ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 (Chandrayaan-3) ಯೋಜನೆ ಯಶಸ್ವಿಯಾಗಿದೆ. ವಿಕ್ರಂ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿದು ಅದರಿಂದ ಹೊರಬಂದಿರುವ ಪ್ರಗ್ಯಾನ್ ರೋವರ್ ತನ್ನ ಕೆಲಸ ಆರಂಭಿಸಿದೆ. ಆ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಮಾಡಿದ ಮೊದಲ ದೇಶವೆಂಬ ಹೆಗ್ಗಳಿಕೆಗೂ ಭಾರತ (India) ಪಾತ್ರವಾಗಿದೆ. ಅತ್ತ ಪ್ರಗ್ಯಾನ್ ರೋವರ್ ಚಂದ್ರನ ಅನ್ವೇಷಣೆಯ ಕೆಲಸ ಆರಂಭಿಸಿದ್ದರೆ ಇತ್ತ ಚಂದ್ರಯಾನ ಯೋಜನೆಯ ಯಶಸ್ಸಿನ ಶ್ರೇಯಸ್ಸು ಯಾರಿಗೆ ಸಲ್ಲಬೇಕು ಎಂಬ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ಆರಂಭವಾಗಿದೆ. ಈ ಮಹತ್ಸಾಧನೆಯ ಸಂಪೂರ್ಣ ಶ್ರೇಯಸ್ಸು ಇಸ್ರೋ ವಿಜ್ಞಾನಿಗಳಿಗೇ ಸಲ್ಲಬೇಕು ಎಂಬುದು ಒಂದು ವರ್ಗದವರ ವಾದವಾದರೆ, ಸಂಸ್ಥೆಯ ಯತ್ನಗಳಿಗೆ ಸದಾ ಬೆಂಬಲ ನೀಡಿ ಬೆನ್ನುತಟ್ಟುವುದರ ಜತೆ ಸೂಕ್ತ ಅನುದಾನ ಒದಗಿಸಿದ ಕೇಂದ್ರ ಸರ್ಕಾರದ ಪಾತ್ರವನ್ನೂ ಕಡೆಗಣಿಸುವಂತಿಲ್ಲ ಎಂಬುದು ಮತ್ತೊಂದು ವರ್ಗದವರ ವಾದ.
ಸಾಮಾಜಿಕ ಮಾಧ್ಯಮಗಳ ಚರ್ಚೆಯ ವಿಷಯ ಒಂದೆಡೆಯಾದರೆ, ಅತ್ತ ರಾಜಕೀಯ ಪಕ್ಷಗಳು ಸದ್ದಿಲ್ಲದೇ ತಮ್ಮನ್ನು ತಾವು ಬೆನ್ನು ತಟ್ಟಿಕೊಳ್ಳುವ ಯತ್ನ ಆರಂಭಿಸಿವೆ. ನೇರವಾಗಿ ಅಲ್ಲವಾದರೂ, ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವ, ಅವರ ಸಾಧನೆಯನ್ನು ಕೊಂಡಾಡುವ, ಅವರನ್ನು ಖುದ್ದು ಭೇಟಿಯಾಗುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರವನ್ನು ರಾಜಕಾರಣಿಗಳು ಆರಂಭಿಸಿರುವುದು ಈಗ ಜಗಜ್ಜಾಹೀರಾಗಿದೆ.
ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ, ಚಂದ್ರಯಾನದ ಲ್ಯಾಂಡಿಂಗ್ ಪ್ರಕ್ರಿಯೆಯ ನೇರ ಪ್ರಸಾರದ ಸಂದರ್ಭದಲ್ಲಿ ವರ್ಚುವಲ್ ಆಗಿ ಇಸ್ರೋ ವಿಜ್ಞಾನಿಗಳ ಜತೆಗೂಡಿದ್ದರು. ಅಲ್ಲದೆ, ಯೋಜನೆ ಯಶಸ್ವಿಯಾಗುತ್ತಿದ್ದಂತೆಯೇ ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಗೆ ದೂರವಾಣಿ ಕರೆ ಮಾಡಿ ಇಡೀ ತಂಡವನ್ನು ಅಭಿನಂದಿಸಿದ್ದರು. ಸದ್ಯ ಗ್ರೀಕ್ನಲ್ಲಿರುವ ಮೋದಿ ನೇರವಾಗಿ ಬೆಂಗಳೂರಿಗೆ ಬರಲಿದ್ದಾರೆ. ಪೀಣ್ಯದಲ್ಲಿರುವ ಇಸ್ರೋ ಕಚೇರಿಗೆ ತೆರಳಿ ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿತು.
ಇಸ್ರೋ ಕೇಂದ್ರ ಕಚೇರಿಗೆ ಮೋದಿ ಬರುತ್ತಾರೆ ಎಂದು ವರದಿಯಾದ ಬೆನ್ನಲ್ಲೇ ಎಚ್ಚೆತ್ತ ಕಾಂಗ್ರೆಸ್ ತಕ್ಷಣ ಕಾರ್ಯಪ್ರವೃತ್ತವಾಯಿತು. ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೋದ ಈವರೆಗಿನ ಬೆಳವಣಿಗೆಯಲ್ಲಿ ಕೇಂದ್ರದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರಗಳ ಕೊಡುಗೆ ಮಹತ್ವದ್ದೆಂದು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ವಿವರ ನೀಡಲಾರಂಭಿಸಿತು. ಇಸ್ರೋ ಈವರೆಗಿನ ಸಾಧನೆಯಲ್ಲಿ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ, ಇಂದಿರಾ ಗಾಂಧಿ ಅವರ ಕೊಡುಗೆ ಬಹಳಷ್ಟಿದೆ ಎಂದು ಹೇಳಿಕೊಳ್ಳಲಾರಂಭಿಸಿತು. ದಿನಪತ್ರಿಕೆಗಳಿಗೆ ಜಾಹೀರಾತನ್ನೂ ನೀಡುವ ಮೂಲಕ ಪ್ರಚಾರದ ತಂತ್ರವನ್ನು ಜಗಜ್ಜಾಹೀರುಗೊಳಿಸಿತು. ‘ಚಂದ್ರನಲ್ಲಿ ಭಾರತ (ಇಂಡಿಯಾ ಆನ್ ದಿ ಮೂನ್)’ ಎಂಬ ಶೀರ್ಷಿಕೆಯಡಿ ಕಾಂಗ್ರೆಸ್ ಪ್ರಕಟಿಸಿದ ಜಾಹೀರಾತಿನಲ್ಲಿ ನೆಹರೂ, ಎಪಿಜೆ ಅಬ್ದುಲ್ ಕಲಾಂ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಚಿತ್ರಗಳು, ಇಸ್ರೋ ವಿಜ್ಞಾನಿಗಳ ಜತೆ ಸಿದ್ದರಾಮಯ್ಯ, ಡಿಕೆಶಿ ಇರುವ ಚಿತ್ರಗಳನ್ನು ಪ್ರಕಟಿಸಲಾಯಿತು.
ಈ ಮಧ್ಯೆ, ಯೋಜನೆ ಯಶಸ್ವಿಯಾದ ಬೆನ್ನಲ್ಲೇ ಡಿಕೆ ಶಿವಕುಮಾರ್ ಅವರು ಇಸ್ರೋ ಕಚೇರಿಗೆ ತೆರಳಿ ವಿಜ್ಞಾನಿಗಳನ್ನು ಅಭಿನಂದಿಸಿ ಬಂದರು. ಮರುದಿನ ಸಿದ್ದರಾಮಯ್ಯ ಕೂಡ ತೆರಳಿ ವಿಜ್ಞಾನಿಗಳಿಗೆ ಸಿಹಿ ತಿನ್ನಿಸಿ ಅಭಿನಂದಿಸಿ ಬಂದರು. 2019ರಲ್ಲಿ ಚಂದ್ರಯಾನ-2 ವಿಫಲವಾದ ಸಂದರ್ಭ ಹಾಗೂ ಚಂದ್ರಯಾನ-1 ರ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಯಾರೂ ಇಸ್ರೋ ಕಚೇರಿಗೆ ಭೇಟಿ ನೀಡಿರಲಿಲ್ಲ ಮತ್ತು ಆ ಕುರಿತು ಹೆಚ್ಚಿನ ಪ್ರಸ್ತಾಪ ಮಾಡಿರಲಿಲ್ಲ ಎಂಬುದೂ ನಿಜ.
