ಬಾಹ್ಯಾಕಾಶ ವಲಯಕ್ಕೂ ವಿಸ್ತರಿಸಿದೆಯೇ ರಷ್ಯಾ, ಉತ್ತರ ಕೊರಿಯಾ ದೋಸ್ತಿ?

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 15, 2023 | 3:48 PM

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡುವಿನ ಭೇಟಿ ವೋಸ್ತೋಚ್ನಿ ಕಾಸ್ಮೋಡ್ರೋಮ್ ಎಂಬ ನೂತನ ಸೋಯುಜ್ 2 ರಾಕೆಟ್ ಉಡಾವಣಾ ಕೇಂದ್ರದಲ್ಲಿ ನಡೆದಿದೆ. ಈ ಭೇಟಿಯ ಸಂದರ್ಭದಲ್ಲಿ, ರಷ್ಯಾ ಹಾಗೂ ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ ನಡುವೆ ಬಾಹ್ಯಾಕಾಶ ಸಹಯೋಗದ ಕುರಿತು ಚರ್ಚೆ ನಡೆದಿರುವ ಸಾಧ್ಯತೆಗಳೂ ಇವೆ

ಬಾಹ್ಯಾಕಾಶ ವಲಯಕ್ಕೂ ವಿಸ್ತರಿಸಿದೆಯೇ ರಷ್ಯಾ, ಉತ್ತರ ಕೊರಿಯಾ ದೋಸ್ತಿ?
ಸಾಂದರ್ಭಿಕ ಚಿತ್ರ
Follow us on

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ಹಾಗೂ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (North Korean dictator Kim Jong Un) ಅವರ ನಡುವಿನ ಐದು ಗಂಟೆಗಳ ಅವಧಿಯ ಭೇಟಿ ನಡೆಯಿತು. ಅವರಿಬ್ಬರೂ ರಷ್ಯಾದ ಫಾರ್ ಈಸ್ಟ್ ಪ್ರದೇಶದ ಅಮುರ್ ಪ್ರಾಂತ್ಯದಲ್ಲಿರುವ ವೋಸ್ತೋಚ್ನಿ ಕಾಸ್ಮೋಡ್ರೋಮ್‌ನ ನೂತನ ಸೋಯುಜ್ 2 ರಾಕೆಟ್ ಉಡಾವಣಾ ಘಟಕದ (Soyuz 2 rocket launch unit) ಪ್ರವಾಸದ ಮೂಲಕ ಈ ಭೇಟಿಯನ್ನು ಆರಂಭಿಸಿದರು. ಈ ಸಂದರ್ಭದಲ್ಲಿ, ಎರಡು ರಾಷ್ಟ್ರಗಳ ನಡುವಿನ ಸಂಭಾವ್ಯ ದ್ವಿಪಕ್ಷೀಯ ಬಾಹ್ಯಾಕಾಶ ಸಂಬಂಧಿ ಸಹಯೋಗದ ಸಾಧ್ಯತೆಗಳ ಕುರಿತು ಚರ್ಚೆ ನಡೆದಿರುವ ಸಾಧ್ಯತೆಗಳಿವೆ. ಈ ಭೇಟಿಯ ವೇಳೆ, ಪುಟಿನ್ ಬಾಹ್ಯಾಕಾಶ ಅನ್ವೇಷಣಾ ಕ್ಷೇತ್ರದಲ್ಲಿ ರಷ್ಯಾ ತೋರಿದ ಪ್ರಗತಿಯ ಕುರಿತು ಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಬ್ಬರು ನಾಯಕರಿಗೂ ಭೇಟಿಯ ಸಂದರ್ಭದಲ್ಲಿ ನೂತನ ಅಂಗಾರಾ ಬೂಸ್ಟರ್ ಜೋಡಣೆಯ ಕುರಿತು, ನೂತನ ಸೋಯುಜ್ – 2 ಉಡಾವಣಾ ವಾಹನದ ವಿಶೇಷತೆಗಳ ಕುರಿತು ಮಾಹಿತಿ ನೀಡಲಾಯಿತು. ಮಾಧ್ಯಮಗಳ ಜೊತೆ ಮಾತನಾಡಿದ ಪುಟಿನ್, ಕೊರಿಯಾದ ಸರ್ವಾಧಿಕಾರಿ ಕಿಮ್ ರಾಕೆಟ್ ಇಂಜಿನಿಯರಿಂಗ್ ಕುರಿತು ಅಪಾರ ಆಸಕ್ತಿ ಹೊಂದಿದ್ದಾರೆ ಎಂದಿದ್ದಾಗಿ ವರದಿಗಳು ಬಂದಿವೆ. ಅವರ ಭೇಟಿಯ ಸಂದರ್ಭದಲ್ಲಿ, ಇಬ್ಬರು ನಾಯಕರು ರಾಕೆಟ್ ಅಳವಡಿಕೆ, ಪರೀಕ್ಷಾ ವ್ಯವಸ್ಥೆಯನ್ನು ವೀಕ್ಷಿಸಿದ್ದು, ಅಲ್ಲಿ ಅಂಗಾರಾ ರಾಕೆಟ್ ಜೋಡಣೆಗಾಗಿ ಅತ್ಯಾಧುನಿಕ ತಾಂತ್ರಿಕ ಕೊಠಡಿಯನ್ನೂ ವಿನ್ಯಾಸಗೊಳಿಸಲಾಗಿದೆ.

