ಚಂದ್ರನಂಗಳದ ವಿಜಯದಿಂದ ಸೂರ್ಯ ಅನ್ವೇಷಣೆಯಡೆಗೆ: ಆದಿತ್ಯ-ಎಲ್1 ನೊಂದಿಗೆ ಮುಂದುವರಿಯಲಿದೆ ಭಾರತದ ಜೈತ್ರಯಾತ್ರೆ

Aditya-L1; ಸೂರ್ಯನಿಂದ ಉಗಮವಾಗಿ, ಭೂಮಿಯೆಡೆಗೆ ಚಲಿಸುವ ಪ್ರತಿಯೊಂದು ಬಿರುಗಾಳಿಯೂ ಎಲ್1 ಎಂದು ಕರೆಯಲಾಗುವ ಒಂದು ವಿಶೇಷ ಬಿಂದುವನ್ನು ದಾಟಿಯೇ ತೆರಳಬೇಕಾಗುತ್ತದೆ. ಈ ಎಲ್1 ಸುತ್ತಲಿನ ಕಕ್ಷೆಯಲ್ಲಿ ಉಪಗ್ರಹವೊಂದನ್ನು ಇಡುವುದರಿಂದ, ಅದು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸೂರ್ಯನನ್ನು ಗಮನಿಸುತ್ತಿರಬಹುದು. ಆ ಮೂಲಕ ನಮಗೆ ಸೂರ್ಯನನ್ನು ತಿಳಿಯಲು ಸಾಧ್ಯವಾಗುತ್ತದೆ.

ಚಂದ್ರನಂಗಳದ ವಿಜಯದಿಂದ ಸೂರ್ಯ ಅನ್ವೇಷಣೆಯಡೆಗೆ: ಆದಿತ್ಯ-ಎಲ್1 ನೊಂದಿಗೆ ಮುಂದುವರಿಯಲಿದೆ ಭಾರತದ ಜೈತ್ರಯಾತ್ರೆ
ಆದಿತ್ಯ-ಎಲ್1 ನೊಂದಿಗೆ ಮುಂದುವರಿಯಲಿದೆ ಭಾರತದ ಜೈತ್ರಯಾತ್ರೆ
Follow us
TV9 Web
| Updated By: Digi Tech Desk

Updated on:Sep 01, 2023 | 11:28 AM

ಸಮಸ್ತ ಭಾರತ ಇನ್ನೂ ಚಂದ್ರಯಾನ-3 ಯೋಜನೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಸಾಧನೆಯನ್ನು ಸಂಭ್ರಮಿಸುತ್ತಿದ್ದರೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮುಂದಿನ ಎರಡು ವಾರಗಳ ಒಳಗಾಗಿ, ಸೂರ್ಯನ ಕುರಿತು ಅಧ್ಯಯನ ನಡೆಸುವ ಯೋಜನೆಯ ಬಾಹ್ಯಾಕಾಶ ನೌಕೆಯ ಉಡಾವಣೆಗೆ ಸಿದ್ಧತೆ ನಡೆಸುತ್ತಿದೆ. ಆದಿತ್ಯ-ಎಲ್1 (Aditya-L1) ಎಂದು ಹೆಸರಿಡಲಾಗಿರುವ ಈ ಯೋಜನೆಯಡಿ, ಭಾರತೀಯ ಬಾಹ್ಯಾಕಾಶ ನೌಕೆ ಹಿಂದೆಂದಿಗಿಂತಲೂ ಅತಿಹೆಚ್ಚು ದೂರ ಸಾಗಲಿದೆ.

ಆದಿತ್ಯ-ಎಲ್1 ಯೋಜನೆಯ ಸಿದ್ಧತೆಗಳು ಸುಗಮವಾಗಿ ಸಾಗುತ್ತಿವೆ. 5 ವರ್ಷಗಳ ಅವಧಿಯ ಯೋಜನೆ ಇದಾಗಿದ್ದು, ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ, ವಿಜ್ಞಾನಿಗಳ ತಂಡ ಬಾಹ್ಯಾಕಾಶ ನೌಕೆಯ ಅಂತಿಮ ಹಂತದ ಪರಿಶೀಲನೆಗಳನ್ನು ನಡೆಸುತ್ತಿದೆ. ಇನ್ನು ಪಿಎಸ್ಎಲ್‌ವಿ ರಾಕೆಟ್ (ಯೋಜನಾ ಸಂಖ್ಯೆ ಸಿ57) ಜೋಡಿಸುವಿಕೆ ನೆರವೇರುತ್ತಿದೆ ಎಂದು ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾದ ಎ ರಾಜರಾಜನ್ ತಿಳಿಸಿದ್ದಾರೆ.

