Expert Opinion: ಭಾರತದಲ್ಲಿ ಕ್ರಿಪ್ಟೊಕರೆನ್ಸಿ: ಸಂಪೂರ್ಣ ನಿಷೇ‍ಧ vs ನಿಯಂತ್ರಣ? ದೇಶದ ಹಿತಕ್ಕೆ ಯಾವುದು ಒಳಿತು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 06, 2022 | 3:16 PM

Cryptocurrency: ಕ್ರಿಪ್ಟೊಕರೆನ್ಸಿ ನಿರ್ವಹಣೆ ವಿಚಾರದಲ್ಲಿ ಸರ್ಕಾರವು ದೃಢ ಹೆಜ್ಜೆಗಳನ್ನು ಇಡುತ್ತಿದೆ. ಕ್ರಿಪ್ಟೊಕರೆನ್ಸಿಯ ಅರ್ಥ, ಬಳಕೆ ವಿಧಾನ ಮತ್ತು ಕ್ರಿಪ್ಟೊಕರೆನ್ಸಿಗೆ ಬಳಕೆಯಾಗುವ ತಂತ್ರಜ್ಞಾನದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

Expert Opinion: ಭಾರತದಲ್ಲಿ ಕ್ರಿಪ್ಟೊಕರೆನ್ಸಿ: ಸಂಪೂರ್ಣ ನಿಷೇ‍ಧ vs ನಿಯಂತ್ರಣ? ದೇಶದ ಹಿತಕ್ಕೆ ಯಾವುದು ಒಳಿತು
ಕ್ರಿಪ್ಟೊಕರೆನ್ಸಿ (ಪ್ರಾತಿನಿಧಿಕ ಚಿತ್ರ)
Follow us on

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharamn) ಇತ್ತೀಚೆಗೆ ಮಂಡಿಸಿದ ಕೇಂದ್ರ ಬಜೆಟ್​ನಲ್ಲಿ ಭಾರತ ಸರ್ಕಾರವು ರಿಸರ್ವ್ ಬ್ಯಾಂಕ್ (Reserve Bank Of India) ಮೂಲಕ ತನ್ನದೇ ಆದ ಡಿಜಿಟಲ್ ಕರೆನ್ಸಿ (Digital Currency) ಜಾರಿಗೆ ತರುವುದಾಗಿ ಹೇಳಿದ್ದರು. ಬಜೆಟ್​ಗೆ ಕೆಲ ದಿನಗಳಿಗೆ ಮೊದಲಷ್ಟೇ ಕ್ರಿಪ್ಟೊಕರೆನ್ಸಿ ಬಗ್ಗೆ ದೇಶದಲ್ಲಿ ಚರ್ಚೆ ವ್ಯಾಪಕವಾಗಿ ಗರಿಗೆದರಿತ್ತು. ಸರ್ಕಾರವು ‘ಕ್ರಿಪ್ಟೊಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ 2021’ರ ಕರಡು ಸಿದ್ಧಪಡಿಸಿ, ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟಿತ್ತು. ಸಂಸತ್ತಿನಲ್ಲಿ ಈವರೆಗೆ ಈ ಮಸೂದೆಯನ್ನು ಸರ್ಕಾರ ಮಂಡಿಸಿಲ್ಲ. ಆದರೆ ಕ್ರಿಪ್ಟೊಕರೆನ್ಸಿ ನಿರ್ವಹಣೆ ವಿಚಾರದಲ್ಲಿ ಸರ್ಕಾರವು ದೃಢ ಹೆಜ್ಜೆಗಳನ್ನು ಇಡುತ್ತಿದೆ ಎನ್ನುವುದು ನಿಜ. ಈ ಹಿನ್ನೆಲೆಯಲ್ಲಿ ಕ್ರಿಪ್ಟೊಕರೆನ್ಸಿಯ ಅರ್ಥ, ಬಳಕೆ ವಿಧಾನ ಮತ್ತು ಕ್ರಿಪ್ಟೊಕರೆನ್ಸಿಗೆ ಬಳಕೆಯಾಗುವ ತಂತ್ರಜ್ಞಾನದ ಬಗ್ಗೆ ಬೆಂಗಳೂರಿನ ರಾಮಯ್ಯ ಕಾನೂನು ಕಾಲೇಜಿನ ಫ್ಯಾಕಲ್ಟಿ ಡಾ.ಚೇತನ್ ಸಿಂಗಾಯ್ ಮತ್ತು ರಾಜಶ್ರೀ ಕೆ. ಅವರು ಈ ಲೇಖನದಲ್ಲಿ ವಿವರಣೆ ನಿಡಿದ್ದಾರೆ.