ಸೊಯುಜ್ 2 ರಾಕೆಟ್ ಕುರಿತ ಕುತೂಹಲಗಳು

ವ್ಲಾಡಿಮಿರ್ ಪುಟಿನ್ ವೋಸ್ತೋಚ್ನಿ ಮತ್ತು ಪ್ಲೆಸೆಟ್ಸ್ಕ್ ಸ್ಪೇಸ್‌ಪೋರ್ಟ್‌ಗಳನ್ನು ಹೊರತುಪಡಿಸಿ, ರಷ್ಯಾ ಸೊಯುಜ್ 2 ರಾಕೆಟ್ ಉಡಾವಣೆಗೆ ಬೈಕಾನುರ್ ಕಾಸ್ಮೋಡ್ರೋಮ್ ಅನ್ನೂ ಬಳಸಿಕೊಳ್ಳುತ್ತದೆ ಎಂದು ಕಿಮ್ ಅವರಿಗೆ ಮಾಹಿತಿ ನೀಡಿದ್ದರು. ಕಿಮ್ ಸೊಯುಜ್ ರಾಕೆಟ್ ವೈಶಿಷ್ಟ್ಯಗಳ ಕುರಿತು, ಅದರಲ್ಲೂ ರಾಕೆಟ್‌ನ ಇಂಜಿನ್ ಸಾಮರ್ಥ್ಯದ ಕುರಿತು ಕುತೂಹಲ ವ್ಯಕ್ತಪಡಿಸಿದ್ದರು. ವೋಸ್ತೋಚ್ನಿ ಕಾಸ್ಮೋಡ್ರೋಮ್ ನಿಂದ ಉಡಾವಣೆಗೊಳಿಸಿದಾಗ, ಈ ರಾಕೆಟ್ 9 ಟನ್ ತೂಕದ ಪೇಲೋಡ್‌ಗಳನ್ನು ಕೆಳ ಕಕ್ಷೆಗಳಿಗೆ ಒಯ್ಯಲು ಸಮರ್ಥವಾಗಿದೆ ಎಂದು ಮಾಹಿತಿ ನೀಡಲಾಯಿತು.

ಪ್ಲೆಸೆಟ್ಸ್ಕ್ ಅಥವಾ ಬೈಕಾನುರ್ ಬಾಹ್ಯಾಕಾಶ ಕೇಂದ್ರಗಳಿಗೆ ಹೋಲಿಸಿದರೆ, ವೋಸ್ತೋಚ್ನಿ ಕಾಸ್ಮೋಡ್ರೋಮ್ ನಿಂದ ರಾಕೆಟ್ ಉಡಾವಣೆ ನಡೆಸುವುದು ಹೆಚ್ಚು ಸೂಕ್ತವಾಗಿದೆ ಎಂದು ಪುಟಿನ್ ಅಭಿಪ್ರಾಯ ಪಟ್ಟರು. ಸೊಯುಜ್ 2 ರಾಕೆಟ್ ಅನ್ನು ನಿಯಂತ್ರಿಸುವ ಕಟ್ಟಡ ಅದರ ಮೇಲೆ ರಾಕೆಟ್ ಭಾಗಗಳು ಬಿದ್ದರೂ ತಾಳಿಕೊಳ್ಳಬಲ್ಲದು. ಈ ಕಟ್ಟಡವನ್ನು ಅತ್ಯಂತ ಗಟ್ಟಿಯಾದ ಗೋಡೆಗಳಿಂದ ನಿರ್ಮಿಸಲಾಗಿದ್ದು, ಅದರ ಮೇಲ್ಛಾವಣಿಯನ್ನು ಉಡಾವಣೆಯ ವೇಳೆ ಏನಾದರೂ ಅಹಿತಕರ ಘಟನೆ ಸಂಭವಿಸಿದರೂ, ಇದು ಸಿಬ್ಬಂದಿಗಳನ್ನು ಸುರಕ್ಷಿತವಾಗಿಡಬಲ್ಲದು. ಇದು ಅಲ್ಲಿ ಕಾರ್ಯಾಚರಿಸುವ ಸಿಬ್ಬಂದಿಯ ಹಿತರಕ್ಷಣೆಗೆ ಮಹತ್ವದ ವಿಚಾರವಾಗಿದೆ.

