಸಿಂಗಾಪುರದಲ್ಲಂತೂ ಇದು ಅಪಾಯಕಾರಿ ಹಾಸ್ಯ!” ಎಂದಿದ್ದರು.

ಮಲೇಷ್ಯಾದ ಪೊಲೀಸ್ ಮುಖ್ಯಸ್ಥ ಅಕ್ರಿಲ್ ಸನಿ ಅಬ್ದುಲ್ಲಾ ಸನಿ ಮಂಗಳವಾರ ಈ ವಿವಾದಕ್ಕೆ ಪ್ರವೇಶಿಸಿದ್ದು, ತಾನು ಚಿಯಾ ಅವರ ಇತ್ಯೋಪರಿಗಳನ್ನು ತಿಳಿಯಲು, ವಿಚಾರಣೆ ನಡೆಸಲು ಇಂಟರ್‌ಪೋಲ್ ಸಹಾಯ ಪಡೆಯುವುದಾಗಿ ಹೇಳಿಕೆ ನೀಡಿದರು. ಆಕೆಯನ್ನು ಮಲೇಷ್ಯಾದ ಕ್ರಿಮಿನಲ್ ಕೋಡ್ ಮತ್ತು ಸಂವಹನ ನೀತಿಯಡಿ ಹುಡುಕಾಟ ನಡೆಸಲಾಗುತ್ತಿದೆ ಎಂದಿದ್ದರು.

ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಮಾನವೀಯ ನೆಲೆಯ ಜಂಟಿ ನೌಕಾ ಅಭ್ಯಾಸದಲ್ಲಿ ಪಾಲ್ಗೊಂಡ 36 ರಾಷ್ಟ್ರಗಳ ನೌಕಾಪಡೆಗಳು

“ಪೊಲೀಸರು ಈಗಾಗಲೇ ಆ ವೀಡಿಯೋದಲ್ಲಿ ಆಕೆ ಆಡಿರುವ ಮಾತುಗಳ ಪ್ರತಿಲಿಪಿ ದಾಖಲಿಸಿದ್ದಾರೆ” ಎಂದು ಅಕ್ರಿಲ್ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಕ್ರಿಲ್ ತನ್ನ ಹೇಳಿಕೆಯಲ್ಲಿ, ಪೊಲೀಸ್ ಇಲಾಖೆ ಈಗಾಗಲೇ ಮಲೇಷ್ಯನ್ ಕಮ್ಯುನಿಕೇಷನ್ ಆ್ಯಂಡ್ ಮಲ್ಟಿಮೀಡಿಯಾ (ಎಂಸಿಎಂಸಿ) ಸಂಸ್ಥೆಗೆ ಚಿಯಾ ಅವರ ವ್ಯಕ್ತಿಚಿತ್ರ ತಯಾರಿಸಿ, ಆಕೆಯ ಸಾಮಾಜಿಕ ಜಾಲತಾಣಗಳನ್ನು ಪರಿಶೋಧಿಸಲು ಸಹಾಯ ಮಾಡುವಂತೆ ಹೇಳಿದೆ ಎಂದಿದ್ದಾರೆ.

ಮಾರ್ಚ್ 2014ರಲ್ಲಿ ಎಂಎಚ್ 370 ವಿಮಾನ ಮಲೇಷ್ಯಾದ ಕೌಲಾಲಂಪುರದಿಂದ ಬೀಜಿಂಗ್‌ಗೆ ತೆರಳುವ ಮಾರ್ಗದಲ್ಲಿ ಕಣ್ಮರೆಯಾಯಿತು. ಈ ವಿಮಾನದ ಪತ್ತೆಗಾಗಿ ಸಾಕಷ್ಟು ಪ್ರಯತ್ನ ನಡೆಸಲಾಯಿತಾದರೂ, ವಿಮಾನದಲ್ಲಿದ್ದ 239 ಪ್ರಯಾಣಿಕರು ಮತ್ತು ಸಿಬ್ಬಂದಿ ಎಲ್ಲಿದ್ದಾರೆ ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಮಲೇಷ್ಯಾದ ಎರಡೂ ಬದಿಯ ಗಡಿಗಳಾಚೆಯಿಂದಲೂ ಚಿಯಾ ಮಾಡಿದ ಹಾಸ್ಯದ ಕುರಿತು ಆಕ್ರೋಶ, ಕೋಪ ವ್ಯಕ್ತವಾಗಿದೆ.

