ಹಿಂದೂ ಅಸ್ಮಿತೆಯನ್ನು ಹೊಸ ರೀತಿಯಲ್ಲಿ ಓದಲು ಕಲಿಸಿದ ಎಸ್.ಕೆ. ರಾಮಚಂದ್ರ ರಾಯರು: ಮರೆತರೆ ನಮಗೇ ಹಾನಿ
ನಾಳೆ ರವಿವಾರ, ಕನ್ನಡದ ಅಪರೂಪದ ವ್ಯಕ್ತಿ ಸಾ.ಕೃ. ರಾಮಚಂದ್ರ ರಾಯರ ಬಗ್ಗೆ ಒಂದು ಸಂಸ್ಮರಣ ಗ್ರಂಥ ಹೊರಬರಲಿದೆ. ರಾಮಚಂದ್ರ ರಾಯರ ಕೊಡುಗೆಯ ಹಿಂದೆ ಇರುವ ಕೆಲವು ಅಂಶಗಳನ್ನು ಎತ್ತಿ ಹಿಡಿದು, ಅವರ ಪ್ರಸ್ತುತತೆಯನ್ನು ಇಂದಿನ ಮತ್ತು ಮುಂದಿನ ತಲೆಮಾರಿಗೆ ತೋರಿಸುವ ಒಂದು ಸಣ್ಣ ಪ್ರಯತ್ನ ಇದು.

ಸಾ.ಕೃ. ರಾಮಚಂದ್ರ ರಾಯ (SK Ramachandra Rao), ಇವರ ಬಗ್ಗೆ ನಾನು ಅಲ್ಲಿ ಇಲ್ಲಿ ಕೇಳಿದ್ದೆ. ಆದರೆ, ಅವರ ಕೃತಿಗಳನ್ನು ಓದಿರಲಿಲ್ಲ. ನನ್ನ ಸಂಶೋಧನೆಯ ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಯೂಟ್ಯೂಬಿನಲ್ಲಿ ಕೆಲವು ಸಂದರ್ಶನವನ್ನು ಕೇಳುವ ಹೊತ್ತಿನಲ್ಲಿ, ಉದಯ ಟಿವಿಯಲ್ಲಿ ತುಂಬಾ ಹಿಂದೆ ಪ್ರಸಾರವಾಗಿದ್ದ ಇವರ ಸಂದರ್ಶನ ಪಾಪ್ ಅಪ್ ಆಗಿ ಬಂತು. ಒಂದು ತಾಸಿನ ಸಂದರ್ಶನವನ್ನು ನೋಡಿದೆ. ಖುಷಿಯಾಗಿ ಅಂತರ್ಜಾಲದಲ್ಲಿ ಹುಡುಕಿ ಅವರ ಮೂರು ಪುಸ್ತಕಗಳನ್ನು ತರಿಸಿ ಅವುಗಳಲ್ಲಿ ಎರಡನ್ನು ಓದಿ ಮುಗಿಸಿದ್ದೇನೆ.
ಹೊಸ ತಲೆಮಾರಿನ ಓದುಗರಿಗೆ ಮತ್ತು ಯೂಟ್ಯೂಬ್ ಆಸ್ವಾದಿಸುವವರಿಗೆ ರಾಮಚಂದ್ರ ರಾಯರು ಯಾರು ಎಂಬುದನ್ನು ನಾನು ಒಂದು ಹೋಲಿಕೆಯ ಮೂಲಕ ಹೇಳಿದರೆ ತಪ್ಪಾಗಲಿಕ್ಕಿಲ್ಲ. ಟಿವಿಯಲ್ಲಿ ಬರುವ ಡಬ್ಲ್ಯುಡಬ್ಲ್ಯುಎಫ್ ಹೊಡೆದಾಟ ಎಂದರೆ ಚಿಕ್ಕ ಮಕ್ಕಳಿಗೆ ತುಂಬಾ ಖುಷಿ. ಡಬ್ಲ್ಯುಡಬ್ಲ್ಯುಎಫ್ ಹೀರೋಗಳ ಫೋಟೋಗಳನ್ನು ತಮ್ಮ ಕೋಣೆಯ ತುಂಬಾ ಅಂಟಿಸಿಕೊಂಡು ಆರಾಧಿಸುವವರ ಮಧ್ಯೆ ನಡೆದು ಬರುವ ನಮ್ಮ ಮೈಸೂರಿನದ ದಸರೆಯ ಕುಸ್ತಿಪಟು ಇದ್ದ ಹಾಗೆ ನಮ್ಮ ರಾಮಚಂದ್ರ ರಾಯರು. ಮೊದಮೊದಲು ಸ್ವಲ್ಪ ಕಬ್ಬಿಣದ ಕಡಲೆ ಎನ್ನಿಸುವ ಇವರ ಬರವಣಿಗೆ, ಓದುತ್ತ ಹೋದಂತೆ ನಮ್ಮನ್ನು ಆವರಿಸಿ ಬಿಡುತ್ತದೆ. ಅವರು ನಮ್ಮೊಂದಿಗೆ ಇದ್ದಿದ್ದರೆ ಈ ವರ್ಷ ಸೆಪ್ಟೆಂಬರ್ಗೆ ಅವರಿಗೆ 100 ವರ್ಷ ತುಂಬುತ್ತಿತ್ತು. ನೂರು ವರ್ಷದ ನಂತರ ಯಾರಾದರೂ ನಮ್ಮನ್ನು ನೆನಪು ಮಾಡಿಕೊಳ್ಳುತ್ತಾರೆ ಎನ್ನುವ ವಿಚಾರವೇ ನಮ್ಮನ್ನು ರೋಮಾಂಚನಗೊಳಿಸುತ್ತದೆ. ನಮ್ಮಂತಹ ಸಾಮಾನ್ಯರಿಗೆ ಈ ನೂರರ ಸೆಳೆತವಿದ್ದರೆ, ಅಸಾಮಾನ್ಯರಾಗಿರುವ ರಾಮಚಂದ್ರ ರಾಯರಿಗೆ ಈ ನೂರು ಯಾವ ಲೆಕ್ಕ? ಅದನ್ನು ಮೀರಿದವರು ಅವರು. ಪ್ರಾಯಶಃ ಅದೇ ಕಾರಣಕ್ಕೆ ಅವರು ಇವತ್ತು ನಮಗೆ ಪ್ರಸ್ತುತರಾಗಿದ್ದಾರೆ. ಓದಿದ ಮತ್ತು ಕೇಳಿದ ಸಂದರ್ಶನದ ಆಧಾರದ ಮೇಲೆ ಮಾಡಿದ ಟಿಪ್ಪಣಿ ಇದು. ಜನ್ಮಶತಾಬ್ಧಿ ಸಂಸ್ಮರಣಗ್ರಂಥ, ವಿದ್ಯಾಲಂಕಾರದ ಲೋಕಾರ್ಪಣಾ ಸಮಾರಂಭ ಜುಲೈ 27, ಭಾನುವಾರ ಬೆಳಗ್ಗೆ 10:30ಕ್ಕೆ ಎನ್ಆರ್ ಕಾಲೋನಿಯ ಗೋಖಲೆ ಸಂಶೋಧನಾ ಸಂಸ್ಥೆಯಲ್ಲಿ ನಡೆಯಲಿದೆ.
ನಾವು ಹುಟ್ಟಿ ಬೆಳೆದು ಯೌವ್ವನಕ್ಕೆ ಬರುವ ಸಂದರ್ಭದಲ್ಲಿ ಹೆಚ್ಚು ಕಡಿಮೆ ಇಡೀ ಕರ್ನಾಟಕವೇ ನವ್ಯ ಸಾಹಿತ್ಯದ ಆಡುಂಬೊಲವಾಗಿತ್ತು. ಬರೀ ಸಾಹಿತ್ಯಕ್ಕೆ ಸೀಮಿತವಾಗಿರದೇ ಜನಜೀವನದ ಹಲವು ಮಜಲುಗಳಿಗೆ ಒಳಹೊಕ್ಕು, ಒಂದು ರೀತಿಯ ಸಮೂಹ ಸನ್ನಿಯನ್ನು ಹುಟ್ಟುಹಾಕಿದ್ದ ನವ್ಯದ ದೃಷ್ಟಿಕೋನದ ನಡುವೇ ಬೆಳೆದವರು ನಾವು. ಆ ಸಂದರ್ಭದಲ್ಲಿ ಮೂಲಭೂತ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಮತ್ತು ರಸಾನುಭವವನ್ನು ಪಡೆದವರು ರಾಮಚಂದ್ರರಾಯರು. ವೇದಾಧ್ಯಯನದಿಂದ ಪ್ರಾರಂಭ ಮಾಡಿ ಮನಃಶಾಸ್ತ್ರದ ಸಂಶೋಧನೆಯಲ್ಲೂ ಯಶಸ್ಸು ಗಳಿಸಿ, ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಮತ್ತು ನರರೋಗ ಸಂಶೋಧನಾ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿ, ಆ ನಂತರ ಭಾರತೀಯ ವಿಜ್ಞಾನ ಮಂದಿರದಲ್ಲಿ ಸಂಶೋಧನೆಗಿಳಿದು ಕೊನೆಗೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ನೂರಾರು ವಿದ್ಯಾರ್ಥಿಗಳನ್ನು ತಯಾರು ಮಾಡಿದವರು ಅವರು.