ಸೊಯುಜ್ 2 ರಾಕೆಟ್‌ನ ಇಂಧನವಾಗಿ ಆಮ್ಲಜನಕ, ಸಾರಜನಕ, ಸೀಮೆಎಣ್ಣೆ, ನಾಫ್ಥೈಲ್‌ಗಳನ್ನು ಚಲಿಸದಿರುವ ವಿಶೇಷ ಘಟಕಗಳಿಂದ ತುಂಬಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಇನ್ನಷ್ಟು ಸುರಕ್ಷಿತವಾಗಿಸಲು ನೆಲದಾಳದಲ್ಲಿ ಮೆದುಗೊಳವೆಯ ಮೂಲಕ ನಡೆಸಲಾಗುತ್ತದೆ. ಸಂಪೂರ್ಣ ಸೊಯುಜ್ 2 ಸಂಕೀರ್ಣ 25,000 ಚದರ ಮೀಟರ್ ವ್ಯಾಪ್ತಿ ಹೊಂದಿದೆ.

ಸೊಯುಜ್ 2 ರಾಕೆಟ್ ವೈಶಿಷ್ಟ್ಯಗಳು

ಸೊಯುಜ್ 2 ರಾಕೆಟ್ ಮೂರು ಮಧ್ಯಮ ಗಾತ್ರದ ರಾಕೆಟ್‌ಗಳ ಕುಟುಂಬವಾಗಿದೆ. ಇದನ್ನು ರಷ್ಯಾದ ಸಮಾರಾ ನಗರದಲ್ಲಿರುವ ಪ್ರೋಗ್ರೆಸ್ ರಾಕೆಟ್ ಸ್ಪೇಸ್ ಸೆಂಟರ್ ನಿರ್ಮಿಸಿದೆ. ಸೊಯುಜ್ 2 ರಾಕೆಟ್ ಕುಟುಂಬ ಇದರ ಸಣ್ಣ ಆವೃತ್ತಿಯಾದ ಸೊಯುಜ್ – 2.1ವಿ ರಾಕೆಟ್ ಅನ್ನೂ ಒಳಗೊಂಡಿದ್ದು, ಅದು ಮೂರರ ಬದಲು ಎರಡು ಹಂತಗಳ ರಾಕೆಟ್ ಆಗಿದೆ. ಇದನ್ನು ಕಡಿಮೆ ತೂಕದ ಪೇಲೋಡ್‌ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ವಿನ್ಯಾಸಗೊಳಿಸಲಾಗಿದೆ.

ಸೊಯುಜ್ 2 ರಾಕೆಟ್ ಅತ್ಯಂತ ನಂಬಿಕಾರ್ಹವಾಗಿರುವುದರಿಂದ ಜಗತ್ತಿನಾದ್ಯಂತ ಖ್ಯಾತಿ ಪಡೆದಿದೆ. ಇದು ಹಲವು ರೀತಿಯ ಯೋಜನೆಗಳನ್ನು ಕೈಗೊಳ್ಳಬಲ್ಲದಾಗಿದ್ದು, ವಿವಿಧ ವಸ್ತುಗಳನ್ನು ಬಾಹ್ಯಾಕಾಶಕ್ಕೆ ಅಳವಡಿಸಬಲ್ಲದು. ಇದು ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಕಳುಹಿಸಲು ಬಳಕೆಯಾಗುತ್ತದೆ.