ಸಿಂಗಾಪುರದ ವಿದೇಶಾಂಗ ಸಚಿವರಾದ ವಿವಿಯನ್ ಬಾಲಕೃಷ್ಣನ್ ಅವರು ಚಿಯಾ ಆಡಿರುವ ಮಾತುಗಳಿಂದ ತಾನು ಗಾಬರಿಗೊಳಗಾಗಿದ್ದೇನೆ ಎಂದಿದ್ದು, ಮಲೇಷ್ಯನ್ನರ ಭಾವನೆಗಳಿಗೆ ಆಕೆ ನೋವುಂಟುಮಾಡಿರುವುದಕ್ಕೆ ಕ್ಷಮೆ ಯಾಚಿಸಿದ್ದಾರೆ. ಮಲೇಷ್ಯಾದ ವಿದೇಶಾಂಗ ಸಚಿವರಾದ ಜ಼ಾಂಬ್ರಿ ಅಬ್ದ್ ಕಾದಿರ್ ಅವರು ಆಕೆಯ ಹಾಸ್ಯ ಮಲೇಷ್ಯನ್ನರ ಕುರಿತು, ಎಂಎಚ್ 370 ವಿಮಾನ ಸಂತ್ರಸ್ತರು ಮತ್ತು ಅವರ ಕುಟುಂಬಸ್ತರ ಕುರಿತು ಯಾವುದೇ ಕಾಳಜಿ, ಅರ್ಥೈಸುವಿಕೆಯನ್ನು ಹೊಂದಿರಲಿಲ್ಲ ಎಂದಿದ್ದಾರೆ.

ಸಿಎನ್ಎನ್ ಮಾಧ್ಯಮದ ಜೊತೆಗಿನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಚಿಯಾ, ತಾನು ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಈ ಹಾಸ್ಯವನ್ನು ನೂರಕ್ಕೂ ಹೆಚ್ಚು ಬಾರಿ ಪ್ರಸ್ತುತಪಡಿಸಿದ್ದು, ಇಲ್ಲಿಯ ತನಕ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ ಎಂದಿದ್ದಾರೆ. ಆದರೆ, ಈಗ ವಿವಾದಕ್ಕೊಳಗಾಗಿರುವ ಅಂಶವನ್ನು ಮಾತ್ರವೇ ಸಣ್ಣ ವೀಡಿಯೋ ತುಣುಕನ್ನಾಗಿ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಾಗ, ತಾನು ಆಡಿದ ಮಾತುಗಳಲ್ಲಿನ ಕೆಲವು ಪ್ರಮುಖ ಅಂಶಗಳು ಅದರಲ್ಲಿ ಕಾಣಿಸಿಕೊಂಡಿಲ್ಲ ಎಂದಿದ್ದಾರೆ.

“ನಾನು ಆಡಿರುವ ಹಾಸ್ಯವನ್ನು ನಾನು ಈಗಲೂ ಸಮರ್ಥಿಸಿಕೊಳ್ಳುತ್ತೇನೆ. ಆದರೆ ಇಲ್ಲಿ ಒಂದು ವಿಚಾರವಿದೆ. ಅದೆಂದರೆ, ಆ ಹಾಸ್ಯವನ್ನು ಸಂಪೂರ್ಣವಾಗಿ ಆ ಕಾಮಿಕ್ ಕ್ಲಬ್‌ನಲ್ಲೇ ಕೇಳಿಸಿಕೊಳ್ಳಬೇಕು! ಆದರೆ ಈಗ ಈ ಕುರಿತು ಯೋಚಿಸುವಾಗ, ಕಾಮಿಡಿ ಕ್ಲಬ್‌‌ನಿಂದ ಹೊರಗೆ ಆ ವೀಡಿಯೋವನ್ನು ನೋಡುವುದು ವಿವಾದಾತ್ಮಕ ಆಗಬಹುದು” ಎಂದು ಆಕೆ ಹೇಳಿದ್ದಾರೆ.

