ಚಂದ್ರಯಾನ-3: ಜಿ20ಗೆ ಭಾರತದ ಮಹತ್ವಾಕಾಂಕ್ಷೆಯ ಸಂದೇಶ ನೀಡಿದ ಚಂದ್ರನ ಮೇಲಿನ ಲ್ಯಾಂಡಿಂಗ್

ಮುಂದಿನ ತಿಂಗಳು ಜಿ20 ಸಮಾವೇಶವನ್ನು ಭಾರತ ಆಯೋಜಿಸಲಿದೆ. ಈ ಮಹತ್ವದ ಸಂದರ್ಭದಲ್ಲಿ, ಮುಂದಿನ ದಶಕದಲ್ಲಿ ಜಾಗತಿಕ ಉಡಾವಣಾ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಐದು ಪಟ್ಟು ಹೆಚ್ಚಿಸುವ ಉದ್ದೇಶವನ್ನು ಭಾರತ ಹೊಂದಿದೆ. ಬಾಹ್ಯಾಕಾಶ ವಲಯದಲ್ಲಿ ವಿದೇಶೀ ಹೂಡಿಕೆಗೆ ಅನುಮತಿ ನೀಡುವ ಆಯ್ಕೆಯ ಕುರಿತು ಆಲೋಚಿಸುತ್ತಿದೆ.

ಚಂದ್ರಯಾನ-3: ಜಿ20ಗೆ ಭಾರತದ ಮಹತ್ವಾಕಾಂಕ್ಷೆಯ ಸಂದೇಶ ನೀಡಿದ ಚಂದ್ರನ ಮೇಲಿನ ಲ್ಯಾಂಡಿಂಗ್
ಚಂದ್ರಯಾನ-3: ಜಿ20ಗೆ ಭಾರತದ ಮಹತ್ವಾಕಾಂಕ್ಷೆಯ ಸಂದೇಶ ನೀಡಿದ ಚಂದ್ರನ ಮೇಲಿನ ಲ್ಯಾಂಡಿಂಗ್
Follow us
TV9 Web
| Updated By: Ganapathi Sharma

Updated on:Aug 25, 2023 | 6:12 PM

ಭಾರತದ ಚಂದ್ರಯಾನ-3 (Chandrayaan-3) ಬಾಹ್ಯಾಕಾಶ ನೌಕೆ ಗುರುವಾರ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್ ಲ್ಯಾಂಡಿಂಗ್ ನಡೆಸಿದ ಬಳಿಕ, ಅದರ ಲೂನಾರ್ ರೋವರ್ ಲ್ಯಾಂಡರ್‌ನಿಂದ ಕೆಳಗಿಳಿಯಿತು. ಈ ಮಹಾನ್ ಸಾಧನೆ ಜಗತ್ತಿನ ಗಮನ ಸೆಳೆದು, ಭಾರತದ ತಾಂತ್ರಿಕ ಸಾಮರ್ಥ್ಯವನ್ನು ಪ್ರದರ್ಶಿಸಿತು. ಈ ಸಾಧನೆಯಿಂದ ಸಂತೋಷಗೊಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ‘ಚಂದ್ರಯಾನ-3 ರೋವರ್ ಲ್ಯಾಂಡರ್‌ನಿಂದ ಕೆಳಗಿಳಿದಿದೆ. ಭಾರತ ಚಂದ್ರನ ಮೇಲೆ ಪ್ರಯಾಣ ಆರಂಭಿಸಿದೆ!’ ಎಂದಿದೆ. ಅಪಾರ ಪ್ರಮಾಣದ ಕುಳಿಗಳನ್ನು ಹೊಂದಿರುವ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮಂಜುಗಡ್ಡೆಯ ರೂಪದಲ್ಲಿ ನೀರು ಇದೆ ಎಂದು ನಂಬಲಾಗಿದೆ. ಇಂತಹ ಪ್ರದೇಶದಲ್ಲಿ ಧೂಳು ಮತ್ತು ಕಲ್ಲುಗಳನ್ನು ತಪ್ಪಿಸಿ ಬಾಹ್ಯಾಕಾಶ ನೌಕೆ ಇಳಿದಿದೆ.