ಚಂದ್ರಯಾನ-3ರ ಯಶಸ್ಸಿನ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳ ವೇತನ ವಿಚಾರವಾಗಿ ಕಾಂಗ್ರೆಸ್ ಆರೋಪಗಳನ್ನು ಮಾಡಿದೆ. ‘ಇಸ್ರೋ ವಿಜ್ಞಾನಿಗಳಿಗೆ 17 ತಿಂಗಳುಗಳಿಂದ ವೇತನ ಕೊಟ್ಟಿಲ್ಲ. ಈ ಬಗ್ಗೆ ಪ್ರಧಾನಿ ಮೋದಿ ಸ್ಪಷ್ಟನೆ ನೀಡಬೇಕು’ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳ ಮೂಲಕವೂ ಕಾಂಗ್ರೆಸ್ ಟೀಕೆಗಳನ್ನು ಮಾಡಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಪ್ರಧಾನಿ ಮೋದಿ, ಚಂದ್ರಯಾನ-3 ಯಶಸ್ಸಿನ ಶ್ರೇಯವನ್ನು ಪಡೆದುಕೊಳ್ಳಬಹುದು ಎಂಬ ಆತಂಕದಲ್ಲಿ ಕಾಂಗ್ರೆಸ್ ತಾನೇ ಮೊದಲಾಗಿ ಪ್ರಚಾರದ ಅಖಾಡಕ್ಕಿಳಿದಿರುವುದು ಸ್ಪಷ್ಟ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಅದರ ಸಚಿವರು ನೇರವಾಗಿ ಪ್ರಧಾನಿ ಕಾರ್ಯಾಲಯದ ಅಧೀನದಲ್ಲಿ ಬರುತ್ತಾರೆ. ಹೀಗಾಗಿ ಮಹತ್ವದ ಯೋಜನೆಯೊಂದು ಸಾಕಾರಗೊಂಡಾಗ ಪ್ರಧಾನಿಯವರು ಖುದ್ದು ಭೇಟಿ ನೀಡಿ ಅಭಿನಂದಿಸುವುದು ಸಹಜ ನಡೆಯಾಗುತ್ತದೆ. ಬಿಜೆಪಿ ಇದನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದೆ ಎಂಬುದನ್ನು ಅಲ್ಲಗಳೆಯಲು ಆಗುವುದಿಲ್ಲವಾದರೂ ಮೋದಿ ಭೇಟಿಯನ್ನು ಪ್ರಶ್ನಿಸಲೂ ಆಗುವುದಿಲ್ಲ. ಹಾಗೆಂದು, ರಾಜ್ಯ ಸರ್ಕಾರ ಹಾಗೂ ಅದರ ಸಚಿವರು ಭೇಟಿ ನೀಡುವುದು ಕೂಡ ತಪ್ಪೇನು ಅಲ್ಲ.