ಅಂಗಾರಾ ರಾಕೆಟ್ ಕಾರ್ಯಕ್ರಮ

‘ಅಂಗಾರಾ’ ಎನ್ನುವುದು ರಷ್ಯಾದ ಆಧುನಿಕ ರಾಕೆಟ್ ಸರಣಿಯಾಗಿದ್ದು, ಪರಸ್ಪರ ಬದಲಾಯಿಸಬಹುದಾದ ಮಾಡ್ಯುಲ್‌ಗಳನ್ನು ಒಳಗೊಂಡಿದೆ. ಇದು ಆಮ್ಲಜನಕ – ಸೀಮೆಎಣ್ಣೆ ಇಂಜಿನ್ ಹೊಂದಿದ್ದು, ವಿವಿಧ ರೀತಿಯ ಪೇಲೋಡ್‌ಗಳನ್ನು ಒಯ್ಯಲು ಸೂಕ್ತವಾಗಿದೆ. ಈ ರಾಕೆಟ್ ಸರಣಿ, ಹಗುರದಿಂದ ತೂಕದ ತನಕ ವಿವಿಧ ವರ್ಗದಲ್ಲಿ ನಿರ್ಮಾಣವಾಗಿದ್ದು, 3.5 ಟನ್ (ಅಂಗಾರಾ – 1.2) ನಿಂದ 38 ಟನ್ ತೂಕದ ತನಕ (ಅಂಗಾರಾ – ಎ5ವಿ) ಪೇಲೋಡ್‌ಗಳನ್ನು ಭೂಮಿಯ ಕೆಳ ಕಕ್ಷೆಯಲ್ಲಿ ಅಳವಡಿಸುತ್ತದೆ. ಪ್ರಮುಖವಾಗಿ, ಅಂಗಾರಾ ರಾಕೆಟ್ ಆಕ್ರಮಣಕಾರಿ ಹಾಗೂ ವಿಷಕಾರಿಯಲ್ಲದ ಇಂಧನ ಸಂಯೋಜನೆಯನ್ನು ಹೊಂದಿದ್ದು, ಉಡಾವಣಾ ಪ್ರದೇಶ ಸುತ್ತಲಿನ ಹಾಗೂ ರಾಕೆಟ್ ಬಿಡಿಭಾಗಗಳು ಮರಳಿ ಭೂಮಿಗೆ ಪತನಗೊಳ್ಳುವ ಪ್ರದೇಶದ ವಾತಾವರಣಕ್ಕೆ ಹಾನಿಯಾಗದಂತೆ ನಿರ್ಮಿಸಲಾಗಿದೆ.

ಇದನ್ನೂ ಓದಿ:ಪಾಶ್ಚಾತ್ಯ ನಿರ್ಬಂಧಗಳಿಗೂ ರಷ್ಯಾ ನಲುಗದು ಎಂದು ಸಾಬೀತುಪಡಿಸಿದ ಈಸ್ಟರ್ನ್ ಎಕನಾಮಿಕ್ ಫೋರಮ್ 

ಅಂಗಾರಾ ರಾಕೆಟ್‌ಗಳಿಗಾಗಿ ವೋಸ್ತೋಚ್ನಿ ಕಾಸ್ಮೋಡ್ರೋಮ್ ನಲ್ಲಿ ಉಡಾವಣಾ ವೇದಿಕೆಯ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಈ ರಾಕೆಟ್ ವಿಜ್ಞಾನಿಗಳಿಗೆ ನಮ್ಮ ಸೌರಮಂಡಲದ ಅನ್ವೇಷಣೆಗೆ ಮಾತ್ರವಲ್ಲದೆ, ಅದನ್ನೂ ಮೀರಿದ ಬಾಹ್ಯಾಕಾಶ ಸಂಶೋಧನೆಗೆ ನೆರವಾಗಲಿದೆ. ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್‌ಕಾಸ್ಮೋಸ್ ಮುಖ್ಯಸ್ಥರಾದ ಯೂರಿ ಬಾರಿಸೊವ್ ಅವರು ಈ ವರ್ಷದ ಅಂತ್ಯದ ವೇಳೆಗೆ ಅಂಗಾರಾ ರಾಕೆಟ್ ಉಡಾವಣಾ ವ್ಯವಸ್ಥೆ ಸಿದ್ಧಗೊಳ್ಳಲಿದೆ ಎಂದಿದ್ದರು. ಈ ವ್ಯವಸ್ಥೆ 270 ಎಕರೆ ವ್ಯಾಪ್ತಿ ಹೊಂದಿದ್ದು, 28 ಮೀಟರ್ ಎತ್ತರದ ಉಡಾವಣಾ ವ್ಯವಸ್ಥೆಯನ್ನು ಒಳಗೊಂಡಿದೆ. ಅದರೊಡನೆ, ಒಂದು ಕಮಾಂಡ್ ಕೇಂದ್ರ, ಆಮ್ಲಜನಕ, ಸಾರಜನಕ, ಮತ್ತು ನೆಫ್ಥೈಲ್ ಸಂಸ್ಕರಣಾ ಘಟಕಗಳು ಮತ್ತು ನೀರಿನ ಸಂಗ್ರಹಣಾ ಟ್ಯಾಂಕ್‌ಗಳು ಇಲ್ಲಿವೆ.