ಭಾರತದಲ್ಲಿ ಎಲ್ಲ ಬಗೆಯ ಖಾಸಗಿ ಕ್ರಿಪ್ಟೊಕರೆನ್ಸಿಗಳ ಬಳಕೆಯನ್ನು ನಿಷೇಧಿಸುವ ‘ಕ್ರಿಪ್ಟೊಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ 2021’ (The Cryptocurrency and Regulation of Official Digital Currency Bill, 2021) ಹೆಸರಿನ ಮಸೂದೆಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ. ಇತ್ತೀಚೆಗಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್​ನಲ್ಲಿ ಭಾರತ ಸರ್ಕಾರವು ಆರ್​ಬಿಐ ನೇತೃತ್ವದಲ್ಲಿ ತನ್ನದೇ ಆದ ಸ್ವಂತ ಡಿಜಿಟಲ್ ಕರೆನ್ಸಿ ರೂಪಿಸಿ, ಚಾಲ್ತಿಗೆ ತರುವುದಾಗಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಕ್ರಿಪ್ಟೊಕರೆನ್ಸಿಯ ಅರ್ಥ, ಪ್ರಸ್ತುತತೆ, ಭವಿಷ್ಯ ಹಾಗೂ ನಿಯಂತ್ರಣ ವಿಧಾನದ ಕ್ರಮಗಳನ್ನು ಅರ್ಥೈಸುವುದು ಮುಖ್ಯವಾಗುತ್ತದೆ.

ಕ್ರಿಪ್ಟೊಕರೆನ್ಸಿ ಎಂದರೆ ಕಲ್ಪಿತ (Virtual) ಜಗತ್ತಿನಲ್ಲಿ ರೂಪುಗೊಂಡು ಎಲೆಕ್ಟ್ರಾನಿಕ್ ರೂಪದಲ್ಲಿ ನಿರ್ವಹಿಸಲಾಗುವ ನಗದು (ಕರೆನ್ಸಿ) ರೂಪ. ಬಿಟ್‌ಕಾಯಿನ್‌ ಎನ್ನುವುದು ಇಲ್ಲಿಯವರೆಗೆ ಜಗತ್ತಿಗೆ ಅತಿ ಹೆಚ್ಚು ಪರಿಚಿತವಾಗಿರುವ ಕ್ರಿಪ್ಟೋಕರೆನ್ಸಿಯಾಗಿದ್ದು ಇದಕ್ಕಾಗಿ ಬ್ಲಾಕ್‌ಚೈನ್‌ (blockchain) ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿದೆ. ಕ್ರಿಪ್ಟೋಕರೆನ್ಸಿ ವ್ಯವಹಾರಗಳನ್ನು ಆಯಾ ಕರೆನ್ಸಿಗೆ ಸಂಬಂಧಿಸಿದ ಬ್ಲಾಕ್‌ಚೈನ್‌ ಲೆಡ್ಜರ್‌ಗಳಲ್ಲಿ (ಕಂಪ್ಯೂಟರ್ ದಾಖಲಾತಿಯ ವಿಶಿಷ್ಟ ಕ್ರಮ) ದಾಖಲಿಸಲಾಗುತ್ತದೆ. ಈ ಬ್ಲಾಕ್‌ಚೈನ್‌ ತಂತ್ರಜ್ಞಾನದಲ್ಲಿ ಒಂದು ನಿರ್ದಿಷ್ಟ ಕೇಂದ್ರ ಅಥವಾ ಅನುಮತಿ ನೀಡಬಲ್ಲ ಆಧಿಕಾರಿಕ ಸಂಸ್ಥೆಯ ನಿಯಂತ್ರಣ ಕೇಂದ್ರದ ಅವಶ್ಯಕತೆಯಿರುವುದಿಲ್ಲ. ಬಿಟ್‌ಕಾಯಿನ್‌ ಎನ್ನುವುದು ಗೂಢಲಿಪಿ (ಕ್ರಿಪ್ಟೋಗ್ರಫಿ) ತಂತ್ರಜ್ಞಾನವನ್ನು ಉಪಯೋಗಿಸುವ ಒಂದು ಡಿಜಿಟಲ್‌ ನಗದು ವ್ಯವಸ್ಥೆಯಾಗಿದೆ. ಹೆಸರೇ ಸೂಚಿಸುವಂತೆ ಇದೊಂದು ಗೂಢ ವ್ಯವಸ್ಥೆಯಾಗಿದ್ದು ಸರಳ ಮಾಹಿತಿಗಳನ್ನು ಸಂಕೀರ್ಣ ಮಾಹಿತಿಯನ್ನಾಗಿ ಪರಿವರ್ತಿಸಿ ಉದ್ದೇಶಿತ ವ್ಯಕ್ತಿಗೆ ಮಾತ್ರ ಇದರ ಅರ್ಥ ತಿಳಿಯುವಂತೆ ಪರಿವರ್ತಿಸಲಾಗಿರುತ್ತದೆ. ಈ ಕ್ರಿಪ್ಟೋಕರೆನ್ಸಿ ವ್ಯವಸ್ಥೆಯು ಸಾಮಾನ್ಯ ಆರ್ಥಿಕ ಹಾಗೂ ವ್ಯಾವಹಾರಿಕ ಪ್ರಪಂಚಕ್ಕೆ ಸಂಭವನೀಯ ಸಮಾನಾಂತರ ಆರ್ಥಿಕತೆಯ ಸವಾಲನ್ನು ಒಡ್ಡಿರುವುದರ ಜೊತೆಗೆ ಕೆಲವು ಸರ್ಕಾರಗಳಿಗೆ ಇವುಗಳನ್ನು ನಿಯಂತ್ರಿಸುವ ತಲೆನೋವನ್ನೂ ತಂದಿಟ್ಟಿದೆ. ಸುಮಾರು 80 ಲಕ್ಷ ಭಾರತೀಯ ಕ್ರಿಪ್ಟೊಕರೆನ್ಸಿಗಳಲ್ಲಿ 140 ಕೋಟಿ (1.4 ಬಿಲಿಯನ್‌) ಅಮೆರಿಕನ್‌ ಡಾಲರ್‌ಗಳಷ್ಟು ಮೊತ್ತದ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಕೆಲವು ದೇಶಗಳು ಕ್ರಿಪ್ಟೊಕರೆನ್ಸಿಗೆ ಶಾಸನಬದ್ಧ ಅಂಗೀಕಾರ ನೀಡಿದ್ದರೂ ಭಾರತ ದೇಶವು ಕ್ರಿಪ್ಟೊಕರೆನ್ಸಿಗೆ ಮಾನ್ಯತೆ ನೀಡಿಲ್ಲ. ಎಲ್‌-ಸಾಲ್ವಡೊರ್ ದೇಶವು ಕ್ರಿಪ್ಟೋಕರೆನ್ಸಿಗಳಿಗೆ ಅಧಿಕೃತವಾಗಿ ಶಾಸನಬದ್ಧ ನಾಣ್ಯಗಳೆಂದು ಮಾನ್ಯತೆ ನೀಡಿದ ಪ್ರಥಮ ಹಾಗೂ ಏಕಮಾತ್ರ ದೇಶವಾಗಿದೆ.

ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ಸೂಕ್ತವಾದ ನ್ಯಾಯಾಂಗ ಸಂರಚನೆಯ ಅನುಪಸ್ಥಿತಿಯ ಕಾರಣದಿಂದ ಕ್ರಿಪ್ಟೋಕರೆನ್ಸಿಗಳ ನಿಯಂತ್ರಣ ಸಾಧ್ಯವಿಲ್ಲವಾಗಿದೆ. ಈಗ ಲಭ್ಯವಿರುವ ನಿಯಂತ್ರಣಗಳು ದುರ್ಬಲವಾಗಿದ್ದು ದುಷ್ಕರ್ಮಿಗಳು ಸರ್ಕಾರದ ಅಧಿಕೃತ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಹಾಗೂ ಡಿಜಿಟಲ್‌ ಸಂಪತ್ತಿನ ವಿನಿಮಯ ವೇದಿಕೆಗಳನ್ನು ದುರುಪಯೋಗಿಸಿಕೊಂಡು ಹಣ ದೋಚುವ ಮತ್ತು ಬಿಟ್‌ಕಾಯಿನ್‌ಗಳನ್ನು ನೀಡಿ ಮಾದಕ ಪದಾರ್ಥಗಳನ್ನು ಕೊಂಡುಕೊಳ್ಳುವ ವ್ಯವಹಾರಗಳಲ್ಲಿ ಮೋಸ ಮಾಡಿರುವ ಉದಾಹರಣೆಗಳಿವೆ. ಈ ಅಕ್ರಮಗಳಲ್ಲಿ ಹಲವು ಕೋಟಿ ರೂಪಾಯಿಗಳ ಮೋಸದ ವ್ಯವಹಾರಗಳಾಗಿದ್ದು ಆಪಾದಿತರು ತಮ್ಮ ಐಶಾರಾಮಿ ಜೀವನ ನಿರ್ವಹಣೆಗಾಗಿ ಹಾಗೂ ಮಾದಕ ವಸ್ತುಗಳನ್ನು ಖರೀದಿಸಲು, ಮದ್ಯ ಹಾಗೂ ಕ್ಯಾಸಿನೋಗಳಲ್ಲಿ ಜೂಜಾಡಲು ಹೀಗೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಭಾರತ ದೇಶದ ಆರ್ಥಿಕ ಸುಸ್ಥಿರತೆ ಹಾಗೂ ಸ್ಥೂಲ ಆರ್ಥಿಕ ಪರಿಸ್ಥಿತಿಗಳ ಮೇಲೆ ಕ್ರಿಪ್ಟೋಕರೆನ್ಸಿಗಳು ಬೀರಬಹುದಾದ ಪ್ರಭಾವಗಳ ಬಗ್ಗೆ ಭಾರತೀಯ ರಿಸರ್ವ್‌ ಬ್ಯಾಂಕ್ ಈ ಹಿಂದೆ ಕಳವಳ ವ್ಯಕ್ತಪಡಿಸಿತ್ತು. ಕ್ರಿಪ್ಟೊಕರೆನ್ಸಿಗಳ ಬಗೆಗಿನ ಸೂಕ್ತ ತಿಳುವಳಿಕೆಯ ಕೊರತೆ ಹಾಗೂ ಅವುಗಳ ಪರಿಣಾಮಕಾರಿ ನಿಯಂತ್ರಣಕ್ಕಾಗಿ ಸೂಕ್ತ ಕಾನೂನು ಚೌಕಟ್ಟಿನ ಕೊರತೆಗಳ ನಡುವೆಯೂ ಕ್ರಿಪ್ಟೋಕರೆನ್ಸಿಗಳ ನಿರಂತರ ಬಳಕೆ ಗಾಬರಿ ಹುಟ್ಟಿಸುವಂತಿದೆ ಹಾಗೂ ಪರಿಶೀಲನೆಯೂ ಅಸಾಧ್ಯವಾಗಿದೆ.