ಒಂದು ವೇಳೆ ರೋವರ್ ಏನಾದರೂ ಚಂದ್ರನ ಮೇಲ್ಮೈಯಲ್ಲಿ ಮಂಜುಗಡ್ಡೆಯನ್ನು ಪತ್ತೆಹಚ್ಚಿದರೆ, ಅದು ಮಾನವರಿಗೆ ನೂತನ ನೆಲೆಯನ್ನು ಸ್ಥಾಪಿಸುವ ಹೊಸ ಸಾಧ್ಯತೆಯನ್ನು ತೆರೆದಿಡಲಿದೆ. ನೀರಿನ ಅನ್ವೇಷಣೆ, ಮುಂದಿನ ಬಾಹ್ಯಾಕಾಶ ಯೋಜನೆಗಳಿಗೆ ಇಂಧನ, ಆಮ್ಲಜನಕ ಹಾಗೂ ಶುದ್ಧ ನೀರನ್ನು ಪೂರೈಸಲು ನೆರವಾಗಲಿದೆ.

2019ರ ಚಂದ್ರಯಾನ-2 ಯೋಜನೆ ವೈಫಲ್ಯ ಕಂಡ ಬಳಿಕ, ಚಂದ್ರಯಾನ-3ರಲ್ಲಿ ಯಶಸ್ಸು ಸಾಧಿಸಿ, ಅಮೆರಿಕಾ, ಸೋವಿಯತ್ ಒಕ್ಕೂಟ ಮತ್ತು ಚೀನಾಗಳ ಬಳಿಕ ಈ ಸಾಧನೆ ಮಾಡಿರುವ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.

ಆದರೆ ಇಲ್ಲಿಯತನಕ ಯಾವ ರಾಷ್ಟ್ರವೂ ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸುವ ಸಾಧನೆ ಕೈಗೊಂಡಿಲ್ಲ. ಚಂದ್ರಯಾನ-3 ‘20 ನಿಮಿಷಗಳ ಭಯಾತಂಕ’ ಎಂದು ಪರಿಗಣಿಸಲಾದ, ಚಂದ್ರನ ಕಲ್ಲುಬಂಡೆಗಳ ಮೇಲ್ಮೈಗೆ ಅಪ್ಪಳಿಸಬಹುದಾದ ಅಪಾಯಕರ ಹಾದಿಯನ್ನು ಯಶಸ್ವಿಯಾಗಿ ಪೂರೈಸಿದೆ.

ಚಂದ್ರಯಾನ-3 ಯೋಜನೆಗೂ ಮುನ್ನ, ಚಂದ್ರಯಾನ-2 ಯೋಜನೆಯಲ್ಲಿ ಭಾರತ ಆರ್ಬಿಟರ್ ಅನ್ನು ಕಕ್ಷೆಗೆ ಜೋಡಿಸಲು ಯಶಸ್ವಿಯಾದರೂ, ಅದರ ಲ್ಯಾಂಡರ್ ದುರದೃಷ್ಟವಶಾತ್ ಚಂದ್ರನ ಮೇಲ್ಮೈಯಲ್ಲಿ ಪತನಗೊಂಡಿತು. ಇನ್ನು ರಷ್ಯಾದ ಲೂನಾ-25 ಯೋಜನೆ ಲ್ಯಾಂಡಿಂಗ್ ಪೂರ್ವ ಕಕ್ಷೆಯಲ್ಲಿ ಎದುರಾದ ಅಸಮರ್ಪಕತೆಯ ಕಾರಣದಿಂದಾಗಿ ಪತನಗೊಂಡು, ವಿಫಲವಾಯಿತು.

ಇಸ್ರೋ ಸಾಧನೆಗೆ ಜಾಗತಿಕ ಗಣ್ಯರ ಶ್ಲಾಘನೆ, ಮೋದಿಗೆ ಅಭಿನಂದನೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ, ಜಗತ್ತಿನಾದ್ಯಂತ ನೂರಾರು ಗಣ್ಯರು ಇಸ್ರೋದ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬಾಹ್ಯಾಕಾಶ ಪ್ರಯಾಣ ವೆಚ್ಚವನ್ನು ಕಡಿಮೆಗೊಳಿಸುವ, ಮಂಗಳ ಗ್ರಹದಲ್ಲಿ ಮಾನವ ನೆಲೆ ಸ್ಥಾಪಿಸುವ ಗುರಿ ಹೊಂದಿರುವ, ಸ್ಪೇಸ್ ಎಕ್ಸ್ ಸಂಸ್ಥೆಯ ಸ್ಥಾಪಕ ಇಲಾನ್ ಮಸ್ಕ್ ಅವರೂ ಭಾರತದ ಸಾಧನೆಯನ್ನು ಪ್ರಶಂಸಿಸಿದ್ದಾರೆ.