ಸೃಜನಶೀಲತೆಯ ಹಲವು ಮಜಲುಗಳಲ್ಲಿ ಕೆಲಸ ಮಾಡಿದ ಕಡಲ ತೀರದ ಭಾರ್ಗವ, ಶಿವರಾಮ ಕಾರಂತರಿಗೆ ರಾಮಚಂದ್ರ ರಾಯರನ್ನು ಹೋಲಿಕೆ ಮಾಡಿದರೆ ತಪ್ಪಾಗಲಾರದು. ಇಬ್ಬರೂ ಬಹು ವಿಷಯ ನಿಷ್ಣಾತರು. ಕಾರಂತರು ಪರಿಸರ ಹೋರಾಟದಿಂದ ಹಿಡಿದು, ಯಕ್ಷಗಾನ, ಕಲೆ, ಸಾಹಿತ್ಯದಲ್ಲಿ ಮುಳುಗಿ ತಮ್ಮ ಛಾಪು ಮೂಡಿಸಿ, ನವ್ಯದವರ ಚೌಕಟ್ಟಿಗೆ ಕ್ಯಾರೆ ಎನ್ನದೇ ಬದುಕಿದವರು. ರಾಯರದು ಸ್ವಲ್ಪ ಬೇರೆ ದಾರಿ. ಅಕಾಡೆಮಿಕ್ ಶಿಸ್ತಿನ ಒಳಗೆ ಕೆಲಸ ಮಾಡುತ್ತ ಭಾರತೀಯ ತತ್ವಶಾಸ್ತ್ರ, ಬುದ್ಧಿಸಂ, ಜೈನಿಸಂ, ವೇದ, ಉಪನಿಷತ್ತುಗಳ ಬಗ್ಗೆ ವಿದ್ವತ್ ಪೂರ್ಣ ಅಧ್ಯಯನ ಮಾಡಿ ಹೊಸ ಹೊಳಹನ್ನು ನೀಡಿದವರು ಅವರು. ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಶಿಲ್ಪಕಲೆಯಲ್ಲಿ ತಮ್ಮ ಸೃಜನಶೀಲತೆಯನ್ನು ಹೊರಹಾಕಿದ ಮಾಂತ್ರಿಕರು, ರಾಮಚಂದ್ರರಾಯರು.
ಓರ್ವ ವ್ಯಕ್ತಿಯ ಬಗ್ಗೆ, ಅವರ ಸೃಜನಶೀಲ ಮತ್ತು ಸೃಜನೇತರ ಕೆಲಸ ಕಾರ್ಯಗಳ ಬಗ್ಗೆ ಇಷ್ಟೆಲ್ಲ ಪ್ರವರ ಬೇಕೇ ಎನ್ನುವ ಪ್ರಶ್ನೆ ಉದ್ದವಿಸುವುದು ಸಹಜ. ಅದರಲ್ಲಿಯೂ 100 ವರ್ಷಗಳ ಹಿಂದೆ ಹುಟ್ಟಿ, ಹಲವಾರು ಕ್ಷೇತ್ರದಲ್ಲಿ ಮಹತ್ತರ ಕಾಣಿಕೆ ನೀಡಿದವರ ಬಗ್ಗೆ ಬರೆಯುವಾಗ ಏನು ಬೇಕಾದರೂ ಬರೆಯಬಹುದು ಎಂದು ಊಹಿಸಿದ್ದರೆ ತಪ್ಪಾಗುತ್ತದೆ. Origins of Indian Thought and Some Related Writing ಮತ್ತು Development of Psychological Thought in India ಓದಿದ ನಂತರ ಅವರ ಸುದೀರ್ಘ ಸಂದರ್ಶನವನ್ನು ನೋಡಿದ ಮೇಲೆ ನನಗೆ ಅನ್ನಿಸಿದ್ದು ಇಷ್ಟು.