2018ರಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಸುತ್ತೋಲೆಯೊಂದನ್ನು ಹೊರಡಿಸುವ ಮೂಲಕ ಕ್ರಿಪ್ಟೋಕರೆನ್ಸಿ ವ್ಯಾಪಾರ ಮತ್ತು ವಿನಿಮಯ ವ್ಯವಹಾರಗಳಲ್ಲಿ ತೊಡಗಿರುವ ಉದ್ಯಮಗಳಿಗೆ ಆರ್ಥಿಕ ಸೇವೆಗಳನ್ನೊದಗಿಸುವ ವಾಣಿಜ್ಯ ಸಂಸ್ಥೆಗಳ ಮೇಲೆ ನಿಷೇಧ ಹೇರಿತ್ತು. ಈ ಸುತ್ತೋಲೆಯನ್ನು ಭಾರತದ ಅಂತರ್ಜಾಲ ಹಾಗೂ ಮೊಬೈಲ್‌ ಸಂಘವು ಗೌರವಾನ್ವಿತ ಭಾರತೀಯ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಭಾರತದ ಸರ್ವೋಚ್ಚ ನ್ಯಾಯಾಲಯವು ಈ ಸುತ್ತೋಲೆಯನ್ನು 2020ರಲ್ಲಿ ರದ್ದುಪಡಿಸಿತ್ತು, ಆದರೆ ತನ್ನ ಬ್ಯಾಂಕಿಂಗ್ ನಿಯಮಾವಳಿಗಳ ಪ್ರಕಾರ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಎತ್ತಿ ಹಿಡಿಯಲು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಇಂತಹ ಸುತ್ತೋಲೆಯನ್ನು ಹೊರಡಿಸುವ ಅಧಿಕಾರವಿದೆ ಎಂದೂ ತೀರ್ಪು ನೀಡಿತ್ತು.

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಈ ಸುತ್ತೋಲೆಯಿಂದ ಭಾರತ ಸಂವಿಧಾನದ 19(1)(g) ವಿಧಿಯು ಖಾತರಿಪಡಿಸಿರುವ ವ್ಯಾಪಾರ ಮತ್ತು ಉದ್ಯೋಗದ ಹಕ್ಕಿನ ಉಲ್ಲಂಘನೆಯಾಗಿಲ್ಲವೆಂದು ತನ್ನ ತೀರ್ಪಿನಲ್ಲಿ ತಿಳಿಸಿತ್ತಲ್ಲದೆ, ಸುತ್ತೋಲೆಯು ಕ್ರಿಪ್ಟೋಕರೆನ್ಸಿ ವ್ಯವಹಾರವನ್ನು ಹವ್ಯಾಸವನ್ನಾಗಿಸಿಕೊಂಡವರಿಗೂ ಹಾಗೂ ಅದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡವರಿಗೂ ನಿರ್ದಿಷ್ಟವಾದ ವ್ಯತ್ಯಾಸಗಳನ್ನು ಗುರುತಿಸಿದೆ ಎಂದೂ ತಿಳಿಸಿತ್ತು. ಕ್ರಿಪ್ಟೊಕರೆನ್ಸಿಯ ವ್ಯವಹಾರವನ್ನು ತಮ್ಮ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಸಂಸ್ಥೆಗಳು ಭಾರತ ಮತ್ತು ವಿದೇಶಗಳಲ್ಲಿ ತಮ್ಮ ವ್ಯವಹಾರಗಳನ್ನು ಮುಂದುವರೆಸಬಹುದೆಂದು ಅನುಮತಿ ನೀಡಿತ್ತು. ಬ್ಯಾಂಕಿಂಗ್ ವಲಯಕ್ಕೂ ಮತ್ತು ಕ್ರಿಪ್ಟೋಕರೆನ್ಸಿ ವ್ಯವಹಾರ ಮಾಡುತ್ತಿರುವ ವಿನಿಮಯಕೇಂದ್ರಗಳಿಗೂ ಯಾವುದೇ ಸಂಬಂಧವಿಲ್ಲದಿರುವುದನ್ನು ಗಮನಿಸಿದ ಸರ್ವೋಚ್ಚ ನ್ಯಾಯಲಯವು ಈ ಸಂಬಂಧ ಒಂದು ಕರಡು ಕಾನೂನನ್ನು ಸಿದ್ಧಪಡಿಸುವಂತೆ ಭಾರತ ಸರಕಾರಕ್ಕೆ ಆದೇಶ ನೀಡಿತ್ತು.