ಏನಿದು ಆದಿತ್ಯ-ಎಲ್1 ಯೋಜನೆ?

ಭೂಮಿ ಮತ್ತು ಸೂರ್ಯರ ನಡುವೆ 15 ಕೋಟಿ ಕಿಲೋಮೀಟರ್ ಅಂತರವಿದೆ. ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿ ಎಲ್1 ಲ್ಯಾಗ್ರೇಂಜ್ ಬಿಂದುವಿದೆ (ಲ್ಯಾಗ್ರೇಂಜ್ ಬಿಂದು ಎಂದರೆ ಎರಡು ಗ್ರಹಗಳ ನಡುವಣ ಗುರುತ್ವ ಶಕ್ತಿ ಶೂನ್ಯವಾಗಿರುವ ಪ್ರದೇಶ ಅಥವಾ ಬಿಂದು). ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆ ಈ ಎಲ್1 ಬಿಂದುವಿಗೆ ತೆರಳಿ, ತನ್ನ ಏಳು ವೈಜ್ಞಾನಿಕ ಉಪಕರಣಗಳನ್ನು ಬಳಸಿಕೊಂಡು ಸೂರ್ಯನ ವಾತಾವರಣ, ಹಾಗೂ ಕಾಂತೀಯ ಕ್ಷೇತ್ರದ ಕುರಿತು ಅಧ್ಯಯನ ನಡೆಸಲಿದೆ. ಇದು ಸೂರ್ಯನ ಹೊರ ಪದರ, ಅದರ ಹೊರಸೂಸುವಿಕೆ, ಅದು ಉತ್ಪಾದಿಸುವ ಗಾಳಿ, ಸೂರ್ಯನ ಮೇಲ್ಮೈಯಲ್ಲಿ ನಡೆಯುವ ಸ್ಫೋಟಗಳು ಮತ್ತು ಅದರಿಂದ ಬಿಡುಗಡೆಯಾಗುವ ಅಪಾರ ಶಕ್ತಿಗಳನ್ನು ಅಧ್ಯಯನ ಮಾಡಲಿದೆ. ಈ ಬಾಹ್ಯಾಕಾಶ ನೌಕೆ ಎಲ್ಲ ಸಮಯದಲ್ಲೂ ಸೂರ್ಯನ ಛಾಯಾಚಿತ್ರಗಳನ್ನು ತೆಗೆಯಲಿದೆ.

ಸೂರ್ಯನ ಅಧ್ಯಯನಕ್ಕೆ ಯಾಕೆ ಮಹತ್ವ?

ನಮ್ಮ ಭೂಮಿಯೂ ಸೇರಿದಂತೆ, ಸೌರಮಂಡಲ ಮತ್ತು ಅದರಾಚೆಗಿನ ಎಲ್ಲ ಗ್ರಹಗಳು ತಮ್ಮ ಮುಖ್ಯ ನಕ್ಷತ್ರದ ಅನುಸಾರವಾಗಿ ಬದಲಾಗುತ್ತವೆ. ಸೂರ್ಯನ ವಾತಾವರಣ ಸಂಪೂರ್ಣ ವ್ಯವಸ್ಥೆಯ ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ. ಈ ಬದಲಾವಣೆಗಳು ಉಪಗ್ರಹಗಳನ್ನು ಬೇರೆ ರೀತಿಯಲ್ಲಿ ಚಲಿಸುವಂತೆ ಮಾಡಬಹುದು, ಇಲೆಕ್ಟ್ರಾನಿಕ್ಸ್ ವ್ಯವಸ್ಥೆಗಳನ್ನು ಹಾಳು ಮಾಡಬಹುದು, ಹಾಗೂ ಭೂಮಿಯ ಮೇಲೆ ವಿದ್ಯುತ್ ಸಮಸ್ಯೆಗಳನ್ನು ಉಂಟುಮಾಡಬಹುದು. ಸೂರ್ಯನಲ್ಲಿ ನಡೆಯುವ ಚಟುವಟಿಕೆಗಳನ್ನು ಅರ್ಥೈಸಿಕೊಳ್ಳುವುದರಿಂದ ನಮಗೆ ಬಾಹ್ಯಾಕಾಶದ ವಾತಾವರಣವನ್ನು ತಿಳಿಯಲು ಸಾಧ್ಯವಾಗುತ್ತದೆ.