ರಷ್ಯಾದ ಎರಡು ಪ್ರಮುಖ ಬಾಹ್ಯಾಕಾಶ ಕೇಂದ್ರಗಳು

ವೋಸ್ತೋಚ್ನಿ ಹಾಗೂ ಪ್ಲೆಸೆಟ್ಸ್ಕ್ ಗಳು ರಷ್ಯಾದ ಎರಡು ಪ್ರಮುಖ ಬಾಹ್ಯಾಕಾಶ ಕೇಂದ್ರಗಳಾಗಿದ್ದು, ರಾಕೆಟ್ ಮತ್ತು ಉಪಗ್ರಹಗಳನ್ನು ಕಕ್ಷೆಗೆ ಉಡಾವಣೆಗೊಳಿಸಲು ಬಳಕೆಯಾಗುತ್ತವೆ.

ವೋಸ್ತೋಚ್ನಿ ಬಾಹ್ಯಾಕಾಶ ಕೇಂದ್ರ

ವೋಸ್ತೋಚ್ನಿ ಎನ್ನುವುದು ರಷ್ಯಾದ ಫಾರ್ ಈಸ್ಟ್ ಪ್ರದೇಶದಲ್ಲಿರುವ ಒಂದು ಆಧುನಿಕ ಬಾಹ್ಯಾಕಾಶ ಕೇಂದ್ರವಾಗಿದ್ದು, ಚೀನಾದ ಗಡಿಗೆ ಸನಿಹದಲ್ಲಿದೆ. ಇದನ್ನು ಹಿಂದಿನ ಸೋವಿಯತ್ ಒಕ್ಕೂಟ ಗುತ್ತಿಗೆಗೆ ತೆಗೆದುಕೊಂಡಿದ್ದ, ಪ್ರಸ್ತುತ ಕಜಕಿಸ್ತಾನದಲ್ಲಿರುವ ಬೈಕಾನುರ್ ಕಾಸ್ಮೋಡ್ರೋಮ್ ಮೇಲಿನ ರಷ್ಯಾದ ಅವಲಂಬನೆಯನ್ನು ಕಡಿಮೆಗೊಳಿಸಲು ಅಭಿವೃದ್ಧಿ ಪಡಿಸಲಾಗಿತ್ತು. ವೋಸ್ತೋಚ್ನಿ 2016ರಿಂದ ಕಾರ್ಯಾಚರಿಸುತ್ತಿದ್ದು, ಸೊಯುಜ್ ರಾಕೆಟ್ ಕುಟುಂಬದ ಹಲವು ಉಡಾವಣೆಗಳನ್ನು ನೆರವೇರಿಸಿದೆ. ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ನಡೆಸಲು ವಿಫಲವಾದ ರಷ್ಯಾದ ಲೂನಾ-25 ಚಂದ್ರ ಅನ್ವೇಷಣಾ ಯೋಜನೆಯನ್ನೂ ಇಲ್ಲಿಂದಲೇ 2023ರಲ್ಲಿ ಉಡಾವಣೆಗೊಳಿಸಲಾಗಿತ್ತು.