ಈ ವಿವಾದದ ಕುರಿತು ಸಾಕಷ್ಟು ಮಲೇಷ್ಯನ್ನರು ಟ್ವೀಟ್ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. “ಪೊಲೀಸರಿಗೆ ಈ ವಿಚಾರದ ಕುರಿತು ಸಮಯ ವ್ಯರ್ಥ ಮಾಡಲು ಹೇಳಿದವರು ಯಾರು? ಯಾವನೋ ರಾಜಕಾರಣಿಯೇ?” ಎಂದು ಜಾಕ್ ಮೈಕ್ ಎಂಬವರು ಮಲಯ್ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.

“ಈಗಾಗಲೇ ಮಲೇಷ್ಯನ್ ಪೊಲೀಸರು ಸಾಕಷ್ಟು ಕೆಟ್ಟ ವ್ಯಕ್ತಿಗಳನ್ನು ಬಂಧಿಸುವುದು ಬಾಕಿಯಿದೆ. ಚಿಯಾ ಮಾಡಿರುವುದು ಕೇವಲ ಒಂದು ಬುದ್ಧಿಹೀನ ಹಾಸ್ಯವಷ್ಟೇ. ಅದು ಹೇಗೋ ಆ ವೀಡಿಯೋ ವೈರಲ್ ಆಗಿದೆ. ಕೆಲವು ರಾಜಕಾರಣಿಗಳು ಇದನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ” ಎಂದು ಇನ್ನೊಬ್ಬರು ಹೇಳಿದ್ದಾರೆ.

ಇನ್ನೊಬ್ಬ ಮಲೇಷ್ಯನ್ ವ್ಯಕ್ತಿ ಈ ಕುರಿತು ಪ್ರತಿಕ್ರಿಯಿಸಿ, ಮಲೇಷ್ಯಾದ ಸರ್ಕಾರಿ ನಿಧಿ 1ಎಂಡಿಬಿ ಯಲ್ಲಿ ಬಹು ಬಿಲಿಯನ್ ಡಾಲರ್ ಹಗರಣದ ಹಿಂದಿನ ತಲೆ, ಪಲಾಯನಗೈದಿರುವ ಉದ್ಯಮಿ ಝೋ ಲೋ ಎಂಬಾತನನ್ನು ಬಂಧಿಸಲು ಮಲೇಷ್ಯನ್ ಪೊಲೀಸರು ಇಷ್ಟು ಪ್ರಯತ್ನ ನಡೆಸಿದ್ದರೆ ಅದಕ್ಕೊಂದು ಅರ್ಥವಿತ್ತು ಎಂದಿದ್ದಾರೆ.

ಚಿಯಾ ಹಾಸ್ಯದ ಕುರಿತು ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದರೂ, ಪೊಲೀಸರು ನಿಜವಾದ ಅಪರಾಧಿಗಳು, ಮೋಸಗಾರರನ್ನು ಹಿಡಿಯುವ ಬದಲು ಚಿಯಾರನ್ನು ಗುರಿಯಾಗಿಸಿರುವುದನ್ನು ಮಲೇಷ್ಯಾದ ಜನರು ವಿರೋಧಿಸುತ್ತಿದ್ದಾರೆ.

ಗಿರೀಶ್ ಲಿಂಗಣ್ಣ

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಮತ್ತಷ್ಟು ಅಭಿಮತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