- ಭಾರತೀಯ ತತ್ವಶಾಸ್ತ್ರ ವೇದ ಉಪನಿಷತ್ತುಗಳ ಬಗ್ಗೆ ಬರೆಯುವಾಗಲೂ ಕೂಡ ಅವರು ಎಲ್ಲೂ ತಮ್ಮ ಅಕಾಡೆಮಿಕ್ ಶಿಸ್ತನ್ನು ಮೀರಿದಂತೆ ಕಾಣಲಿಲ್ಲ. ಅವರಲ್ಲಿ ಈ ಶಿಸ್ತು ಎಷ್ಟು ಮೈಗೊಂಡಿತ್ತು ಎಂದರೆ ಶ್ರುತಿ, ಸ್ಮೃತಿ ಪುರಾಣಗಳ ಬಗ್ಗೆ ಬರೆಯುವಾಗ ಮಡಿವಂತಿಕೆಯನ್ನು ಬಿಟ್ಟು, ಈ ಕ್ಷೇತ್ರದಲ್ಲಿ ಕೆಲಸ ಮಾಡಿದ ಪಾಶ್ಚಾತ್ಯ ವಿದ್ವಾಂಸರನ್ನು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ನಮ್ಮಲ್ಲಿನ ವಿಚಾರ ಸಂಪತ್ತಿನ ಬಗ್ಗೆ ಪಾಶ್ಚ್ಯಾತ್ಯರಿಗೆ ಏನು ಗೊತ್ತು? ಇದರ ಬಗ್ಗೆ ಅವರಿಗೆ ಮಾತಾಡಲು ಹಕ್ಕಿಲ್ಲ ಎಂದು ವಾದಿಸುವವರ ಮಧ್ಯೆ ನಿಂತು ನೋಡಿದಾಗ ರಾಮಚಂದ್ರ ರಾಯರ ಪಾಂಡಿತ್ಯವಷ್ಟೇ ಅಲ್ಲ, ಅಕಾಡೆಮಿಕ್ ಶಿಸ್ತಿಗೆ ಇದ್ದ ಅವರ ವಿಧೇಯತೆ ಎದ್ದು ಕಾಣುತ್ತದೆ.
- ತಮ್ಮ ಕೃತಿಗಳಲ್ಲಿ ಎಲ್ಲೂ ಕೂಡ ಭಾರತೀಯ ತತ್ವಶಾಸ್ತ್ರವೇ ಅಂತಿಮ ಅಥವಾ ಅದೇ ಪರಿಪೂರ್ಣ ಎಂದು ಹೇಳುವುದೇ ಇಲ್ಲ. ಗೌರವಯುತವಾಗಿ ತಮ್ಮ ವಾದವನ್ನು ಮಂಡಿಸಿ ಅವರು ಮುಂದಕ್ಕೆ ಹೋಗುತ್ತಾರೆ. ಅವರ ಬರವಣಿಗೆಯ ಇನ್ನೊಂದು ವಿಶೇಷವೇನೆಂದರೆ, ತಮ್ಮ ವಿಚಾರಧಾರೆಗೆ ಓದುಗರನ್ನು ಬಂಧಿಸುವಂತೆ ಕಾಣದು. ಓದುತ್ತಿರುವ ನಮ್ಮ ಕೈ ಹಿಡಿದು ಬೇರೆ ಬೇರೆ ವಿಚಾರಕ್ರಮಕ್ಕೆ ತೆರೆದುಕೊಳ್ಳಲು ಉತ್ತೇಜಿಸುವಂತಿದೆ ಅವರ ಬರವಣಿಗೆಯ ಶೈಲಿ.
- ಸಮಾಜ ವಿಜ್ಞಾನ ಸಂಶೋಧನೆಯಲ್ಲಿ ತೊಡಗಿರುವ ಒಂದು ಗುಂಪು (school of thought) ಹೇಳುವದೇನೆಂದರೆ, Social science research often explores and interprets rather than proving or disproving a hypothesis. ಪ್ರಾಯಶಃ ರಾಮಚಂದ್ರ ರಾಯರು ಕೂಡ ಈ ಶಾಲೆಯಲ್ಲಿದ್ದರೆ ಎಂದೆನಿಸುತ್ತದೆ. ಅಂದರೆ ನಮ್ಮ ನಂಬಿಕೆ ಸುಳ್ಳು ಸರಿ ಎಂದು ಹೇಳುವ ಅಧಿಕಾರವಾಣಿಯ ಧ್ವನಿ ರಾಮಚಂದ್ರರಾಯರದ್ದಲ್ಲ. ಹಾಗೆ ನೋಡಿದರೆ ಅವರದ್ದು ಏನಿದ್ದರೂ ಅನ್ವೇಷಣೆ ಮತ್ತು ವಿಶ್ಲೇಷಣೆಯ ಮಾರ್ಗ. ಇದು ಎಲ್ಲರಿಗೂ ಒಲಿಯುವ ಮಾರ್ಗವಲ್ಲ.
