ಅಬ್ಬಬ್ಬಾ… ‘ರಾಮಾಯಣ’ ಸಿನಿಮಾ ಬಜೆಟ್ ಬರೋಬ್ಬರಿ 835 ಕೋಟಿ ರೂಪಾಯಿ?
ನಟ ರಣಬೀರ್ ಕಪೂರ್ ಅವರು ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭ ಆಗಿದೆ. ಈ ಸಿನಿಮಾದ ಬಜೆಟ್ ಬಗ್ಗೆ ಒಂದು ಅಚ್ಚರಿಯ ಮಾಹಿತಿ ಕೇಳಿಬಂದಿದೆ. 835 ಕೋಟಿ ರೂಪಾಯಿ ಬಜೆಟ್ನಲ್ಲಿ ‘ರಾಮಾಯಣ’ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಕೆಲವು ನಿರ್ಮಾಪಕರು, ನಟರು ಮತ್ತು ನಿರ್ದೇಶಕರು ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಭಾರತೀಯ ಚಿತ್ರರಂಗದ ವ್ಯಾಪ್ತಿ ಹೆಚ್ಚುತ್ತಿದೆ. ಬಜೆಟ್ ಕೂಡ ಹಿರಿದಾಗುತ್ತಿದೆ. ಕಳೆದ ಕೆಲವು ತಿಂಗಳಿಂದ ‘ರಾಮಾಯಣ’ ಸಿನಿಮಾ (Ramayana Movie) ಬಗ್ಗೆ ಹಲವಾರು ಬಗೆಯ ಸುದ್ದಿ ಕೇಳಿಬಂದಿವೆ. ಈಗ ಈ ಚಿತ್ರದ ಬಜೆಟ್ ಬಗ್ಗೆ ಒಂದು ಅಚ್ಚರಿಯ ಮಾಹಿತಿ ಹರಿದಾಡಿದೆ. ರಾಮಾಯಣ ಕಥೆಯಾಧಾರಿತ ಈ ಸಿನಿಮಾಗೆ ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿದ್ದು, ನಮಿತ್ ಮಲ್ಹೋತ್ರಾ ನಿರ್ಮಾಣ ಮಾಡುತ್ತಿದ್ದಾರೆ. ಯಶ್ (Yash) ಅವರು ಸಹ-ನಿರ್ಮಾಪಕರಾಗಿದ್ದಾರೆ. ಈ ಚಿತ್ರದ ಬಜೆಟ್ (Ramayana Movie Budget) ಬರೋಬ್ಬರಿ 835 ಕೋಟಿ ರೂಪಾಯಿ ಎಂದು ವರದಿ ಆಗಿದೆ!
ಬೃಹತ್ ಬಜೆಟ್ನಲ್ಲಿ ‘ರಾಮಾಯಣ’ ಸಿನಿಮಾ ಸಿದ್ಧವಾಗುತ್ತಿದೆ. ಈಗಾಗಲೇ ಈ ಸಿನಿಮಾಗೆ ಶೂಟಿಂಗ್ ಆರಂಭ ಆಗಿದೆ. ರಾಮನಾಗಿ ರಣಬೀರ್ ಕಪೂರ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಅನೇಕ ಘಟಾನುಘಟಿ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಕಲಾವಿದರ ಸಂಭಾವನೆ, ಸೆಟ್ ನಿರ್ಮಾಣ, ಗ್ರಾಫಿಕ್ಸ್ ಕೆಲಸ ಎಲ್ಲವೂ ಸೇರಿ ಈ ಸಿನಿಮಾದ ಬಜೆಟ್ 100 ಮಿಲಿಯನ್ ಅಮೆರಿಕನ್ ಡಾಲರ್ ಎಂದು ‘ಬಾಲಿವುಡ್ ಹಂಗಾಮಾ’ ವರದಿ ಮಾಡಿದೆ.
2022ರಲ್ಲಿ ಬಿಡುಗಡೆ ಆದ ‘ಬ್ರಹ್ಮಾಸ್ತ್ರ’ ಸಿನಿಮಾಗೆ 450 ಕೋಟಿ ರೂಪಾಯಿ ಬಜೆಟ್ ಸುರಿಯಲಾಗಿತ್ತು. ಅದು ಬಾಲಿವುಡ್ನಲ್ಲಿ ಈವರೆಗಿನ ಅತಿ ದೊಡ್ಡ ಬಜೆಟ್ನ ಸಿನಿಮಾ ಎನಿಸಿಕೊಂಡಿತ್ತು. ಆ ಸಿನಿಮಾದಲ್ಲೂ ರಣಬೀರ್ ಕಪೂರ್ ಹೀರೋ ಆಗಿದ್ದರು. ಈಗ ಅವರೇ ಆ ದಾಖಲೆಯನ್ನು ಮುರಿಯಲಿದ್ದಾರೆ. ರಣಬೀರ್ ಕಪೂರ್ ನಟನೆಯ ‘ರಾಮಾಯಣ: ಪಾರ್ಟ್ 1’ ಸಿನಿಮಾದ ಬಜೆಟ್ 835 ಕೋಟಿ ರೂ. ಎಂಬ ಸುದ್ದಿ ಹರಿದಾಡಿದೆ. ನಿರ್ಮಾಣ ಸಂಸ್ಥೆ ಕಡೆಯಿಂದ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬರುವುದು ಬಾಕಿ ಇದೆ.
ಇದನ್ನೂ ಓದಿ: ‘ರಾಮಾಯಣ’ ಚಿತ್ರತಂಡದ ಮೇಲೆ ಕಾಪಿರೈಟ್ ಉಲ್ಲಂಘನೆ ಆರೋಪ; ನಿರ್ಮಾಪಕರಿಗೆ ನೋಟಿಸ್
ಯಶ್ ಅವರು ‘ರಾಮಾಯಣ’ ಸಿನಿಮಾದ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಅವರ ಆಗಮನದ ಬಳಿಕ ಸಿನಿಮಾದ ಗಾತ್ರ ಹಿರಿದಾಗಿದೆ. 835 ಕೋಟಿ ರೂಪಾಯಿ ಬಜೆಟ್ ಸುರಿಯುತ್ತಿರುವುದು ಕೇವಲ ‘ರಾಮಾಯಣ’ ಸಿನಿಮಾದ ಮೊದಲ ಪಾರ್ಟ್ಗೆ ಮಾತ್ರ. ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಬರೋಬ್ಬರಿ 600 ದಿನಗಳನ್ನು ಮೀಸಲಿಡಲಾಗುತ್ತಿದೆ. ರಾಮಾಯಣದ ಕಥೆಯನ್ನು ಅದ್ಭುತ ದೃಶ್ಯ ವೈಭವದೊಂದಿಗೆ ಪ್ರೇಕ್ಷಕರಿಗೆ ತೋರಿಸಲು ಚಿತ್ರತಂಡ ನಿರ್ಧರಿಸಿದೆ. ಆ ಕಾರಣಕ್ಕಾಗಿ ಇಷ್ಟು ದೊಡ್ಡ ಬಜೆಟ್ನಲ್ಲಿ ಸಿನಿಮಾ ಮಾಡಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.