ಭಾರತದ ಸರ್ವೋಚ್ಚ ನ್ಯಾಯಾಲಯವು ಕೆಲ ಪರಿಹಾರಗಳನ್ನು ನೀಡಿದ್ದರೂ, ಕ್ರಿಪ್ಟೊಕರೆನ್ಸಿ ನಿಷೇಧ ಹಾಗೂ ಅಧಿಕೃತ ಡಿಜಿಟಲ್‌ ಕರೆನ್ಸಿ ನಿಯಂತ್ರಣ ಕಾಯಿದೆ, 2019 (the Banning of Cryptocurrency and Regulation of Official Digital Currency Bill, 2019) ಕೆಲವು ಕಠಿಣ ಕ್ರಮಗಳನ್ನು ಒಳಗೊಂಡಿದೆ. ಜಪಾನ್, ಕೆನಡ, ಮತ್ತು ಸ್ವಿಟ್ಝರ್‌ಲ್ಯಾಂಡ್‌ ದೇಶಗಳು ಕ್ರಿಪ್ಟೋಕರೆನ್ಸಿಗಳನ್ನು ನಿಯಂತ್ರಿಸುವ ಕಾನೂನುಗಳನ್ನು ರಚಿಸಿ ಇದರ ವ್ಯವಹಾರಗಳಿಗೆ ಅನುಮತಿ ನೀಡಿದ್ದರೂ ಭಾರತದ ಕಾಯಿದೆ ಇದಕ್ಕೆ ವ್ಯತಿರಿಕ್ತವಾಗಿ ಬಿಟ್‌ಕಾಯಿನ್‌ ಸೇರಿದಂತೆ ಎಲ್ಲ ಬಗೆಯ ಕ್ರಿಪ್ಟೊಕರೆನ್ಸಿಯ ಮೂಲಕ ನಡೆಯುವ ವಹಿವಾಟುಗಳನ್ನು ನಿಷೇಧಿಸುವ ಉದ್ದೇಶವನ್ನು ಹೊಂದಿದೆ. ಈ ಉದ್ದೇಶಿತ ಕರಡು ಕಾಯಿದೆಯ 6ನೇ ಮತ್ತು 7ನೇ ಪರಿಚ್ಛೇದಗಳ ಪ್ರಕಾರ ಕ್ರಿಪ್ಟೋಕರೆನ್ಸಿಗಳನ್ನು ಕೊಳ್ಳುವ, ಮಾರುವ, ಉಪಯೋಗಿಸುವ, ಸಂಗ್ರಹಿಸುವ ಹಾಗೂ ಇವುಗಳ ಮೇಲೆ ಯಾವುದೇ ವಿಧಾನದಲ್ಲಿ ಬಂಡವಾಳ ಹೂಡುವ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಕ್ರಿಪ್ಟೊಕರೆನ್ಸಿ ವಹಿವಾಟನ್ನು ಈ ಮಸೂದೆಯು ಅಪರಾಧ ಎನ್ನುತ್ತದೆ. ನಿಯಮ ಉಲ್ಲಂಘನೆಗೆ 10 ವರ್ಷಗಳ ಸೆರೆಮನೆ ವಾಸದ ಶಿಕ್ಷೆ ವಿಧಿಸುವ ಪ್ರಸ್ತಾವ ಹೊಂದಿದೆ. ಇದು ಒಂದು ವೇಳೆ ಸಂಸತ್ತಿನಲ್ಲಿ ಮಂಡನೆಯಾಗಿ ಅನುಮೋದನೆ ಪಡೆದುಕೊಂಡರೆ ಭಾರತ ದೇಶವು ಕ್ರಿಪ್ಟೊಕರೆನ್ಸಿ ವಿರುದ್ಧ ಅತ್ಯಂತ ಕಠಿಣ ಕಾನೂನು ಜಾರಿಮಾಡಿದ ಮೊದಲ ದೇಶ ಎನಿಸಿಕೊಳ್ಳುತ್ತದೆ. ಕ್ರಿಪ್ಟೊಕರೆನ್ಸಿ ಬದಲಿಗೆ ಬ್ಲಾಕ್​ಚೈನ್ ತಂತ್ರಜ್ಞಾನದಿಂದ ನಿರ್ವಹಿಸಲು ಸಾಧ್ಯವಾಗುವ ಡಿಜಿಟಲ್ ರೂಪಿ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆ. ಇದು ಸ್ವಾಗತಾರ್ಹ ಕ್ರಮ. ಈಗಾಗಲೇ ಕ್ರಿಪ್ಟೊಕರೆನ್ಸಿ ಹೊಂದಿರುವವರು ಅದನ್ನು ಕೇಂದ್ರ ಸರ್ಕಾರವು ರೂಪಿಸಲಿರುವ ನಿಯಮಗಳ ಪ್ರಕಾರ ಘೋಷಿಸಲು ಮತ್ತು ವಿಲೇವಾರಿ ಮಾಡಲು 90 ದಿನಗಳ ಅವಕಾಶ ನೀಡುವ ಪ್ರಸ್ತಾವವೂ ಕರಡು ಮಸೂದೆಯಲ್ಲಿದೆ.