ಇಸ್ರೋ ಇತಿಹಾಸದಲ್ಲೇ ದೊಡ್ಡ ಮಟ್ಟದ ಸಾಧನೆ ಮಾಡುವುದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಇಚ್ಛಾಶಕ್ತಿ, ಪ್ರೋತ್ಸಾಹ ಹಾಗೂ ಕೇಂದ್ರ ಸರ್ಕಾರ ಮಾಡಿಕೊಟ್ಟ ಅನುಕೂಲಗಳು ಕೆಲಸ ಮಾಡಿವೆ ಎಂಬುದು ಬಿಜೆಪಿ ಹಾಗೂ ಮೋದಿ ಅಭಿಮಾನಿಗಳ ವಾದ. ನೇರವಾಗಿ ಚಂದ್ರಯಾನ ಯೋಜನೆಯ ಶ್ರೇಯಸ್ಸು ತನ್ನದು ಅಥವಾ ತಮ್ಮ ಸರ್ಕಾರದ್ದೆಂದು ಮೋದಿ ಈವರೆಗೆ ಹೇಳಿಲ್ಲ. ಯೋಜನೆಯ ಯಶಸ್ಸು ಇಸ್ರೋ ವಿಜ್ಞಾನಿಗಳ ಅವಿರತ ಶ್ರಮದ ಫಲ ಎಂದೂ ಇಡೀ ಭಾರತೀಯರ ಸಾಧನೆ ಎಂದೂ ಬಣ್ಣಿಸಿದ್ದಾರೆ. ಆದರೆ, ಚಂದ್ರಯಾನ-2 ಹಾಗೂ ಚಂದ್ರಯಾನ-3 ಯೋಜನೆಯ ಪ್ರಮುಖ ಘಟ್ಟಗಳಲ್ಲಿ ಪ್ರಧಾನಿಯಾಗಿ ಅವರು ಸದಾ ಇಸ್ರೋ ಜತೆಗಿದ್ದರು ಎಂಬುದು ವಾಸ್ತವ.
2019ರಲ್ಲಿ ಚಂದ್ರಯಾನ-2 ರ ಪ್ರತಿ ಹಂತದ ಮಾಹಿತಿಯನ್ನು ವಿಜ್ಞಾನಿಗಳಿಂದ ಪಡೆದಿದ್ದ ಮೋದಿ, ಲ್ಯಾಂಡಿಂಗ್ ಪ್ರಕ್ರಿಯೆಯ ವೇಳೆ ಖುದ್ದು ಪೀಣ್ಯದಲ್ಲಿರುವ ಇಸ್ರೋ ಕೇಂದ್ರ ಕಚೇರಿಯಲ್ಲಿದ್ದರು. ಲ್ಯಾಂಡಿಂಗ್ ವಿಫಲವಾದಾಗ ಇಸ್ರೋದ ಅಂದಿನ ಅಧ್ಯಕ್ಷ ಕೆ ಶಿವನ್ ಅವರು ಭಾವುಕರಾಗಿ ಅತ್ತಿದ್ದರು. ಆ ಕ್ಷಣ ಅವರನ್ನು ತಬ್ಬಿಕೊಂಡು ಮೋದಿ ಸಂತೈಸಿದ ಚಿತ್ರಗಳು ವೈರಲ್ ಆಗಿದ್ದವು. ಚಂದ್ರಯಾನ-3ರ ಕೊನೆಯ ಕ್ಷಣದಲ್ಲಿ ಕೂಡ ಆ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು.
ಚಂದ್ರಯಾನ-2 ರ ಲ್ಯಾಂಡಿಂಗ್ ವೈಫಲ್ಯದ ಬಗ್ಗೆ ಮಾಹಿತಿ ಪಡೆದಿದ್ದ ಮೋದಿ ಚಂದ್ರಯಾನ-3ಕ್ಕೆ ಅಣಿಯಾಗುವಂತೆ ವಿಜ್ಞಾನಿಗಳನ್ನು ಹುರಿದುಂಬಿಸಿದ್ದರು. ಅಲ್ಲದೆ, ಕೇಂದ್ರ ಸರ್ಕಾರ ಹಾಗೂ ಇಡೀ ದೇಶ ನಿಮ್ಮ ಜತೆಗಿದೆ. ನಿಮ್ಮ ಕೆಲಸ ಮುಂದುವರಿಸಿ ಎಂದು ಹೇಳಿದ್ದರು. ಆ ನಂತರ ಸತತ ಮೂರು ವರ್ಷಗಳ ಇಸ್ರೋ ವಿಜ್ಞಾನಿಗಳ ಸಾಧನೆ ಯಶಸ್ವಿಯಾಗಿದ್ದು ಈಗ ಇತಿಹಾಸ.