ಭೂಮಿಯ ಕಡೆಗೆ ಬರುವ ಉಷ್ಣ ಬಿರುಗಾಳಿಗಳನ್ನು ಅರ್ಥ ಮಾಡಿಕೊಳ್ಳಲು, ಮೊದಲೇ ಸಿದ್ಧರಾಗಲು ನಾವು ಸತತವಾಗಿ ಸೂರ್ಯನನ್ನು ಗಮನಿಸಬೇಕಾಗುತ್ತದೆ. ಸೂರ್ಯನಿಂದ ಉಗಮವಾಗಿ, ಭೂಮಿಯೆಡೆಗೆ ಚಲಿಸುವ ಪ್ರತಿಯೊಂದು ಬಿರುಗಾಳಿಯೂ ಎಲ್1 ಎಂದು ಕರೆಯಲಾಗುವ ಒಂದು ವಿಶೇಷ ಬಿಂದುವನ್ನು ದಾಟಿಯೇ ತೆರಳಬೇಕಾಗುತ್ತದೆ. ಈ ಎಲ್1 ಸುತ್ತಲಿನ ಕಕ್ಷೆಯಲ್ಲಿ ಉಪಗ್ರಹವೊಂದನ್ನು ಇಡುವುದರಿಂದ, ಅದು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸೂರ್ಯನನ್ನು ಗಮನಿಸುತ್ತಿರಬಹುದು. ಆ ಮೂಲಕ ನಮಗೆ ಸೂರ್ಯನನ್ನು ತಿಳಿಯಲು ಸಾಧ್ಯವಾಗುತ್ತದೆ.

ಈ ಎಲ್1 ಲ್ಯಾಗ್ರೇಂಜ್ ಬಿಂದು ಒಂದು ವಿಶೇಷ ಸ್ಥಳವಾಗಿದ್ದು, ಇದು ಸೂರ್ಯ ಮತ್ತು ಭೂಮಿಯ ನಡುವೆ ಇರುವ ಸ್ಥಾನವಾಗಿದ್ದು, ಭೂಮಿಯಿಂದ ಬಹುತೇಕ 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ. ಈ ಬಿಂದುವಿನಲ್ಲಿ, ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣಾ ಬಲ ಸಮಾನವಾಗಿದ್ದು, ಇಲ್ಲಿನ ವಸ್ತುಗಳು ಎರಡರ ಸೆಳೆತಕ್ಕೂ ಸಿಗದೆ ಇರಲು ಸಾಧ್ಯವಾಗುತ್ತದೆ. ಈ ಸ್ಥಳ ಉಪಗ್ರಹಗಳು ಮತ್ತು ಬಾಹ್ಯಾಕಾಶ ನೌಕೆಗಳು ಸೂರ್ಯನ ಸುತ್ತಲೂ ಇರುವ ಭೂಮಿಯ ಕಕ್ಷೆಯೆಡೆಗೆ ಜೋಡಿಸಿದಂತೆ ಇರಲು ಸಾಧ್ಯವಾಗುತ್ತದೆ. ಈ ತಾಣದಲ್ಲಿ ಇರುವ ವಸ್ತುಗಳು ನಿರಂತರವಾಗಿ ಸೂರ್ಯನನ್ನು ಗಮನಿಸುತ್ತಾ ಇರಲು ಸಾಧ್ಯವಾಗುವುದರಿಂದ, ಇದು ಸೂರ್ಯ ವೀಕ್ಷಣೆಗೆ ಮಹತ್ತರ ಬಿಂದುವಾಗಿದ್ದು, ಸೌರ ಚಟುವಟಿಕೆಗಳು ಮತ್ತು ಬಾಹ್ಯಾಕಾಶ ಹವಾಮಾನ ಅಧ್ಯಯನಕ್ಕೆ ಹೇಳಿ ಮಾಡಿಸಿದಂತಿದೆ.