ಬಿಟ್​ಕಾಯಿನ್ ಸೇರಿದಂತೆ ಬಹುತೇಕ ಕ್ರಿಪ್ಟೊಕರೆನ್ಸಿಗಳ ಖರೀದಿ ಮತ್ತು ಮಾರಾಟ ಹಾಗೂ ಬಳಕೆಯು ಅತ್ಯಂತ ಸುಲಭದ್ದಾಗಿದೆ. ಹೀಗಾಗಿಯೇ ಅಕ್ರಮ ಚಟುವಟಿಕೆ ನಡೆಸುವವರು ಕ್ರಿಪ್ಟೊಕರೆನ್ಸಿಯನ್ನು ಬಳಸಲು ಆಸಕ್ತಿ ತೋರುತ್ತಿದ್ದಾರೆ. ಎಫ್​ಬಿಐ ಮತ್ತು ಯುರೊಪೊಲ್ ತನಿಖಾ ದಳಗಳು ‘ಸಿಲ್ಕ್​ರೋಡ್’ ಹೆಸರಿನ ಭೂಗತ ಮಾರುಕಟ್ಟೆಯನ್ನು ಇತ್ತೀಚೆಗೆ ಪತ್ತೆ ಮಾಡಿದ್ದವು. ಇಲ್ಲಿ ಮಾದಕವಸ್ತುಗಳಿಂದ ಹಿಡಿದು ಶಸ್ತ್ರಾಸ್ತ್ರಗಳವರೆಗೆ ಏನನ್ನು ಬೇಕಾದರೂ ಖರೀದಿಸಬಹುದಾಗಿತ್ತು. ಬಿಟ್​ಕಾಯಿನ್​ನಂಥ ಕ್ರಿಪ್ಟೊಕರೆನ್ಸಿ ಮೂಲಕ ನಡೆಯುತ್ತಿದ್ದ ಈ ವಹಿವಾಟು ಪತ್ತೆ ಮಾಡಲು ಕಷ್ಟ. ಇಂಥ ವಿಚಾರಗಳು ಭಾರತದ ಸಂದರ್ಭಕ್ಕೆ ಹೊಸದು ಅಥವಾ ಅಪರಿಚಿತವಾಗಿದ್ದವು. ಶ್ರೀಕಿ ಮತ್ತು ಭಾರತದ ಕ್ರಿಪ್ಟೊ ಕಿಂಗ್ ಎಂದೇ ಕುಖ್ಯಾತನಾಗಿರುವ ಮಕರಂದ್ ಅದಿವಿಕಾರ್​ನನ್ನು ಕೇಂದ್ರ ಮಾದಕ ವಸ್ತು ನಿಯಂತ್ರಣ ದಳವು ಇತ್ತೀಚೆಗೆ ಬಂಧಿಸಿತ್ತು. ಇವರು ಎಲ್​ಎಸ್​ಡಿ (ಭ್ರಮೆಯುಂಟು ಮಾಡುವ ಮಾದಕವಸ್ತು) ಖರೀದಿಗೆ ಡಾರ್ಕ್​ನೆಟ್​ ಮೂಲಕ ಬಿಟ್​ಕಾಯಿನ್ ಬಳಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಈ ಅಂಶವು ಭಾರತದ ಸಂದರ್ಭದಲ್ಲಿ ಬಿಟ್​ಕಾಯಿನ್ ನಿಯಂತ್ರಣಕ್ಕೆ ಸಮರ್ಪಕ ರೂಪುರೇಷೆ ಬೇಕು ಎಂಬ ಅಂಶವನ್ನು ಎತ್ತಿಹಿಡಿಯುತ್ತದೆ.