ಈ ಮಧ್ಯೆ, ಪೀಣ್ಯದಲ್ಲಿರುವ ಇಸ್ರೋ ಕೇಂದ್ರ ಕಚೇರಿಗೆ ಮೋದಿ ಮತ್ತೊಮ್ಮೆ ಬರುತ್ತಿದ್ದಾರೆ. ಚಂದ್ರಯಾನ-3 ರ ಯಶಸ್ಸಿಗಾಗಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಅವರು ಬರುತ್ತಿದ್ದಾರಾದರೂ ಈ ಬೇಟಿಯನ್ನು ಸಂಪೂರ್ಣ ಪ್ರಚಾರಕ್ಕೆ ಬಳಸಿಕೊಳ್ಳಬೇಕೆಂಬ ತಂತ್ರ ಬಿಜೆಪಿಯದ್ದು. ಪಕ್ಷದ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ಸೂಚನೆ ಮೇರೆಗೆ ರಾಜ್ಯ ನಾಯಕರು ಈಗಾಗಲೇ ಸಿದ್ಧತೆಯನ್ನು ಮಾಡಿದ್ದಾರೆ. ಈ ಮಧ್ಯೆ, ಪೀಣ್ಯದಲ್ಲಿ ಮೋದಿ ಅವರ ರೋಡ್ ಶೋ ನಡೆಸಬೇಕೆಂಬ ಬಿಜೆಪಿಯ ಆಸೆಗೆ ಎಸ್ಪಿಜಿ ತಣ್ಣೀರೆರಚಿದೆ. ಆದಾಗ್ಯೂ, ಹೆಚ್ಚಿನ ಸಂಖ್ಯೆಯಲ್ಲಿ ಮೋದಿ ವೀಕ್ಷಣೆಗೆ ಬರುವಂತೆ ಜನರಿಗೆ ಬಿಜೆಪಿ ನಾಯಕರು ಕರೆ ನೀಡಿದ್ದಾರೆ.
ಇದನ್ನೂ ಓದಿ: Chandrayaan 3: ವಿಕ್ರಮ್, ಪ್ರಗ್ಯಾನ್ ಮರಳಿ ಭೂಮಿಗೆ? 14 ದಿನಗಳ ನಂತರ ಏನಾಗುತ್ತದೆ ಈ ಮಿಷನ್?
ಇಸ್ರೋ ಕಚೇರಿಗೆ ಭೇಟಿ ನೀಡಿದ ಮೋದಿ ಯಾವ ಹೆಜ್ಜೆ ಅನುಸರಿಸಲಿದ್ದಾರೆ? ಚಂದ್ರಯಾನ-3ರ ಯಶಸ್ಸಿನಲ್ಲಿ ಭಾಗಿಯಾದ ವಿಜ್ಞಾನಿಗಳಿಗೆ ವಿಶೇಷ ಉಡುಗೊರೆಯನ್ನೇನಾದರೂ ಘೋಷಿಸಲಿದ್ದಾರೆಯೇ? ಸಂಸ್ಥೆಗೆ ಹೆಚ್ಚುವರಿ ಅನುದಾನ ಘೋಷಣೆ ಮಾಡುವ ಮೂಲಕ ಮತ್ತೆ ಇಸ್ರೋ ಸಾಧನೆಗಳ ಹಿಂದೆ ಈ ಹಿಂದೆಯ ತಾನಿದ್ದೆ, ಮುಂದೆಯೂ ಇದ್ದೇನೆ ಎಂಬ ಸಂದೇಶ ನೀಡಲಿದ್ದಾರೆಯೇ? ಕಾದುನೋಡಬೇಕಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 4:25 pm, Fri, 25 August 23