‘ಓರ್ವ ಬಾಹ್ಯಾಕಾಶ ಕ್ಷೇತ್ರದ ಆಸಕ್ತನಾಗಿ, ಭಾರತದ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿರುವುದು ಒಂದು ಮಹತ್ವದ ಸಾಧನೆಯಾಗಿದ್ದು, ಅದನ್ನು ವೀಕ್ಷಿಸಿರುವುದು ನನಗೆ ಸಂತಸ ತಂದಿದೆ’ ಎಂದು ಇಲಾನ್ ಮಸ್ಕ್ ತನ್ನ ಮಾಲಕತ್ವದ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘಿಸಿದ್ದಾರೆ. ಅವರು ಭಾರತ ಉತ್ತಮ ತಾಂತ್ರಿಕ ಪ್ರಾವೀಣ್ಯತೆ ಮತ್ತು ವಿನೂತನ ಚಿಂತಕರನ್ನು ಹೊಂದಿದೆ ಎಂದಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಸಮಾವೇಶದ ಸಂದರ್ಭದಲ್ಲಿ, ವೀಡಿಯೋ ಕಾನ್ಫರೆನ್ಸ್ ನೇರ ಪ್ರಸಾರದ ಮೂಲಕ‌ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಭಾರತದ ವಿಜ್ಞಾನಿಗಳ ಸಾಧನೆಯನ್ನು ಶ್ಲಾಘಿಸಿ, ಚಂದ್ರ ಅನ್ವೇಷಣೆಯಲ್ಲಿ ಭಾರತದ ಯಶಸ್ಸು ಸಂಪೂರ್ಣ ಮನುಕುಲಕ್ಕೆ ಸೇರಿದ್ದು ಎಂದಿದ್ದಾರೆ. ಅವರು ಈ ಸಾಧನೆ ಬಾಹ್ಯಾಕಾಶದ ಹೊಸ ಮಗ್ಗುಲುಗಳನ್ನು ಪರಿಚಯಿಸಲಿದೆ ಎಂದಿದ್ದಾರೆ.

‘ನಾವು ಇನ್ನು ಚಂದ್ರ ಮತ್ತು ಅದನ್ನೂ ಮೀರಿ ಸಾಧಿಸುವ ಗುರಿ ಹಮ್ಮಿಕೊಳ್ಳಲಿದ್ದೇವೆ’ ಎಂದು ಮೋದಿ ಹೇಳಿದ್ದಾರೆ.

ಯೂಟ್ಯೂಬ್ ಮೂಲಕ ನಡೆಸಿದ ಚಂದ್ರಯಾನ-3ರ ಸಾಫ್ಟ್ ಲ್ಯಾಂಡಿಂಗ್ ನೇರ ಪ್ರಸಾರವನ್ನು 7 ಮಿಲಿಯನ್ ಜನರು ವೀಕ್ಷಿಸಿದ್ದು, ಜಗತ್ತಿನಾದ್ಯಂತ ಮಿಲಿಯಾಂತರ ಜನರು ಗಮನಿಸಿದ್ದಾರೆ. ಭಾರತದಲ್ಲಿ, ಶಾಲೆಗಳು ವಿದ್ಯಾರ್ಥಿಗಳಿಗಾಗಿ ಲ್ಯಾಂಡಿಂಗ್ ಪ್ರಕ್ರಿಯೆಯ ನೇರ ಪ್ರಸಾರ ಆಯೋಜಿಸಿದ್ದವು. ದೇಶಾದ್ಯಂತ ಸಂಭ್ರಮಾಚರಣೆಗಳು, ಧಾರ್ಮಿಕ ಕ್ಷೇತ್ರಗಳಲ್ಲಿ ವಿಶೇಷ ಪೂಜೆಗಳು ನೆರವೇರಿದ್ದವು.

‘ಚಂದ್ರಯಾನ-3ರ ಯಶಸ್ಸು ದೇಶಕ್ಕೆ ಹೊಸ ಹುರುಪು, ಹೊಸ ನಂಬಿಕೆ, ಹಾಗೂ ಹೊಸ ಅರಿವು ಮೂಡಿಸಿದ್ದು, ಭಾರತದ ಮೇಲ್ಮುಖ ಚಲನೆಗೆ ಸಾಕ್ಷಿಯಾಗಿದೆ’ ಎಂದು ಮೋದಿ ಹೇಳಿದ್ದಾರೆ. ಜಾಗತಿಕವಾಗಿ ಭಾರತದ ಪ್ರಾಮುಖ್ಯತೆಯನ್ನು ಹೆಚ್ಚಿಸಲು ಅವರು ಕೈಗೊಂಡ ಕ್ರಮಗಳನ್ನು ದೇಶ ಗಮನಿಸಿ, ಶ್ಲಾಘಿಸಿದೆ.

ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿಗೆ ವೇಗವರ್ಧಕ

ಭಾರತ ಬಾಹ್ಯಾಕಾಶ ಉಡಾವಣೆಗಳನ್ನು ಖಾಸಗೀಕರಣಗೊಳಿಸಲು ಕ್ರಮಗಳನ್ನು ತೆಗೆದುಕೊಂಡಿದ್ದು, ಬಾಹ್ಯಾಕಾಶ ವಲಯದಲ್ಲಿ ವಿದೇಶೀ ಹೂಡಿಕೆಯನ್ನು ಅನುಮತಿಸುವ ಕುರಿತು ಆಲೋಚಿಸುತ್ತಿದೆ. ಭಾರತ ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಜಾಗತಿಕ ಉಡಾವಣಾ ಮಾರುಕಟ್ಟೆಯ ತನ್ನ ಪಾಲನ್ನು ಕನಿಷ್ಠ ಐದು ಪಟ್ಟು ಹೆಚ್ಚಿಸುವ ಗುರಿ ಹೊಂದಿದೆ. ಅದಕ್ಕಾಗಿ ಭಾರತ ವಿಧಿಸುವ ಸ್ಪರ್ಧಾತ್ಮಕ ದರ ಭಾರತಕ್ಕೆ ಪೂರಕವಾಗಿದೆ.

ಇಸ್ರೋ ಚಂದ್ರಯಾನ-3 ಯೋಜನೆಯನ್ನು ಕೇವಲ 74 ಮಿಲಿಯನ್ ಡಾಲರ್ ಮೊತ್ತದಲ್ಲಿ ಕೈಗೊಂಡಿದೆ. ಇದಕ್ಕೆ ಹೋಲಿಸಿದರೆ, ಅಮೆರಿಕಾದ ಆರ್ಟೆಮಿಸ್ ಯೋಜನೆ 2025ರ ತನಕ 93 ಮಿಲಿಯನ್ ಡಾಲರ್ ವೆಚ್ಚ ಮಾಡಲಿದೆ.

ಚಂದ್ರನ ಮೇಲಿನ ಯಶಸ್ವಿ ಲ್ಯಾಂಡಿಂಗ್ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿಸುವ ಕನಸು ನನಸಾಗಿಸಲು ಪೂರಕವಾಗಿದ್ದು, ಅದರಲ್ಲೂ ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ಪೂರೈಕೆ ಸರಪಣಿಯನ್ನು ವಿಸ್ತರಿಸಲು ಬಯಸುತ್ತಿವೆ. ಭಾರತೀಯ ವ್ಯಾಪಾರ ಮತ್ತು ಉದ್ಯಮ ವಲಯಗಳೂ ಚಂದ್ರಯಾನ-3ರ ಯಶಸ್ಸನ್ನು ಸಂಭ್ರಮಿಸಿವೆ.

‘ಇಸ್ರೋ ದೀರ್ಘಕಾಲದಿಂದಲೂ ಬಾಹ್ಯಾಕಾಶ ಯೋಜನೆಗಳ ಯಶಸ್ಸಿನ ಕಾರಣದಿಂದ ನಮಗೆ ಸಂಭ್ರಮಿಸಲು ಹಲವು ಕಾರಣಗಳನ್ನು ನೀಡಿದೆ. ಆದರೆ, ಈ ಯೋಜನೆ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ’ ಎಂದು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷರು ಹೇಳಿದ್ದಾರೆ.

ಇದನ್ನೂ ಓದಿ: Chandrayaan 3 Success: ಚಂದ್ರಯಾನ 3 ರ ಯಶಸ್ಸಿನ ಶ್ರೇಯಸ್ಸಿಗೆ ಶುರುವಾಗಿದೆ ಪೈಪೋಟಿ?