ಎಲ್1 ಲ್ಯಾಗ್ರೇಂಜ್ ಬಿಂದುವಿನಲ್ಲಿ ಬಾಹ್ಯಾಕಾಶ ನೌಕೆ ಅತ್ಯಂತ ಕನಿಷ್ಠ ಪ್ರಮಾಣದ ಇಂಧನವನ್ನು ಬಳಸಿಕೊಂಡು, ತನ್ನ ಸ್ಥಾನವನ್ನು ಉಳಿಸಿಕೊಳ್ಳಲಾಗುತ್ತದೆ. ಅದರೊಡನೆ, ಈ ಎಲ್1 ಬಿಂದುವಿನಲ್ಲೇ ಸೋಲಾರ್ ಆ್ಯಂಡ್ ಹೀಲಿಯೋಸ್ಫಿಯರಿಕ್ ಅಬ್ಸರ್ವೇಟರಿ ಸ್ಯಾಟಲೈಟ್ (SOHO) ಇದೆ. ಈ ಉಪಗ್ರಹ ನಾಸಾ ಹಾಗೂ ಯುರೋಪಿಯನ್ ಸ್ಪೇಸ್ ಏಜೆನ್ಸಿಗಳ (ಇಎಸ್ಎ) ಜಂಟಿ‌ ಪ್ರಯತ್ನವಾಗಿದೆ.

ಇದನ್ನೂ ಓದಿ: ಚಂದ್ರಯಾನ-3: ಜಿ20ಗೆ ಭಾರತದ ಮಹತ್ವಾಕಾಂಕ್ಷೆಯ ಸಂದೇಶ ನೀಡಿದ ಚಂದ್ರನ ಮೇಲಿನ ಲ್ಯಾಂಡಿಂಗ್

2018ರಲ್ಲಿ ಉಡಾವಣೆಗೊಂಡ ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಈ ಹಿಂದಿನ ಯಾವುದೇ ಬಾಹ್ಯಾಕಾಶ ನೌಕೆಗಿಂತಲೂ ಹೆಚ್ಚು ಸೂರ್ಯನ ಸನಿಹಕ್ಕೆ ತೆರಳಿದೆ. ಒಂದು ಸಣ್ಣ ಕಾರಿನ ಗಾತ್ರದಲ್ಲಿರುವ ಈ ಬಾಹ್ಯಾಕಾಶ ನೌಕೆ, ಸೂರ್ಯನ ಹೊರ ಪದರದ ಮೂಲಕ ಚಲಿಸುತ್ತಾ, ಸೂರ್ಯನ ಮೇಲ್ಮೈಯಿಂದ ಬಹುತೇಕ 4 ಮಿಲಿಯನ್ ಮೈಲಿಯಷ್ಟು ಸನಿಹಕ್ಕೆ ಚಲಿಸುತ್ತದೆ. ಪಾರ್ಕರ್ ಸೋಲಾರ್ ಪ್ರೋಬ್ ಅನ್ನು ಡೆಲ್ಟಾ 4 – ಹೆವಿ ರಾಕೆಟ್ ಬಳಸಿ, ಆಗಸ್ಟ್ 12, 2018ರಂದು ಈಸ್ಟರ್ನ್ ಡೇಲೈಟ್ ಟೈಮ್ ಬೆಳಗಿನ 3:31ಕ್ಕೆ ಉಡಾವಣೆಗೊಳಿಸಲಾಗಿತ್ತು.

ಆದಿತ್ಯ-ಎಲ್1 ಎಷ್ಟು ತಾಪಮಾನವನ್ನು ಎದುರಿಸಲಿದೆ?

ಸೂರ್ಯನ ಸನಿಹಕ್ಕೆ ತೆರಳುವಾಗ, ಪಾರ್ಕರ್ ಸೋಲಾರ್ ಪ್ರೋಬ್ 1000 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚಿನ ತಾಪಮಾನವನ್ನು ಎದುರಿಸುತ್ತದಾದರೂ, ಅದು ಸತತವಾಗಿ ಯಾವುದೇ ಸಮಸ್ಯೆ ಇಲ್ಲದೆ ಕಾರ್ಯಾಚರಿಸುತ್ತಿದೆ. ಇನ್ನೊಂದೆಡೆ, ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆ ನಾಸಾದ ನೌಕೆಗಿಂತ ಸಾಕಷ್ಟು ದೂರದ ಸ್ಥಾನದಲ್ಲಿ ಇರುವುದರಿಂದ, ಅಷ್ಟೊಂದು ಭಾರೀ ತಾಪಮಾನವನ್ನು ಎದುರಿಸಬೇಕಾಗಿ ಬರುವುದಿಲ್ಲ. ಆದರೂ, ಆದಿತ್ಯ-ಎಲ್1 ಮುಂದೆ ಅದರದೇ ಆದ ಒಂದಷ್ಟು ಸವಾಲುಗಳು ಇದ್ದೇ ಇರುತ್ತವೆ.