- ತಮ್ಮ ವಾದಸರಣಿ ಮಂಡಿಸುವಾಗ ವಿವೇಚನಾಯುಕ್ತ ಬರವಣಿಗೆಯ ಶೈಲಿಯನ್ನು ಬಳಸಿರುವ ಅವರು, ಕಡಿಮೆ ಶಬ್ದ ಪುಂಜಗಳ ಮೂಲಕ ಹೆಚ್ಚು ಹೆಚ್ಚು ವಿಚಾರ ಹೇಳಿದ್ದನ್ನು ನೋಡಿದರೇ ಅತ್ಯಂತ ಖುಷಿಯಾಗುತ್ತದೆ. ಮತ್ತೊಂದೆಡೆ ನಾವೆಲ್ಲ, ಅವರಷ್ಟು ಮಾಗಲು ಮತ್ತು ಬೆಳೆಯಲು ಇನ್ನೆಷ್ಟು ವರ್ಷ ಬೇಕಾಗಬಹುದು ಎನ್ನುವ ಸಂದೇಹ ಕಾಡುತ್ತದೆ.
- ನವ್ಯದ ಕಡೆ ಹೊರಳಿ, ಅಲ್ಲಿ ನಿಂತು ರಾಮಚಂದ್ರರಾಯರನ್ನು ನೋಡಿದಾಗ, ಒಂದೆರಡು ವಿಚಾರ ಹೇಳಬಹುದು ಎಂದೆನಿಸುತ್ತದೆ. ನವ್ಯದ ಉತ್ತುಂಗದಲ್ಲಿ ಮತ್ತು ಆ ನಂತರ ಬಂದ ಸಾಂಸ್ಕೃತಿಕ ಚಳುವಳಿಗಳಲ್ಲಿ ಹುಟ್ಟಿದ ಬರಹಗಾರರು, ರಾಮಚಂದ್ರ ರಾಯರಂತಹ ವಿದ್ವಾಂಸರನ್ನು ಮತ್ತು ಅವರ ಸೃಜನಶೀಲತೆಯನ್ನು ಹೊರ ಜಗತ್ತಿಗೆ ಕಾಣದಂತೆ ಮಸುಕುಮಾಡಿದರೆ ಎಂಬ ಗುಮಾನಿ ಕಾಡುತ್ತದೆ. ಆ ಮೂಲಕ ಕನ್ನಡದ ಜನತೆಗೆ ತಲುಪ ಬೇಕಾಗಿದ್ದ ಜ್ಞಾನ ದೀವಿಗೆಯನ್ನು (knowledge tradition) ಆರಿಸಿಬಿಟ್ಟರೆ? ಎಂಬ ಅನುಮಾನ ರಾಯರ ಪುಸ್ತಕಗಳನ್ನು ಓದುವಾಗ ಕಾಡಿದ್ದಿದೆ.
ಇದನ್ನೂ ಓದಿ: ಸರಕಾರಿ ಬ್ಯಾಂಕುಗಳಲ್ಲಿ ಕನ್ನಡ ಅಸ್ಮಿತೆಯ ಹರಣ: ಎಷ್ಟು ಸುಳ್ಳು? ಎಷ್ಟು ನಿಜ?
ನೂರು ವರ್ಷದ ನಂತರವೂ ಒಂದು ಕೃತಿ ಅಥವಾ ಪ್ರಖರ ಪಾಂಡಿತ್ಯದ ವಿಚಾರಧಾರೆ ಕುತೂಹಲ ಹೊತ್ತಿಸುವಂತಿರಬೇಕು. ಅದು ಹೇಗೆ ಸಾಧ್ಯ? ಸಾಂಸ್ಕೃತಿಕ ರಾಜಕೀಯದ ಯಾವ ಲವಲೇಶವನ್ನು ತಮ್ಮ ಚಿಂತನೆಯಲ್ಲಿ ತುರುಕದೇ ಇದ್ದುದರಿಂದ, ಹೊಸ ತಲೆಮಾರಿಗೂ ಅವರ ಕೃತಿಗಳು ಪ್ರಸ್ತುತವಾಗುತ್ತಿರಬಹುದೇ? ತಮ್ಮ ಅಗಾಧ ಜ್ಞಾನ ಭಂಡಾರವನ್ನು ಮುಂದಿನ ತಲೆಮಾರಿಗೆ ತೆರೆದಿಟ್ಟು ಹೋದ ರಾಮಚಂದ್ರ ರಾಯರಿಗೆ ಒಂದು ಸಲಾಂ.
ಇನ್ನಷ್ಟು ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:47 am, Sat, 26 July 25