ಬಿಟ್​ಕಾಯಿನ್ ಸೇರಿದಂತೆ ಕ್ರಿಪ್ಟೊಕರೆನ್ಸಿ ಬಳಕೆ ವಿಚಾರದಲ್ಲಿ ಸಂಪೂರ್ಣ ತಿರಸ್ಕಾರವೇ ಈವರೆಗೆ ಭಾರತದ ನಿಲುವು ಆಗಿತ್ತು. ಹಣಕಾಸು ಸಚಿವಾಲಯದ ಆರ್ಥಿಕ ವಿದ್ಯಮಾನಗಳ ವಿಭಾಗವು ಇತ್ತೀಚೆಗೆ ರಚಿಸಿದ್ದ ಇಲಾಖಾ ಸಮಿತಿಯ ವರದಿಯು ಕ್ರಿಪ್ಟೊಕರೆನ್ಸಿ ನಿಯಂತ್ರಣಕ್ಕೆ ನಿಯಮಾವಳಿಗಳನ್ನು ರೂಪಿಸಬೇಕಾದ ಅಗತ್ಯವನ್ನು ಎತ್ತಿ ತೋರಿಸಿದೆ. ಕ್ರಿಪ್ಟೊಕರೆನ್ಸಿ ವಹಿವಾಟುಗಳು ಸಂಪೂರ್ಣವಾಗಿ ಅನಾಮಿಕವಾಗಿ ಇರುವುದರಿಂದ ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಈ ಹಣ ಬಳಸುವ ಸಾಧ್ಯತೆ ಇರುವುದನ್ನು ಸಮಿತಿಯ ವರದಿಯು ಎತ್ತಿತೋರಿಸಿದೆ. ಭಾರತದಲ್ಲಿ ಕ್ರಿಪ್ಟೊಕರೆನ್ಸಿ ಬಳಕೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂದು ವರದಿಯು ಸೂಚಿಸಿದೆ. ಕ್ರಿಪ್ಟೊ ವಹಿವಾಟಿನಲ್ಲಿ ತೊಡಗಿಕೊಂಡಿರುವ ವಾಣಿಜ್ಯ ಸಂಸ್ಥೆಗಳು ನಿಷೇಧಕ್ಕಿಂತಲೂ ನಿಯಂತ್ರಣ ಕ್ರಮಗಳನ್ನು ಘೋಷಿಸುವುದು ಒಳಿತು ಎಂದು ಪ್ರತಿಪಾದಿಸಿವೆ, ಸರ್ಕಾರದ ಮೇಲೆಯೂ ಒತ್ತಡ ಹೇರಿವೆ.

ಶ್ರೀಯುತ ಜಯಂತ್ ಸಿನ್ಹಾ ನೇತೃತ್ವದ ಹಣಕಾಸು ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯೂ ಈ ನಿಟ್ಟಿನಲ್ಲಿ ತನ್ನ ನಿಲುವು ಬಹಿರಂಗಪಡಿಸಿದ್ದು, ಕ್ರಿಪ್ಟೊಕರೆನ್ಸಿಗಳನ್ನು ನಿಷೇಧಿಸಬಾರದು. ಅವುಗಳನ್ನು ನಿಯಂತ್ರಿಸಬೇಕು ಎಂದು ಅಭಿಪ್ರಾಯಪಟ್ಟಿದೆ. ಕ್ರಿಪ್ಟೊಕರೆನ್ಸಿಯನ್ನು ನಿಷೇಧಿಸಬೇಕೋ-ನಿಯಂತ್ರಿಸಬೇಕೋ ಎನ್ನುವ ವಿಚಾರದಲ್ಲಿ ಸರ್ಕಾರದ ನಿಲುವು ಹೊಯ್ದಾಡುತ್ತಿದೆ. ಈಚೆಗೆ ನಡೆದ ಸಿಡ್ನಿ ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವು ಮತ್ತು ‘ಕ್ರಿಪ್ಟೊಕರೆನ್ಸಿಯ ಬಳಕೆಯ ಸಾಧ್ಯತೆಗಳಿಗೆ ಬೆನ್ನುತೋರಲು ಸಾಧ್ಯವಿಲ್ಲ’ ಎಂಬ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗಳಲ್ಲಿ ಈ ಅಂಶ ಗೋಚರಿಸುತ್ತದೆ.

