‘45’ ಸಿನಿಮಾದಿಂದ ಬಿಡುಗಡೆ ಆಯ್ತು ಶಿವನ ಹಾಡು ‘ಶಿವಂ ಶಿವಂ ಸನಾತನಂ’
ಶಿವನ ಕುರಿತ ‘ಶಿವಂ ಶಿವಂ ಸನಾತನಂ’ ಎಂಬ ಹಾಡನ್ನು ‘45’ ಸಿನಿಮಾ ತಂಡದವರು ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಅವರು ನಿರ್ದೇಶನ ಮತ್ತು ಸಂಗೀತ ಸಂಯೋಜನೆ ಮಾಡಿದ್ದಾರೆ ಎಂಬುದು ವಿಶೇಷ. ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ‘45’ ಚಿತ್ರತಂಡದವರು ಮಾತನಾಡಿದರು. ಆ ಬಗ್ಗೆ ಇಲ್ಲಿದೆ ವಿವರ.

‘45’ ಸಿನಿಮಾದಲ್ಲಿ ‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಇದು. ‘ಸೂರಜ್ ಪ್ರೊಡಕ್ಷನ್ಸ್’ ಮೂಲಕ ಶ್ರೀಮತಿ ಉಮಾ ರಮೇಶ್ ರೆಡ್ಡಿ ಅವರು ನಿರ್ಮಾಣ ಮಾಡಿದ್ದಾರೆ. ‘45’ (45 Movie) ಸಿನಿಮಾಗಾಗಿ ವಿ. ನಾಗೇಂದ್ರ ಪ್ರಸಾದ್ ಅವರು ‘ಶಿವಂ ಶಿವಂ ಸನಾತನಂ..’ ಹಾಡು ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ. ಇತ್ತೀಚೆಗೆ ಈ ಸಾಂಗ್ ರಿಲೀಸ್ ಆಯಿತು.
ಆನಂದ ಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ ಶ್ರೀಬಾಲ್ಕಾನಂದ ಗಿರಿ ಜಿ ಮಹಾರಾಜ್ ಅವರು ದೆಹಲಿಯಿಂದ ಬಂದು ಈ ಹಾಡನ್ನು ಬಿಡುಗಡೆ ಮಾಡಿದರು. ಬಳಿಕ ಅವರು ಚಿತ್ರತಂಡದವನ್ನು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಈ ಗೀತೆಗೆ ಶಿವರಾಜ್ಕುಮಾರ್ ಡ್ಯಾನ್ಸ್ ಮಾಡಿದ್ದು ವಿಶೇಷವಾಗಿತ್ತು. ‘ಆನಂದ್ ಆಡಿಯೋ’ ಮೂಲಕ ಈ ಹಾಡು ರಿಲೀಸ್ ಆಗಿದೆ.
ನಿರ್ಮಾಪಕ ರಮೇಶ್ ರೆಡ್ಡಿ ಅವರು ಈ ಸಂದರ್ಭದಲ್ಲಿ ಮಾತನಾಡಿದರು. ದೂರದಿಂದ ಬಂದು ಹಾಡು ಬಿಡುಗಡೆ ಮಾಡಿಕೊಟ್ಟ ಪೂಜ್ಯರಿಗೆ ಅವರು ಧನ್ಯವಾದ ಅರ್ಪಿಸಿದರು. ‘ನಮ್ಮ ಸಿನಿಮಾಗೆ ಅರ್ಜುನ್ ಜನ್ಯ ಅವರಂತಹ ಡೈರೆಕ್ಟರ್ ಸಿಕ್ಕಿದ್ದು ತುಂಬ ಖುಷಿ ಆಗಿದೆ. ಈ ಸಿನಿಮಾದ ಶುರುವಿನಿಂದ ಅವರು ಈ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಈಗ ಬಿಡುಗಡೆ ಆಗಿರುವ ಶಿವನ ಕುರಿತ ಹಾಡು ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿದೆ. ಈ ಸಾಂಗ್ ಇಡೀ ದೇಶದಲ್ಲಿ ಸದ್ದು ಮಾಡಲಿದೆ’ ಎಂದು ರಮೇಶ್ ರೆಡ್ಡಿ ಹೇಳಿದರು.
‘ಶಿವಂ ಶಿವಂ ಸನಾತನಂ..’ ಹಾಡು:
ನಿರ್ದೇಶಕ ಅರ್ಜುನ್ ಜನ್ಯ ಅವರು ಮಾತನಾಡಿ, ‘ಶಿವನ ಕುರಿತಾದ ಹಾಡು ಬರೆದುಕೊಟ್ಟ ನಾಗೇಂದ್ರ ಪ್ರಸಾದ್ ಮತ್ತು ಧ್ವನಿ ನೀಡಿದ ವಿಜಯ್ ಪ್ರಕಾಶ್ ಅವರಿಗೆ ಧನ್ಯವಾದಗಳು. ಈ ಹಾಡು ಮತ್ತು ಸಿನಿಮಾ ಇಷ್ಟು ಚೆನ್ನಾಗಿ ಮೂಡಿಬರಲು ನಿರ್ಮಾಪಕ ರಮೇಶ್ ರೆಡ್ಡಿ ಅವರೇ ಮುಖ್ಯ ಕಾರಣ. ನಾನು ಡೈರೆಕ್ಷನ್ ಮಾಡಲು ಪ್ರೇರಣೆ ನೀಡಿದ್ದೇ ಶಿವರಾಜ್ಕುಮಾರ್. ಅವರ ಪ್ರೋತ್ಸಾಹಕ್ಕೆ ನಾನು ಚಿರ ಋಣಿ ಆಗಿರುವೆ’ ಎಂದರು.
ಇದನ್ನೂ ಓದಿ: ಇದು ಬರೀ ಸಿನಿಮಾ ಹಾಡಲ್ಲ, ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಶಿವರಾಜ್ಕುಮಾರ್ ಅವರು ಅರ್ಜುನ್ ಜನ್ಯ ಪ್ರತಿಭೆಯನ್ನು ಹೊಗಳಿದರು. ‘ಅರ್ಜುನ್ ಜನ್ಯ ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದಲ್ಲೇ ಉತ್ತಮ ನಿರ್ದೇಶಕನಾಗಿ ಹೆಸರು ಮಾಡುತ್ತಾರೆ. ಈಗ ಬಿಡುಗಡೆ ಆಗಿರುವ ಶಿವನ ಹಾಡಂತೂ ಬಹಳ ಚೆನ್ನಾಗಿದೆ. ನಿರ್ಮಾಪಕ ರಮೇಶ್ ರೆಡ್ಡಿ ನಮ್ಮ ಕುಟುಂಬದವರಂತೆ. ಕಳೆದ ವರ್ಷ ನಾನು ಈ ಸಿನಿಮಾಗೆ ಕನ್ನಡದಲ್ಲಿ ಡಬ್ಬಿಂಗ್ ಮುಗಿಸಿದ್ದೆ. ಈಗ ತಮಿಳಿನಲ್ಲಿ ಡಬ್ ಮಾಡುತ್ತಿದ್ದೇನೆ. ಆದಷ್ಟು ಎಲ್ಲಾ ಭಾಷೆಗಳಲ್ಲೂ ನಾನೇ ಡಬ್ ಮಾಡುತ್ತೇನೆ’ ಎಂದು ಶಿವಣ್ಣ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