ಪ್ಲೆಸೆಟ್ಸ್ಕ್ ಬಾಹ್ಯಾಕಾಶ ಕೇಂದ್ರ

ಪ್ಲೆಸೆಟ್ಸ್ಕ್ ಒಂದು ಹಳೆಯ, ಸುಸ್ಥಾಪಿತ ಬಾಹ್ಯಾಕಾಶ ಕೇಂದ್ರವಾಗಿದ್ದು, ರಷ್ಯಾದ ಉತ್ತರ ಭಾಗದಲ್ಲಿ, ಆರ್ಕ್‌ಟಿಕ್ ವೃತ್ತದ ಬಳಿ ಇದೆ. ಮೂಲತಃ ಇದು ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಉಡಾವಣೆಗಾಗಿ ನಿರ್ಮಿಸಿದ್ದ ರಹಸ್ಯ ಮಿಲಿಟರಿ ಕೇಂದ್ರವಾಗಿತ್ತು. ಆದರೆ ಬಳಿಕ ಅದನ್ನು ನಾಗರಿಕ ಬಳಕೆಯ ಉಡಾವಣಾ ಕೇಂದ್ರವಾಗಿ ಪರಿವರ್ತಿಸಲಾಯಿತು. ಪ್ಲೆಸೆಟ್ಸ್ಕ್ 1959ರಿಂದಲೂ ಕಾರ್ಯಾಚರಿಸುತ್ತಿದ್ದು, ವೋಸ್ತೋಕ್, ಮೊಲ್ನಿಯಾ, ರೊಕೊಟ್, ಹಾಗೂ ಅಂಗಾರಾ ಸೇರಿದಂತೆ ವಿವಿಧ ಕುಟುಂಬಗಳ ರಾಕೆಟ್‌ಗಳ ಉಡಾವಣೆಗಳಿಗೆ ಸಾಕ್ಷಿಯಾಗಿದೆ. ಪ್ಲೆಸೆಟ್ಸ್ಕ್ ರಷ್ಯಾದ ಅತ್ಯಂತ ಸಕ್ರಿಯ ಉಡಾವಣಾ ಕೇಂದ್ರವಾಗಿದ್ದು, 2023ರ ತನಕ 1,750ಕ್ಕೂ ಹೆಚ್ಚು ರಾಕೆಟ್‌ಗಳ ಉಡಾವಣೆ ನಡೆಸಿದೆ.

ವೋಸ್ತೋಚ್ನಿ ಮತ್ತು ಪ್ಲೆಸೆಟ್ಸ್ಕ್ ಎರಡು ಬಾಹ್ಯಾಕಾಶ ಕೇಂದ್ರಗಳು ರಷ್ಯಾದ ಬಾಹ್ಯಾಕಾಶ ಯೋಜನೆಗಳಿಗೆ ಅತ್ಯವಶ್ಯಕವಾಗಿವೆ. ಅವುಗಳು ವಿವಿಧ ಯೋಜನೆಗಳಿಗೆ ಅನುಕೂಲ ಕಲ್ಪಿಸುತ್ತವೆ.