ಪೇಲೋಡ್‌ಗಳು

ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆ ಸೂರ್ಯನ ಹೊರಪದರಗಳಾದ ಫೋಟೋಸ್ಫಿಯರ್, ಕ್ರೋಮೋಸ್ಫಿಯರ್ ಮತ್ತು ಪೂರ್ಣವಾಗಿ ಹೊರಗಿನ ಪ್ರದೇಶಗಳನ್ನು ಅಧ್ಯಯನ ನಡೆಸಲು ಏಳು ವೈಜ್ಞಾನಿಕ ಉಪಕರಣಗಳನ್ನು ಒಯ್ಯಲಿದೆ. ಈ ಉಪಕರಣಗಳಲ್ಲಿ ವಿದ್ಯುತ್ ಕಾಂತೀಯ ಮತ್ತು ಕಣಗಳ ಚಟುವಟಿಕೆಗಳನ್ನು ಗುರುತಿಸುವ ಡಿಟೆಕ್ಟರ್‌ಗಳು, ಕಾಂತೀಯ ಕ್ಷೇತ್ರದ ಮಾಪಕಗಳೂ ಸೇರಿವೆ.

ಸರಳವಾಗಿ ಹೇಳುವುದಾದರೆ, ಪೇಲೋಡ್‌ಗಳೆಂದರೆ ಬಾಹ್ಯಾಕಾಶ ನೌಕೆ ಕಾರ್ಯಾಚರಿಸಲು ಬೇಕಾದ ವಸ್ತುಗಳಲ್ಲದೆ, ಒಯ್ಯುವ ಹೆಚ್ಚುವರಿ ಉಪಕರಣಗಳಾಗಿವೆ. ಎಲ್1 ಬಿಂದುವಿನಲ್ಲಿ, ನಾಲ್ಕು ಪೇಲೋಡ್‌ಗಳು ನೇರವಾಗಿ ಸೂರ್ಯನನ್ನು ವೀಕ್ಷಿಸಲಿವೆ. ಉಳಿದ ಪೇಲೋಡ್‌ಗಳು ಆ ಬಿಂದುವಿನಲ್ಲಿನ ಕಣಗಳು ಮತ್ತು ಕ್ಷೇತ್ರಗಳನ್ನು ಅಧ್ಯಯನ ನಡೆಸಲಿವೆ.

ಯೋಜನೆಯ ಉದ್ದೇಶ

ಸೂರ್ಯನ ಅಧ್ಯಯನ ನಡೆಸುವುದರಿಂದ ನಮಗೆ ನಮ್ಮ ಗ್ಯಾಲಾಕ್ಸಿ ಮತ್ತು ಅದರಾಚೆಗಿನ ನಕ್ಷತ್ರಗಳ ಕುರಿತು ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ. ಸೂರ್ಯನ ಅಪರಿಮಿತ ಉಷ್ಣತೆ ಮತ್ತು ಕಾಂತೀಯ ವರ್ತನೆ ನಾವು ಪ್ರಯೋಗಾಲಯದಲ್ಲಿ ಮರುಸೃಷ್ಟಿಸಲು ಸಾಧ್ಯವಿಲ್ಲದಂತಹ ಚಟುವಟಿಕೆಗಳನಗನು ಅರ್ಥ ಮಾಡಿಕೊಳ್ಳಲು ಪೂರಕವಾಗಿದೆ. ಆದಿತ್ಯ-ಎಲ್1 ಯೋಜನೆ ಇಂತಹ ಪ್ರಯೋಗಕ್ಕೆ ಹೇಳಿ ಮಾಡಿಸಿದಂತಹ ನೈಸರ್ಗಿಕ ಪ್ರಯೋಗಾಲಯವಾಗಿದೆ.

ಗಿರೀಶ್ ಲಿಂಗಣ್ಣ

(ಲೇಖಕರು; ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Published On - 12:01 pm, Sat, 26 August 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್