ಒಂದು ವೇಳೆ ಸರ್ಕಾರವು ಕ್ರಿಪ್ಟೊವಹಿವಾಟನ್ನು ಒಪ್ಪಿಕೊಳ್ಳುತ್ತದೆ ಎಂದಾದರೆ ಅದಕ್ಕೆ ಅಧಿಕೃತತೆಯನ್ನು ತಂದುಕೊಡಬೇಕು. ಎಕ್ಸ್​ಚೇಂಜ್​ಗಳ ಮೂಲಕ ಮುಕ್ತವಹಿವಾಟಿಗೆ ಅವಕಾಶ ಕಲ್ಪಿಸಿಕೊಡುವುದರ ಜೊತೆಗೆ ಆದಾಯ ತೆರಿಗೆ ಇಲಾಖೆಯ ವ್ಯಾಪ್ತಿಗೆ ತರಬೇಕು. ಭಾರತೀಯ ರಿಸರ್ವ್​ ಬ್ಯಾಂಕ್​ನ ನಿಯಮಗಳಡಿಯಲ್ಲಿ ಕ್ರಿಪ್ಟೊಕರೆನ್ಸಿ ವಹಿವಾಟುಗಳ ಲೆಕ್ಕ ಮತ್ತು ವಹಿವಾಟಿನ ಮೇಲೆ ನಿಗಾ ಇರಿಸಬೇಕು. ಹೆಚ್ಚಿನ ಹೊಣೆಗಾರಿಕೆ ಖಾತ್ರಿಪಡಿಸಲು ಲೈಸೆನ್ಸ್ ನೀಡುವ ಪದ್ಧತಿ ಜಾರಿಗೊಳಿಸಬಹುದು.ಈ ಸವಾಲುಗಳನ್ನು ಎದುರಿಸುವುದರ ಜೊತೆಗೆ ಡಿಜಿಟಲ್ ಕರೆನ್ಸಿಗಳು ಅಕ್ರಮಕ್ಕೆ ಬಳಕೆಯಾಗುವುದನ್ನು ತಡೆಯಲು ಪ್ರಬಲ ನಿಯಂತ್ರಣಾ ವ್ಯವಸ್ಥೆಯನ್ನು ರೂಪಿಸಬೇಕಿದೆ. ಭಾರತದಲ್ಲಿ ಕ್ರಿಪ್ಟೊಕರೆನ್ಸಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಇದು ಅತ್ಯಗತ್ಯ. ಈಗಾಗಲೇ ಜಾರಿಯಾಗಿರುವ ಆದಾಯ ತೆರಿಗೆ ಕಾಯ್ದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆಗೆ ತಿದ್ದುಪಡಿಗಳನ್ನು ತರಬೇಕಾಗುತ್ತದೆ. ಇದರ ಜೊತೆಗೆ ಗ್ರಾಹಕರನ್ನು ನಷ್ಟ ಮತ್ತು ಅಕ್ರಮ ವಹಿವಾಟುಗಳಿಂದ ಕಾಪಾಡಲು ಕ್ರಿಪ್ಟೊಕರೆನ್ಸಿ ಬಳಕೆದಾರರನ್ನು ಗ್ರಾಹಕ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ತರಬೇಕಾಗುತ್ತದೆ.

ಗೌಪ್ಯತೆ ಮತ್ತು ಸೈಬರ್ ಭದ್ರತೆ ವಿಚಾರದಲ್ಲಿ ಆಗಿರುವ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಭಾರತದ ಅಸಮರ್ಥತೆಯನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆಯು ಈಗಾಗಲೇ ಎತ್ತಿತೋರಿಸಿದೆ. ಜಾಗತಿಕ ವಹಿವಾಟು ಪ್ರಮಾಣದ ಹೆಚ್ಚಳ ಮತ್ತು ಅನುಷ್ಠಾನದ ಸವಾಲುಗಳು ನ್ಯಾಯಾಂಗದ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದರ ಜೊತೆಗೆ ಭಾರತೀಯರಲ್ಲಿ ಕ್ರಿಪ್ಟೊಕರೆನ್ಸಿ ನಿರ್ವಹಣೆ ಮತ್ತು ವಹಿವಾಟಿನ ಬಗ್ಗೆ ಜಾಗೃತಿಯನ್ನೂ ಸರ್ಕಾರ ಮೂಡಿಸಬೇಕಿದೆ. ಕೃಷಿ ಕಾನೂನುಗಳ ಮಾದರಿಯನ್ನು ಇಲ್ಲಿಗೆ ಅನ್ವಯಿಸಲು ಆಗುವುದಿಲ್ಲ. ಕ್ರಿಪ್ಟೊಕರೆನ್ಸಿಗೆ ಮಾನ್ಯತೆ ನೀಡುವ ವಿಚಾರದಲ್ಲಿ ಹಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಭಾರತವು ಹೊಸ ಸವಾಲುಗಳನ್ನು ಎದುರಿಸಲು ಸಿದ್ಧವಾಗಿಯೇ ಎಂಬ ಬಗ್ಗೆಯೂ ಸರ್ಕಾರವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಡಾ.ಚೇತನ್ ಸಿಂಗಾಯ್ ಮತ್ತು ರಾಜಶ್ರೀ ಕೆ.

(ಲೇಖನದಲ್ಲಿ ವ್ಯಕ್ತವಾಗಿರುವ ವಿಚಾರಗಳು ಲೇಖಕರ ವೈಯಕ್ತಿಕ ಅಭಿಪ್ರಾಯ)

ಇದನ್ನೂ ಓದಿ: Budget 2022 ವರ್ಚುವಲ್‌ ಡಿಜಿಟಲ್‌ ಸ್ವತ್ತು, ಕ್ರಿಪ್ಟೊಕರೆನ್ಸಿಗಳ ಮೂಲಕ ಗಳಿಸುವ ಆದಾಯದ ಮೇಲೆ ಶೇ 30 ತೆರಿಗೆ: ಏನಿದು ಕ್ರಿಪ್ಟೊ ತೆರಿಗೆ?

ಇದನ್ನೂ ಓದಿ: Cryptocurrency: ಕ್ರಿಪ್ಟೊಕರೆನ್ಸಿ ಹೂಡಿಕೆ ಹೆಚ್ಚಾದರೆ ಏನು ಅಪಾಯ: ಇಲ್ಲಿದೆ ಸಂಪೂರ್ಣ ವಿವರ

Published On - 3:14 pm, Sun, 6 February 22