ವೋಸ್ತೋಚ್ನಿ ಕಾಸ್ಮೋಡ್ರೋಮ್ ಇರುವ ಸ್ಥಾನದ ಕಾರಣದಿಂದ, ಅದು ಹೊಂದಿರುವ ಆಧುನಿಕ ಸೌಲಭ್ಯಗಳ ಕಾರಣದಿಂದ, ಭೂಮಿಯ ಮೇಲ್ಮೈಯಲ್ಲಿ ಅದು ಕೆಳಭಾಗದಲ್ಲಿ ಇರುವ ಕಾರಣದಿಂದ ರಾಕೆಟ್‌ಗಳನ್ನು ಭೂಮಿಯ ಕೆಳ ಕಕ್ಷೆಗೆ (ಎಲ್ಇಒ) ಉಡಾವಣೆಗೊಳಿಸಲು ವೋಸ್ತೋಚ್ನಿ ಕಾಸ್ಮೋಡ್ರೋಮ್ ಹೆಚ್ಚು ಸೂಕ್ತ ಎಂದು ಪರಿಗಣಿಸಲಾಗಿದೆ. ರಷ್ಯಾದ ಫಾರ್ ಈಸ್ಟ್ ಪ್ರದೇಶದಲ್ಲಿ ಇರುವ ಕಾರಣದಿಂದ, ಪೋಲಾರ್ ಅಥವಾ ಸನ್ ಸಿಂಕ್ರೊನಸ್ ಸೇರಿದಂತೆ ನಿರ್ದಿಷ್ಟ ಕಕ್ಷೆಗಳಿಗೆ ರಾಕೆಟ್‌ಗಳ ಉಡಾವಣೆ ನಡೆಸಲು ಇದು ಸೂಕ್ತ ಸ್ಥಳವಾಗಿದೆ. ಅದರೊಡನೆ, ವೋಸ್ತೋಚ್ನಿ ಕಾಸ್ಮೋಡ್ರೋಮ್ ನೂತನ ಹಾಗೂ ಆಧುನಿಕ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಕಾರಣ ಅದು ಹೆಚ್ಚು ಆಧುನಿಕ ರಾಕೆಟ್‌ಗಳು ಹಾಗೂ ಪೇಲೋಡ್‌ಗಳನ್ನು ನಿರ್ವಹಿಸಬಲ್ಲದು. ಅದರೊಡನೆ, ಅದು ಕಡಿಮೆ ಆಲ್ಟಿಟ್ಯೂಡ್ ಹೊಂದಿರುವ ಕಾರಣ, ರಾಕೆಟ್‌ಗಳು ನಿರ್ದಿಷ್ಟ ಕಕ್ಷೆಗಳಿಗೆ ತಲುಪಲು ಕಡಿಮೆ ಶಕ್ತಿಯ ಅವಶ್ಯಕತೆ ಇದ್ದು, ಹೆಚ್ಚು ಇಂಧನ ದಕ್ಷತೆ ಹೊಂದಲು ಅನುಕೂಲಕರವಾಗಿದೆ. ಅದರೊಡನೆ, ರಷ್ಯಾ ಹಲವು ಬಾಹ್ಯಾಕಾಶ ಕೇಂದ್ರಗಳನ್ನು ಹೊಂದಿರುವುದರಿಂದ, ಕೇವಲ ಒಂದು ಕೇಂದ್ರದ ಮೇಲೆ ಅವಲಂಬಿತವಾಗುವುದು ತಪ್ಪುತ್ತದೆ. ಇದು ಕಾರ್ಯತಂತ್ರದ ದೃಷ್ಟಿಯಿಂದಲೂ ಅನುಕೂಲಕರವಾಗಿದೆ.

ಉತ್ತರ ಕೊರಿಯಾ ಯಾಕೆ ಬಾಹ್ಯಾಕಾಶ ವಲಯದಲ್ಲಿ ಆಸಕ್ತಿ ತೋರುತ್ತಿದೆ?

ಉಪಗ್ರಹಗಳ ಉಡಾವಣೆಗೆ ಬಳಸುವ ರಾಕೆಟ್‌ಗಳು ಅಣ್ವಸ್ತ್ರ ಪೇಲೋಡ್‌ಗಳನ್ನು ಒಯ್ಯುವ ಇಂಟರ್‌ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿಗಳೊಡನೆ (ಐಸಿಬಿಎಂ) ಹೋಲಿಕೆ ಹೊಂದಿವೆ. ಉಡಾವಣಾ ವಾಹನಗಳು ಉಪಗ್ರಹಗಳನ್ನು ಕಕ್ಷೆಗೆ ಅಳವಡಿಸಿದರೆ, ಸಬ್ಆರ್ಬಿಟಲ್ ಐಸಿಬಿಎಂಗಳು ಪೇಲೋಡ್‌ಗಳನ್ನು ಬ್ಯಾಲಿಸ್ಟಿಕ್ ಪಥದಲ್ಲಿ ಮರಳಿ ಭೂಮಿಗೆ ಬೀಳುವಂತೆ ಮಾಡುತ್ತವೆ. ಉತ್ತರ ಕೊರಿಯಾ ಮಹತ್ವಾಕಾಂಕ್ಷಿ ಅಣ್ವಸ್ತ್ರ ಯೋಜನೆಗಳನ್ನು ಹಾಕಿಕೊಂಡಿದ್ದು, ಅದರ ಉಡಾವಣಾ ಸಾಮರ್ಥ್ಯ ಹೆಚ್ಚಿಸಲು ಉದ್ದೇಶಿಸಿದೆ. ಆದ್ದರಿಂದಲೇ ಉತ್ತರ ಕೊರಿಯಾ ರಷ್ಯಾದ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಆಸಕ್ತಿ ತೋರುತ್ತಿದೆ.

ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಉತ್ತರ ಕೊರಿಯಾ ಎರಡು ಬಾರಿ ಬೇಹುಗಾರಿಕಾ ಉಪಗ್ರಹ ಉಡಾವಣೆಗೆ ಪ್ರಯತ್ನ ನಡೆಸಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ. ಅದರೊಡನೆ, ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಮೂರನೆಯ ಬೇಹುಗಾರಿಕಾ ಉಪಗ್ರಹ ನಿರ್ಮಿಸುವುದಾಗಿ ಉತ್ತರ ಕೊರಿಯಾ ಘೋಷಿಸಿದೆ. 2021ರಲ್ಲಿ ಒಂದು ಪ್ರಮುಖ ರಾಜಕೀಯ ಸಭೆಯಲ್ಲಿ ಕಿಮ್ ಜಾಂಗ್ ಉನ್ ವಿವಿಧ ಆಧುನಿಕ ಆಯುಧಗಳು ಹಾಗೂ ಬೇಹುಗಾರಿಕಾ ಉಪಗ್ರಹಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಕಿಮ್ ಜಾಂಗ್ ಉನ್ ರಷ್ಯಾ ಭೇಟಿಯ ವೇಳೆ ಡಿಪಿಆರ್‌ಕೆ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿ ಅಧ್ಯಕ್ಷ ಪಾಕ್ ಥಾಯ್ ಸಾಂಗ್ ಉತ್ತರ ಕೊರಿಯಾದ ನಿಯೋಗದಲ್ಲಿ ಉಪಸ್ಥಿತರಿದ್ದರು. ಇದು ಇಂತಹ ಆಧುನಿಕ ತಂತ್ರಜ್ಞಾನದ ನಿರ್ಮಾಣದಲ್ಲಿ ಕಿಮ್ ರಷ್ಯಾದ ಸಹಾಯವನ್ನು ಎದುರು ನೋಡುತ್ತಿದ್ದಾರೆ ಎಂಬ ಮಾತಿಗೆ ಇಂಬು ನೀಡಿದೆ.

ಬಾಹ್ಯಾಕಾಶದಿಂದ ಉಪಗ್ರಹಗಳು ರವಾನಿಸುವ ಛಾಯಾಚಿತ್ರಗಳು ಶತ್ರುಗಳ ಸ್ಥಾನವನ್ನು ಅತ್ಯಂತ ನಿಖರವಾಗಿ ಗುರುತಿಸಲು, ಅವರ ಚಲನವಲನ, ಭೂಮಿಯ ಮೇಲಿನ ಯುದ್ಧರಂಗದ ಚಟುವಟಿಕೆಗಳನ್ನು ಗಮನಿಸಲು ನೆರವಾಗುವುದರಿಂದ, ರಷ್ಯನ್ ಬೆಂಬಲಿತ ಉಪಗ್ರಹ ಯೋಜನೆ ಉತ್ತರ ಕೊರಿಯಾಗೆ ಅತ್ಯಂತ ಮುಖ್ಯವಾಗಿದೆ. ಇದರ ಸಹಾಯದಿಂದ ಉತ್ತರ ಕೊರಿಯಾ ತನ್ನ ರಕ್ಷಣಾ ಕಾರ್ಯತಂತ್ರಗಳನ್ನು ರೂಪಿಸಬಹುದಾಗಿದೆ.

ಉಭಯ ನಾಯಕರು ಉತ್ತರ ಕೊರಿಯಾದ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಾಧ್ಯತೆಗಳ ಕುರಿತು ಚರ್ಚಿಸಿರುವ ಸಾಧ್ಯತೆಗಳಿವೆ. ರಷ್ಯಾ ಮೂಲದ ಬರಹಗಾರ ಅನಾಟಲಿ ಜಾ಼ಕ್ ಅವರು ಸಣ್ಣ ಅವಧಿಯ ಕಕ್ಷೀಯ ಮಾನವ ಸಹಿತ ಯೋಜನೆಯನ್ನು ರಷ್ಯಾದ ಸೊಯುಜ್ ಬಾಹ್ಯಾಕಾಶ ನೌಕೆಯ ಮೂಲಕ ನಡೆಸುವ ಸಾಧ್ಯತೆಗಳಿವೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಆದರೆ, ಇಂತಹ ಒಂದು ಸಂಭಾವ್ಯ ನಡೆಯನ್ನು ಯುಎಸ್ಎಸ್ ಹಾಗೂ ಐಎಸ್ಎಸ್ ಸಹಯೋಗಿಗಳು ಬಲವಾಗಿ ವಿರೋಧಿಸಲಿದ್ದಾರೆ.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

 

ಮತ್ತಷ್ಟು ಅಭಿಮತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