ಜೂನ್ ತಿಂಗಳಲ್ಲಿ ಭಾರತ ಅಧಿಕೃತವಾಗಿ ಆರ್ಟೆಮಿಸ್ ಅಕಾರ್ಡ್ಸ್ ಸೇರ್ಪಡೆಯಾಯಿತು. ಇದೊಂದು ಅಮೆರಿಕಾ ನೇತೃತ್ವದ ಅಂತಾರಾಷ್ಟ್ರೀಯ ಸಹಕಾರವಾಗಿದ್ದು, ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೊಸ ಯುಗವನ್ನು ಆರಂಭಿಸುವ ಗುರಿ ಹೊಂದಿದೆ. ಅದರಲ್ಲೂ ಚಂದ್ರನ ಮೇಲ್ಮೈಗೆ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶ ಹೊಂದಿದೆ.

ಪತ್ರಕರ್ತರೊಡನೆ ಮಾತನಾಡುತ್ತಾ, ಇಸ್ರೋ ಮುಖ್ಯಸ್ಥರಾದ ಎಸ್ ಸೋಮನಾಥ್ ಅವರು ಭಾರತ ಮುಂದಿನ ದಿನಗಳಲ್ಲಿ ಸೂರ್ಯ ಅನ್ವೇಷಣಾ ಯೋಜನೆ, ಶುಕ್ರ ಗ್ರಹ ಅನ್ವೇಷಣಾ ಯೋಜನೆ ಹಾಗೂ ಮಾನವ ಸಹಿತ ಗಗನಯಾನದಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

ಚಂದ್ರಯಾನ-2ರ ವೈಫಲ್ಯದ ಬಳಿಕ, ಇಸ್ರೋ ವಿಜ್ಞಾನಿಗಳ ತಂಡ ಹೊಸದಾಗಿ ಕಾರ್ಯಾಚರಣೆ ಆರಂಭಿಸಬೇಕಾಗಿತ್ತು ಎಂದು ಸೋಮನಾಥ್ ಹೇಳಿದ್ದಾರೆ. ‘ನಾವು ಸಾಕಷ್ಟು ಸವಾಲುಗಳು ಮತ್ತು ಕಷ್ಟಗಳನ್ನು ಎದುರಿಸಿದ್ದೇವೆ. ಚಂದ್ರಯಾನ-2 ಯೋಜನೆಯ ಭಾಗವಾಗಿದ್ದ ಬಹುತೇಕ ವಿಜ್ಞಾನಿಗಳು ಚಂದ್ರಯಾನ-3ರಲ್ಲಿ ಕಾರ್ಯ ನಿರ್ವಹಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ರಷ್ಯಾದ ಚಂದ್ರಯಾನದ ಅರ್ಧದಷ್ಟು ಬಜೆಟ್‌ನಲ್ಲಿ ಭಾರತೀಯ ಚಂದ್ರಯಾನವು ಹೇಗೆ ಇತಿಹಾಸವನ್ನು ಸೃಷ್ಟಿಸಿತು ಎಂಬುದನ್ನು ತಿಳಿಯಿರಿ

ಆದರೆ, ಈ ಎಲ್ಲ ಮರುನಿರ್ಮಾಣ ಕಾರ್ಯಗಳೂ ಚಂದ್ರಯಾನ-3ರಲ್ಲಿ ಧನಾತ್ಮಕ ಫಲಿತಾಂಶ ನೀಡಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘ಈ ಬಾಹ್ಯಾಕಾಶ ನೌಕೆ ಭಾರತದ ಉತ್ಪನ್ನವಾಗಿದ್ದು, ಈಗ ನಮ್ಮ ಸಾಮರ್ಥ್ಯಗಳು ಜಗತ್ತಿನ ಯಾವುದೇ ರಾಷ್ಟ್ರಕ್ಕೆ ಸರಿಸಮವಾಗಿದೆ’ ಎಂದು ಸೋಮನಾಥ್ ಹೆಮ್ಮೆಯಿಂದ ಹೇಳಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ಜಿ-20 ಸಮಾವೇಶದ ವೇದಿಕೆಯಲ್ಲಿ ಪ್ರಧಾನಿ ಮೋದಿಯವರು ಭಾರತ ಜಗತ್ತಿನ ಯಾವ ರಾಷ್ಟ್ರವೂ ಮಾಡದ ಸಾಧನೆ ಮಾಡಿದೆ ಎನ್ನಬಹುದಾಗಿದ್ದು, ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಚಿತ್ರಣ ಬದಲಾಗಲಿದೆ ಎನ್ನಲು ಇದು ಸಾಕ್ಷಿಯಾಗಿದೆ.

ಗಿರೀಶ್ ಲಿಂಗಣ್ಣ

(ಲೇಖಕರು; ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Published On - 6:05 pm, Fri, 25 August 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್